“ತಂಬಾಕು ದುಷ್ಪರಿಣಾಮದ ಜಾಗೃತಿ ಅಗತ್ಯ’
Team Udayavani, Jun 1, 2019, 6:00 AM IST
ಹಂಪನಕಟ್ಟೆ: ತಂಬಾಕು ಸೇವನೆಯ ಚಟಕ್ಕೆ ಬಿದ್ದು ಬದುಕು ಅಂತ್ಯಗೊಳಿಸುವ ಮುನ್ನ ಅದರ ದುಷ್ಪರಿಣಾಮಗಳನ್ನು ಅರಿಯುವಲ್ಲಿ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಬೇಕು. ಇದರಲ್ಲಿ ಸಮಾಜದ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎ. ಜಿ. ಗಂಗಾಧರ ಹೇಳಿದರು.
ನಗರದ ಪುರಭವನದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಅವರು ಶುಕ್ರವಾರ ಉದ್ಘಾಟಿಸಿದರು. ಅಕ್ಷರ ಜ್ಞಾನ ಕಡಿಮೆ ಇದ್ದ ದಿನಗಳಲ್ಲಿ ತಂಬಾಕು ಸೇವನೆ ಮಾಡುವವರ ಸಂಖ್ಯೆಯೂ ಕಡಿಮೆ ಇತ್ತು. ಆದರೆ, ಸುಶಿಕ್ಷಿತ ಸಮಾಜದಲ್ಲಿ ಸಿಗರೇಟ್ ಸೇವನೆ ಮಾಡಿದರೆ ಆತ ಹೀರೋ ಎಂದು ಬಿಂಬಿಸುವ ಮನಸ್ಥಿತಿ ಹುಟ್ಟಿದೆ. ಇದು ನಾಗರಿಕ ಸಮಾಜಕ್ಕೆ ಅಪಾಯಕಾರಿಯಾದ ಬೆಳವಣಿಗೆ. ಅಂತಹ ಮನಸ್ಥಿತಿಯನ್ನು ಹೋಗಲಾಡಿಸಿ ಉತ್ತಮ ನಡತೆ, ಹವ್ಯಾಸವುಳ್ಳ ವ್ಯಕ್ತಿಗೆ ಮಾತ್ರ ಸಮಾಜದಲ್ಲಿ ಗೌರವ ಎಂಬ ಭಾವನೆಯನ್ನು ಬಿತ್ತಬೇಕು. ಇದರಿಂದ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಕೊಡುಗೆಯಾಗಬಹುದು ಎಂದರು.
ದಾರಿ ತಪ್ಪುವುದನ್ನು ತಡೆಯಿರಿ
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಸಿಇಒ ಡಾ| ಆರ್. ಸೆಲ್ವಮಣಿ ಮಾತನಾಡಿ, ಇತ್ತೀಚೆಗೆ ಕೆಲವು ಶಾಲಾ-ಕಾಲೇಜುಗಳ ಬಳಿ ಧೂಮಪಾನ ರಹಿತ ವಲಯ ಎಂದು ಮಾಡಿರುವುದು ಶ್ಲಾಘನೀಯ. ಚಿತ್ರಮಂದಿರಗಳಲ್ಲಿ ಧೂಮಪಾನ ಹಾನಿಕರ ಎಂದು ಕಿರು ಚಿತ್ರಗಳನ್ನು ತೋರಿಸಲಾಗುತ್ತಿದ್ದರೂ, ಸಿನೆಮಾಗಳ ಹೀರೋಗಳೇ ಧೂಮಪಾನದಿಂದಾಗುವ ಹಾನಿಗಳ ಬಗ್ಗೆ ಪರದೆ ಮೇಲೆ ಬಂದು ಮಾತನಾಡಬೇಕು. ಇದರಿಂದ ಯುವಕರು ದಾರಿ ತಪ್ಪುವುದನ್ನು ತಡೆಯಬಹುದು ಎಂದರು.
ಶೇ. 90ರಷ್ಟು ಶ್ವಾಸಕೋಶ ಕ್ಯಾನ್ಸರ್
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಚೇಯರ್ಮನ್ ಶಾಂತಾರಾಮ ಶೆಟ್ಟಿ ಮಾತನಾಡಿ, ವಿಶ್ವದಲ್ಲಿ ಪ್ರತಿ ವರ್ಷ ಏಳು ಮಿಲಿಯನ್ ಜನ ತಂಬಾಕು ಸೇವನೆಯಿಂದ ಮೃತಪಡುತ್ತಿದ್ದಾರೆ. ಶೇ. 90ರಷ್ಟು ಶ್ವಾಸಕೋಶ ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಿರುವುದಕ್ಕೆ ತಂಬಾಕು ಸೇವನೆಯೇ ಕಾರಣ ಎಂದರು.
ಡಿಸಿಪಿ ಹನುಮಂತಪ್ಪ ಮುಖ್ಯ ಅತಿಥಿಯಾಗಿದ್ದರು. ಎಂಕಾಡ್ಸ್ ಡೀನ್ ಡಾ| ದಿಲೀಪ್ ಜಿ. ಶೆಟ್ಟಿ, ವೆನ್ ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ, ಭಾರತೀಯ ದಂತ ವೈದ್ಯಕೀಯ ಅಸೋಸಿಯೇಶನ್ ಅಧ್ಯಕ್ಷ ಡಾ| ಕಾರ್ತಿಕ್ ಶೆಟ್ಟಿ, ಅ.ಭಾ. ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ಚೌಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ವೇದಿಕೆಯ ಯೋಜನಾಧಿಕಾರಿ ಉಮರಬ್ಬ, ಡಾ| ಪ್ರವೀಣ್ಕುಮಾರ್ ಉಪಸ್ಥಿತರಿದ್ದರು.
1.40 ಲಕ್ಷ ರೂ. ದಂಡ
ಅನಧಿಕೃತ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಧಾಳಿ ನಡೆಸಿ ಕಂಡು ಬಂದಲ್ಲಿ ದಂಡ ವಿಧಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ನಗರದಲ್ಲಿ 1 ಲಕ್ಷ 40 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಡಿಎಚ್ಒ ಡಾ| ರಾಮಕೃಷ್ಣ ರಾವ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.