ಎಂಸಿಎಫ್ ಸದ್ಯವೇ ನೈಸರ್ಗಿಕ ಅನಿಲಕ್ಕೆ ಪರಿವರ್ತನೆ
ಕೊಚ್ಚಿ - ಮಂಗಳೂರು ಗೈಲ್ ಗ್ಯಾಸ್ ಪೈಪ್‌ಲೈನ್ ಬಹುತೇಕ ಪೂರ್ಣ
Team Udayavani, Jun 1, 2019, 9:29 AM IST
ಮಂಗಳೂರು: ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಎಂಸಿಎಫ್ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಬಳಸಿ ರಸಗೊಬ್ಬರ ಉತ್ಪಾದನೆಯನ್ನು ನಾಲ್ಕು ತಿಂಗಳೊಳಗೆ ಆರಂಭಿಸುವ ಸಾಧ್ಯತೆಯಿದೆ.
ಅಧಿಕ ವೆಚ್ಚ, ಪರಿಸರ ಪೂರಕವಲ್ಲ ಎಂಬ ಕಾರಣಕ್ಕೆ ರಸ ಗೊಬ್ಬರ ಉತ್ಪಾದನೆಗೆ ನಾಫ್ತಾ ಬದಲು ಎಲ್‌ಎನ್‌ಜಿ ಬಳಸುವು ದನ್ನು ಕೇಂದ್ರ ಸರ ಕಾರ ಹಿಂದೆಯೇ ಕಡ್ಡಾಯ ಗೊಳಿಸಿದ್ದು, ಗೈಲ್ ಕಂಪೆನಿಯು ಕೊಚ್ಚಿಯಿಂದ ಕೊಳವೆ ಮೂಲಕ ಎಂಸಿಎಫ್ಗೆ ಪೂರೈಸಲು ಸಿದ್ಧತೆ ನಡೆಸಿದೆ.
ಗೇಲ್ (ಇಂಡಿಯಾ) ಲಿ. ವತಿಯಿಂದ ಕೊಚ್ಚಿಯಿಂದ ಮಂಗಳೂರಿನ ವರೆಗೆ ಅನಿಲ ಕೊಳವೆ ಕಾಮಗಾರಿ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ದ.ಕ. ವ್ಯಾಪ್ತಿಯಲ್ಲಿ ಶೇ.10 ರಷ್ಟು ಬಾಕಿಯಿದ್ದು, ನಾಲ್ಕು ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಮಂಗಳೂರು ತಾಲೂಕಿನ ಮಳವೂರು, ಆದ್ಯಪಾಡಿ, ಕಂದಾವರ, ಮುಳೂರು, ಅಡೂರು, ಮಲ್ಲೂರು, ಅರ್ಕುಳ, ಪಾವೂರು, ಕೆಂಜಾರು, ತೋಕೂರು ಮತ್ತು ಬಂಟ್ವಾಳ ತಾಲೂಕಿನ ಮೇರಮಜಲು, ಅಮ್ಮುಂಜೆ, ಪಜೀರು, ಕೈರಂಗಳ, ಬಾಳೆಪುಣಿ, ಕುರ್ನಾಡು ಗ್ರಾಮಗಳ ಮೂಲಕ ಅಳವಡಿಕೆ ಅಂತಿಮ ಹಂತದಲ್ಲಿದೆ.
ಸುಮಾರು 450 ಕಿ.ಮೀ. ಉದ್ದದ ಗೈಲ್ ಗ್ಯಾಸ್ ಪೈಪ್‌ಲೈನ್‌ಗೆ ವರ್ಷಗಳ ಹಿಂದೆಯೇ ಅನುಮತಿ ದೊರಕಿತ್ತು. ಆದರೆ ತಮಿಳುನಾಡು-ಕೇರಳ ಭಾಗ
ದಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲಸ ನಿಧಾನವಾಗಿತ್ತು. ದ.ಕ.ದಲ್ಲೂ ಭೂಮಿ ಕಳೆದುಕೊಂಡ ಕೃಷಿಕರು, ಮತ್ತಿತರರು ವಿರೋಧಿಸಿ ದ್ದರು. ಪ್ರತೀ 30 ಕಿ.ಮೀ.ಗೆ ಒಂದರಂತೆ ಎಸ್‌ವಿ ಸ್ಟೇಷನ್ ನಿರ್ಮಿಸಲಾಗುತ್ತಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿ ಕಾಮಗಾರಿ ನಡೆಯುತ್ತಿದೆ. ತುರ್ತು ಸಂದರ್ಭ ಉದ್ಭವಿಸಿದಾಗ ಇದರ ಮೂಲಕ ಮೂಲಕ ಅನಿಲ ಸರಬರಾಜು ತಡೆಹಿಡಿಯಲು ಸಾಧ್ಯ. ಎಲ್‌ಎನ್‌ಜಿ ಮೂಲಕ ರಸಗೊಬ್ಬರ ಉತ್ಪಾದನೆಗೆ ಎಂಸಿಎಫ್‌ನಲ್ಲಿ ಈಗಾ ಗಲೇ ಯಂತ್ರೋಪಕರಣ ಪರಿಷ್ಕರಣೆ ಮಾಡಲಾಗಿದ್ದು, 315 ಕೋ.ರೂ. ವೆಚ್ಚದಲ್ಲಿ ಹೊಸ ಕೇಂದ್ರ ಸ್ಥಾಪಿಸಲಾಗಿದೆ.
ನಾಫ್ತಾ ಬಳಕೆಗೆ ಕೇಂದ್ರ ಸರಕಾರ ಕಡಿವಾಣ ಹಾಕಿದ್ದರಿಂದ 2014ರ ಸೆ. 30ರಿಂದ ಎಂಸಿಎಫ್‌ನಲ್ಲಿ ರಸಗೊಬ್ಬರ ಉತ್ಪಾದನೆ ಸ್ಥಗಿತಗೊಳಿಸಲಾ ಗಿತ್ತು. ಬಳಿಕ ಸಂಸದ ನಳಿನ್, ಕೇಂದ್ರ ಸಚಿವರ ಮಧ್ಯ ಪ್ರವೇಶದಿಂದ ಎಲ್‌ಎನ್‌ಜಿ ಲಭ್ಯ ವಾಗುವವರೆಗೆ ನಾಫ್ತಾ ಬಳಕೆಗೆ ಸಮ್ಮತಿ ಸಿಕ್ಕಿತ್ತು. ಎಂಸಿಎಫ್ ದಿನಕ್ಕೆ ಸರಾಸರಿ ಸುಮಾರು 1,600 ಟನ್ ಯೂರಿಯಾ ಉತ್ಪಾದಿಸುತ್ತದೆ. 800 ಟನ್‌ನಷ್ಟು ಡಿಎಪಿ ಗೊಬ್ಬರ, 700 ಟನ್‌ನಷ್ಟು ಅಮೋನಿಯಾ ಉತ್ಪಾದನೆಯಾಗುತ್ತದೆ. ರಾಜ್ಯದ ಬಹುತೇಕ ಕೃಷಿಕರಿಗೆ ಪೂರೈಕೆಯಾಗುವ ಯೂರಿಯಾ ಎಂಸಿಎಫ್ನದ್ದೇ.
ಪೈಪ್ ಮೂಲಕ ಅಡುಗೆ ಅನಿಲ
ಕೊಚ್ಚಿಯಿಂದ ಎಂಸಿಎಫ್‌ಗೆ ದೊರೆತ ನೈಸರ್ಗಿಕ ಅನಿಲವನ್ನು ಜಿಲ್ಲೆಯ ಮನೆ ಬಳಕೆಗೂ ಒದಗಿಸುವ ಯೋಜನೆಯಿದೆ. ಜಿಲ್ಲೆಯಲ್ಲಿ 100 ಸಿಎನ್‌ಜಿ ಸ್ಟೇಷನ್‌ಗಳನ್ನು ಸರಕಾರಿ – ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲು ನಿರ್ಧರಿ ಸಲಾಗಿದೆ. ಸುಮಾರು 3.5 ಲಕ್ಷ ಕುಟುಂಬಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ ವಿತರಣೆ ಮಾಡಲು ಯೋಜನೆ ಇದ್ದು, ಮೊದಲಿಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಇದರ ಲಾಭ ದೊರೆಯಲಿದೆ. ಆದರೆ ಹೊಸದಾಗಿ ಪೈಪ್‌ಲೈನ್ ಅಳವಡಿಸಬೇಕಾಗಿರುವುದರಿಂದ ಅನುಷ್ಠಾನಕ್ಕೆ ಸಮಯ ಬೇಕಾಗಬಹುದು.
ನದಿಯಲ್ಲಿ ಸುರಂಗ!
ಪ್ರಸ್ತುತ ನೇತ್ರಾವತಿಯ ಫರಂಗಿಪೇಟೆ ವ್ಯಾಪ್ತಿಯಲ್ಲಿ ನದಿ ಪಾತ್ರದಲ್ಲಿ ಸುರಂಗದಂತೆ ನಿರ್ಮಾಣ ಮಾಡಿ ಅನಿಲ ಪೈಪ್‌ಲೈನ್ ಹಾಕಲಾಗುತ್ತಿದೆ. ನದಿ ನೀರು, ಪರಿಸರಕ್ಕೆ ಧಕ್ಕೆ ಆಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ. ಫಲ್ಗುಣಿ, ಅತ್ತ ಕಾಸರಗೋಡಿನ ಚಂದ್ರಗಿರಿ ನದಿಯಲ್ಲಿಯೂ ಇದೇ ಕಾಮಗಾರಿ ನಡೆಯುತ್ತಿದೆ.
ಪರಿವರ್ತನೆಗಾಗಿ 315 ಕೋ.ರೂ. ವೆಚ್ಚ
ಎಲ್‌ಎನ್‌ಜಿ ಮೂಲಕ ರಸ ಗೊಬ್ಬರ ಉತ್ಪಾದನೆಗೆ ಎಂಸಿಎಫ್ ಈಗಾಗಲೇ ಪೂರಕ ಸಿದ್ಧತೆ ಮಾಡಿದೆ. ನಾಫ್ತಾದಿಂದ ಪರಿವರ್ತನೆ ಹೊಂದಲು ಅನುವಾಗುವಂತೆ ಇಲ್ಲಿನ ಯಂತ್ರೋಪಕರಣ ಸಹಿತ ಇಡೀ ಕೇಂದ್ರವನ್ನು ಸುಮಾರು 315 ಕೋ.ರೂ. ವೆಚ್ಚದಲ್ಲಿ ಮರುಸ್ಥಾಪಿಸಲಾಗಿದೆ. ಮುಂದಿನ ಕೆಲವೇ ತಿಂಗಳು ಗಳಲ್ಲಿ ಗ್ಯಾಸ್ ದೊರೆಯುವ ಸಾಧ್ಯತೆ ಇದೆ.
– ಪ್ರಭಾಕರ ರಾವ್, ಎಂಸಿಎಫ್ ನಿರ್ದೇಶಕರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.