ನೀರು-ಮೇವಿಗಾಗಿ ಅಲೆದಾಟ
• ನೀರು-ಮೇವು ಸಿಗುವ ಕಡೆ ಕುರಿಗಾಹಿಗಳ ಪಯಣ • ಬತ್ತಿದ ಬಾವಿ-ಅಂತರ್ಜಲ ಕುಸಿತ
Team Udayavani, May 28, 2019, 11:53 AM IST
ಮುದಗಲ್ಲ: ಮೇವು-ನೀರು ಅರಸಿ ಹೊರಟ ಜಾನುವಾರುಗಳು
ಮುದಗಲ್ಲ: ನೀರು ಪೂರೈಕೆಯಲ್ಲಿ ಒಂದೆರಡು ದಿನ ವ್ಯತ್ಯಾಸವಾದರೆ ಜನತೆ ಖಾಲಿ ಕೊಡಗಳನ್ನು ಹಿಡಿದು ಸರಕಾರಿ ಕಚೇರಿಗಳ ಎದುರಿಗೆ ಪ್ರತಿಭಟನೆ, ಧರಣಿ, ಗಲಾಟೆ ಮಾಡುತ್ತಾರೆ. ಆದರೆ ಬೇಸಿಗೆ ಬಿಸಿಲಲ್ಲಿ ನೀರು, ಮೇವಿಗಾಗಿ ಜಾನುವಾರುಗಳು ಅಲೆದಾಡುತ್ತಿವೆ.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಜಾನುವಾರುಗಳು ಮೇವು, ನೀರಿಗಾಗಿ ಪರದಾಡುತ್ತಿವೆ. ಎಲ್ಲಿ ನೋಡಿದರೂ ಬರೀ ಬರಡು ನೆಲ ಕಾಣಿಸುತ್ತಿದೆ. ಇಲ್ಲಿನ ಕುರಿಗಾರರು ನೀರು, ಮೇವು ಅರಸುತ್ತಾ ಕಿ.ಮೀ.ಗಟ್ಟಲೇ ದೂರ ಅಲೆದಾಡುವಂತಾಗಿದೆ. ಬಿಸಿಲಿನ ತಾಪಕ್ಕೆ ಭೂಮಿ ಕಾದು ಕಾವಲಿಯಂತಾಗಿದೆ. ಎತ್ತ ನೋಡಿದರು ಬರಡು ಭೂಮಿ ಎದ್ದು ಕಾಣುತ್ತಿದೆ. ಕುರಿಗಳಿಗೆ, ದನ-ಕರುಗಳಿಗೆ ತೊಟ್ಟು ನೀರು ಕುಡಿಸಲು ಕುರಿಗಾಹಿಗಳು ನಿತ್ಯ ಹರ ಸಾಹಸಪಡಬೇಕಾಗಿದೆ. ಕುರಿಗಾರರು ತಮ್ಮ ಹಿಂಡುಗಳೊಂದಿಗೆ ನೀರಾವರಿ ಪ್ರದೇಶಗಳಾದ ಸಿಂಧನೂರ, ಮಾನ್ವಿ, ಸುರಪುರ ಕಡೆ ಗುಳೆ ಹೋಗಿ ಅಲ್ಲಿ ಸಿಗುವ ನೀರು, ಮರಗಿಡಗಳ ತಪ್ಪಲು, ಹಸಿರು ಮೇವು ತಿನ್ನಿಸಿ ಕುರಿಗಳ ಜೀವ ಉಳಿಸಿಕೊಳ್ಳುತ್ತಿದ್ದಾರೆ. ಇನ್ನು ಮನೆಯಲ್ಲಿ ಅನಾನುಕೂಲ ಇರುವ ಕೆಲ ಕುರಿಗಾಹಿಗಳು ಇಲ್ಲಿಯೇ ಖಾಸಗಿ ವ್ಯಕ್ತಿಗಳ ತೋಟ, ಬಾವಿಗಳ ಹತ್ತಿರ ತಮ್ಮ ಕುರಿಗಳಿಗೆ, ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮೊದಲಿಗೆ ಮೂರು-ನಾಲ್ಕು ಕಿ.ಮೀ.ದೂರದವರೆಗೆ ಹೋಗಿ ಮೇಯಿಸಿಕೊಂಡು ಸಂಜೆ ಮನೆಗೆ ಮರಳುತ್ತಿದ್ದವು. ಆದರೆ ಈಗ ಬಿಸಿಲಿನ ಧಗೆಗೆ ಗಿಡಮರಗಳು ಒಣಗುತ್ತಿವೆ. ಎಲ್ಲಿಯೂ ಹಲ್ಲು ಸಿಗದೇ ಬರಿ ಕೆಂಪು, ಕಪ್ಪು ನೆಲ ಕಾಣಿಸುತ್ತಿದೆ. 8-10ಕಿ.ಮೀ. ದೂರ ಹೋದರೂ ಹಸಿರು ಹುಲ್ಲು-ನೀರು ಸಿಗುತ್ತಿಲ್ಲ. ಕುರಿಗಳನ್ನು ಮೇಯಿಸಲು ತುಂಬ ತೊಂದರೆಯಾಗುತ್ತಿದೆ ಎಂದು ಕುರಿಗಾಹಿಗಳಾದ ಮೀಟಪ್ಪ, ಗನಕಪ್ಪ, ಬಾಳಪ್ಪ ಅಳಲು ತೋಡಿಕೊಂಡರು.
ಹೊಲ, ಗುಡ್ಡಗಾಡು ಪ್ರದೇಶದಲ್ಲಿನ ಒಣ ಮೇವು ತಿಂದು, ಕಲುಷಿತ ನೀರು ಕುಡಿದು ಕುರಿ, ಆಡುಗಳು ಹಾಗೂ ದನ-ಕರಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ತಾಪಮಾನ ಏರಿಕೆಯಿಂದ ನಾಲಿಗೆ ಬೇನೆ, ಕಾಲು ಬೇನೆ ಅತಿಯಾದ ಜ್ವರ, ಭೇದಿ ಕಾಣಿಸಿಕೊಂಡು ಜಾನುವಾರುಗಳು ಸಾಯುತ್ತಿವೆ. ಹಡಗಲಿ ತಾಂಡಾದ ಲಿಂಬೆಪ್ಪ ರಾಠೊಡ ಎಂಬುವರ 40 ಸಾವಿರ ಮೌಲ್ಯದ ಎತ್ತು ಮೃತಪಟ್ಟಿದೆ. ವೇಣ್ಯಪ್ಪನ ತಾಂಡಾದ ಹನುಮಂತಪ್ಪ ಗುಡದಪ್ಪ ಎಂಬುವರ 2 ಎತ್ತುಗಳು ಅನಾರೋಗ್ಯದಿಂದ ಬಳಲುತ್ತಿವೆ. ಗೊಲ್ಲರಹಟ್ಟಿಯಲ್ಲಿ ಹನುಮಂತಪ್ಪ ಎಂಬವರಿಗೆ ಸೇರಿದ 4 ಕುರಿಗಳು ಬಿಸಿಲಿನ ತಾಪಕ್ಕೆ ಸಾವನ್ನಪ್ಪಿದರೂ ಪಶು ಇಲಾಖೆ ಅಧಿಕಾರಿಗಳು ಕುರಿಗಾಹಿಗಳ ಕಷ್ಟಕ್ಕೆ ದಾವಿಸಿಲ್ಲ ಎಂದು ಗ್ರಾಪಂ ಸದಸ್ಯ ಗ್ಯಾನಪ್ಪ ರಾಠೊಡ ದೂರಿದ್ದಾರೆ. ಮೇವು-ನೀರಿನ ಕೊರತೆಯಿಂದಾಗಿ ಜಾನುವಾರು ಸಾಕಲು ಸಾಧ್ಯವಾಗದೇ ಅಗ್ಗದ ದರದಲ್ಲಿ ಮಾರುವಂತಾಗಿದೆ ಎಂದು ಜಾನುವಾರು ಸಾಕಾಣಿಕೆದಾರರು ಅಳಲು ತೋಡಿಕೊಂಡಿದ್ದಾರೆ.
ಪಶು ಸಂಗೋಪನಾ ಸಚಿವರ ಜಿಲ್ಲೆಯಲ್ಲಿಯೇ 15 ದಿನ ಹಿಂದೆ ಕಾಟಾಚಾರಕ್ಕೆ ಮೇವು ಬ್ಯಾಂಕ ತೆರೆದಿರುವುದನ್ನು ಬಿಟ್ಟರೆ ಪಾಲನೆ ಪೋಷಣೆಗೆ ಬೇರೆ ಯೋಜನೆಗಳನ್ನು ಜಾರಿಗೆ ತರದಿರುವುದು ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
•ದೇವಪ್ಪ ರಾಠೊಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.