ಟ್ರಂಪ್ ಮನವೊಲಿಸಲಿ ಕೇಂದ್ರ ಸರಕಾರ
Team Udayavani, Jun 3, 2019, 6:05 AM IST
ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಭಾರತ ದೇಶಗಳ ನಡುವೆ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ತಿಕ್ಕಾಟ ಇದೀಗ ತುಸು ಬಿಗಡಾಯಿಸಿದಂತೆ ಕಂಡುಬರುತ್ತಿದೆ. ವಾಣಿಜ್ಯ ವಿಚಾರದಲ್ಲಿ ಚೀನದೊಂದಿಗೆ ನೇರವಾಗಿ ಸಮರ ಆರಂಭಿಸಿರುವ ಅಮೆರಿಕ ಇದೀಗ ಇದೇ ಅಸ್ತ್ರವನ್ನು ಭಾರತದ ಮೇಲೂ ಪ್ರಯೋಗಿಸಲು ಮುಂದಾಗಿದೆ. ಇದರ ಮೊದಲ ಹೆಜ್ಜೆಯಾಗಿ ಸರಿಸುಮಾರು 44 ವರ್ಷಗಳ ಹಿಂದೆ ಸಾಮಾನ್ಯ ಆದ್ಯತೆ ನೀತಿಯಡಿ ಭಾರತಕ್ಕೆ ನೀಡಿದ್ದ ‘ಆದ್ಯತಾ ವ್ಯಾಪಾರ ಮಾನ್ಯತೆ’ಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಗೊಳಿಸುವ ಘೋಷಣೆ ಮಾಡಿದ್ದಾರೆ. ಅಮೆರಿಕದ ಈ ನಿರ್ಧಾರ ಜೂ. 5ರಿಂದಲೇ ಜಾರಿಗೆ ಬರಲಿದೆ.
ಅಮೆರಿಕದ ಈ ನಿರ್ಧಾರದಿಂದ ಪ್ರತಿವರ್ಷ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 38 ಸಾವಿರ ಕೋ. ರೂ. ಮೌಲ್ಯದ ವಸ್ತುಗಳ ವ್ಯಾಪಾರಕ್ಕೆ ಲಭಿಸುತ್ತಿದ್ದ ಸುಂಕ ವಿನಾಯಿತಿ ರದ್ದಾಗಲಿದೆ. ಅಮೆರಿಕದ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತ ಅವಕಾಶವನ್ನು ಭಾರತ ನೀಡುತ್ತಿಲ್ಲ, ಅಂದರೆ ಭಾರತ ತನ್ನ ಉತ್ಪನ್ನಗಳಿಗೆ ಹೆಚ್ಚಿನ ಸುಂಕವನ್ನು ವಿಧಿಸುತ್ತಿದೆ ಎಂಬುದು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರಕಾರದ ಆರೋಪವಾಗಿದೆ. ಈ ಸಂಬಂಧ ಅಮೆರಿಕ ಮಾ. 4 ರಂದೇ ಮುನ್ಸೂಚನೆ ನೀಡಿದ್ದಲ್ಲದೆ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಲೋಕಸಭೆ ಚುನಾವಣೆ ನಡೆಯುತ್ತಿದ್ದ ಕಾರಣದಿಂದಾಗಿ ಭಾರತ ಸರಕಾರ ಈ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳದೇ ಹಾಲಿ ನೀತಿಯನ್ನೇ ಮುಂದುವರಿಸುವಂತೆ ಅಮೆರಿಕಕ್ಕೆ ಮನವಿ ಮಾಡಿಕೊಂಡಿತ್ತು.
ಸದ್ಯದ ಲೆಕ್ಕಾಚಾರಗಳ ಪ್ರಕಾರ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸ್ಟೀಲ್, ಅಲ್ಯೂಮಿನಿಯಂ ಮತ್ತು ಎಲೆಕ್ಟ್ರಿಕ್ ಸಾಮಗ್ರಿ, ಜವಳಿ, ವಾಹನ ಸಹಿತ ಸುಮಾರು 2,000ಕ್ಕೂ ಅಧಿಕ ಉತ್ಪನ್ನಗಳಿಗೆ ಅಮೆರಿಕ ಇತರ ದೇಶಗಳ ಉತ್ಪನ್ನಗಳಿಗೆ ವಿಧಿಸುವ ಮಾದರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುಂಕವನ್ನು ವಿಧಿಸಲಿದೆ. ಇದು ಭಾರತದ ಒಟ್ಟಾರೆ ರಫ್ತು ವ್ಯವಹಾರದ ಮೇಲೆ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇದೆ. ಆದರೆ ಅಮೆರಿಕದ ಈ ನಿರ್ಧಾರದಿಂದ ಭಾರತದ ರಫ್ತು ಉದ್ಯಮದ ಮೇಲೆ ಬಲುದೊಡ್ಡ ಹೊಡೆತ ಬೀಳಲಾರದು ಎಂದು ವಾಣಿಜ್ಯ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದು, ಕಳೆದ ಸಾಲಿನಲ್ಲಿ ಅಮೆರಿಕಕ್ಕೆ ರಫ್ತು ಮಾಡಿದ 38,000 ಕೋ. ರೂ. ಮೌಲ್ಯದ ಉತ್ಪನ್ನಗಳ ಪೈಕಿ ಕೇವಲ 1,300 ಕೋ. ರೂ. ಮೌಲ್ಯದ ಉತ್ಪನ್ನಗಳಿಗೆ ಜಿಎಸ್‌ಪಿ ಅಡಿ ಸುಂಕ ವಿನಾಯಿತಿ ಲಭಿಸಿತ್ತು ಎಂದು ತಿಳಿಸಿದೆ.
ಭಾರತ ಆರ್ಥಿಕವಾಗಿ ಒಂದಿಷ್ಟು ಚೇತರಿಕೆ ಕಾಣುತ್ತಿರುವಂತೆಯೇ ಅಮೆರಿಕ ಈ ನಿರ್ಧಾರ ಕೈಗೊಂಡಿರುವುದು ದೇಶದ ಪಾಲಿಗೆ ತುಸು ಹಿನ್ನಡೆಯೇ ಸರಿ. ಕೆಲವು ತಿಂಗಳುಗಳ ಹಿಂದೆಯಷ್ಟೇ ಇರಾನ್‌ನ ತೈಲ ಖರೀದಿಗೆ ನಿರ್ಬಂಧ ಹೇರಿದ್ದ ಅಮೆರಿಕ ಇದರ ಮುಂದುವರಿದ ಭಾಗವಾಗಿ ಭಾರತವನ್ನು ಆದ್ಯತೆಯ ರಾಷ್ಟ್ರಗಳ ಪಟ್ಟಿಯಿಂದ ಕೈಬಿಡುವ ನಿರ್ಧಾರ ಕೈಗೊಂಡಿದೆ.
ಅಮೆರಿಕದ ಈ ನಿರ್ಧಾರಗಳು ಕೇವಲ ಭಾರತದ ರಫ್ತು ಉದ್ಯಮಕ್ಕೆ ಮಾತ್ರವಲ್ಲದೆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುವುದರಿಂದ ಈ ದಿಸೆಯಲ್ಲಿ ಕೇಂದ್ರ ಸರಕಾರ ತುಸು ಜಾಣ್ಮೆಯ ನಡೆಯನ್ನು ತನ್ನದಾಗಿಸಿಕೊಳ್ಳುವ ಅಗತ್ಯವಿದೆ. ಅಮೆರಿಕದೊಂದಿಗಿನ ವಾಣಿಜ್ಯ ಸಂಬಂಧವನ್ನು ಇನ್ನಷ್ಟು ಬಲಗೊಳಿಸಲು ಅಮೆರಿಕದ ಆದ್ಯತೆ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂದುವರಿಯುವ ಆವಶ್ಯಕತೆ ಇದ್ದು ಈ ದಿಸೆಯಲ್ಲಿ ಅಮೆರಿಕ ಅಧ್ಯಕ್ಷರ ಮನವೊಲಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.
ಪರಿಗಣಿಸದೇ ದೇಶದ ಹಿತಾಸಕ್ತಿ ಅದರಲ್ಲೂ ಮುಖ್ಯವಾಗಿ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧದ ದೃಷ್ಟಿಯಿಂದ ಕೇಂದ್ರ ಸರಕಾರ ಚಾಣಾಕ್ಷ ನಿರ್ಧಾರಕ್ಕೆ ಬರುವ ಅಗತ್ಯವಿದೆ. ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸರಕಾರಕ್ಕೆ ಆರಂಭದಲ್ಲಿಯೇ ಇದೊಂದು ಸವಾಲಾಗಿದೆ. ಎರಡೂ ದೇಶಗಳ ನಾಯಕರು ಈ ವಿಚಾರವಾಗಿ ಪರಸ್ಪರ ಸಮಾಲೋಚನೆ ನಡೆಸಿ ಉಭಯ ದೇಶಗಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಸೂಕ್ತ ನಿರ್ಧಾರಕ್ಕೆ ಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.