ನಿಟ್ಟಡೆ: ನಿರ್ಮಾಣವಾಗುತ್ತಿದೆ ತಾ|ನ ಅತೀದೊಡ್ಡ ವೆಂಟೆಡ್ ಡ್ಯಾಂ
ವಿದ್ಯುತ್ ಚಾಲಿತ ಗೇಟ್ * ಸಾವಿರಾರು ಎಕ್ರೆ ಕೃಷಿಭೂಮಿಗೆ ಪ್ರಯೋಜನ
Team Udayavani, May 27, 2019, 9:49 AM IST
ವೇಣೂರು: ರಾಜ್ಯ ಸರಕಾರದ ಪಶ್ಚಿಮವಾಹಿನಿ ಯೋಜನೆ ಯಡಿ 6.29 ಕೋ. ರೂ. ವೆಚ್ಚದಲ್ಲಿ ಬೆಳ್ತಂಗಡಿ ತಾ|ನ ನಿಟ್ಟಡೆ ಗ್ರಾಮದ ಕುಕ್ಕುಜೊಟ್ಟುವಿನಲ್ಲಿ ಫಲ್ಗುಣಿ ನದಿಗೆ ವಿದ್ಯುತ್ ಚಾಲಿತ ವೆಂಟೆಡ್ ಡ್ಯಾಂ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
ಕುಕ್ಕೇಡಿ ಗ್ರಾ.ಪಂ. ವ್ಯಾಪ್ತಿಯ ನಿಟ್ಟಡೆ ಗ್ರಾಮದ ಹಾಗೂ ಬಳಂಜ ಗ್ರಾ.ಪಂ.ನ ನಾಲ್ಕೂರು ಗ್ರಾಮದ ಸಾವಿರಾರು ಮಂದಿ ಕೃಷಿಕರಿಗೆ ಈ ಡ್ಯಾಂನಿಂದ ಪ್ರಯೋಜನವಾಗಲಿದ್ದು, ಸ್ಥಳೀಯ ಕೆರೆ, ಬಾವಿ, ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ.
ತಾ|ನಲ್ಲೇ ದೊಡ್ಡ ಡ್ಯಾಂ
ಸುಮಾರು 318 ಚ. ಅಡಿ ಉದ್ದ, 12 ಚ. ಅಡಿ ಅಗಲ, 14 ಚ. ಅಡಿ ಎತ್ತರದಲ್ಲಿ ಈ ವೆಂಟೆಡ್ ಡ್ಯಾಂ ನಿರ್ಮಾಣವಾಗಲಿದ್ದು, ಬೆಳ್ತಂಗಡಿ ತಾ|ನಲ್ಲೇ ವಿದ್ಯುತ್ ಚಾಲಿತ ದೊಡ್ಡ ಅಣೆಕಟ್ಟು ಇದಾಗಲಿದೆ. ಡ್ಯಾಂಗೆ ಸುಮಾರು 20 ಪಿಲ್ಲರ್‌ಗಳನ್ನು ನಿರ್ಮಿ ಸಲಾಗುತ್ತಿದೆ. 2018ರ ಮಾರ್ಚ್‌ನಲ್ಲಿ ಶಿಲಾನ್ಯಾಸ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಭಾರೀ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿದ್ದು, ಆದರೆ ಹೊರ ಹರಿವು, ಒಳ ಹರಿವು, ಸಂಗ್ರಹ ವಾಗುವ ನೀರಿನ ಪ್ರಮಾಣ ವನ್ನು ನಿಖರವಾಗಿ ಗುರುತಿಸಲಾಗಿಲ್ಲ. ಮಳೆಗಾಲ ಕಾರಣ ಜೂನ್ ಬಳಿಕ ಕಾಮಗಾರಿ ನಿಲ್ಲಿಸಿ, ಸಪ್ಟೆಂಬರ್ ಬಳಿಕ ಪುನರ್ ಚಾಲನೆ ದೊರೆಯ ಲಿದೆ. 2020ರಲ್ಲಿ ಕಾಮಗಾರಿ ಪೂರ್ಣ ಗೊಂಡು ಉದ್ಘಾಟನೆ ಗೊಳ್ಳುವ ನಿರೀಕ್ಷೆಯಿದೆ.
ಏನಿದು ಯೋಜನೆ?
ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖ ವಾಗಿ ಹರಿಯುತ್ತಿರುವ ನದಿಗಳ ಹರಿವು ಸಂರಕ್ಷಿಸಲು ರಾಜ್ಯ ಸರಕಾರ 2017-18ರ ಬಜೆಟ್‌ನಲ್ಲಿ ಪಶ್ಚಿಮವಾಹಿನಿ ಯೋಜನೆ ಘೋಷಿಸಿತ್ತು. ಇದಕ್ಕೆ ಅನುದಾನ ಒದಗಿಸಿ, ಕಳೆದ 2 ವರ್ಷಗಳಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳಿಗೆ 25 ಕಾಮಗಾರಿಗಳು ಈ ಯೋಜನೆಯಡಿ ಮಂಜೂರಾಗಿವೆ.
ನದಿ-ಉಪನದಿಗಳಿಗೆ ಕಿಂಡಿ ಅಣೆಕಟ್ಟು, ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಿಸಿ ಅಂತರ್ಜಲ ವೃದ್ಧಿ, ಕೃಷಿಗೆ ನೀರು ಒದಗಿಸುವ ಯೋಜನೆ ಇದಾಗಿದೆ. ಕಿಂಡಿ ಅಣೆಕಟ್ಟು ನಿರ್ಮಿಸಲು ಸ್ಥಳ ಗುರುತಿಸಿ, ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ.
ತಾಲೂಕಿನಲ್ಲಿ 2 ಕಾಮಗಾರಿ
ಪಶ್ಚಿಮವಾಹಿನಿ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ 256.25 ಕೋ. ರೂ. ವೆಚ್ಚದ 11 ಕಾಮಗಾರಿ, ಉಡುಪಿ ಜಿಲ್ಲೆಯಲ್ಲಿ 52.60 ಕೋ. ರೂ. ವೆಚ್ಚದ 14 ಕಾಮಗಾರಿಗಳಿಗೆ ಸಣ್ಣ ನೀರಾವರಿ ಇಲಾಖೆ ಅನುಮೋದನೆ ನೀಡಿದೆ. ಈ ಪೈಕಿ ಬೆಳ್ತಂಗಡಿ ತಾ|ನ ಕಡಿರುದ್ಯಾವರದಲ್ಲಿ 4.92 ಕೋ. ರೂ. ವೆಚ್ಚದಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣವಾಗುತ್ತಿದೆ. ಟೆಂಡರ್ ಕಾಮಗಾರಿ ಪರಿಶೀಲನೆ ನಡೆದು, ಕಾಮಗಾರಿ ಇಷ್ಟೊಂದು ಪ್ರಗತಿಯಲ್ಲಿರುವುದು ನಿಟ್ಟಡೆಯದ್ದು ಮಾತ್ರ ಎನ್ನಲಾಗಿದೆ. ಸಚಿವ ಯು.ಟಿ. ಖಾದರ್ ಅವರ ಮಂಗಳೂರು ಕ್ಷೇತ್ರದ ಹರೇಕಳದಲ್ಲಿ 174 ಕೋ. ರೂ. ವೆಚ್ಚದಲ್ಲಿ ನೇತ್ರಾವತಿ ನದಿಗೆ ಸೇತುವೆ ಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಿಸುವುದು ಈ ಯೋಜನೆಯ ದೊಡ್ಡ ಕಾಮಗಾರಿಯಾಗಿದೆ.
ಅಂತರ್ಜಲ ಮಟ್ಟ ಹೆಚ್ಚಳ
ಡ್ಯಾಂನಲ್ಲಿ ಸಂಗ್ರಹವಾಗುವ ನೀರಿನಿಂದಾಗಿ ಸ್ಥಳೀಯ ಸುಮಾರು 2 ಕಿ.ಮೀ. ದೂರದ ಕೆರೆ, ಬಾವಿ, ಕೊಳವೆಬಾವಿಗಳಲ್ಲಿ ನೀರಿನ ಸಾಮರ್ಥ್ಯ ಹೆಚ್ಚುತ್ತದೆ. ಈ ಡ್ಯಾಂ ಬಳಿ ಹಲವು ಸರಕಾರಿ ಬಾವಿ-ಕೊಳವೆ ಬಾವಿಗಳಿದ್ದು, ಡ್ಯಾಂನಲ್ಲಿ ನೀರು ಸಂಗ್ರಹವಾದಂತೆ ನೀರಿನ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಇದರಿಂದ ಗ್ರಾಮಗಳಿಗೆ ಸರಬರಾಜು ಮಾಡಲು ಸಾಕಷ್ಟು ನೀರು ದೊರೆಯುವಂತಾಗುತ್ತದೆ.
2020ರ ಮಾರ್ಚ್ ಒಳಗೆ ಪೂರ್ಣ ನಿರೀಕ್ಷೆ
ಪಶ್ಚಿಮವಾಹಿನಿ ಯೋಜನೆಯಲ್ಲಿ 6.29 ಕೋಟಿ ರೂ. ವೆಚ್ಚದಲ್ಲಿ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಹಾಗೂ 4.92 ಕೋಟಿ ರೂ. ವೆಚ್ಚದಲ್ಲಿ ಕಡಿರು ದ್ಯಾವರದಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣ ಆಗುತ್ತಿದ್ದು, 2020ರ ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಡಿರುದ್ಯಾವರ ಡ್ಯಾಂ 88.8 ಮೀಟರ್ ಉದ್ದ ಹಾಗೂ ನಿಟ್ಟಡೆಯದ್ದು 100.2 ಮೀ. ಉದ್ದ ಇದೆ. ಡ್ಯಾಂಗೆ ವಿದ್ಯುತ್ ಚಾಲಿನ ಗೇಟ್ ಅಳವಡಿಸಲಾಗುತ್ತಿದೆ. ನಿಟ್ಟಡೆ ಡ್ಯಾಂಗೆ 21 ಗೇಟ್ ಅಳವಡಿಸಲಾಗುತ್ತಿದ್ದು, ತಾ|ನ ಬೃಹತ್ ವೆಂಟೆಡ್ ಡ್ಯಾಂ ಇದಾಗಿದೆ. ಮಳೆಗಾಲದಲ್ಲಿ ಕಾಮಗಾರಿ ನಿಲ್ಲಿಸಿ ಬಳಿಕ ಮುಂದುವರಿಸಲಾಗುವುದು.
- ಪ್ರಸನ್ನ, ಕಿರಿಯ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಮಂಗಳೂರು ಉಪವಿಭಾಗ
ಜನತೆಗೆ ಬಹಳಷ್ಟು ಉಪಯೋಗ
ಕುಕ್ಕುಜೊಟು ಗ್ರಾಮಸ್ಥರು ಇಲ್ಲಿ ಒಂದು ಅಣೆಕಟ್ಟು ನಿರ್ಮಿಸಿದರೆ ಬಹಳ ಉಪಯೋಗ ಎಂದಿದ್ದರು. ಅದರಂತೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ರನ್ನು ಕರೆಸಿ ಎಸ್ಟಿಮೇಟ್ ಮಾಡಿಸಿ ಅಂದಿನ ಶಾಸಕರಾಗಿದ್ದ ಕೆ. ವಸಂತ ಬಂಗೇರ ಅವರ ಶಿಪಾರಸಿನೊಂದಿಗೆ ಅನುಮೋದನೆಗೆ ಕಳುಹಿಸಲಾಗಿತ್ತು. ಅಂದಿನ ಸಿಎಂ ಸಿದ್ದರಾಮಯ್ಯ ಅವರು ಪಶ್ಚಿಮವಾಹಿನಿ ಯೋಜನೆಯಡಿ ಅನುದಾನ ಬಿಡುಗಡೆಗೊಳಿಸಿದ್ದು, ಇಲ್ಲಿ ಅಣೆಕಟ್ಟು ನಿರ್ಮಿಸುವಂತಾಗಿದೆ. ಇದು ಇಲ್ಲಿನ ಜನತೆಗೆ ಬಹಳಷ್ಟು ಉಪಯೋಗ ಆಗಲಿದೆ.
– ಶೇಖರ ಕುಕ್ಕೇಡಿ, ಜಿ.ಪಂ. ಸದಸ್ಯರು, ಅಳದಂಗಡಿ ಕ್ಷೇತ್ರ
ಬೇಡಿಕೆ ಈಡೇರಿಕೆ ಸಂತಸದ ವಿಚಾರ
ಕುಕ್ಕುಜೊಟ್ಟು ಫಲ್ಗುಣಿ ನದಿ ದಾಟಲು ದೋಣಿ ಬಳಕೆ ಮಾಡುತ್ತಿದ್ದೆವು. ಸೇತುವೆ ನಿರ್ಮಿಸಬೇಕೆಂಬ ಇಲ್ಲಿನ ಗ್ರಾಮಸ್ಥರ ಬೇಡಿಕೆ ಬಹಳ ಹಿಂದಿನದ್ದು. ಆದರೆ ಈಗ ಸೇತುವೆಯ ಜತೆಗೆ ಅಣೆಕಟ್ಟು ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ.
ಅಗಸ್ಟಿನ್ ಮಸ್ಕರೇನಸ್, ಗ್ರಾಮಸ್ಥರು
ಪದ್ಮನಾಭ ವೇಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.