ಅಂದು ಕಲಿಸಿದ ಪಾಠ ಈ ಮಳೆಗಾಲಕ್ಕೆ ನೆರವಿಗೆ ಬರಲಿ
ಮಂಗಳೂರು ಮಹಾಮಳೆಗೆ ಒಂದು ವರ್ಷ
Team Udayavani, May 29, 2019, 6:00 AM IST
ಕಳೆದ ವರ್ಷದ ಆ ಮಹಾ ಮಳೆಯ ಘಟನಾವಳಿಗಳನ್ನು ನೆನಪಿಸಿಕೊಳ್ಳುವ ಮೂಲಕ ಈ ಬಾರಿಯ ಮುಂಗಾರು ಪರಿಸ್ಥಿತಿಯನ್ನು ಎದುರಿಸುವಲ್ಲಿ ಪಾಲಿಕೆ ಮತ್ತು ಜಿಲ್ಲಾಡಳಿತ ಯಾವ ರೀತಿ ಸಜ್ಜಾಗಿದೆ ಎಂಬುದರ ವಾಸ್ತವಾಂಶವನ್ನು ಓದುಗರ ಮುಂದಿಡುವ ಪ್ರಯತ್ನ ಉದಯವಾಣಿ ಸುದಿನ ತಂಡದ್ದು. ಪ್ರಸ್ತುತ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದಿರುವ ಕಾರಣ ಅಧಿಕಾರಿ ವರ್ಗದ ಮೇಲೆ ಹಿಂದೆಂದಿಗಿಂತ ಹೆಚ್ಚಿನ ಹೊಣೆಗಾರಿಕೆ ಇದೆ.
ಮಹಾನಗರ: ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕೃತಕ ನೆರೆ ಸೃಷ್ಟಿಯಾಗಿ ಸಾಕಷ್ಟು ಹಾನಿಗೆ ಕಾರಣವಾಗಿದ್ದ “ಮಹಾಮಳೆ’ ಸುರಿದು ಬುಧವಾರಕ್ಕೆ ಒಂದು ವರ್ಷವಾಗುತ್ತಿದೆ. ಕಳೆದ ವರ್ಷ ಮೇ 29ರಂದು ಸುರಿದ ಆ ಮಹಾಮಳೆಗೆ ನಗರದ ಹಲವು ಭಾಗಗಳು ಜಲಾವೃತಗೊಂಡು ವಸ್ತುಶಃ ನಲುಗಿದ್ದವು. ಈ ವರ್ಷದ ಮುಂಗಾರಿಗೂ ದಿನಗಣನೆ ಆರಂಭವಾಗಿದ್ದು, ಹವಾಮಾನ ಮುನ್ಸೂಚನೆಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ರಾಜ್ಯದ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಕೃತಕ ನೆರೆ ಬಾಧಿತ ಪ್ರದೇಶಗಳಲ್ಲಿ ಸಣ್ಣದೊಂದು ಆತಂಕ ಆರಂಭವಾಗಿದೆ.
ಮಹಾಮಳೆ ನಗರ ಜನರ ಪಾಲಿಗೆ ನಿಶ್ಚಿತವಾಗಿಯು ಪ್ರಕೃತಿ ನೀಡಿರುವ ಮುನ್ನೆಚ್ಚರಿಕೆಯಾಗಿತ್ತು. ಅಂದಿನ ಮಳೆಯು ಸ್ಮಾರ್ಟ್ ನಗರವಾಗಲು ಹೊರಟಿರುವ ಮಹಾನಗರದ ಅವ್ಯವಸ್ಥೆಗಳ ವಾಸ್ತವಿಕ ಸ್ಥಿತಿಯನ್ನು ತೆರೆದಿಟ್ಟಿತ್ತು. ಆ ಮೂಲಕ, ಒಂದು ಮಹಾನಗರವನ್ನು ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ಧಿಗೊಳಿಸದಿದ್ದರೆ ಏನೆಲ್ಲ ಅನಾಹುತ-ಸವಾಲುಗಳು ಎದುರಾಗಬಹುದು ಎನ್ನುವುದಕ್ಕೆ ಈ ಮಳೆಯ ಅನಂತರದ ಘಟನೆಗಳೇ ಸಾಕ್ಷಿಯಾದವು.
ಆ ದೃಷ್ಟಿಯಲ್ಲಿ ನಗರ ವ್ಯವಸ್ಥೆಯ ಲೋಪಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸಿ ಮಳೆಯು ಬಹುದೊಡ್ಡ ಪಾಠವನ್ನೇ ಕಲಿಸಿದೆ. ಆ ಮಹಾಮಳೆ ನೀಡಿರುವ ಮುನ್ನೆಚ್ಚರಿಕೆಯಿಂದ ಪಾಠ ಕಲಿತು ಈ ಬಾರಿಯ ಮಳೆಗಾಲವೂ ಸೇರಿದಂತೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರ ವಹಿಸುವ ಹೊಣೆಗಾರಿಕೆ ಮಹಾನಗರ ಪಾಲಿಕೆ ಹಾಗ ಜಿಲ್ಲಾಡಳಿತ ಮೇಲಿದೆ.
ಕಳೆದ ವರ್ಷ ಎಡವಿದ್ದೆಲ್ಲಿ ?
ನಗರದಲ್ಲಿ ವರ್ಷದಿಂದ ವರ್ಷಕ್ಕೆ ಜನದಟ್ಟನೆ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ನೀರು ಹರಿದು ಹೋಗುವ ಮೂಲಗಳು ಕಿರಿದಾಗುತ್ತಿವೆ. ಇದನ್ನು ಅಂದಾಜಿಸುವ ಕಾರ್ಯ ನಡೆಯಬೇಕಿತ್ತು. ಕೃತಕ ನೆರೆ ಸಂಭವಿಸುವ ಪ್ರದೇಶಗಳಲ್ಲಿ ನಿಗಾ ಇರಿಸಿ ಮಳೆ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕಿತ್ತು. ಚರಂಡಿ, ತೋಡುಗಳಲ್ಲಿ ಹೂಳು ತೆಗೆಯುವ ಕಾರ್ಯ ಸಮರ್ಪಕವಾಗಿ ನಡೆಸಬೇಕಿತ್ತು. ವೈಫಲ್ಯದ ಪರಿಣಾಮ ಮಹಾಮಳೆಯು ಅನಾಹುತ ಸೃಷ್ಟಿಸಿತ್ತು.
ಮಹಾಮಳೆ ಕಲಿಸಿದ ಪಾಠ
ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಸಾಕಷ್ಟು ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮ ರೂಪಿಸಬೇಕು. ಮಳೆಗಾಲ ಎದುರಿಸಲು ಸಮಗ್ರ ಕಾರ್ಯಯೋಜನೆಯನ್ನು ರೂಪಿ ಸಿ ಸಮರ್ಪಕ ಅನುಷ್ಠಾನಕ್ಕೆ ನಿಗಾ ವಹಿಸಬೇಕು. ರಾಜಕಾಲುವೆಗಳು, ತೋಡುಗಳ ಬಗ್ಗೆ ವಸ್ತುಸ್ಥಿತಿ ಸಮೀಕ್ಷೆ ನಡೆಸಿ ಸುಸ್ಥಿತಿಯಲ್ಲಿಡಬೇಕು. ಮನೆ, ವಸತಿ ಸಮುಚ್ಚಯಗಳ ನಿರ್ಮಾಣದ ಸಂದರ್ಭ ಸಮೀಪದ ತೋಡು-ಚರಂಡಿಗಳ ಒತ್ತುವರಿಯಾಗದಂತೆ ನಿಗಾ ವಹಿಸಿ ಮತ್ತು ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು. ರಾಜಕಾಲುವೆ, ತೋಡುಗಳ ಸಂರಕ್ಷಣೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಜತೆಗೆ ನಾಗರಿಕರ ಸಹಭಾಗಿತ್ವ ನೀಡಿ, ತುರ್ತು ಸಂದರ್ಭಗಳಲ್ಲಿ ಸ್ಪಂದಿಸಲು ಹೆಚ್ಚಿನ ಸಹಾಯವಾಣಿ, ತಂಡಗಳ ರಚಿಸ ಬೇ ಕು. ಅವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಬಗ್ಗೆ ನಿಗಾ ವಹಿಸಬೇಕು. ನಗರವ್ಯಾಪ್ತಿಯಲ್ಲಿ ಸಂಭಾವಿತ ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ಎದುರಿಸಲು ಬೇಕಾದ ತಜ್ಞರ ತಂಡವನ್ನು ಸನ್ನದ್ದಿನ್ನಲ್ಲಿಡಬೇಕು.
ಮುಂಜಾಗರೂಕತಾ ಕ್ರಮಗಳು
ರಾಜಕಾಲುವೆ ವಸ್ತುಸ್ಥಿತಿಯ ಸಮೀಕ್ಷೆ
ಅತ್ತಾವರ, ಕಂಕನಾಡಿ,ಕುದ್ರೋಳಿ, ಬಳ್ಳಾಲ್‌ಬಾಗ್, ಜಪ್ಪಿನಮೊಗರು, ಪಂಪ್‌ವೆಲ್, ಕೊಟ್ಟಾರಚೌಕಿ, ಕೋಡಿಕಲ್, ಮಾಲೆಮಾರ್, ಉಜ್ಯೋಡಿ, ಜೆಪ್ಪು ಮಹಾಕಾಳಿ ಪಡು³, ಕೊಂಚಾಡಿ, ಪಾಂಡೇಶ್ವರ ಸಹಿತ ರಾಜಕಾಲುವೆಗಳಿವೆ. ಜತೆಗೆ ನಗರದಲ್ಲಿ ದೊಡ್ಡ, ಸಣ್ಣಗಾತ್ರದ ತೋಡುಗಳಿವೆ. ಇವುಗಳ ಹೂಳೆತ್ತುವ ಕಾರ್ಯ ನಡೆದಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು ಸಮರ್ಪಕವಾಗಿ ನಡೆದಿದೆ ಎಂಬ ಬಗ್ಗೆ ಜನ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬೇಕಿದೆ.
ರಸ್ತೆಗಳಲ್ಲಿ ನೀರು ಹರಿದು ಹೋಗಲು ಇರುವ ಆಡಚಣೆಗಳ ನಿವಾರಣೆ
ನಗರದ ಜ್ಯೋತಿವೃತ್ತ, ಬಂಟ್‌ಹಾಸ್ಟೆಲ್, ಕದ್ರಿ ಕಂಬಳ, ಬಿಜೈ, ಕೆ.ಎಸ್.ಆರ್. ರಾವ್ ರಸ್ತೆ, ಎಂ.ಜಿ.ರಸ್ತೆ ಮುಂತಾದೆಡೆ ಈ ಮಳೆಗಾಲದಲ್ಲಿ ರಸ್ತೆಯೇ ತೋಡು ಆಗಿ ಪರಿವರ್ತನೆಗೊಳ್ಳುತ್ತಿದೆ. ಸಂಚಾರವೂ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು.
ಕಂಟ್ರೋಲ್ ರೂಂನ್ನು ಸದೃಢಗೊಳಿಸುವುದು
ಕೃತಕ ನೆರೆ ಸಂಭವಿಸಿದಾಗ ಕಂಟ್ರೋಲ್ ರೂಂಗಳು ಸಮರ್ಪವಾಗಿ ಸ್ಪಂದಿಸಿಲ್ಲ ಎಂಬ ಬಗ್ಗೆ ಬಹಳಷ್ಟು ಜನರಿಂದ ಆಕ್ರೋಶ ವ್ಯಕ್ತವಾಗಿತ್ತು. ಅದುದರಿಂದ ಮಳೆಗಾಲದ ನಾಲ್ಕು ತಿಂಗಳು ಕಂಟ್ರೋಲ್ ರೂಂನಲ್ಲಿ ಹೆಚ್ಚಿನ ಸಿಬಂದಿ, ದೂರವಾಣಿ ಅಳವಡಿಸಿ ಹೆಚ್ಚು ಸಕ್ರಿಯವಾಗಿಸಬೇಕು.
ಗ್ಯಾಂಗ್‌ಗಳು ಕಾರ್ಯನಿರ್ವಹಿಸುವಂತೆ ನಿಗಾ
ಪಾಲಿಕೆ 60 ವಾರ್ಡ್‌ಗಳಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಗಳಲ್ಲಿ ತುಂಬಿರುವ ಹೂಳು ಹಾಗೂ ಮಣ್ಣು ತೆಗೆದು ಸ್ವತ್ಛಗೊಳಿಸಲು ಗ್ಯಾಂಗ್‌ಗಳನ್ನು ರಚಿಸಲಾಗುತ್ತದೆ. ಗ್ಯಾಂಗ್‌ಗಳು ವಾರ್ಡ್ ಮಟ್ಟದಲ್ಲಿ ಯಾವ ರೀತಿ ಕಾರ್ಯನಿರ್ವಹಿಸಿದೆ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಗ್ಯಾಂಗ್‌ಗಳಿಗೆ ವಹಿಸಿದ ಕೆಲಸಗಳನ್ನು ಸರಿಯಾಗಿ ನಿರ್ವಹಿಸಿದೆಯೇ ಎಂಬ ಬಗ್ಗೆ ಇವುಗಳ ಉಸ್ತುವಾರಿಯನ್ನು ವಹಿಸಿಕೊಟ್ಟಿರುವ ಅಧಿಕಾರಿಗಳಿಂದ ಆಯ ಕ್ತರು ವರದಿ ಪಡೆದು ಪರಿಶೀಲಿಸಬೇಕು.
ಪರಿಶೀಲನೆಗೆ ವಾರ್ಡ್‌ಸಮಿತಿ
ಪ್ರತಿ ವಾರ್ಡಿನಲ್ಲಿ ಪಾಲಿಕೆಯ ಅಧಿಕಾರಿ, ಜನ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ವಾರ್ಡ್‌ನಲ್ಲಿರುವ ತೋಡು, ಚರಂಡಿಗಳು ಸ್ಥಿತಿ, ಮಳೆ ನೀರು ಸರಾಗವಾಗಿ ಹರಿಯಲಿರುವ ಅಡಚಣೆಗಳ ವಸ್ತುಸ್ಥಿತಿಯನ್ನು ಪರಿಶೀಲಿಸಿ ಬೇಕಿದೆ. ಆಡಳಿತ ಗಂಭೀರವಾಗಿ ಪರಿಗಣಿಸಿ ಆವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಸಂಭವಿಸಬಹುದಾದ ಸಮಸ್ಯೆಗಳಿಗೆ ಮೊದಲೇ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಬಹುದು.
ಅವಾಂತರ ಸೃಷ್ಟಿಸಿದ್ದ ಮಳೆ
ರಾಷ್ಟ್ರೀಯ ಹೆದ್ದಾರಿ, ಸೇರಿದಂತೆ ಸಂಪರ್ಕ ರಸ್ತೆಗಳು ನೀರು ತುಂಬಿ ನಗರ ಕೆಲವು ತಾಸು ಹೊರಗಿನ ಸಂಪರ್ಕವನ್ನು ಕಳಚಿಕೊಂಡಿತ್ತು. ಹಲವು ಪ್ರದೇಶಗಳಲ್ಲಿ ತೋಡು-ಚರಂಡಿಗಳು ತುಂಬಿ ಹರಿದು ರಸ್ತೆಗಳಲ್ಲಿ ಆಳೆತ್ತರ ನೀರು ತುಂಬಿತ್ತು. ತಗ್ಗು ಪ್ರದೇಶಗಳಲ್ಲಿ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿತ್ತು. ಮನೆಗಳಿಗೆ, ಫ್ಲಾಟ್‌ಗಳಿಗೆ ನೀರು ನುಗ್ಗಿ ನಿವಾಸಿಗಳು ಆತಂಕಕ್ಕೊಳಗಾಗಿ. ಮನೆಗಳಿಗೆ ಹೋಗಲು ದೋಣಿ ಬಳಸಿದ ಘಟನೆಯೂ ನಡೆದಿತ್ತು. ನಗರ ದಲ್ಲಿ ಯಾವ ರೀತಿಯ ಆತಂಕವಿತ್ತು . ನೀರಿನಿಂದ ಜಲಾವೃತ ಗೊಂಡಿದ್ದ ಮನೆಗಳ ನಿವಾಸಿಗಳು ಅಸಹಾಯಕರಾಗಿ ಪತ್ರಿಕಾ ಕಚೇರಿಗೆ ದೂರವಾಣಿ ಮಾಡಿ ನೆರವಿಗಾಗಿ ಅಂಗಲಾಚುತ್ತಿದ್ದರು.
ಅತಿ ಹೆಚ್ಚು ಸಮಸ್ಯೆಗೊಳಗಾದ ಪ್ರದೇಶಗಳು
ಜಪ್ಪಿನಮೊಗರು, ಪಂಪ್‌ವೆಲ್, ಕೊಟ್ಟಾರಚೌಕಿ, ಕೋಡಿಕಲ್, ಮಾಲೆಮಾರ್, ಕುಳೂರು, ಕುಳಾಯಿ, ಬೈಕಂಪಾಡಿ, ಹೊಸಬೆಟ್ಟು,ಉಜೊಡಿ, ಕಾರ್‌ಸ್ಟ್ರೀಟ್, ಕುದ್ರೋಳಿ, ಯೆಯ್ನಾಡಿ, ಪಚ್ಚನಾಡಿ, ಕೊಡಿಯಾಲ್ ಗುತ್ತು ಪ್ರದೇಶ, ಕದ್ರಿಕಂಬಳ, ಜೆಪ್ಪು ಮಹಾಕಾಳಿ ಪಡು³, ಪಡೀಲ್ ,ಅಳಕೆ ,ಹೊಯಿಗೆ ಬಜಾರ್, ಅತ್ತಾವರ, ಸೂಟರ್‌ಪೇಟೆ, ಪಾಂಡೇಶ್ವರ, ಜ್ಯೋತಿ ವೃತ್ತ, ಬಿಜೈ ನ್ಯೂರೋಡ್, ಬಿಜೈ ಭಾರತಿ ನಗರ, ಬಿಜೈ ಕಾಪಿಕಾಡ್, ಆನೆಗುಂಡಿ, ಕೆ.ಎಸ್.ರಾವ್ ರಸ್ತೆ, ಎಂ.ಜಿ. ರಸ್ತೆ ಪ್ರದೇಶಗಳು.
- ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.