ಪಕ್ಷೇತರರು ಸಚಿವರಾದರೆ ಸರ್ಕಾರ ಪತನ
Team Udayavani, Jun 3, 2019, 3:05 AM IST
ಬೆಂಗಳೂರು: ಪರಸ್ಪರರ ವಿರುದ್ಧ ಆರೋಪ-ಪ್ರತ್ಯಾರೋಪಗಳಲ್ಲೇ ತೊಡಗಿರುವ ರಾಜ್ಯದ ಮೈತ್ರಿ ಸರ್ಕಾರವು ಸಂಪುಟ ವಿಸ್ತರಣೆ ಮಾಡಿ, ಇಬ್ಬರು ಪಕ್ಷೇತರರನ್ನು ಸಚಿವರನ್ನಾಗಿ ಮಾಡಿದ ಕೂಡಲೇ ಕುಸಿಯುವುದನ್ನು ತಡೆಯಲಾಗದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಭವಿಷ್ಯ ನುಡಿದರು.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಾವು ಉಸ್ತುವಾರಿಯಾಗಿದ್ದ ತೆಲಂಗಾಣ ರಾಜ್ಯದಲ್ಲಿ ಬಿಜೆಪಿ ನಾಲ್ಕು ಸ್ಥಾನ ಗೆದ್ದಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ, ಬಿಜೆಪಿ ರಾಜ್ಯ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. 25 ಬಿಜೆಪಿ ಸಂಸದರು ಹಾಗೂ ಬಿಜೆಪಿ ಬೆಂಬಲಿತ ಪಕ್ಷೇತರರೊಬ್ಬರು ಸೇರಿ 26 ಸ್ಥಾನ ಗೆದ್ದಿದೆ. ಇದಕ್ಕೆ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಕಟ್ಟಿದ ಪಕ್ಷ ಸಂಘಟನೆ, ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪರವಾಗಿದ್ದ ಅಲೆ ಮತ್ತು ವರ್ಷವಿಡೀ ಪರಸ್ಪರ ಕಚ್ಚಾಡುತ್ತಲೇ ಇದ್ದ ರಾಜ್ಯ ಮೈತ್ರಿ ಸರ್ಕಾರ ಕಾರಣ ಎಂದು ವಿಶ್ಲೇಷಿಸಿದರು.
ಮೈತ್ರಿ ಪಕ್ಷಗಳ ನಾಯಕರು ದಿನ ಬೆಳಗಾದರೆ ಪರಸ್ಪರ ಬೈದಾಡಿಕೊಳ್ಳುತ್ತಾ ಇರುತ್ತಾರೆ. ಚುನಾವಣೆ ಸಂದರ್ಭದಲ್ಲಾದರೂ ಕಚ್ಚಾಡದೆ ಸುಮ್ಮನಿರುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು. ಆಗಾಗ್ಗೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಟೀಕಿಸುವುದು ಹೊರತುಪಡಿಸಿದರೆ ಬಹುತೇಕ ಪರಸ್ಪರರ ವಿರುದ್ಧವೇ ನಿಂದಿಸುತ್ತಿದ್ದರು ಎಂದು ಹೇಳಿದರು.
ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷರೇ ತಮ್ಮ ಪಕ್ಷದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರೆ, ಕಾಂಗ್ರೆಸ್‌ನ ಆರ್.ರೋಷನ್ ಬೇಗ್, ಸಚಿವ ಜಿ.ಟಿ.ದೇವೇಗೌಡ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಅತೃಪ್ತರನ್ನು ಸಮಾಧಾನಪಡಿಸಲು ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡುವ ತಂತ್ರ ಮೈತ್ರಿ ಪಕ್ಷಗಳು ಹೂಡಿವೆ. ಆದರೆ ಉಳಿದ ಅತೃಪ್ತರು ಏನು ಮಾಡುತ್ತಾರೆ?
ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವೇ? ಹಾಗಾಗಿ ಏನೆಲ್ಲಾ ಪ್ರಯತ್ನ ನಡೆಸಿದರೂ ಈ ಸರ್ಕಾರ ಉಳಿಯದು. ಆಡಳಿತ ಪಕ್ಷದ ಯಾವುದೇ ಶಾಸಕರು ರಾಜೀನಾಮೆ ನೀಡಿ ಉಪಚುನಾವಣೆ ಎದುರಾದರೂ ಚಿಂಚೋಳಿ ಉಪಚುನಾವಣೆ ರೀತಿಯಲ್ಲೇ ಬಿಜೆಪಿ ಗೆಲುವು ಸಾಧಿಸಲಿದೆ. ಮೈತ್ರಿ ಸರ್ಕಾರ ಪತನವಾದರೆ ಬಿಜೆಪಿ ಸರ್ಕಾರ ರಚನೆಗೆ ಹಿಂದೇಟು ಹಾಕುವುದಿಲ್ಲ ಎಂದು ತಿಳಿಸಿದರು.
ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಯುವ ಮೋರ್ಚಾ ಅಧ್ಯಕ್ಷರಾದ ಸಂಸದ ಪ್ರತಾಪ್‌ಸಿಂಹ ಹಾಗೂ ಪ್ರಧಾನ ಕಾರ್ಯದರ್ಶಿಯಾದ ನೂತನ ಸಂಸದ ತೇಜಸ್ವಿ ಸೂರ್ಯ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ವೈ.ರಾಘವೇಂದ್ರ, ತಮ್ಮೇಶ್‌ಗೌಡ, ಬಸವರಾಜ ಯಂಕಂಚಿ ಉಪಸ್ಥಿತರಿದ್ದರು.
ನಾಯಕರ ಬಾಲಂಗೋಚಿಗಳಾಗಬೇಡಿ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮತ್ತೂಬ್ಬ ನಾಯಕರ ಬಾಲಂಗೋಚಿಗಳಾಗದೆ ಜನರ ನಡುವೆ ಇದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಉಜ್ವಲ ಭವಿಷ್ಯವಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಕಿವಿಮಾತು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಂಘಟನೆಯಲ್ಲಿ ಸಕ್ರಿಯರಾಗಿದ್ದವರನ್ನು ಗುರುತಿಸಿ ಸ್ಥಾನ ನೀಡಲಾಗುತ್ತದೆ. ಬ್ರಹ್ಮಾಂಡವನ್ನೇ ಸುತ್ತಿ ಎಂದಾಗ ಶಿವ- ಪಾರ್ವತಿಯನ್ನೇ ಸುತ್ತಿ ನೀವೇ ಬ್ರಹ್ಮಾಂಡ ಎಂದ ಗಣಪತಿಯ ರೀತಿಯಲ್ಲಿ ಕೆಲವರು ನಾಯಕರ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತಾರೆ. ಒಂದೊಮ್ಮೆ ಆ ನಾಯಕನನ್ನು ಕೆಳಗಿಳಿಸಬೇಕಾದ ಸಮಯ ಬಂದರೆ ಅವರ ಹಿಂದಿರುವವರಿಗೂ ಅದೇ ಸ್ಥಿತಿ ಬರಲಿದೆ. ಹಾಗಾಗಿ ಬೂತ್ ಮಟ್ಟದಲ್ಲಿ ತಿರುಗಾಡಿ ಪಕ್ಷ ಸಂಘಟಿಸಿ ಎಂದು ಕರೆ ನೀಡಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು: ಸಂಸದ ಪ್ರತಾಪ್‌ಸಿಂಹ ಮಾತನಾಡಿ, “ಪ್ರತಾಪ್‌ಸಿಂಹ ಸೋಲು ತಮ್ಮ ಸೋಲು ಎಂದು ಮೈಸೂರಿನಲ್ಲಿ ಯಡಿಯೂರಪ್ಪ ಅವರು ಹೇಳಿದ ಮಾತು ನಾನು ಸಂಸದನಾಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಿರೀಕ್ಷೆಯಂತೆಯೇ ಮೋದಿಯವರು ಮತ್ತೆ ಪ್ರಧಾನಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರು ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಆಸೆ,’ ಎಂದು ಹೇಳಿದರು.
ನೂತನ ಸಂಸದ ತೇಜಸ್ವಿ ಸೂರ್ಯ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ತಮ್ಮೇಶ್‌ಗೌಡ, ಬಸವರಾಜ ಯಂಕಂಚಿ, ಬೆಂಗಳೂರು ನಗರ ಯುವ ಮೋರ್ಚಾ ಅಧ್ಯಕ್ಷ ಸಪ್ತಗಿರಿಗೌಡ, ನಗರ ಜಿಲ್ಲೆ ಅಧ್ಯಕ್ಷ ನವೀನ್ ರೆಡ್ಡಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.