ಬಾಲ್ಯವಿವಾಹ ನಿಷೇಧ ಸಂದೇಶದಿಂದ ಜಾಗೃತಿ
ಮಹಿಳೆಯರ,ಮಕ್ಕಳ ರಕ್ಷಣೆ ಕುರಿತ ಪ್ರಗತಿ ಪರಿಶೀಲನೆಯಲ್ಲಿ ಡೀಸಿ ಮಂಜುನಾಥ್ ಸೂಚನೆ
Team Udayavani, May 31, 2019, 10:10 AM IST
ಕೋಲಾರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗಾಗಿ ಇರುವ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.
ಕೋಲಾರ: ಬಾಲ್ಯವಿವಾಹ ಪ್ರಕರಣಗಳ ಸಮರ್ಪಕ ತಡೆಗಾಗಿ ಬಲ್ಕ್ ಎಸ್‌ಎಂಎಸ್ ಮೂಲಕ ಹೆಚ್ಚಿನ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸೌಮ್ಯ ಅವರಿಗೆ ಸೂಚಿಸಿದರು.
ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗಾಗಿ ಇರುವ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು ಈ ಸೂಚನೆ ನೀಡಿದರು.
ಮಾಹಿತಿ ನೀಡಿ: ಆರೋಗ್ಯ ಇಲಾಖೆಯಿಂದ ಅಪ್ರಾಪ್ತ ಬಾಲಕಿಯರ ಹೆರಿಗೆ ವಿವರವನ್ನು ಪಡೆದುಕೊಳ್ಳುವುದಲ್ಲದೆ ಶಿಕ್ಷಣ ಇಲಾಖೆಯಿಂದ ಹೆಣ್ಣುಮಕ್ಕಳ ಗೈರು ಹಾಜರಾತಿ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಅವರು ಸೂಚಿಸಿದರು. ಈ ಮಾಹಿತಿಯನ್ನು ಆಧರಿಸಿ ಬಾಲ್ಯ ವಿವಾಹ ಪ್ರಕರಣಗಳನ್ನು ಮದುವೆ ಸಮಾರಂಭದ ಮುನ್ನವೇ ಸಮರ್ಪಕವಾಗಿ ತಡೆಹಿಡಿಯಲು ಸಾಧ್ಯವಾಗುವುದು ಎಂದು ಅವರು ಅಭಿಪ್ರಾಯಪಟ್ಟರು.
ಬಾಲ್ಯ ವಿವಾಹವನ್ನು ತಡೆಯುವುದು ಕೇವಲ ಒಂದು ಇಲಾಖೆಯ ಕೆಲಸವಲ್ಲ. ವಿವಿಧ ಇಲಾಖೆಗಳ ಸಹಯೋಗ ಅಂದರೆ ಪ್ರಮುಖವಾಗಿ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು, ಸಾರ್ವಜನಿಕ ಶಿಕ್ಷಣ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉತ್ತಮ ಸಮನ್ವಯ ಸಾಧಿಸಿದ್ದಲ್ಲಿ ಮಾತ್ರ ಅದು ಸಾಧ್ಯ ಎಂದು ಜಿ. ಜಗದೀಶ್ ತಿಳಿಸಿದರು.
ಸಮೀಕ್ಷೆಗೆ ಸಹಕಾರಿ: ಪ್ರತಿ ಪೊಲೀಸ್ ಠಾಣಾವಾರು ವ್ಯಾಪ್ತಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಕಾಣೆಯಾಗಿರುವುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಅವುಗಳಲ್ಲಿ ಅನೈತಿಕ ಸಾಗಾಣೆ ಪ್ರಕರಣಗಳ ಬಗ್ಗೆ ಸಮೀಕ್ಷೆ ನಡೆಸಲು ಸಹಕಾರಿಯಾಗುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಪರಿಹಾರಕ್ಕಾಗಿ ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ದೂರವಾಣಿ ಮೂಲಕ ಕಳೆದ ಸಾಲಿನಲ್ಲಿ ಸುಮಾರು 4000 ಕ್ಕೂ ಹೆಚ್ಚು ದೂರುಗಳು ದೂರವಾಣಿ ಮೂಲಕ ದಾಖಲಾಗಿದ್ದು, 1092 ಪ್ರಕರಣಗಳು ಮೌಖೀಕವಾಗಿ ದಾಖಲಾಗಿವೆ ಎಂದು ಸೌಮ್ಯ ತಿಳಿಸಿದರು.
ಮಮತೆಯ ತೊಟ್ಟಿಲು: ಸಾಂತ್ವನ ಕೇಂದ್ರಗಳಲ್ಲಿ ಪ್ರತಿ ನಿತ್ಯ ಸತತವಾಗಿ ಸಮಾಲೋಚನೆ ನಡೆಯುತ್ತಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುವ ಮುನ್ನ ಪರಿಹಾರ ಕಂಡುಕೊಳ್ಳುವಂತೆ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಪೋಷಕರಿಂದ ತೆಗಿಸಲ್ಪಟ್ಟ ನವಜಾತ ಶಿಶುಗಳಿಗಾಗಿ ಮಮತೆಯ ತೊಟ್ಟಿಲನ್ನು ಇಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಪ್ರಸ್ತುತ ಜಿಲ್ಲೆಯ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸೌಮ್ಯ ಮಾತನಾಡಿ, ಮಾತೃ ವಂದನಾ ಯೋಜನೆಯಡಿ 8447 ತಾಯಂದಿರು ಫಲಾನುಭವಿಗಳಾಗಿದ್ದಾರೆ. ಮಾತೃಶ್ರೀ ಯೋಜನೆಯಡಿ 5625 ತಾಯಂದಿರು ಫಲಾನುಭವಿಗಳಾಗಿದ್ದು, ಸರ್ಕಾರಿ ವೃತ್ತಿಯಲ್ಲಿರುವವರಿಗೆ ಬಿಟ್ಟು ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕಾನೂನು ಸೇವೆಗಳ ಪಾಧಿಕಾರ ಸದಸ್ಯ ಕಾರ್ಯದಶಿಗಳಾದ ಗಂಗಾಧರ್ ಸಿ.ಎಚ್. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
● ಡಿಸಿ ಮಂಜುನಾಥ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.