![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 28, 2019, 6:02 AM IST
ಮಂಗಳೂರು: ನಗರದ ಮಹಾಕಾಳಿಪಡು³ ರೈಲ್ವೇಗೇಟ್ ಆಸುಪಾಸಿನಲ್ಲಿ ಸುಮಾರು 14 ಮಂದಿಯಲ್ಲಿ ಶಂಕಿತ ಡೆಂಗ್ಯೂ ಕಾಣಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಪೈಕಿ ನಾಲ್ವರಲ್ಲಿ ಡೆಂಗ್ಯೂ ದೃಢಪಟ್ಟಿದೆ.
ಮಂಗಳೂರು ನಗರದಲ್ಲಿ ಅಲ್ಲೊಂದು ಇಲ್ಲೊಂದು ಡೆಂಗ್ಯೂ ಪ್ರಕರಣ ಕಂಡು ಬರುತ್ತಲೇ ಇದೆ. ಈಗ ಬೆಳಗ್ಗೆ ಬಿಸಿಲು ಸಂಜೆ ಮತ್ತು ರಾತ್ರಿ ಮಳೆ ಬರುತ್ತಿದ್ದು, ಈ ವಾತಾವರಣ ಸೊಳ್ಳೆ ಉತ್ಪತ್ತಿಗೆ ಪೂರಕವಾಗುತ್ತಿದೆ. ಮಳೆ ನೀರು ಅಲ್ಲಲ್ಲಿ ನಿಂತು ಸೊಳ್ಳೆ ಉತ್ಪತ್ತಿಗೆ ಸುಲಭವಾಗುತ್ತಿರುವುದರಿಂದ ಮತ್ತು ಕೊಳಚೆ ನೀರು ನಿಲ್ಲುವುದರಿಂದ ಸೊಳ್ಳೆ ಸಂತಾನ ಹೆಚ್ಚುತ್ತಿದೆ. ಈಗ ಮಹಾಕಾಳಿಪಡು³ ರೈಲ್ವೇ ಗೇಟ್‌ನ ಸುತ್ತಮುತ್ತ ಡೆಂಗ್ಯೂ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ 14 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಹದಿನಾಲ್ಕು ಮಂದಿಯ ಪೈಕಿ ನಾಲ್ವರಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ಅರುಣ್ ತಿಳಿಸಿದ್ದಾರೆ.
ಒಂದೇ ಮನೆಯ ಮೂವರಿಗೆ
ಇಲ್ಲಿನ ಹಲವು ಮನೆಗಳ ಸದಸ್ಯರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಒಂದೇ ಮನೆಯ ಮೂವರಿಗೆ ಬಾಧಿಸಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ತತ್‌ಕ್ಷಣ ಇಲಾಖೆ ಮುತುವರ್ಜಿ ವಹಿಸಿದ ಪರಿಣಾಮ ಹಾವಳಿ ಸ್ವಲ್ಪ ಕಡಿಮೆಯಾಗಿದೆ ಎನ್ನಲಾಗಿದೆ.
ನಿರಂತರ ಫಾಗಿಂಗ್
ಮಹಾಕಾಳಿಪಡು³ ರೈಲ್ವೇಗೇಟ್ ಪರಿಸರದಲ್ಲಿ ಡೆಂಗ್ಯೂ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಲಾಖೆ ತತ್‌ಕ್ಷಣ ಕಾರ್ಯೋನ್ಮುಖವಾಗಿವೆ. ಪರಿಸರದ ಅಲ್ಲಲ್ಲಿ ಫಾಗಿಂಗ್ ನಡೆಸಲಾಗಿದೆ. ಅಲ್ಲದೆ ಶಿಬಿರ ಏರ್ಪಡಿಸಿ ಸೊಳ್ಳೆ ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಜನರಿಗೆ ಅಗತ್ಯ ಮಾಹಿತಿಗಳನ್ನೂ ನೀಡಲಾಗಿದೆ.
ನಮ್ಮ ಮನೆಯಲ್ಲಿ ಮೂವರಿಗೆ ಡೆಂಗ್ಯೂ ಕಾಣಿಸಿತ್ತು. ತತ್‌ಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಇಲಾಖೆಯವರು ಬಂದು ಫಾಗಿಂಗ್ ನಡೆಸಿದ್ದಾರೆ. ಸದ್ಯ ನಮ್ಮ ವ್ಯಾಪ್ತಿಯಲ್ಲಿ ಹಾವಳಿ ಕಡಿಮೆ ಇದೆ.
-ಪ್ರಕಾಶ್, ಸ್ಥಳೀಯರು
ಮಹಾಕಾಳಿಪಡು³ ರೈಲ್ವೇಗೇಟ್ ಆಸುಪಾಸಿನಲ್ಲಿ ನಾಲ್ವರಿಗೆ ಡೆಂಗ್ಯೂ ದೃಢಪಟ್ಟಿದೆ. ಈಗಾಗಲೇ ಫಾಗಿಂಗ್ ನಡೆಸಲಾಗುತ್ತಿದೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ವಹಿಸುವಂತೆಯೂ ಜನರಿಗೆ ಮಾಹಿತಿ ನೀಡುವ ಕೆಲಸ ನಡೆದಿದೆ.
-ಡಾ| ಅರುಣ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ
You seem to have an Ad Blocker on.
To continue reading, please turn it off or whitelist Udayavani.