ಹತ್ತು ದಿನವಷ್ಟೇ ಬಾಕಿ ಇದೆ
Team Udayavani, May 28, 2019, 9:40 AM IST
ನಿನ್ನ ಕೈ ಹಿಡಿಯಲು ಇನ್ನು ಹತ್ತೇ ದಿನಗಳು ಬಾಕಿ ಇರುವಾಗ
ನಿನ್ನೊಂದಿಗೆ ಕಳೆದ ಅಷ್ಟೂ ಕ್ಷಣಗಳನ್ನು ಮನ ಮೆಲುಕು ಹಾಕುತ್ತಿದೆ. ಮನೆಯವರಿಂದ ಪರಿಚಿತನಾದ ನೀನು ಹೃದಯದೊಳಗೆ ಸೇರಿದ ಪರಿಯೇ ಅದ್ಭುತ. ಮೊದಲು ಆ ಹುಡುಗ ಬೇಡ ಎನ್ನುತ್ತಿದ್ದವಳು, ನಿನ್ನನೇ ಮದುವೆಯಾಗಬೇಕೆಂಬ ಹಠ ಹಿಡಿದಿದ್ದು, ಉಪವಾಸ-ವ್ರತ ಅಂತೆಲ್ಲಾ ದೇವರಲ್ಲಿ ಮೊರೆ ಇಟ್ಟಿದ್ದು ನಾನೇನಾ?
ಎಲ್ಲ ಹುಡುಗಿಯರಂತೆ ಮೊದಮೊದಲಿಗೆ ನಾನು ಕೂಡ ಈ ಸಂಬಂಧ ಬೇಡ ಅಂದಿದ್ದೆ. ಅದಕ್ಕೆ ಮದುವೆ ಬಗ್ಗೆ ಮೂಡಿದ್ದ ವೈರಾಗ್ಯವೇ ಕಾರಣ ವಿರಬಹುದು. ಆದರೆ, ನಿನ್ನೊಂದಿಗೆ ಮಾತು ಆರಂಭಿಸಿದ ಮೊದಲ ದಿನವೇ ನೀ ನನ್ನ ಅಭಿಪ್ರಾಯವನ್ನು ಬದಲಿಸಿ, ಅಂತರಂಗದೊಳಗೆ ಹೊಕ್ಕಿಬಿಟ್ಟೆ. ಬಹಳ ಬೇಗನೆ ನಿನ್ನ ವ್ಯಕ್ತಿತ್ವಕ್ಕೆ ಸೋತುಬಿಟ್ಟೆ, ಆದರೆ ಶರಣಾಗಿರಲಿಲ್ಲ.
ಅದ್ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಪ್ರೀತಿ ಮೂಡಿತೋ ತಿಳಿಯದು. ಅದನ್ನು ಹೇಳಿಕೊಳ್ಳಲು ನನಗೆ ಬಿಂಕ. ಆದರೆ ನೀನು ಅದ್ಯಾವುದನ್ನೂ ತೋರದೆ “ನೀ ಅಂದ್ರೆ ಇಷ್ಟ ಕಣೇ’ ಅಂತ ಹೇಳಿºಟ್ಟೆ. ಹಸಿರು ಸಿರಿಯ ಮಧ್ಯೆ ಹಸಿರಂಗಿಯಲ್ಲಿ ನೀ ನಿಂತಾಗ, ಹಸಿರು ಸೀರೆ ಉಟ್ಟ ನಾನು ಸಂಪೂರ್ಣವಾಗಿ ನಿನ್ನವಳಾಗಿಬಿಟ್ಟೆ. ಬಿಟ್ಟಿರಲಾರದ ನಮ್ಮ ಅನುಬಂಧಕ್ಕೆ ಆ ಹಸಿರು ಕಾಡು ಸಾಕ್ಷಿಯಾಯಿತು. “ನನ್ನೆದೆಯಲ್ಲಿ ನೀ ಹಚ್ಚಿರುವ ಪ್ರೇಮಜ್ಯೋತಿಯನ್ನು ಆರದಂತೆ ಕಾಪಾಡುವುದೂ ನಿನ್ನದೇ ಜವಾಬ್ದಾರಿ ಕಣೇ’ ಅಂದೆ ನೋಡು, ಆ ಕ್ಷಣ ಒಮ್ಮೆ ಭಯವಾಗಿ ಬಿಟ್ಟಿತ್ತು. ಎಲ್ಲಿ ನೀನು ನನ್ನಿಂದ ದೂರವಾಗಿ ಬಿಡ್ತೀಯೋ ಅಂತ.
ಮನೆಯವರೇ ನನ್ನ ನಿನ್ನ ಪರಿಚಯಕ್ಕೆ ಕಾರಣವಾದರೂ, ನನ್ನ ಕುಟುಂಬ ಸಂಪೂರ್ಣವಾಗಿ ನಿನ್ನನ್ನು ಒಪ್ಪಲು ನಾಲ್ಕೈದು ತಿಂಗಳು ಕಾಯಿಸಿತು. ಈ ಹಂತದಲ್ಲೇ ಅಲ್ಲವೇ ನಮ್ಮ ಪ್ರೇಮ ಚುಚ್ಚು ನುಡಿಗಳ ಬೆಂಕಿಯಲ್ಲಿ ಬೆಂದು, ಕಣ್ಣೀರ ಹನಿಗಳಿಂದ ತೋರಣ ಕಟ್ಟಿ, ಬೇಸರದ ವಿಳಾಸ ನಮ್ಮಿಬ್ಬರನ್ನು ಅರಸಿ
ಸತಾಯಿಸಿ ಸಂತೈಸಿದ್ದು. ಆ ನಾಲ್ಕೈದು ತಿಂಗಳ ಆತಂಕದಲ್ಲಿಯೂ ಒಂದು ಬಗೆಯ ಹಿತವಿತ್ತು. ಮನೆಯವರೆಲ್ಲಾ ಎಷ್ಟೇ ಬೇಡವೆಂದರೂ ಪರಿಸ್ಪರ ಒಪ್ಪಿ ಅಪ್ಪಿಕೊಂಡ ನಮ್ಮಿಬ್ಬರ ಮನ ಒಬ್ಬರನ್ನೊಬ್ಬರು ಅಗಲಿರದಷ್ಟು ಗಟ್ಟಿಯಾಯಿತು. ನನಗೆ ನೀ, ನಿನಗೆ ನಾ ಒಲವೇ ನಮ್ಮ ಬದುಕು ಎಂಬ ಭಾವ ಕಾಡುತ್ತಿರುವಾಗಲೇ ಎದುರಿನ ವ್ಯಕ್ತಿಗಳ ಬೆಂಕಿ ಮಾತುಗಳು ಮನ ಕಲುಕುತ್ತಿತ್ತು. ಒಮ್ಮೆ ಮನೆಯವರಿಗಾಗಿ ನಿನ್ನಿಂದ ದೂರವಾಗಿ ಬಿಡೋಣ ಅನ್ನಿಸಿದರೂ, ನಮ್ಮಿಬ್ಬರ ಹೃದಯ ಅದಕ್ಕೆ ಅನುಮತಿ ನೀಡುತ್ತಿರಲಿಲ್ಲ.
ಅಲ್ಲಿ ಸಮುದ್ರ ತಟದ ಏಕಾಂತದಲ್ಲಿ ನೀ ಕಳೆದುಹೋದರೆ, ಇಲ್ಲಿ ಮಾಯಾನಗರಿಯಲ್ಲಿ ಕಣ್ಣೀರು ನನ್ನ ಕರಗಿಸುತ್ತಿತ್ತು. ನಾನೊಂದು ತೀರ
ನೀನೊಂದು ತೀರ ಎನ್ನುವಾಗಲೇ ದೇವರು ಕಣಿºಟ್ಟ. ನನ್ನ ಪ್ರಾರ್ಥನೆ, ಹರಕೆ, ವ್ರತ ಫಲ ನೀಡುವ ಸಮಯ ಬಂದಿತ್ತು. ದೇವರ ಆಶೀರ್ವಾದದಿಂದ ಎಲ್ಲರೂ ಕರಗಿದರು. ಈಗ ಎಲ್ಲರೂ ಹರಸಿ ಹಾರೈಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ತುಂಬು ಪ್ರೀತಿ ಹೊತ್ತುಕೊಂಡು ಹಸೆಮಣೆ ಏರಲು ಕಾತರಳಾಗಿದ್ದೇನೆ. ಆ ಶುಭ ಗಳಿಗೆಗಾಗಿ ಮನ ಕಾಯುತ್ತಿದೆ.
ಇಂತಿ
ರಾಗದೊಳು ಬೆರೆತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.