ಮೋದಿ 2ನೇ ಅವಧಿಗೆ ಮುನ್ನುಡಿ
ಎನ್‌ಡಿಎ ಸಂಸದೀಯ ನಾಯಕನಾಗಿ ನರೇಂದ್ರ ಮೋದಿ ಆಯ್ಕೆ
Team Udayavani, May 26, 2019, 6:10 AM IST
ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಿದ ಬಿಜೆಪಿ ನೇತೃತ್ವದ ಎನ್‌ಡಿಎ ನಾಯಕರು ಶನಿವಾರ ನರೇಂದ್ರ ಮೋದಿ ಅವರನ್ನು
ಸಂಸದೀಯ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ನೇಮಕ ಮಾಡಿದರು. ಈ ಮೂಲಕ ಕೇಂದ್ರದಲ್ಲಿ ಹೊಸ ಸರ ಕಾರ ರಚನೆಗೆ ಮುನ್ನುಡಿ ಬರೆದರು.
ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಶಿ, ಎನ್‌ಡಿಎ ಮಿತ್ರಪಕ್ಷಗಳ ನಾಯಕರು ಹಾಗೂ ಎಲ್ಲ 353 ಸಂಸದರ ಸಮ್ಮುಖದಲ್ಲಿ ನಡೆದ ಸಂಸದೀಯ ಸಭೆಯಲ್ಲಿ ಮೋದಿ ಅವರ ನೇಮಕ ನಡೆಯಿತು. ಇದಾದ ಬಳಿಕ ನೂತನ ಸಂಸದರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದು, ಹೊಸ ಎಂಪಿಗಳಿಗೆ ಹಲವು ಸಲಹೆಗಳನ್ನೂ ನೀಡಿದ್ದಾರೆ. ಅನಂತರ ಅಲ್ಲಿಂದ ನೇರವಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿದ ಮೋದಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್‌ರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದರು. ಈ ಸಂದರ್ಭ ರಾಷ್ಟ್ರಪತಿ ಅವರು ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ನೇಮಕ ಮಾಡಿದರು.
30ರಂದು ಪದಗ್ರಹಣ?
ಮೇ 30ರಂದು ಮತ್ತೂಮ್ಮೆ ಪ್ರಧಾನಿಯಾಗಿ ನರೇಂದ್ರ ಮೋದಿ ಯವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಂದಿನ ಸಮಾರಂಭದಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ ಇವರನ್ನು ಹೊರತುಪಡಿಸಿ ಬೇರೆ ವಿದೇಶಿ ಗಣ್ಯರು ಭಾಗಿಯಾಗುತ್ತಾರಾ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. 2014ರಲ್ಲಿ ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿದ್ದು ಸುದ್ದಿಯಾಗಿತ್ತು.
16ನೇ ಲೋಕಸಭೆ ವಿಸರ್ಜನೆ
ಮೋದಿ ಅವರು ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾ ಗುವ ಮುನ್ನ ಶನಿವಾರ 16ನೇ ಲೋಕಸಭೆ ವಿಸರ್ಜನೆ ಪ್ರಕ್ರಿಯೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಪೂರ್ಣಗೊಳಿಸಿ ದರು. ಕೇಂದ್ರ ಸಂಪುಟದ ಶಿಫಾರಸಿನ ಅನ್ವಯ ಈ ಕ್ರಮ ಕೈಗೊಳ್ಳಲಾಯಿತು.
ಸಂಸದರ ಪಟ್ಟಿ ಹಸ್ತಾಂತರ
ಇದೇ ವೇಳೆ, ಹೊಸದಾಗಿ ಚುನಾಯಿತರಾದ 542 ಸಂಸದರ ಪಟ್ಟಿಯನ್ನು ಶನಿವಾರ ಚುನಾವಣ ಆಯೋಗವು ರಾಷ್ಟ್ರಪತಿ ಕೋವಿಂದ್ ಅವರಿಗೆ ಹಸ್ತಾಂತರಿಸಿದೆ. ಮುಖ್ಯ ಚುನಾವಣ ಆಯುಕ್ತ ಸುನೀಲ್ ಅರೋರಾ ಮತ್ತು ಇನ್ನಿಬ್ಬರು ಆಯುಕ್ತರಾದ ಅಶೋಕ್ ಲಾವಾಸಾ ಹಾಗೂ ಸುಶೀಲ್‌ಚಂದ್ರ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿದರು.
ಗುಜರಾತ್‌ಗೆ ಮೋದಿ
ಫಲಿತಾಂಶದ ಬಳಿಕ ಮೊದಲ ಬಾರಿಗೆ ರವಿವಾರ ಪ್ರಧಾನಿ ಮೋದಿ ಗುಜರಾತ್‌ಗೆ ತೆರಳಲಿದ್ದು, ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆಯಲಿದ್ದಾರೆ. ಸೋಮವಾರ ತಮ್ಮ ಕ್ಷೇತ್ರ ವಾರಾಣಸಿಗೆ ಭೇಟಿ ಕೊಟ್ಟು, ತಮಗೆ ಅಭೂತ
ಪೂರ್ವ ಗೆಲುವು ತಂದು ಕೊಟ್ಟ ಮತದಾರರಿಗೆ ಧನ್ಯವಾದ ಸಲ್ಲಿಸಲಿದ್ದಾರೆ.
ನೂತನ ಸಂಸದರಿಗೆ ಮೋದಿ ಪಾಠ
1. ಎನ್‌ಡಿಎ ಈಗ 2 ಹಳಿಗಳಲ್ಲಿ ಸಂಚರಿಸುತ್ತಿವೆ. ಅವೆಂದರೆ, ನಾರಾ. ಅಂದರೆ ನ್ಯಾಶನಲ್ ಆ್ಯಂಬಿಷನ್; ರೀಜನಲ್ ಆಸ್ಪಿರೇಷನ್(ರಾಷ್ಟ್ರೀಯ ಮಹತ್ವಾಕಾಂಕ್ಷೆ; ಪ್ರಾದೇಶಿಕ ಅಭಿಲಾಷೆ)- ಇದುವೇ ನಮ್ಮ ಈಗಿನ ಉದ್ಘೋಷ.
2. ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ ಹೆಮ್ಮೆಯಾಗುವುದು ಸಹಜ.
ಆದರೆ ನಾವು ನಮ್ಮನ್ನು ಆರಿಸಿ ಕಳುಹಿಸಿದವರಿಗಾಗಿ ಕೆಲಸ ಮಾಡ ಬೇಕು. ಅಷ್ಟೇ ಅಲ್ಲ, ನಮಗೆ ಮತ ಹಾಕದವರಿಗೂ ಕೆಲಸ ಮಾಡ ಬೇಕು. ನಮ್ಮ ಕೆಲಸದಿಂದ ಅವರಿಗೆ ಮನವರಿಕೆ ಮಾಡಬೇಕು.
3. ನಾವು ಈಗಾಗಲೇ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಮಾಡಿದ್ದೇವೆ. ನಮ್ಮ ಮುಂದಿನ ಮಂತ್ರ ಸಬ್‌ಕಾ ವಿಶ್ವಾಸ್(ಎಲ್ಲರ ವಿಶ್ವಾಸ) ಆಗಿದೆ.
4. ಅಲ್ಪಸಂಖ್ಯಾಕರನ್ನು ಭಯದಲ್ಲೇ ಉಳಿಸಿ, ಚುನಾವಣೆ ವೇಳೆ ಬಳಸಿ ಕೊಳ್ಳಲಾಗುತ್ತಿತ್ತು. ಇಂಥದ್ದಕ್ಕೆ ನಾವು ಕೊನೆ ಹಾಡಬೇಕು. ನಾವು ಯಾರನ್ನೂ ಹಿಂದೆ ಉಳಿಸಬಾರದು. ತಾರತಮ್ಯ ಮಾಡಬಾರದು.
5. ನಾನು ಪ್ರಧಾನಿಯಾಗಿದ್ದರೂ ನನ್ನನ್ನು ವಿಶೇಷವಾಗಿ ಕಾಣಬೇಕೆಂದು ನಾನು ಬಯಸುವುದಿಲ್ಲ. ಏರ್‌ಪೋರ್ಟ್‌ನಲ್ಲಿ ಭದ್ರತಾ ತಪಾಸಣೆ ವೇಳೆಯೂ ನಾನು ಸರತಿಯಲ್ಲೇ ನಿಲ್ಲಲು ಬಯಸುತ್ತೇನೆ. ನಮ್ಮೊಳಗಿನ ಪಕ್ಷದ ಕಾರ್ಯಕರ್ತ ಯಾವತ್ತೂ ಜೀವಂತವಾಗಿರಬೇಕು.
6. ಎನ್‌ಡಿಎಯಲ್ಲಿ ಎರಡು ಅಂಶಗಳಿವೆ: ಒಂದು ಎನರ್ಜಿ (ಶಕ್ತಿ), ಮತ್ತೂಂದು ಸಿನರ್ಜಿ (ಒಡಂಬಡಿಕೆ).
45 ನಿಮಿಷಗಳ ಮೋದಿ ಭಾಷಣ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ನಿರಂತರ 45 ನಿಮಿಷಗಳ ಅವಧಿ ಮಾತನಾಡಿದರು. ಮೋದಿ ಅವರು ಹಾಲ್‌ಗೆ ಆಗಮಿಸಿದಾಗ ಮತ್ತು ಭಾಷಣವನ್ನು ಮುಕ್ತಾಯಗೊಳಿಸಿದಾಗ ಎಲ್ಲರೂ ನಿಂತು ಗೌರವ ಸಲ್ಲಿಸಿದರು. ಎನ್‌ಡಿಎ ಮಿತ್ರ ಪಕ್ಷಗಳ ನಾಯಕರು ಹೂಗುತ್ಛ ನೀಡಿ ಪ್ರಧಾನಿಯನ್ನು ಅಭಿನಂದಿಸಿದರೆ, ಇತರ ಸದಸ್ಯರು ಹಸ್ತಲಾಘವ ನೀಡಿದರು.
ವಿಐಪಿ ಸಂಸ್ಕೃತಿಗೆ ಜನತೆಯ ವಿರೋಧ
ದೇಶದ ಜನರು ವಿಐಪಿ ಸಂಸ್ಕೃತಿಗೆ ಬದ್ಧ ವಿರೋಧ ಇದ್ದಾರೆ. ಅದನ್ನು ಯಾರೂ ಇಚ್ಛಿಸುವುದಿಲ್ಲ. ಆದುದರಿಂದ ಸಂಸದರಾದರೂ ಎಲ್ಲರೂ ಜನಸಾಮಾನ್ಯರಲ್ಲಿ ಜನಸಾಮಾನ್ಯರಾಗಿ ಜನರ ಸಮಸ್ಯೆಗಳಿಗೆ, ಅವರ ನೋವು-ನಲಿವುಗಳಿಗೆ ಸ್ಪಂದಿಸಬೇಕು. ಸಂಸದನೆಂಬ ಅಹಂ ಯಾರಲ್ಲಿಯೂ ಇರಬಾರದು ಎಂದು ಆಯ್ಕೆಯಾದ ಸಂಸತ್ ಸದಸ್ಯರಿಗೆ ಮೋದಿ ಕಿವಿಮಾತು ಹೇಳಿದರು.
1000 ದಿನಗಳಿಗೆ ಪ್ರಧಾನಿ ಕಾರ್ಯಸೂಚಿ
ಎನ್‌ಡಿಎ ಸರಕಾರದ ಎರಡನೇ ಅಧ್ಯಾಯ ಕೇವಲ 100 ದಿನಗಳ ಕಾರ್ಯಸೂಚಿ ಹೊಂದಿರುವುದಿಲ್ಲ. ಬದಲಿಗೆ 1000 ದಿನಗಳ ಕಾರ್ಯಸೂಚಿಯನ್ನು ಪ್ರಧಾನಿ ನರೇಂದ್ರ ಮೋದಿ ಯೋಜಿಸಿದ್ದಾರೆ ಎನ್ನಲಾಗಿದೆ. ಭಾರತ ಸ್ವತಂತ್ರಗೊಂಡ 75ನೇ ವರ್ಷಾಚರಣೆ ನಡೆಯುವ 2022ರ ವರೆಗೂ ಈ ಕಾರ್ಯಸೂಚಿ ಮುಂದುವರಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.