ಏಕೆ ಈಗ ಕೇಳಿ ಬರುತ್ತಿಲ್ಲ ಇವಿಎಂ ಕುರಿತಾದ ಅಪಸ್ವರ?
Team Udayavani, May 29, 2019, 6:12 AM IST
ಈ ಬಾರಿ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳೆರಡರಲ್ಲೂ ಹೀನಾಯ ಸೋಲು ಕಂಡಿರುವ ಎನ್. ಚಂದ್ರಬಾಬು ನಾಯ್ಡು ಫಲಿತಾಂಶ ಘೋಷಣೆಯ ಬಳಿಕ ಮತಯಂತ್ರಗಳ ದುರುಪಯೋಗ ಕುರಿತಂತೆ ಕಂ-ಕಿಂ ಅಂದಿಲ್ಲ.
ಆಂಧ್ರ ಪ್ರದೇಶದಲ್ಲಿ ಈ ಬಾರಿಯ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ವಿರೋಧ ಪಕ್ಷಗಳಿಗೆ ದೊರೆತ ತೀವ್ರ ತಪರಾಕಿಯ ಪರಿಣಾಮವಾಗಿ “ಬಿಜೆಪಿಯಿಂದ ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ಗಳ ದುರುಪಯೋಗ ನಡೆದಿದೆ’ ಎಂಬ ರಾಗವನ್ನು ಅವು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಿವೆ. ಈಗಾಗಲೇ ಹಲವು ಬಾರಿ ಬಣ್ಣಿಸಲಾಗಿರುವಂತೆ “ಚುನಾವಣೆಯಲ್ಲಿ ನಿಜಕ್ಕೂ ಗೆದ್ದಿರುವುದು ಮತಯಂತ್ರಗಳೇ’ ಎಂಬುದು ಸುಸ್ಪಷ್ಟ. ಈ ಹೇಳಿಕೆಯನ್ನು ಬಹುಶಃ ಮೊದಲ ಬಾರಿಗೆ ನೀಡಿದವರು 2006ರಿಂದ 2009ರವರೆಗೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎನ್. ಗೋಪಾಲಸ್ವಾಮಿ ಅವರು 2017ರ ಡಿಸೆಂಬರ್‌ನಲ್ಲಿ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಬೆನ್ನಿಗೇ ನೀಡಿದ್ದ ಹೇಳಿಕೆ ಇದು. 2014ರಲ್ಲಿ ಪ್ರಪ್ರಥಮ ಬಾರಿಗೆ ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ರಾಷ್ಟ್ರಾದ್ಯಂತ ಬಳಸಲಾಯಿತಷ್ಟೆ. ಇದಕ್ಕೆ ಕಾರಣರಾದವರು ಆಗಿನ ಮುಖ್ಯ ಚುನಾವಣಾ ಆಯುಕ್ತ ಡಿ.ಎಸ್. ಕೃಷ್ಣಮೂರ್ತಿ. ಅಂದು ಅವರು ನೀಡಿದ್ದ ಹೇಳಿಕೆ “ಯಂತ್ರಗಳು ತಪ್ಪು ಮಾಡಲಾರವು; ತಪ್ಪು ಮಾಡುವವರು ಮನುಷ್ಯರಷ್ಟೇ.’
ಈ ಬಾರಿ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳೆರಡರಲ್ಲೂ ಹೀನಾಯ ಸೋಲು ಕಂಡಿರುವ ಎನ್. ಚಂದ್ರಬಾಬು ನಾಯ್ಡು ಫಲಿತಾಂಶ ಘೋಷಣೆಯ ಬಳಿಕ ಮತಯಂತ್ರಗಳ ದುರುಪಯೋಗ ಕುರಿತಂತೆ ಕಂ-ಕಿಂ ಅಂದಿಲ್ಲ. ಇವಿಎಂ ಬಳಕೆ (ದುರ್ಬಳಕೆ?) ವಿರುದ್ಧ ದೊಡ್ಡ ಗಂಟಲಲ್ಲಿ ವಿರೋಧ ವ್ಯಕ್ತಪಡಿಸಿದವರು ಅವರೇ. ಅಲ್ಲದೆ ಇವಿಎಂ ದುರುಪಯೋಗ ಕುರಿತಂತೆ ದೂರು ಸಲ್ಲಿಸಲೆಂದೇ ಇತರ ಕೆಲ ವಿರೋಧ ಪಕ್ಷಗಳ ನಾಯಕರೊಂದಿಗೆ ದಿಲ್ಲಿಗೆ ದಂಡಯಾತ್ರೆ ನಡೆಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿದ್ದರು. ಏನಿದ್ದರೂ ಅವರೀಗ ತಮ್ಮ ತೆಲುಗುದೇಶಂ ಪಕ್ಷವನ್ನು ಮಣ್ಣು ಮುಕ್ಕಿಸಿರುವ ವೈಎಸ್‌ಆರ್ ಕಾಂಗ್ರೆಸ್‌ನ ಮೇಲೆ ಯಾವ ಆಪಾದನೆಯನ್ನೂ ಹೊರಿಸುವಂತಿಲ್ಲ. ಈ ನಡುವೆ ಬಿಜೆಪಿ ಆಂಧ್ರದಲ್ಲಿ ತನ್ನ ನೆಲೆಯನ್ನು ಪೂರ್ಣವಾಗಿ ಕಳೆದುಕೊಂಡಿದೆ; ಅದು ಬೇರೆ ಮಾತು. ಅಂದ ಹಾಗೆ, ಆಂಧ್ರದ ಅತ್ಯಂತ ಪ್ರಭಾವಿ ನಾಯಕರೆಂದರೆ ಎಂ. ವೆಂಕಯ್ಯನಾಯ್ಡು. ಅವರೀಗ ಇರುವುದು ಉಪರಾಷ್ಟ್ರಪತಿ ಹುದ್ದೆಯಲ್ಲಿ . ಬಿಜೆಪಿಯ ಚುನಾವಣಾ ನಿರ್ವಹಣೆ ಆಂಧ್ರಕ್ಕೆ ಹೋಲಿಸಿದರೆ ತೆಲಂಗಾಣದಲ್ಲಿ ಉತ್ತಮವಾಗಿದೆ; ಅಲ್ಲಿ ಕಮಲ ಪಕ್ಷಕ್ಕೆ ನಾಲ್ಕು ಲೋಕಸಭಾ ಸ್ಥಾನಗಳು ದಕ್ಕಿವೆ.
ಇವಿಎಂ ಕುರಿತ ಅನುಮಾನ-ಆರೋಪಗಳ ನಿವಾರಣೆಗಾಗಿಯೇ ಚುನಾವಣಾ ಆಯೋಗ ವಿವಿಪ್ಯಾಟ್ ವ್ಯವಸ್ಥೆಯನ್ನು ಬಳಕೆಗೆ ತಂದಿತು.
ಮತದಾನವಾಗಿದೆಯೇ ಇಲ್ಲವೇ ಎಂಬುದನ್ನು ಸಾಬೀತುಪಡಿಸುವ ಈ ತಾಳೆ ಯಂತ್ರದ ಪರೀಕ್ಷಣ ಕಾರ್ಯಕ್ರಮವನ್ನು ದೇಶಾದ್ಯಂತ ನಡೆಸಲಾಯಿತು. ಆದರೆ ಎಲ್ಲೇ ಆಗಲಿ, ಒಂದೇ ಒಂದು ಪ್ರಮಾದದ ಪ್ರಕರಣವೂ ಕಂಡು ಬರಲಿಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಚುನಾವಣಾ ಆಯೋಗ ಈ ಮತದಾನ ಪರೀಕ್ಷಣ ಕಾರ್ಯಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಐದೈದು ಮತಯಂತ್ರಗಳನ್ನು ಆಯ್ದುಕೊಂಡಿತ್ತು.
ಮತದಾನ ವಂಚನೆ, ಮತ ಎಣಿಕೆ ಮೋಸದಾಟಕ್ಕೆ ತಡೆ: ಮತಪತ್ರಗಳ ಬಳಕೆಯ ಬದಲಿಗೆ ಮತಯಂತ್ರಗಳ ಬಳಕೆಯನ್ನು ಜಾರಿಗೆ ತಂದುದರಿಂದ ಮತ ಎಣಿಕೆಯಲ್ಲಿ ನಡೆಯುತ್ತಿದ್ದ ಮೋಸದಾಟಕ್ಕೆ ತಡೆಬಿದ್ದಂತಾಗಿದೆ. ಚುನಾವಣಾ ಆಯೋಗ, ಅದರಲ್ಲೂ ಮುಖ್ಯವಾಗಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಜಾರಿಗೊಳಿಸಿದ ಕೆಲ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಮತದಾನದಲ್ಲಿ ಆಗುತ್ತಿದ್ದ ವಂಚನೆ ಪ್ರಕರಣಗಳು ಹಾಗೂ ಮತಗಟ್ಟೆ ವಶೀಕರಣದಂಥ ಅನಪೇಕ್ಷಿತ ಪ್ರಕರಣಗಳನ್ನು ಸಮರ್ಥವಾಗಿ ಹತ್ತಿಕ್ಕುವುದು ಸಾಧ್ಯವಾಗಿದೆ. ಬಿಹಾರ, ಉತ್ತರ ಪ್ರದೇಶಗಳಂಥ ರಾಜ್ಯಗಳದು ಈ ಮೋಸದಾಟದಲ್ಲಿ ಎತ್ತಿದ ಕೈ. ನಮ್ಮ ದೇಶದಲ್ಲಿ ಮತದಾನದಲ್ಲಿನ ಮೋಸದಾಟದ ಪರಂಪರೆ ಋಗ್ವೇದದಷ್ಟೇ ಹಳೆಯದೆಂದು ಟಿ.ಎನ್.ಶೇಷನ್ ಹಿಂದೊಮ್ಮೆ ಅರ್ಥಗರ್ಭಿತವಾಗಿ ಹೇಳಿದ್ದರು. ಮತಪತ್ರಗಳ ಹಾಗೂ ಅವುಗಳ ಎಣಿಕೆ ನಡೆಯುತ್ತಿದ್ದ ದಿನಗಳಲ್ಲಿ ಚುನಾವಣಾ ಕರ್ತವ್ಯನಿರತ ಅಧಿಕಾರಿಗಳ ಪೈಕಿ ಕೆಲವರು, ಕೆಲ ನಿರ್ದಿಷ್ಟ ಅಭ್ಯರ್ಥಿಗಳು ಗಳಿಸಿದ್ದ ಮತಗಳ ಸಂಖ್ಯೆಯನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಕೆಲಸದಲ್ಲಿ ನಿಷ್ಣಾತರಾಗಿದ್ದರು. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗಳಲ್ಲಿ ಸಲ್ಲಿಸಲ್ಪಡುತ್ತಿದ್ದ ದೂರುಗಳ ಪೈಕಿ ಬಹುತೇಕ ಅರ್ಜಿಗಳ ಹೂರಣ ಇದೇ ಆಗಿರುತ್ತಿತ್ತು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೂಡ ಮತ ಎಣಿಕೆ ಸಂದರ್ಭದ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಬಂದಿದೆ.
ಈಚಿನ ವರ್ಷಗಳಲ್ಲಿ ನಡೆದಿರುವ ಚುನಾವಣೆಗಳಲ್ಲಿ ಇವಿಎಂ ಬಳಕೆ ಕುರಿತಂತೆ ಸಂದೇಹದ ಅಪಸ್ವರವೆತ್ತಿ ಮತಯಂತ್ರಗಳ ಬದಲಿಗೆ ಹಿಂದಿನ ಮತಪತ್ರಗಳ ವ್ಯವಸ್ಥೆಯನ್ನೆ ಜಾರಿಗೊಳಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದು ಮುಖ್ಯವಾಗಿ ಕಾಂಗ್ರೆಸ್ ಪಕ್ಷವೇ. 2014ರ ಲೋಕಸಭಾ ಚುನಾವಣೆಯಲ್ಲೂ ಮತಯಂತ್ರಗಳ ಬಳಕೆಯಿತ್ತು; ಚುನಾವಣೆಯಲ್ಲಿ ಕೆಲವೆಡೆ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಹಾಗಿದ್ದರೂ ಮತಪತ್ರಗಳ ಬಳಕೆಯೇ ಬೇಕೆಂದು ಪಕ್ಷ ಆಯೋಗವನ್ನು ಆಗ್ರಹಿಸಿತ್ತು.
ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿಯ ಮತ ಸಂಪಾದನೆಯ ಶೇಕಡಾವಾರು ಪ್ರಮಾಣ ಶೇ. 50ರಷ್ಟು ಏರಿಕೆಯಾಗಿದ್ದರೂ ಇದುವರೆಗೂ ಯಾವುದೇ ವಿರೋಧ ಪಕ್ಷವೂ ಈ ವಿದ್ಯಮಾನದ ಬಗ್ಗೆ ಅಪಸ್ವರವೆತ್ತಿಲ್ಲ. ಆದರೇನು, ಕಾಲಕ್ರಮೇಣ ವಿರೋಧಪಕ್ಷಗಳು ಈ ವಿಷಯವನ್ನೆತ್ತಿ ವಿವಾದ ಸೃಷ್ಟಿಸುವ ಸಾಧ್ಯತೆಯಿದೆ; ಮತ್ತೆ ಮತಪತ್ರಗಳ ಯುಗಕ್ಕೆ ಮರಳ್ಳೋಣವೆಂಬ ರಾಗವನ್ನು ಮೊಳಗಿಸುವ ಸಾಧ್ಯತೆಯೂ ಇದೆ.
ಹಾಗೆ ನೋಡಿದರೆ ಬಿಜೆಪಿ ಕೂಡ ಈ ಹಿಂದೆ ಇವಿಎಂಗಳ ದುರುಪಯೋಗ ಸಾಧ್ಯತೆ ಕುರಿತ ಅನುಮಾನವನ್ನು ವ್ಯಕ್ತಪಡಿಸಿದ್ದಿದೆ. ಬಿಜೆಪಿಯ ಡಾ| ಸುಬ್ರಹ್ಮಣ್ಯಸ್ವಾಮಿ ಸಲ್ಲಿಸಿದ್ದ ದೂರೊಂದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ, ಇವಿಎಂ ಜೊತೆಗೆ ವಿವಿಪ್ಯಾಟ್ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು. “ಇವಿಎಂಗಳ ದುರುಪಯೋಗ’ದ ಕುರಿತಾಗಿಯೇ ಒಂದು ವಿಚಾರ ಸಂಕಿರಣವನ್ನೂ ಡಾ| ಸ್ವಾಮಿ ಹೊಸದಿಲ್ಲಿಯಲ್ಲಿ ಏರ್ಪಡಿಸಿದ್ದರು. ಸ್ವಾಮಿ ಅವರು ಈಗಲೂ ಮತಯಂತ್ರ ಕುರಿತ ತಮ್ಮ ಹಿಂದಿನ ನಿಲುವಿಗೇ ಅಂಟಿಕೊಂಡಿದ್ದಿರಬಹುದು.
ಆದರೆ ಹೇಳಲೇಬೇಕಾದ ಮಾತೆಂದರೆ ನಮ್ಮ ಚುನಾವಣೆಗಳನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿಸುವ ನಿಟ್ಟಿನಲ್ಲಿ ಆಯೋಗದ ವತಿಯಿಂದ ಕೈಗೊಳ್ಳಲಾಗಿರುವ ಹಲವಾರು ಕ್ರಮಗಳಲ್ಲಿ ಇವಿಎಂ ಬಳಕೆಯೂ ಒಂದು ಎನ್ನುವುದು ಗಮನಾರ್ಹ.
ಇನ್ನು ಚುನಾವಣಾ ಫಲಿತಾಂಶ ಕುರಿತಂತೆ ಪಶ್ಚಿಮಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿರುವ ಪ್ರತಿಕ್ರಿಯೆ ತೀರಾ ಹಾಸ್ಯಾಸ್ಪದ. ರಾಜ್ಯದಲ್ಲಿ ಬಿಜೆಪಿ ತಲೆಯೆತ್ತುತ್ತಿರುವುದನ್ನು ಅರಗಿಸಿಕೊಳ್ಳಲಾಗದ ಆಕೆ, ಚುನಾವಣೆ ನಡೆದ ರೀತಿಯ ಬಗ್ಗೆ ಅಪಸ್ವರವೆತ್ತಿದ್ದಾರೆ; ವಿದೇಶಿ ಶಕ್ತಿಗಳ ಕೈವಾಡದಿಂದಾಗಿ ಚುನಾವಣೆ ಈ ರೀತಿ ನಡೆಯುವಂತಾಯಿತು ಎಂದು ದೂರಿದ್ದಾರೆ. ಆಕೆ ಯಾವ ತೆರನ ವಿದೇಶಿ ಶಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಹೇಳಿಕೆ ನೀಡಿದ್ದಾರೆನ್ನುವುದು ತಿಳಿಯದು. ಆಕೆಯ ದುಗುಡವನ್ನು ಸಮರ್ಥಿಸಬಹುದಾದಂಥ ಹೇಳಿಕೆಯನ್ನು ಈ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದುಂಟು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯನರು ಮಧ್ಯಪ್ರವೇಶಿಸುತ್ತಿರುವುದಾಗಿ ಟ್ರಂಪ್ ಹೇಳಿದ್ದರು. ನಮ್ಮಲ್ಲಿನ ಚುನಾವಣೆಯ ಮೇಲೆ ಚೀನೀಯರ ಪ್ರಭಾವವಿದೆಯೆನ್ನಲಾಗದಿದ್ದರೂ ಅಮೆರಿಕದ ಪ್ರಭಾವವಿದ್ದೀತು ಎನ್ನುವುದು ಮಮತಾ ಅವರ ಗುಮಾನಿಯಾಗಿರಬಹುದೇನೋ. ಇನ್ನು ನೆರೆಯ ಬಾಂಗ್ಲಾದೇಶವನ್ನಾಕೆ ಖಂಡಿತವಾಗಿಯೂ ದೂರಲಾರರು. ಕಾರಣ ಅಕ್ರಮ ವಲಸೆಯ ಮೂಲಕ ಅಲ್ಲಿಂದ ಆಕೆಗಾಗಿ ಮತದಾರರ ಪೂರೈಕೆಯಾಗುತ್ತಿದೆ.
ಬಂಗಾಲದಲ್ಲಿ ಪ್ರಕಟವಾಗಿರುವ ಜನತೆಯ ತೀರ್ಪು, ಅಕ್ರಮ ಒಳ ವಲಸಿಗರ, ವಿಶೇಷವಾಗಿ ಮುಸ್ಲಿಮರ ವಿರುದ್ಧ ವ್ಯಕ್ತವಾಗಿರುವ ಜನಾಭಿಪ್ರಾಯವಾಗಿದೆ. ಬಾಂಗ್ಲಾ ದೇಶದಿಂದ ಹಿಂದುಗಳು ಕಾಲೆ¤ಗೆಯುತ್ತಿದ್ದರೆ, ಇದಕ್ಕೆ ಕಾರಣ ಅಲ್ಲಿ ಅವರ ಮೇಲೆ ನಡೆಯುತ್ತಿರುವ ದಬ್ಟಾಳಿಕೆ. ರಾಷ್ಟ್ರ ವಿಭಜನೆಯ ಕಾಲದಲ್ಲಿ ಬಾಂಗ್ಲಾದಲ್ಲಿದ್ದ ಹಿಂದೂಗಳ ಸಂಖ್ಯೆ ಅಲ್ಲಿನ ಜನಸಂಖ್ಯೆಯ ಶೇ. 35ರಷ್ಟಿತ್ತು; ಇದು ಈ ಪ್ರಮಾಣ ಶೇ. 10ಕ್ಕೆ ಇಳಿದಿದೆ.
ಸ್ವಾತಂತ್ರ್ಯ ಪೂರ್ವದಲ್ಲಿದ್ದ ಅವಿಭಜಿತ ಬಂಗಾಲದ ರಾಜಕೀಯ ವಿದ್ಯಮಾನಗಳನ್ನು ಹಾಗೂ ಸ್ವಾತಂತ್ರೊéàತ್ತರ ದಿನಗಳ ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸಿ ನೋಡಿದರೆ, ಈ ಬಾರಿ ಬಿಜೆಪಿ ಉತ್ತಮ ನಿರ್ವಹಣೆ ತೋರಿರುವುದರ ಬಗ್ಗೆ ಅಚ್ಚರಿಯೇನೂ ಆಗಲಾರದು. ಬಂಗಾಲ, ಜನಸಂಘ ಸ್ಥಾಪಕ, ಹಿಂದೂ ಮಹಾಸಭಾದ ನೇತಾರ ಡಾ| ಶ್ಯಾಮಾಪ್ರಸಾದ್ ಮುಖರ್ಜಿಯವರ ತವರು ರಾಜ್ಯ. ಅಂದಿನ ಜನಸಂಘವೇ ಇಂದಿನ ಬಿಜೆಪಿ. ಮುಸ್ಲಿಂ ಲೀಗಿನಿಂದ ಹೊರಬಿದ್ದು ಕೃಷಿಕ್ ಪ್ರಜಾ ಪಾರ್ಟಿ ಎಂಬ ಪ್ರತ್ಯೇಕ ರಾಜಕೀಯ ಪಕ್ಷವಾಗಿ ಮಾರ್ಪಟ್ಟ ಪಕ್ಷದೊಂದಿಗೆ ಮೈತ್ರಿ ಏರ್ಪಡಿಸಿಕೊಂಡು ಸಮ್ಮಿಶ್ರ ಸರಕಾರದಲ್ಲಿ ಭಾಗಿಯಾಗುವಷ್ಟು ಧೈರ್ಯ ಡಾ| ಮುಖರ್ಜಿಯವರಲ್ಲಿತ್ತು. ಈ ವಿದ್ಯಮಾನ ಸಂಭವಿಸಿದ್ದು 1941ರಲ್ಲಿ. ಈ ಸಮ್ಮಿಶ್ರ ಸರಕಾರದ ನೇತೃತ್ವ, ಮುಸ್ಲಿಂಲೀಗ್‌ನ ಧೀಮಂತ ನಾಯಕ ಎ.ಕೆ. ಫಜುÉಲ್ ಹಖ್ ಅವರದಾಗಿತ್ತು. ಮುಖರ್ಜಿಯವರು ಈ ಮೈತ್ರಿಯನ್ನು ಏರ್ಪಡಿಸಿಕೊಂಡದ್ದು ಬಂಗಾಲದ ಹಿಂದೂಗಳನ್ನು ರಕ್ಷಿಸುವ ಸಲುವಾಗಿ. ಇದೇ ತೆರನ ಅಚ್ಚರಿ ಮೂಡಿಸುವ ಮೈತ್ರಿ ವ್ಯವಸ್ಥೆಗಳನ್ನು ಅಂದಿನ ವಾಯುವ್ಯ ಗಡಿ ಪ್ರಾಂತ್ಯ (ನಾರ್ತ್‌ವೆಸ್ಟ್) ಫ್ರಾಂಟಿಯರ್ ಪ್ರಾವಿನ್ಸ್)ದಲ್ಲಿನ ಹಿಂದೂ ರಾಜಕೀಯ ಪಕ್ಷಗಳು ರೂಪಿಸಿಕೊಂಡಿದ್ದುದು ಈಗ ಇತಿಹಾಸ. (ಆಂದಿನ ವಾಯುವ್ಯ ಗಡಿ ಪ್ರಾಂತ್ಯದ ಒಂದು ಭಾಗ ಇಂದು ಪಾಕಿಸ್ಥಾನಕ್ಕೆ ಸೇರಿ ಹೋಗಿದೆ).
ಕಾಂಗ್ರೆಸ್ ಪಕ್ಷದಲ್ಲಿ ಅಂದು ಡಾ| ಬಿ.ಸಿ. ರಾಯ್ ಅವರಂಥ ಮೇರು ವ್ಯಕ್ತಿತ್ವದ ನಾಯಕರಿದ್ದುದರಿಂದ ಪಶ್ಚಿಮ ಬಂಗಾಲದ ರಾಜಕೀಯದಲ್ಲಿ ತಲೆಯೆತ್ತುವ ಅವಕಾಶ ಕಮ್ಯುನಿಸ್ಟರಿಗೆ ಲಭಿಸಲಿಲ್ಲ. 1953ರಲ್ಲಿ ಮುಖರ್ಜಿಯವರ ಅಕಾಲಿಕ ಮರಣ ಕಂಡರು; ಇದರಿಂದ ಕಾಂಗ್ರೆಸ್‌ಗೆ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಯಿತು. ಈಚಿನ ವರ್ಷಗಳಲ್ಲಿನ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಲದಲ್ಲಿನ ವಾಮಪಕ್ಷಗಳ ನಿರ್ವಹಣೆ ತೀರಾ ಕಳಪೆ ಹಾಗೂ ದಯನೀಯವಾಗಿದೆ; ಆ ಪಕ್ಷದ ಅಭ್ಯರ್ಥಿಗಳು ಠೇವಣಿಯನ್ನು ಕಳೆದುಕೊಂಡಿದ್ದಾರೆ. 1996ರಲ್ಲಿ ಕೇಂದ್ರ ಸರಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಸಿಪಿಐ-ಎಂನ ಕಾಲಬಳಿ ಬಂದು ಬಿದ್ದಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರನ್ನು ಪ್ರಧಾನಿಯಾಗದಂತೆ ಪಕ್ಷ ತಡೆಯಿತು; ಇದು ಆ ಪಕ್ಷದ ಐತಿಹಾಸಿಕ ಪ್ರಮಾದ.
ಚಂದ್ರಬಾಬು ನಾಯ್ಡು ಹಾಗೂ ಮಮತಾ ಬ್ಯಾನರ್ಜಿಯವರಂಥ ರಾಜಕಾರಣಿಗಳು ತಮ್ಮ ಸೋಲಿಗೆ ಮತಯಂತ್ರಗಳನ್ನು ಕಾರಣ ಎಂದು ದೂರುತ್ತ ಕೂರದೆ ತಮ್ಮ ಪರಾಭವವನ್ನು ಘನಸ್ಥಿಕೆಯಿಂದ ಸ್ವೀಕರಿಸಬೇಕಿದೆ. ತಾವೀಗ ಜನಪ್ರಿಯರಾಗಿ ಉಳಿದಿಲ್ಲ ಎಂಬ ಸತ್ಯವನ್ನು ಅವರು ಒಪ್ಪಿಕೊಳ್ಳಬೇಕಿದೆ. ಅವರು ಸದಾ ಕಾಲಕ್ಕೂ ತಾರೆಯರಾಗಿಯೇ ಉಳಿಯುವುದು ಸಾಧ್ಯವಿಲ್ಲ. ಅದೃಷ್ಟವಶಾತ್ ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ ಅಥವಾ ಕುಮಾರಸ್ವಾಮಿಯವರಂಥ ಕರ್ನಾಟಕದ ನಾಯಕರು ತಮ್ಮ ಪರಾಭವಕ್ಕೆ ಇನ್ನೂ ಬಾಹ್ಯ ಶಕ್ತಿಗಳನ್ನು ದೂಷಿಸಿಲ್ಲ. ದೇವೇಗೌಡ, ಮಮತಾ ಬ್ಯಾನರ್ಜಿ, ಮಾಯಾವತಿ ಮತ್ತು ಚಂದ್ರಬಾಬು ನಾಯ್ಡು ಅವರುಗಳ ಪ್ರಧಾನಿಯಾಗುವ ಆಸೆಗೆ ದೇಶದ ಜನರೇ ಎಳ್ಳುನೀರುಬಿಟ್ಟಿದ್ದಾರೆ.
– ಅರಕೆರೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.