ಸ್ವಾವಲಂಬನೆಯ ಸಾಧ್ಯತೆಗಳನ್ನು ಹೆಚ್ಚಿಸಲಿ
Team Udayavani, May 30, 2019, 6:05 AM IST
ಈ ಬಾರಿಯ ಚುನಾವಣೆ ಪ್ರಚಾರ ಸಂದರ್ಭದಲ್ಲಿ ವಿಪಕ್ಷಗಳು ಬಿಜೆಪಿಯ ನರೇಂದ್ರ ಮೋದಿ ವಿರುದ್ಧ ಬಳಸಿದ ಮತ್ತೂಂದು ಅಸ್ತ್ರವೆಂದರೆ ಉದ್ಯೋಗ ಕೊರತೆ. ಕೌಶಲ ಅಭಿವೃದ್ಧಿ ಸಹಿತ ಕೆಲವು ನಿರ್ದಿಷ್ಟ ಕ್ರಮಗಳನ್ನು ಪ್ರಥಮ ಅವಧಿಯಲ್ಲಿ ಕೈಗೊಂಡಿದ್ದರೂ ಸಾಗಬೇಕಾದ ದಾರಿ ಇನ್ನೂ ಬಹಳಷ್ಟಿದೆ. ಈ ಹಿನ್ನೆಲೆಯಲ್ಲಿ ಎರಡನೇ ಅವಧಿಯಲ್ಲಿ ಪ್ರಧಾನಿಯವರು ಗಮನಹರಿಸಬೇಕಾದ ಸಂಗತಿ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು.
ದೇಶದಲ್ಲಿ ಜನಸಂಖ್ಯೆ ಬಾಹುಳ್ಯದಿಂದ ನಿರುದ್ಯೋಗ ಬಹು ಚರ್ಚಿತ ವಿಷಯವಾಗಿದೆ. ಕಳೆದ 30 ವರ್ಷಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಜರುಗಿಸಲಾಗಿದೆ. ಆದರೂ ಜನಸಂಖ್ಯೆ ಏರುಗತಿಯಲ್ಲೇ ಇದೆ. ಇದರಿಂದ ಉದ್ಯೋಗಾಸಕ್ತರ ಸಂಖ್ಯೆಯೂ ಹೆಚ್ಚುತ್ತಿರುವುದು ಸ್ಪಷ್ಟ. ಹಾಗಾಗಿಯೇ ಆಸಕ್ತರ ಸಂಖ್ಯೆಗೆ ಪೂರಕವಾದ ಸಂಖ್ಯೆಯಷ್ಟು ಉದ್ಯೋಗ ಸೃಜನೆ ಹಾಗೂ ಕಲ್ಪಿಸುವ ಹೊಣೆಗಾರಿಕೆ ಸರಕಾರದ ಮೇಲಿದೆ. ಯಾರು ನಿರುದ್ಯೋಗಿಗಳು ಎಂಬುದು ಬಹು ಚರ್ಚಿತ ಸಂಗತಿ. ಕನಿಷ್ಠ ಎಸೆಸೆಲ್ಸಿಯಿಂದ ಮೇಲ್ಪಟ್ಟು ಶಿಕ್ಷಣ ಪಡೆದ ಎಲ್ಲರಿಗೂ ಸೂಕ್ತ ಉದ್ಯೋಗ ದೊರಕಿಸುವುದು ನಿಜಕ್ಕೂ ಸವಾಲು. ಹೆಚ್ಚು ಹೆಚ್ಚು ಯುವಜನರು ಶಿಕ್ಷಿತರಾಗುವ ಕಾರಣ ನಮ್ಮ ಬಹುಪಾಲು ಯುವಜನರಿಗೆ ಉದ್ಯೋಗ ಕಲ್ಪಿಸಬೇಕಾದದ್ದು ಸರಕಾರದ ಮುಂದಿರುವ ಸವಾಲು.
ಇಷ್ಟಕ್ಕೇ ಹೊಣೆಗಾರಿಕೆ ಮುಗಿಯುವುದಿಲ್ಲ. ನಗರಕ್ಕೆ ವಲಸೆ ಹೋಗುವ ಶಿಕ್ಷಿತರನ್ನು ಹಳ್ಳಿಗಳಲ್ಲೇ, ಗ್ರಾಮೀಣ ಪ್ರದೇಶದಲ್ಲಿ ಉಳಿಸುವ ಸವಾಲು ಸಹ ಇದೆ. ಗ್ರಾಮೀಣರು ತಾವು ಗಳಿಸಿದ ಶಿಕ್ಷಣಕ್ಕೆ ತಕ್ಕ ಅವಕಾಶ ಮತ್ತು ಆದಾಯ ಗಳಿಸಲು ಉತ್ತಮ ಜೀವನ ಬಯಸಿ ನಗರಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಗ್ರಾಮೀಣ ಪ್ರದೇಶದಲ್ಲೇ ಉದ್ಯೋಗಾವಕಾಶ ಕಲ್ಪಿಸುವ ವ್ಯವಸ್ಥೆ ಮುನ್ನಲೆಗೆ ಬರಬೇಕಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ಖಾಸಗಿ ಬ್ಯಾಂಕ್ ಜತೆಗೂಡಿ 35 ವರ್ಷಗಳಿಂದ ಸ್ವ ಉದ್ಯೋಗ ತರಬೇತಿ ಕೇಂದ್ರ ಆರಂಭಿಸಿದ್ದೆವು. ಇದರ ಉದ್ದೇಶ ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಸಂಬಳದ ಉದ್ಯೋಗವನ್ನಷ್ಟೇ ಅವಲಂಬಿಸದೆ, ಪಾರಂಪರಿಕ ಉದ್ಯೋಗ ಮತ್ತು ಸ್ವ ಉದ್ಯೋಗ ನೆಚ್ಚಿಕೊಳ್ಳುವಂಥ ಸ್ವಾವಲಂಬನೆಯ ಕನಸು ಯುವಜನರಲ್ಲಿ ಬಿತ್ತುವುದು ಇದರ ಹಿಂದಿನ ಪರಿಕಲ್ಪನೆಯಾಗಿತ್ತು.
ಉದ್ಯೋಗ ಸೃಷ್ಟಿ ಎಂದರೆ ಅವಕಾಶಗಳ ನಿರ್ಮಾಣ, Employment is nothing but creating opportunity (ಅವಕಾಶಗಳನ್ನು ನಿರ್ಮಾಣ ಮಾಡುವುದೇ ಉದ್ಯೋಗ ಸೃಷ್ಟಿ). ನೀವು ಅವಕಾಶ ಮಾಡಿಕೊಡಿ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. Skill Up gradation ಹಂತ ಹಂತದ ಬೆಳವಣಿಗೆೆ ಮುಖೇನ ಅವಕಾಶ ಸೃಷ್ಟಿಸುವುದು ಕೇಂದ್ರ ಸರಕಾರದ ಮೊದಲ ಆದ್ಯತೆಯಾಗಬೇಕು.
ಗ್ರಾಮೀಣ ಉದ್ಯಮ/ಗುಡಿ ಕೈಗಾರಿಕೆ
ಮಹಾತ್ಮಾ ಗಾಂಧೀಜಿ ಸ್ವರಾಜ್ಯ ಕಲ್ಪನೆ ಮೂಲಕ ಸ್ವ ಉದ್ಯೋಗದ, ಸ್ವಾವಲಂಬನೆಯ ಕನಸು ಕಂಡಿದ್ದರು. ಗ್ರಾಮೀಣ ಪ್ರದೇಶದ ವ್ಯವಸ್ಥೆಯಲ್ಲಿ ಗೃಹದ ಅಗತ್ಯವನ್ನು ಆ ಗ್ರಾಮದಲ್ಲೇ ಪೂರೈಸಬೇಕು. ಅಲ್ಪಾವಧಿ ದಿನಬಳಕೆಯ ವಸ್ತುಗಳ ತಯಾರಿ ಗ್ರಾಮದಲ್ಲೇ ಸಿದ್ಧಗೊಂಡಲ್ಲಿ ಉದ್ಯೋಗ ಅವಕಾಶ ಹೆಚ್ಚುತ್ತದೆ. ನಗರ ಪ್ರದೇಶ ಬೆಳೆದಂತೆ ಮಾರುಕಟ್ಟೆ ವ್ಯಾಪ್ತಿ, ಬೆಲೆ ಸ್ಪರ್ಧಾತ್ಮಕವಾಗಿ ಗುಡಿ ಕೈಗಾರಿಕೆಗಳು/ ಗೃಹೋದ್ಯಮಗಳು ನಶಿಸುತ್ತಿವೆ. ಈ ನಿಟ್ಟಿನಲ್ಲಿ ಗುಡಿ ಕೈಗಾರಿಕೆಗೆ ಮತ್ತೆ ಪ್ರಾಶಸ್ತ್ಯ ಕೊಡಬೇಕು. ಇದು ನಗರದತ್ತ ವಲಸೆ ಹೊರಡುವ ಶಿಕ್ಷಿತ ಯುವಜನರನ್ನು ಹಳ್ಳಿಗಳಲ್ಲೇ ಉಳಿಸಬಹುದು.
ಕಾಟೇಜ್ ಇಂಡಸ್ಟ್ರಿ
ಧರ್ಮಸ್ಥಳದಲ್ಲಿ ಸಿರಿ ಮಹಿಳಾ ಉದ್ಯೋಗ ಸಂಸ್ಥೆಯ ಪ್ರಯೋಗ ಸಾಕಾರವಾಗಿದೆ. 3 ಸಾವಿರ ಮಂದಿ ಸಂಸ್ಥೆಯ ಸೇವೆಯಲ್ಲಿ ತೊಡಗಿದ್ದಾರೆ. ಗಾರ್ಮೆಂಟ್ಸ್, ಸಿಹಿ-ತಿಂಡಿ, ಕುರುಕಲು ತಿಂಡಿ, ಜ್ಯೂಸ್, ಗೃಹಬಳಕೆ ವಸ್ತು ತಯಾರಿಯಲ್ಲಿ ತಮ್ಮ ಕಾರ್ಯಚಟುವಟಿಕೆ ವಿಸ್ತರಿಸಿದ್ದಾರೆ. ಈ ಮೂಲಕ ಸ್ವಾವಲಂಬಿಯಾಗಲು ಪ್ರಯತ್ನಿಸುತ್ತಿದ್ದಾರೆ. ಗ್ರಾಮೀಣ ಭಾಗದ ವಲಸೆಗೂ ಇದು ಪರಿಹಾರ. ಆದಾಯ ಮೂಲಗಳ ಸೃಷ್ಟಿಯ ಪ್ರಯತ್ನವೂ ಹೌದು. ಮಾನ್ಯ ಪ್ರಧಾನ ಮಂತ್ರಿಗಳು ಮುಂದಿನ ಅವಧಿಯಲ್ಲಿ ಇಂಥ ಹಲವು ಕಾರ್ಯಕ್ರಮ ರೂಪಿಸಿದರೆ ಸ್ವ ಉದ್ಯೋಗದ ಹಂಬಲವನ್ನು ಯುವಜನರಲ್ಲಿ ಬೆಳೆಸಿದಂತಾಗುತ್ತದೆ. ಇದರತ್ತ ಕಾರ್ಯೋನ್ಮುಖರಾಗುವವರೆಂಬ ನಂಬಿಕೆಯಿದೆ.
ಹಳ್ಳಿಗಳಲ್ಲಿ ಯಂತ್ರೋಪಕರಣ ಬಳಕೆಗೆ ಆದ್ಯತೆ ಹೆಚ್ಚಿಸಬೇಕು. ಹಾಗಾದಲ್ಲಿ ಯಂತ್ರೋಪಕರಣ ಬಿಡಿ ಭಾಗ ತಯಾರಿಸುವಂಥ ಉದ್ಯೋಗ ಸೃಷ್ಟಿಯಾಗಲಿದೆ. ಉದಾಹರಣೆ ಕಸಪೊರಕೆಗಳು ಗುಜರಾತ್ ಮತ್ತು ಕೋಲ್ಕತ್ತಾದಿಂದ ಪೂರೈಕೆಯಾಗುತ್ತಿವೆ. ಇಂಥ ದಿನಬಳಕೆ ವಸ್ತುಗಳು ಪ್ರತಿ ಮನೆಗಳ ಅಗತ್ಯಗಳಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲೇ ತಯಾರಿಸಿ ಹೆಚ್ಚಿನ ಲಾಭ ಗಳಿಸಬಹುದು. ಇಂತಹಾ ಹತ್ತಾರು ಅವಕಾಶಗಳಿವೆ. ಇದಕ್ಕೆ ಪ್ರೋತ್ಸಾಹ ಅವಶ್ಯ.
ಮಹಿಳಾ ಸಬಲೀಕರಣಕ್ಕೆ ಸಿಗಲಿ ಆದ್ಯತೆ
ನನ್ನ ಮನಸ್ಸಿನಲ್ಲಿ ಬಹಳಷ್ಟು ದಿನಗಳಿಂದ ಕಾಡುತ್ತಿರುವ ಪ್ರಶ್ನೆ ಎಂದರೆ ಮಹಿಳೆಯರೆಲ್ಲರೂ ಉದ್ಯೋಗಸ್ಥರೇ ಅಥವಾ ನಿರುದ್ಯೋಗಿಗಳೇ ಎಂಬುದು. ಈಗ ಮದುವೆಗೆ ಎರಡನೇ ಪ್ರಾಶಸ್ತ್ಯ ನೀಡುತ್ತಿದ್ದು, ದೃಢವಾದ ಸಂಪಾದನೆ, ಭವಿಷ್ಯದಲ್ಲಿ ನಿಶ್ಚಿಂತೆಯಾಗಿರಬೇಕೆಂಬ ಆಲೋಚನೆ ಹೆಚ್ಚುತ್ತಿದೆ. ಹಾಗಾಗಿ ಮಹಿಳೆಯರಿಗೂ ಉದ್ಯೋಗ ಕಲ್ಪಿಸಬೇಕು. ಗೃಹಿಣಿಯರು ಮನೆ, ಮಕ್ಕಳು, ಪರಿವಾರದ ಅಗತ್ಯಗಳನ್ನು ಪೂರೈಸುವ ಕಾರಣ ಅವರೂ ಉದ್ಯೋಗಾಸಕ್ತರೇ. ಈ ದೃಷ್ಟಿಯಿಂದ ಕಳೆದ 5 ವರ್ಷದಲ್ಲಿ ನಿರುದ್ಯೋಗದ ನಿವಾರಣೆಗೆ ಸಾಕಷ್ಟು ಕ್ರಮ ಕೈಗೊಂಡಿರುವ ಮೋದಿ ಸರಕಾರ ಅಭಿನಂದನೀಯ.
ಕೇಂದ್ರ ಸರಕಾರದಿಂದ 586 ಕೇಂದ್ರ
ಸ್ವ ಉದ್ಯೋಗ, ಗ್ರಾಮೀಣ ಅಭಿವೃದ್ಧಿ ಕೇಂದ್ರದ ಮಾದರಿಯಲ್ಲಿ ಭಾರತ ಸರಕಾರ ಕಳೆದ 10 ವರ್ಷಗಳಿಂದ ದೇಶದಲ್ಲಿ 586 ಕೇಂದ್ರ ನಿರ್ಮಿಸಿ ಲಿಡ್ ಬ್ಯಾಂಕ್ ಪ್ರಾಯೋಜಿತ ಸರಕಾರ (ಮಿನಿಸ್ಟಿ ಆಫ್ ರೂರಲ್ ಡೆವಲಪ್ ಮೆಂಟ್ನಿಂದ) ವೆಚ್ಚ ಭರಿಸಲಾಗುತ್ತಿದೆ. ನನ್ನನ್ನು ಗೌರವಾಧ್ಯಕ್ಷನಾಗಿ ಮಾಡಿದೆ. ದೇಶದಲ್ಲಿ ಮೋದಿಯವರ ಕಲ್ಪನೆಯಂತೆ ಉದ್ಯೋಗ ಸೃಷ್ಟಿಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಒಂದು ಕೇಂದ್ರಕ್ಕೆ ಒಂದು ಕೋಟಿಯಂತೆ ನೀಡುತ್ತಿದ್ದು, ಈ ವರೆಗೆ 30.87 ಲಕ್ಷ ಮಂದಿಗೆ ತರಬೇತಿ ನೀಡಿದ್ದು, 24 ಲಕ್ಷ ಮಂದಿ ಸ್ವ ಉದ್ಯೋಗದಲ್ಲಿ ತೊಡಗಿದ್ದಾರೆ. ಇಂಥ ಪ್ರಯತ್ನಗಳು ಇನ್ನಷ್ಟು ಹೆಚ್ಚಾಗಲಿ.
ಕೃಷಿ ಉಪಕರಣ ಬಳಕೆ ಆದ್ಯತೆ
ಕೃಷಿ ಉಪಕರಣ ಹಿಂದೆ ನಗರದಿಂದಲೇ ಬರುತ್ತಿತ್ತು, ಆದರೆ ಇಂದು ಬದಲಾಗುತ್ತಿದೆ. ಆದರೆ ಇನ್ನಷ್ಟು ಅಗ್ಗದಲ್ಲಿ ಸಿಗುವಂತಾಗಬೇಕು. ಕೃಷಿಗೆ ಬೇಕಾಗುವ ಉಪಕರಣ, ಸಾವಯವ ಗೊಬ್ಬರ, ನರ್ಸರಿ, ತರಕಾರಿ ಬೀಜ ಮಾರಾಟ, ಸಸಿಗಳ ಮಾರಾಟದಿಂದಲೂ ಆದಾಯ ಗಳಿಸಬಹುದು. ಇದೂ ಸಹ ಒಂದು ಸ್ವಾವಲಂಬನೆಯ ನೆಲೆ.
ಮಾರುಕಟ್ಟೆ ವಿಸ್ತರಣೆ
ಕೃಷಿಗೆ ಬಹುದೊಡ್ಡ ಸವಾಲು ಪರಿಣಾಮಕಾರಿ ಉತ್ಪಾದನೆ ಹಾಗೂ ಮಾರುಕಟ್ಟೆ. ಗ್ರಾಮೀಣ ಪ್ರದೇಶದಲ್ಲಿ ಮಾರುಕಟ್ಟೆ ವಿಸ್ತರಿಸಿದಲ್ಲಿ ರಚನಾತ್ಮಕ ಕೆಲಸಗಳು ಕಾರ್ಯಪ್ರವೃತ್ತಗೊಳ್ಳಲಿವೆ. ಕರ್ನಾಟಕ ಸರಕಾರ (ಸಿಎಚ್ಎಸ್‌ಸಿ) ಕೃಷಿಯಂತ್ರದಾರ ಮೂಲಕ ಕೃಷಿಯಂತ್ರೋಪಕರಣ ಮಾರುಕಟ್ಟೆ ದರದಿಂದ ಕಡಿಮೆ ದರದಲ್ಲಿ ಬಾಡಿಗೆಗೆ ನೀಡುತ್ತಿದೆ. ಕೃಷಿ ಉಪಕರಣ ಬಾಡಿಗೆ ನೀಡಲು ಸಹಕಾರಿ ಕ್ಷೇತ್ರದ ಮೂಲಕ ಸೇವೆಯನ್ನು ವಿಸ್ತರಿಸಬೇಕಿದೆ. ಹಾಗಾದರೆ ಸಣ್ಣ ಹಿಡುವಳಿದಾರರು ಹಾಗೂ ವೈವಿಧ್ಯ ಮಯ ಕೃಷಿ ಚಟುವಟಿಕೆ ನಡೆಸುವವರಿಗೆ ಅನುಕೂಲವಾಗಲಿದೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಿಣಾ ಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು.
– ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.