![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jun 2, 2019, 1:20 PM IST
ಕಲಬುರಗಿ: ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಎಚ್ಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ ಯಾದವ ಅಧ್ಯಕ್ಷತೆಯಲ್ಲಿ ಹೈ.ಕ. ಮಂಡಳಿಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಯಿತು.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ 2019-20ನೇ ಆರ್ಥಿಕ ಸಾಲಿನಿಂದ ಕಲಬುರಗಿ ವಿಭಾಗ ಕೇಂದ್ರಿತ ಯೋಜನೆಗಳನ್ನು ಕೈಗೊಳ್ಳಲು ಮಂಡಳಿ ಹಂತದಲ್ಲಿಯೇ ಪ್ರಾದೇಶಿಕ ನಿಧಿ ಪ್ರಾಯೋಜನೆ ಮಾಡಿಕೊಳ್ಳಲಾಗಿದೆ. ಮಂಡಳಿಗೆ ಹಂಚಿಕೆಯಾದ ಅನುದಾನ ಪೈಕಿ ಶೇ.6ರಂತೆ 90 ಕೋಟಿ ರೂ. ಅನುದಾನವನ್ನು ಈ ನಿಧಿಗೆ ಮೀಸಲಿರಿಸಲು ಮಂಡಳಿ ನಿರ್ಣಯಿಸಿದೆ ಎಂದು ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಹೈ.ಕ. ಮಂಡಳಿಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ರೀತಿಯ ಪ್ರಾದೇಶಿಕ ಅನುದಾನ ಮೀಸಲಿಡುವುದರಿಂದ ಆಯಾ ಜಿಲ್ಲೆಗೆ ಹಂಚಿಕೆಯಾದ ಅನುದಾನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಉದಾಹರಣೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ನೀಡಲಾಗುವ ಅನುದಾನವನ್ನು ಪ್ರಾದೇಶಿಕ ಅನುದಾನವೆಂದು ಪರಿಗಣಿಸಲಾಗುವುದು. ಇಂತಹ ಯೋಜನೆಗಳನ್ನು ಜಿಲ್ಲೆಗಳಿಂದ ಮಾಹಿತಿ ಪಡೆದು ಮಂಡಳಿಯೇ ಖುದ್ದಾಗಿ ಕ್ರಿಯಾ ಯೋಜನೆ ರೂಪಿಸುತ್ತದೆ ಎಂದರು.
ಪ್ರಸಕ್ತ 2019-20ನೇ ಸಾಲಿಗೆ ರಾಜ್ಯ ಸರ್ಕಾರ ಆಯವ್ಯಯದಲ್ಲಿ ಘೋಷಿಸಿದಂತೆ 1500 ಕೋಟಿ ರೂ. ಅನುದಾನ ಮಂಡಳಿಗೆ ಹಂಚಿಕೆಯಾಗಿದೆ. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಆಯಾ ಜಿಲ್ಲಾ ಸಲಹಾ ಸಮಿತಿಯು ಕ್ರಿಯಾ ಯೋಜನೆಯನ್ನು ಮಂಡಳಿಗೆ ಸಲ್ಲಿಸಬೇಕು. ಅಲ್ಲದೇ ಮೂಲ ಕ್ರಿಯಾ ಯೋಜನೆಯಲ್ಲಿನ ಕಾಮಗಾರಿಗಳು ಕೆಲವೊಮ್ಮೆ ತಾಂತ್ರಿಕ ಕಾರಣದಿಂದ ಕಾರ್ಯಾನುಷ್ಠಾನಕ್ಕೆ ಬಾರದಿದ್ದಲ್ಲಿ ಪರ್ಯಾಯ ಕಾಮಗಾರಿ ಕೈಗೊಳ್ಳಲು ಹೆಚ್ಚುವರಿಯಾಗಿ 1000 ಕೋಟಿ ರೂ. ಗಳಿಗೂ ಹೆಚ್ಚು ಕ್ರಿಯಾ ಯೋಜನೆಯನ್ನು ಈ ಬಾರಿ ಸಿದ್ಧಪಡಿಸಬೇಕಾಗಿದೆ. ಹೀಗೆ ಮಾಡುವುದರಿಂದ ನಿಗದಿತ ಗುರಿ ಸಾಧಿಸಲು ಅನುಕೂಲವಾಗುತ್ತದೆ. ಕಲಬುರಗಿ ಜಿಲ್ಲೆಯೂ 2019-20ನೇ ಸಾಲಿಗೆ ತನ್ನ ಪಾಲಿನ 363.40 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಯನ್ನು ಮಂಡಳಿಗೆ ಸಲ್ಲಿಸಬೇಕು ಎಂದು ಹೇಳಿದರು.
ಶೇ.70ರಷ್ಟು ಅನುದಾನವನ್ನು ಮೈಕ್ರೋ ಕಾಮಗಾರಿಗೆ ಹಾಗೂ ಶೇ.30ರಷ್ಟು ಅನುದಾನವನ್ನು ಮ್ಯಾಕ್ರೋ ಕಾಮಗಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಶೇ.70ರ ಮೈಕ್ರೋ ನಿಧಿಯಲ್ಲಿ ಸಾಮಾಜಿಕ ವಲಯಕ್ಕೆ ಶೇ. 40 ಮತ್ತು ಸಾಮಾಜಿಕವಲ್ಲದ ವಲಯಕ್ಕೆ ಶೇ. 60 ಅನುದಾನ ಮೀಸಲಿರಿಸಲಾಗಿದೆ. ಅದೇ ರೀತಿ ಶೇ. 30ರ ಮ್ಯಾಕ್ರೋ ನಿಧಿಯಲ್ಲಿ ಸಾಮಾಜಿಕ ವಲಯ ಮತ್ತು ಸಾಮಾಜಿಕವಲ್ಲದ ವಲಯಕ್ಕೆ ತಲಾ ಶೇ.50ರಷ್ಟು ಅನುದಾನ ಖರ್ಚು ಮಾಡಲಾಗುತ್ತದೆ ಎಂದು ವಿವರಿಸಿದರು.
ಕಳೆದ ಎರಡ್ಮೂರು ವರ್ಷದ ಹಿಂದೆ ಅನುಮೋದನೆ ನೀಡಿದರೂ ಅನುಷ್ಠಾನ ಏಜೆನ್ಸಿಗಳು ಇದೂವರೆಗೆ ಕಾಮಗಾರಿ ಆರಂಭಿಸದಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಮಂಡಳಿ ಕಾರ್ಯದರ್ಶಿಗಳು, 2017-18ನೇ ಸಾಲಿನಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು ಪ್ರಗತಿ ಹಂತದಲ್ಲಿರುವ ಮಂಡಳಿಯ ಎಲ್ಲ ಕಾಮಗಾರಿಗಳನ್ನು ಜೂನ್-2019 ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಅಲ್ಲದೆ 2018-19ನೇ ಸಾಲಿನಲ್ಲಿ ಅನುಮೋದನೆ ಪಡೆದು ಇದೂವರೆಗೆ ಕಾಮಗಾರಿ ಪ್ರಾರಂಭಿಸದ ಕಾಮಗಾರಿಗಳನ್ನು ಇದೇ ಜೂನ್ ಅಂತ್ಯಕ್ಕೆ ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ ಅಂತಹ ಕಾಮಗಾರಿಗಳನ್ನು ಕೈಬಿಡಲಾಗುವುದು ಎಂದು ಅನುಷ್ಟಾನ ಏಜೆನ್ಸಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಮಂಡಳಿಯಿಂದ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ ಪೈಕಿ ಅನುದಾನ ಖರ್ಚಾಗದೆ ಉಳಿದಿದ್ದಲ್ಲಿ ಅದರ ಮಾಹಿತಿಯನ್ನು ಮಂಡಳಿಗೆ ಸಲ್ಲಿಸಬೇಕು ಎಂದು ಹೇಳಿದರು.
ಕಾಮಗಾರಿಗಳಿಗೆ ಕಾಲಮಿತಿ ನಿಗದಿ: ಹೈ.ಕ. ಪ್ರದೇಶಾಭಿವೃದ್ಧಿ ಮಂಡಳಿಯ ಕೆಲವೊಂದು ಕಾಮಗಾರಿಗಳು ವರ್ಷಗಟ್ಟಲೆ ಸಾಗುತ್ತಿದ್ದು, ಇದರಿಂದ ನಿಗದಿತ ಅವಧಿಯಲ್ಲಿ ಭೌತಿಕ ಮತು ಆರ್ಥಿಕ ಪ್ರಗತಿ ಸಾಧಿಸಲು ಕಷ್ಟವಾಗಿದೆ. ಇದನ್ನು ತಪ್ಪಿಸಲು ಇನ್ನು ಮುಂದೆ ಮಂಡಳಿಯ 30 ಲಕ್ಷ ರೂ. ವರೆಗಿನ ಕಾಮಗಾರಿಗಳನ್ನು ಮೂರು ತಿಂಗಳಲ್ಲಿ, 30 ಲಕ್ಷ ರೂ. ಗಳಿಂದ ಒಂದು ಕೋಟಿ ರೂ. ವರೆಗಿನ ಕಾಮಗಾರಿಗಳನ್ನು ಐದು ತಿಂಗಳಿನಲ್ಲಿ ಹಾಗೂ ಒಂದು ಕೋಟಿ ರೂ. ಗಳಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಆರು ತಿಂಗಳಲ್ಲಿ ಮುಗಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ಎಲ್ಲ ಅನುಷ್ಠಾನ ಏಜೆನ್ಸಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.
ಶೇ.80 ಅನುದಾನ ಖರ್ಚು: ಮಂಡಳಿ ಇತಿಹಾಸದಲ್ಲಿಯೆ ಇದೇ ಪ್ರಥಮ ಬಾರಿಗೆ 2018-19ನೇ ಸಾಲಿಗೆ ನಿಗದಿ ಮಾಡಿದ 1500 ಕೋಟಿ ರೂ. ಅನುದಾನದಲ್ಲಿ ಇದೂವರೆಗೆ 1200 ಕೋಟಿ ರೂ. ಖರ್ಚು ಮಾಡುವ ಮೂಲಕ ಶೇ.80ರಷ್ಟು ಆರ್ಥಿಕ ಪ್ರಗತಿ ಸಾಧಿಸಿದ್ದು, ಸಂತಸ ತಂದಿದೆ ಎಂದರು.
ಸೈಬರ್ ಕೆಫೆ ಆರಂಭಿಸಿ: ಮಂಡಳಿಯು 8.94 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲೆಯ ಗ್ರಾಮ ಪಂಚಾಯತಿ ಹಂತದಲ್ಲಿ ಸೈಬರ್ ಕೆಫೆ ಮತ್ತು ಮಾಹಿತಿ ಕಿಯೋಸ್ಕ್ಗಳನ್ನು ಸ್ಥಾಪಿಸಲಾಗಿದೆ. ಕೂಡಲೇ ಜನಪ್ರತಿನಿಧಿಗಳಿಂದ ಸೈಬರ್ ಕೆಫೆ ಕೇಂದ್ರಗಳನ್ನು ಪ್ರಾರಂಭಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕು ಎಂದು ಜಿಲ್ಲಾ ಗ್ರಂಥಾಲಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಶಾಲೆ ಆವರಣದಲ್ಲಿ 30×40 ಅಳತೆ ನಿವೇಶನ ಲಭ್ಯವಿದ್ದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಬಹುದಾಗಿದೆ. ಅದರಂತೆ ಅನುಷ್ಠಾನ ಏಜೆನ್ಸಿಗಳು ಕ್ರಮ ಕೈಗೊಳ್ಳಬೇಕು. ಶಾಲೆ ಇಲ್ಲದ ಊರು-ತಾಂಡಾಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸೂಕ್ತ ನಿವೇಶನವನ್ನು ಅಂಗನವಾಡಿ ಮೇಲ್ವಿಚಾರಕಿಯರಿಂದ ಗುರುತಿಸಿ ಗೊತ್ತುಪಡಿಸಿದ ಪ್ರಾಧಿಕಾರದಿಂದ ನಿವೇಶನ ಪಡೆದು ಕಟ್ಟಡ ನಿರ್ಮಾಣಕ್ಕೆ ಮುಂದಾಗಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದರು. ಲೋಕೋಪಯೋಗಿ, ನಿರ್ಮಿತಿ ಕೇಂದ್ರ, ಕೆ.ಆರ್.ಐ.ಡಿ.ಎಲ್, ಪಿಆರ್‌ಇಡಿ ಸೇರಿದಂತೆ ಇನ್ನಿತರ ಅನುಷ್ಠಾನ ಏಜೆನ್ಸಿಗಳ ಕಾಮಗಾರಿಗಳನ್ನು ಪರಿಶೀಲಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ, ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರುನ್ನಮ್, ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಉಪ ಕಾರ್ಯದರ್ಶಿ ಡಾ| ಬಿ.ಸುಶೀಲಾ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಎಚ್.ಕೆ.ಆರ್.ಡಿ.ಬಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಚುನಾಯಿತ ಜನಪ್ರತಿನಿಧಿಗಳಿಂದಲೇ ಪ್ರಸ್ತಾವನೆ ಪಡೆದು ಕ್ರಿಯಾ ಯೋಜನೆ ರೂಪಿಸಬೇಕೆಂದೇನಿಲ್ಲ. ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಒ ತಮ್ಮ ಹಂತದಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಪ್ರಮುಖ ಯೋಜನೆಗಳನ್ನು ಜಿಲ್ಲಾ ಸಲಹಾ ಸಮಿತಿ ಮೂಲಕ ಪ್ರಸ್ತಾವನೆ ಸಲ್ಲಿಸಬಹುದಾಗಿದೆ. ಮಂಡಳಿ ಈ ಹಿಂದೆ ಸಾಂಸ್ಥಿಕ ವಲಯ, ಸಂಘ-ಸಂಸ್ಥೆಗಳ ವಲಯ, ಮೂಲಸೌಕರ್ಯ ವಲಯವೆಂದು ನಿಗದಿಪಡಿಸಿ ಅನುದಾನ ಮೀಸಲಿಡುತಿತ್ತು. ಪ್ರಸಕ್ತ ಸಾಲಿನಿಂದ ಅದೆಲ್ಲವನ್ನು ಮಾರ್ಪಡಿಸಿ ಎರಡು ವಲಯಗಳಲ್ಲಿ ಅಂದರೆ ಸಾಮಾಜಿಕ ವಲಯ ಮತ್ತು ಸಾಮಾಜಿಕವಲ್ಲದ ವಲಯ ಎಂದು ಗುರುತಿಸಿ ಅನುದಾನ ಹಂಚಿಕೆ ಮಾಡಲಾಗುತ್ತಿದೆ.
•ಸುಬೋಧ ಯಾದವ,
ಹೈ.ಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.