ಅಕ್ರಮ ಪ್ರವೇಶ ದ್ವಾರಗಳ ಮುಚ್ಚಿ
Team Udayavani, Jun 2, 2019, 3:09 AM IST
ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದಲ್ಲಿ ಗ್ರೆನೇಡ್ ಮಾದರಿಯ ವಸ್ತು ಪತ್ತೆಯಾದ ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದೆ. ರೈಲ್ವೆ ಪೊಲೀಸರ ಎರಡು ವಿಶೇಷ ತಂಡಗಳು ಹೊರ ರಾಜ್ಯಗಳಿಗೆ ತೆರಳಿದ್ದು, ಇನ್ನುಳಿದ ಆರು ತಂಡಗಳು ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿವೆ.
ಪ್ರಾಥಮಿಕ ತನಿಖೆಯಲ್ಲಿ 1ನೇ ಪ್ಲಾಟ್‌ಫಾರಂನ ರೈಲ್ವೆ ಹಳಿ ಪಕ್ಕ ಪತ್ತೆಯಾದ ವಸ್ತು ಗ್ರೆನೇಡ್ ಮಾದರಿಯಲ್ಲಿದೆ. ಆದರೆ, ಅದರಲ್ಲಿ ಯಾವುದೇ ಸ್ಫೋಟಕ ರಾಸಾಯನಿಕ ವಸ್ತು ಇರಲಿಲ್ಲ. ಮೇಲ್ನೋಟಕ್ಕೆ ಗ್ರೆನೇಡ್ ರೀತಿಯಲ್ಲಿ ಕಾಣುತ್ತಿದ್ದು, ಅಂತಹ ವಸ್ತುಗಳನ್ನು ಹೊರ ರಾಜ್ಯಗಳಲ್ಲಿ ತಯಾರು ಮಾಡುವ ಬಗ್ಗೆ ಮಾಹಿತಿ ಸಿಕ್ಕಿದೆ.
ಆದರೆ, ಆ ವಸ್ತುವನ್ನು ಇಲ್ಲಿಗೆ ತಂದವರು ಯಾರು? ಯಾವ ಕಾರಣಕ್ಕೆ ರೈಲು ನಿಲ್ದಾಣದಲ್ಲಿ ಇಟ್ಟಿದ್ದರು? ಎಂಬ ಬಗ್ಗೆ ತಿಳಿದು ಬಂದಿಲ್ಲ. ಹೀಗಾಗಿ ಪತ್ತೆ ಹಚ್ಚಲು ಇನ್‌ಸ್ಪೆಕ್ಟರ್ ನೇತೃತ್ವದ ಎರಡು ತಂಡಗಳು ನೆರೆ ರಾಜ್ಯಗಳಿಗೆ ಹೋಗಿವೆ ಎಂದು ರೈಲ್ವೆ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅಕ್ರಮ ಪ್ರವೇಶ ದ್ವಾರ ಮುಚ್ಚಿ: ಸಿಟಿ ರೈಲು ನಿಲ್ದಾಣದಲ್ಲಿ ಮುಖ್ಯಪ್ರವೇಶ ದ್ವಾರ ಮತ್ತು ಓಕಳಿಪುರ ಬಳಿಯ ಪ್ರವೇಶ ದ್ವಾರದಲ್ಲಿ ಮಾತ್ರ ತಪಾಸಣಾ ಸಿಬ್ಬಂದಿ ಇದ್ದು, ಲೋಹ ಶೋಧಕ ಯಂತ್ರಗಳಿವೆ. ಅದನ್ನು ಹೊರತುಪಡಿಸಿ ನಿಲ್ದಾಣದ ಸುತ್ತಮುತ್ತ ಎಂಟು ಕಡೆ ಅಕ್ರಮ ಪ್ರವೇಶ ದ್ವಾರಗಳಿವೆ. ಅಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲ. ಹೀಗಾಗಿ ಕೂಡಲೇ ಅಂತಹ ಅಕ್ರಮ ಪ್ರವೇಶ ದ್ವಾರಗಳನ್ನು ಬಂದ್ ಮಾಡುವಂತೆ ರೈಲ್ವೆ ಇಲಾಖೆಗೆ ಪತ್ರ ಮೂಲಕ ಪೊಲೀಸರು ಮನವಿ ಮಾಡಿದ್ದಾರೆ.
ಅಲ್ಲದೆ, ಮೆಟ್ರೋ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಪ್ರವೇಶಿಸುವ ಸ್ಥಳ, ನಿಲ್ದಾಣದ ಹಿಂಬದಿ ಪ್ರವೇಶ ದ್ವಾರ ಮತ್ತು ಎಸ್ಕಲೇಟರ್ ಬಳಿ ಬ್ಯಾಗ್ ಸ್ಕ್ಯಾನರ್‌ಗಳಿಲ್ಲ. ಪ್ರಮುಖವಾಗಿ ನಿಲ್ದಾಣದ ಕೆಲವೆಡೆ ಪಾರ್ಸೆಲ್ ಸ್ಕ್ಯಾನರ್‌ಗಳು, ಮೆಟಲ್ ಡಿಟೆಕ್ಟರ್‌ಗಳು ಇಲ್ಲ. ಈ ಬಗ್ಗೆಯೂ ಕ್ರಮಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ ಎಂದು ಅಧಿಕಾರಿ ವಿವರಿಸಿದರು.
ಪ್ರಯೋಗಾಲಯ ವರದಿ ಶೀಘ್ರ: ಅನುಮಾನಾಸ್ಪದ ವಸ್ತುವನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಪರೀಕ್ಷೆಗೆ ಒಳಪಡಿಸಿದ್ದಾರೆ. ಅವರು ಶೀಘ್ರದಲ್ಲೇ ವರದಿ ನೀಡಲಿದ್ದು, ಬಳಿಕವೇ ವಸ್ತು ಏನು ಎಂಬುದು ತಿಳಿಯಲಿದೆ ಎಂದು ಅಧಿಕಾರಿ ಹೇಳಿದರು.
ಹೆಚ್ಚುವರಿ ಭದ್ರತೆ: ಅನುಮಾನಸ್ಪದ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಶನಿವಾರ ಮೆಜೆಸ್ಟಿಕ್ ಸೇರಿ ಸುತ್ತ-ಮುತ್ತ ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ 120 ಮಂದಿಯ ಒಂದು ಆರ್‌ಪಿಎಫ್ ಪಡೆಯನ್ನು ನಿಯೋಜಿಸಲಾಗಿದ್ದು, ನಿರಂತರ ತಪಾಸಣಾ ಕಾರ್ಯ ನಡೆಯುತ್ತಿದೆ. ಜತೆಗೆ ರೈಲ್ವೆ ಹಳಿಗಳ ಮೇಲೆ ಆಗಿಂದಾಗ್ಗೆ ಗಸ್ತು ಕಾರ್ಯಾಚರಣೆ ಕೂಡ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವರ್ಷದ ಪತ್ರಕ್ಕೆ ಇದುವರೆಗೂ ಪ್ರತಿಕ್ರಿಯೆ ಇಲ್ಲ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2018ರ ಜುಲೈ 7ರಂದೇ ಕೊಂಕಣ ರೈಲ್ವೆ ವಿಭಾಗಕ್ಕೆ ಹೆಚ್ಚುವರಿಯಾಗಿ ರೈಲ್ವೆ ಪೊಲೀಸರನ್ನು ನೇಮಕ ಮಾಡುವಂತೆ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದರು.
ದಕ್ಷಿಣ ಕೇಂದ್ರ ವಲಯದ (ರಾಯಚೂರು, ಬೀದರ್), ದಕ್ಷಿಣ ವಲಯ(ಮಂಗಳೂರು) ನೈರುತ್ಯ ವಲಯ(ಹುಬ್ಬಳ್ಳಿ) ಮತ್ತು ಕೇಂದ್ರ ವಲಯದಲ್ಲಿ ಎಸ್ಪಿ ಹಂತದಿಂದ ಕಾನ್‌ಸ್ಟೆàಬಲ್‌ವರೆಗೆ ಹೆಚ್ಚುವರಿ 919 ಮಂದಿ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಭರ್ತಿ ಮಾಡುವಂತೆ ಪತ್ರ ಬರೆದಿದ್ದರು. ಆದರೆ, ಇದುವರೆಗೂ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಣ್ಣಿನಡಿ ಸಿಲುಕಿ ಕಾರ್ಮಿಕ ಸಾವು: ತೊಡಿದ್ದ ಗುಂಡಿಯೊಳಗೆ ಕುಸಿದ ಮಣ್ಣಿನಡಿ ಸಿಲುಕಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಶ್ರೀಕಾಂತ್ (25) ಮೃತ ಕಾರ್ಮಿಕ. ಕೆಲ ವರ್ಷಗಳ ಹಿಂದೆ ಕೆಲಸ ಅರಸಿ ಸಂಬಂಧಿಕರ ಜತೆ ಬೆಂಗಳೂರಿಗೆ ಬಂದಿದ್ದ ಶ್ರೀಕಾಂತ್ ನಗರ ಖಾಸಗಿ ಎಂಜಿನಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ನೀರು ಸಂಪರ್ಕದ ಪೈಪ್ ಅಳವಡಿಸುವುದಕ್ಕಾಗಿ ಗುಂಡಿ ತೆಗೆಯಲಾಗಿತ್ತು. ಮೇ 30ರಂದು ಸಂಜೆ ಅದೇ ಗುಂಡಿಯಲ್ಲಿ ಶ್ರೀಕಾಂತ್ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಮಣ್ಣು ಕುಸಿದಿದ್ದು, ಅದರಡಿಯಲ್ಲಿ ಸಿಲುಕಿದ್ದ ಶ್ರೀಕಾಂತ್ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಈ ಸಂಬಂಧ ಶ್ರೀಕಾಂತ್ ಸಂಬಂಧಿ ಯಮನೂರಪ್ಪ ಎಂಬುವರು ದೂರು ನೀಡಿದ್ದು, ಈ ದೂರು ಆಧರಿಸಿ ಕಂಪನಿಯ ವ್ಯವಸ್ಥಾಪಕ ವರ್ಗೀಸ, ಎಂಜಿನಿಯರ್ ಸೆಂಥಿಲ್ ಕುಮಾರ್ ಮತ್ತು ಮೇಲುಸ್ತುವಾರಿ ರಾಜು ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.