ಹುಷಾರ್, ಹಾಸ್ಟೆಲ್ ಗೆ ಹಾಕ್ಬಿಡ್ತೀನಿ !
Team Udayavani, May 28, 2019, 9:12 AM IST
‘ನೋಡು, ಚೆನ್ನಾಗಿ ಓದಿಲ್ಲ ಅಂದ್ರೆ ಬೋರ್ಡಿಂಗ್ ಸ್ಕೂಲ್ಗೆ ಕಳಿಸ್ತೀನಿ’- ಹಾಗಂತ ಅಪ್ಪ-ಅಮ್ಮ ಯಾವತ್ತೂ ನನ್ನನ್ನು ಹೆದರಿಸಿರಲಿಲ್ಲ. ಚೆನ್ನಾಗಿ ಓದ್ತಿದ್ದೆ ಎಂಬ ಕಾರಣಕ್ಕೇ ನನ್ನನ್ನು ಹಾಸ್ಟೆಲ್ಗೆ ಸೇರಿಸಿದ್ದು. ಯಾಕಂದ್ರೆ, ನಮ್ಮೂರು ಮಲೆನಾಡಿನ ಒಂದು ಸಣ್ಣ ಹಳ್ಳಿ. ಅಲ್ಲಿಗೆ ಬಸ್ ಸೌಲಭ್ಯವೇ ಇಲ್ಲ. 7ನೇ ಕ್ಲಾಸ್‌ವರೆಗೆ ನಾನು ಓದಿದ ಸರ್ಕಾರಿ ಶಾಲೆಯೂ ಮನೆಯಿಂದ ಮೂರು ಕಿ.ಮೀ. ದೂರದಲ್ಲಿತ್ತು. ದಿನಾ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದೆ. ಇನ್ನು ಹೈಸ್ಕೂಲ್ಗೆ ಹೋಗಬೇಕಂದ್ರೆ, ನಾಲ್ಕೈದು ಕಿ.ಮೀ. ನಡೆದು, ಮತ್ತೆ ಅಲ್ಲಿಂದ ಬಸ್‌ನಲ್ಲಿ ಮುಕ್ಕಾಲು ಗಂಟೆ ಪಯಣಿಸಬೇಕು. ದಿನಾ ಅಷ್ಟೆಲ್ಲ ಸುಸ್ತು ಮಾಡಿಕೊಂಡು ಶಾಲೆಗೆ ಹೋಗಿ ಬಂದರೆ ಮತ್ತೆ ಓದೋಕೆ ಚೈತನ್ಯವೆಲ್ಲಿರುತ್ತೆ? ಹಾಗಾಗಿಯೇ, ಹಾಸ್ಟೆಲ್ ನನ್ನ ಪಾಲಿಗೆ ಆಯ್ಕೆಯಾಗಿರದೆ, ಅನಿವಾರ್ಯವಾಗಿತ್ತು.
ಆದರೆ, ಅಲ್ಲಿಯವರೆಗೂ ಅಮ್ಮನ ಸೆರಗು ಹಿಡಿದು ಓಡಾಡುತ್ತಿದ್ದ, ತಲೆಸ್ನಾನ, ಜಡೆ ಹಾಕಿಕೊಳ್ಳೋದು, ಬಟ್ಟೆ ಒಗೆಯೋದು, ಪುಸ್ತಕಕ್ಕೆ ಬೈಂಡ್ ಹಾಕೋದು… ಹೀಗೆ ಪ್ರತಿ ಕೆಲಸಕ್ಕೂ ಅಮ್ಮನನ್ನೇ ಅವಲಂಬಿಸಿದ್ದ, ಅಮ್ಮ ಒಂದು ದಿನದ ಮಟ್ಟಿಗೆ ನೆಂಟರ ಮನೆಗೆ ಹೋದಾಗಲೂ ‘ಅಮ್ಮ ಬೇಕು’ ಅಂತ ಕಣ್ಣೀರು ಹಾಕುತ್ತಿದ್ದ ನಾನು ಅದ್ಹೇಗೆ ಹಾಸ್ಟೆಲ್ಗೆ ಹೊಂದಿಕೊಳ್ಳುತ್ತೇನೆ ಎಂಬುದು ಅಪ್ಪ-ಅಮ್ಮನನ್ನಷ್ಟೇ ಅಲ್ಲ, ನನ್ನನ್ನೂ ಕಾಡುತ್ತಿದ್ದ ವಿಷಯ. ಆದರೇನು ಮಾಡುವುದು? ಹೋಗಲೇಬೇಕಿತ್ತು.
ತುಂಬಾ ದೂರದ ಹಾಸ್ಟೆಲ್ ಬೇಡ. ಕನಿಷ್ಠ ಪಕ್ಷ ತಿಂಗಳಿಗೊಮ್ಮೆಯಾದರೂ ಮನೆಗೆ ಬಿಡುವಂಥ, ಹತ್ತಿರದ ಹಾಸ್ಟೆಲ್ನಲ್ಲಿ ಬಿಡೋಣ ಅಂತ ಅಪ್ಪ-ಅಮ್ಮ ನಿರ್ಧರಿಸಿದರು. ‘ಇಲ್ಲ, ನಾನು ಹೋಗಲ್ಲ’ ಅಂತ ಹಠ ಹಿಡಿಯಬೇಕೆನಿಸುತ್ತಿತ್ತು. ಆದರೆ, ಹಾಗೆ ಮಾಡುವಂತಿರಲಿಲ್ಲ. ಯಾಕಂದ್ರೆ, ಹಾಸ್ಟೆಲ್ ಸೇರಿದರೆ ನನ್ನ ಭವಿಷ್ಯಕ್ಕೇ ಒಳ್ಳೆಯದು ಅಂತ ಗೊತ್ತಿತ್ತು. ಆದರೂ, ಮಾತ್ರೆ ತಿನ್ನಲು ಹೆದರುವ ರೋಗಿಯಂತೆ ಚಡಪಡಿಸತೊಡಗಿದ್ದೆ.
ಮೇ ತಿಂಗಳ ಕೊನೆಯ ವಾರ ಬಂತು. ನನ್ನನ್ನು ಹಾಸ್ಟೆಲ್ಗೆ ಕಳುಹಿಸಲು ತಯಾರಿ ನಡೆಯತೊಡಗಿತು. ಹಾಸಿಗೆ, ದಿಂಬು, ರಗ್, ಟ್ರಂಕ್, ಬಕೆಟ್, ಮಗ್, ಬಟ್ಟೆ, ಬುಕ್ಸ್, ಛತ್ರಿ, ತಟ್ಟೆ-ಲೋಟ, ಸೋಪು, ಸೋಪಿನ ಬಾಕ್ಸ್, ಬ್ರಷ್, ಬಟ್ಟೆ ಕ್ಲಿಪ್, ಬಟ್ಟೆ ಒಣಗಿಸಲು ಹಗ್ಗ… ಇತ್ಯಾದಿ ವಸ್ತುಗಳ ಪಟ್ಟಿ ಮಾಡಿ, ಬಹುತೇಕ ಎಲ್ಲವನ್ನೂ ಹೊಸದಾಗಿಯೇ ಖರೀದಿಸಿದೆವು. ತಟ್ಟೆ, ಲೋಟ, ಟ್ರಂಕ್, ಬಕೆಟ್ ಮೇಲೆ, ಪೇಂಟ್ನಿಂದ ನನ್ನ ಹೆಸರು ಬರೆಯಲಾಯ್ತು. ಹಾಸ್ಟೆಲ್ನಲ್ಲಿ ನಡೆಯುವ ಕಳ್ಳತನಗಳ ಬಗ್ಗೆ ಅಣ್ಣಂದಿರು ಹೇಳಿದ್ದರಿಂದ ಈ ಮುನ್ನೆಚ್ಚರಿಕೆ ಕ್ರಮ.
ಇನ್ನೇನು ಹಾಸ್ಟೆಲ್ಗೆ ಹೋಗೋಕೆ ಒಂದೇ ವಾರ ಇದೆ ಅನ್ನುವಾಗ, ಉದ್ದ ಕೂದಲಿಗೆ ಕತ್ತರಿ ಬಿತ್ತು. ಅಲ್ಲಿಯವರೆಗೂ ನನಗೆ ತಲೆ ತಿಕ್ಕಿಕೊಳ್ಳಲೇ ಸರಿಯಾಗಿ ಬರುತ್ತಿರಲಿಲ್ಲ, ಇನ್ನು ನೀಟಾಗಿ ಜಡೆ ಹೆಣೆದುಕೊಳ್ಳುವುದು ದೂರದ ಮಾತು. ಉದ್ದ ಕೂದಲನ್ನು, ಗಿಡ್ಡಕೆ ಕತ್ತರಿಸಿದ ಮೇಲೆ, ಹಾಸ್ಟೆಲ್ನಲ್ಲಿ ಹೇಗಿರಬೇಕು, ಹೇಗಿರಬಾರದು ಅಂತೆಲ್ಲಾ ಅಮ್ಮನಿಂದ ಬೋಧನೆಗಳಾದವು. ಬೆಳಗ್ಗೆ ಬೇಗ ಏಳಬೇಕು, ಒಂದೇ ಬಕೆಟ್ ನೀರಿನಲ್ಲಿ ಸ್ನಾನ ಮಾಡಬೇಕು, ವಾರಕ್ಕೊಮ್ಮೆ ಮನೆಗೆ ಫೋನ್ ಮಾಡಬಹುದು; ಅದೂ ಐದು ನಿಮಿಷ ಮಾತ್ರ, ಊಟ ಹೇಗೇ ಇದ್ದರೂ ವೇಸ್ಟ್ ಮಾಡದೆ ತಿನ್ನಬೇಕು, ನಿನ್ನ ಬಟ್ಟೆಯನ್ನು ನೀನೇ ತೊಳೆದುಕೊಳ್ಳಬೇಕು, ಯಾವುದೇ ಕಾರಣಕ್ಕೂ ವಾರ್ಡನ್ ಮಾತಿಗೆ ಎದುರಾಡಬಾರದು… ಹೀಗೆ, ಅಪ್ಪ ಹಾಸ್ಟೆಲ್ ನೋಡಲು ಹೋದಾಗ ಅವರಿಗೆ ಏನೇನು ಹೇಳಿದ್ದರೋ, ಅದನ್ನೆಲ್ಲ ಮತ್ತೂಮ್ಮೆ ನನಗೆ ಜ್ಞಾಪಿಸಿದರು. ಅದನ್ನೆಲ್ಲಾ ಕೇಳಿ, ಇವರೆಲ್ಲಾ ಸೇರಿ ನನ್ನನ್ನು ಎಲ್ಲಿಗೆ ಕಳಿಸುತ್ತಿ ದ್ದಾರೆ? ನಾನೊಬ್ಬಳೇ ಎಲ್ಲವನ್ನೂ ಹೇಗೆ ಮ್ಯಾನೇಜ್ ಮಾಡಲಿ? ಅಂತ ಹೆದರಿಕೆಯಾಗಿ ಕಣ್ತುಂಬಿತು. ಆಗ ಅಮ್ಮ- ‘ನೋಡು, ನೀನು ನನ್ ಥರ ಆಗಬಾರ್ಧು. ಚೆನ್ನಾಗಿ ಓದಿ, ಒಳ್ಳೆ ಕೆಲಸಕ್ಕೆ ಸೇರಬೇಕು. ಅದ್ಕೆ ತಾನೇ ನಿನ್ನನ್ನು ಒಳ್ಳೆ ಶಾಲೆಗೆ ಸೇರಿಸ್ತಿರೋದು? ಮೊದಲು ಒಂದೆರಡು ವಾರ ಮನೆ ನೆನಪಾಗುತ್ತೆ, ಅಳು ಬರುತ್ತೆ. ಹಾಗಂತ ವಾಪಸ್ ಬಂದ್ಬಿಡೋದಲ್ಲ, ತಿಳೀತಾ?’ ಅಂತ ಧೈರ್ಯ ಹೇಳಿದರು.
ಕೊನೆಗೂ ನಾನು ಯಾವ ದಿನ ಬರಲೇಬಾರದು ಅಂತಿದ್ದೆನೋ, ಆ ದಿನ ಬಂದೇಬಿಟ್ಟಿತು. ನನ್ನ ಹಾಸಿಗೆ, ಟ್ರಂಕ್, ಬಕೆಟ್, ತಟ್ಟೆ-ಲೋಟಗಳು ತಮ್ಮನ್ನು ತಾವು ನೀಟಾಗಿ ಪ್ಯಾಕ್ ಮಾಡಿಸಿಕೊಂಡು, ಆಟೋರಿಕ್ಷಾವನ್ನು ಎದುರು ನೋಡುತ್ತಾ ಅಂಗಳದಲ್ಲಿ ನಿಂತಿದ್ದವು. ಅಪ್ಪನ ಜೊತೆ ಅಮ್ಮನೂ, ನನ್ನನ್ನು ಹಾಸ್ಟೆಲ್ಗೆ ಬಿಡಲು ಹೊರಟಿದ್ದರು. ಆ ಲಗೇಜ್‌ನ ಒಟ್ಟು ತೂಕಕ್ಕಿಂತ ನಮ್ಮ ಹೃದಯಗಳೇ ಅವತ್ತು ಹೆಚ್ಚು ಭಾರವಾಗಿದ್ದವು. ಜಿಟಿಜಿಟಿ ಮಳೆಯಲ್ಲಿ ಒಂದನೇ ಕ್ಲಾಸಿಗೆ ಸೇರಿದಾಗ ಮನಸ್ಸು ಎಷ್ಟು ಅಯೋಮಯವಾಗಿತ್ತೋ, ಅವತ್ತೂ ನನ್ನ ಪರಿಸ್ಥಿತಿ ಅದೇ ರೀತಿಯಿತ್ತು. ಲಗೇಜು ತುಂಬಿದ ಆಟೋ ಮುಂದೆ ಮುಂದೆ ಸಾಗಿದಂತೆ, ಮಂಜು ಮಂಜಾಗಿ ಕಾಣುತ್ತಿದ್ದ ಮನೆ ಹಿಂದೆ ಹಿಂದೆಯೇ ಉಳಿದುಕೊಂಡಿತು.
ಮುಂದೇನಾಯ್ತು ಗೊತ್ತಾ? ಒಂದೇ ವಾರಕ್ಕೆ ವಾಪಸ್ ಮನೆಗೆ ಬರ್ತಾಳೇನೋ ಅಂದುಕೊಂಡಿದ್ದ ಹುಡುಗಿ, ಮೂರು ವರ್ಷ ಹೈಸ್ಕೂಲು, ಎರಡು ವರ್ಷ ಪಿಯು, ಮೂರು ವರ್ಷ ಡಿಗ್ರಿ ಅಂತ ಬರೋಬ್ಬರಿ ಎಂಟು ವರ್ಷಗಳನ್ನು ಬೇರೆ ಬೇರೆ ಹಾಸ್ಟೆಲ್ನಲ್ಲಿ ಕಳೆದೆ. ಇವತ್ತಿಗೂ ಯಾರಾದ್ರೂ, ಹಾಸ್ಟೆಲ್ ಲೈಫ್ ಹೇಗಿತ್ತು ಅಂತ ಕೇಳಿದ್ರೆ, ನನ್ನಿಂದ ಬರೋ ಉತ್ತರ- ‘ಇಟ್ ವಾಸ್ ಮೈ ಸೆಕೆಂಡ್ ಹೋಂ!’
ಪ್ರಿಯಾಂಕ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.