ಉಡುಪಿ ರಥಬೀದಿಯಲ್ಲಿ “ಬಾಲಗೋಪುರಮ್’: “ದೇವಾಲಯ, ಶಾಲೆ ಎರಡು ಕಣ್ಣುಗಳಿದ್ದಂತೆ’
Team Udayavani, Jun 4, 2019, 12:06 PM IST
ಉಡುಪಿ: ಒಂದು ಶರೀರಕ್ಕೆ ಎರಡು ಕಣ್ಣುಗಳಿದ್ದಂತೆ ಒಂದು ಊರಿಗೆ ದೇವಾಲಯ ಹಾಗೂ ಶಾಲೆ ಎರಡು ಕಣ್ಣುಗಳಿದ್ದಂತೆ. ಪಾಠದೊಂದಿಗೆ ಊಟ; ಊಟದೊಂದಿಗೆ ಪಾಠ ನೀಡುವ ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿರುವುದು ನಮ್ಮ ಹೆಮ್ಮೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ನುಡಿದರು.
ಶ್ರೀಕೃಷ್ಣ ಮಠದ ಸುವರ್ಣ ಗೋಪುರ ಸಮರ್ಪಣೋತ್ಸವದ ಅಂಗವಾಗಿ ಸೋಮವಾರ ರಥಬೀದಿಯಲ್ಲಿ ನಡೆದ “ಬಾಲಗೋಪುರಮ್’ ಶ್ರೀಕೃಷ್ಣ ಚಿಣ್ಣರ ಸಂತರ್ಪಣೆಯ ಫಲಾನುಭವಿ ಶಾಲಾ ಮಕ್ಕಳ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.
ಬಟ್ಟೆಯೂ ಮುಖ್ಯ
ಮಕ್ಕಳ ಒಳಗೆ ಗೋಪಾಲಕೃಷ್ಣನ ವಿಶೇಷ ಸನ್ನಿಧಾನವಿದೆ. ಗೋವುಗಳಲ್ಲಿ ಗೋಪಾಲ ಕೃಷ್ಣನಿದ್ದಂತೆ ಮಕ್ಕಳಲ್ಲೂ ದೇವರಿರುತ್ತಾರೆ. ಪುರಾಣಗಳಲ್ಲೂ ತಿಳಿದಂತೆ ದೇವರು ಮಕ್ಕಳೊಂದಿಗೆಯೇ ಕಾಲ ಕಳೆದದ್ದು ಜಾಸ್ತಿ. ಮಕ್ಕಳಿಗೆ ನೀಡುವ ವಸ್ತು ದೇವರಿಗೆ ತಲುಪುತ್ತದೆ. ಮಕ್ಕಳಿಗೆ ವಿದ್ಯೆಯೊಂದಿಗೆ ಮಧ್ಯಾಹ್ನದ ಊಟವನ್ನೂ ನೀಡಲಾಗುತ್ತಿದೆ. ಊಟದಷ್ಟೇ ಬಟ್ಟೆಯೂ ಮುಖ್ಯವಾಗಿದ್ದು, ಸೋದೆ ಶ್ರೀಗಳು ಸಮವಸ್ತ್ರ ವಿತರಿಸುವ ಮೂಲಕ ಹಿರಿದಾದ ಪಾತ್ರ ವಹಿಸಿದ್ದಾರೆ ಎಂದರು.
ವಸ್ತ್ರದಿಂದ ವ್ಯಕ್ತಿತ್ವ
ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮಾತನಾಡಿ, ವಸ್ತ್ರ ಮನುಷ್ಯ ಯಾವ ರೀತಿಯಲ್ಲಿದೆ ಎಂಬುವುದನ್ನು ತೋರಿಸುವ ಮಾಧ್ಯಮ. ಮನುಷ್ಯ ಧರಿಸಿರುವ ವಸ್ತ್ರದಿಂದ ಆತನ ವ್ಯಕ್ತಿತ್ವ ತಿಳಿಯಬಹುದು. ಜತೆಗೆ ನಾವು ಸೇವಿಸುವ ಆಹಾರಕ್ಕೂ ಅಷ್ಟೇ ಮಹತ್ವವಿದೆ. ಒಳ್ಳೆಯ ಆಹಾರ ಕ್ರಮದಿಂದ ಉತ್ತಮ ಬುದ್ಧಿಯೂ ಸಿದ್ಧಿಸುತ್ತದೆ ಎಂದರು.
ಸುವರ್ಣಗೋಪುರವನ್ನಾಗಿಸಿದ ಕೀರ್ತಿ
ಪಲಿಮಾರು ಶ್ರೀಗಳು ಬಾಲ ಗೋಪುರ, ಕಲಾಗೋಪುರ, ನಾದ ಗೋಪುರದಂತಹ ಗೋಪುರಗಳ ಸರಮಾಲೆಯನ್ನೇ ಉಡುಪಿಯಲ್ಲಿ ಸೃಷ್ಟಿಸಿದ್ದಾರೆ. ರಜತಪೀಠವನ್ನು ಸುವರ್ಣ ಗೋಪುರವನ್ನಾಗಿಸಿದ ಹೊಸ ಕೀರ್ತಿ ಪಲಿಮಾರು ಶ್ರೀಗಳಿಗೆ ಸಲ್ಲುತ್ತದೆ ಎಂದರು. ಶ್ರೀಕೃಷ್ಣ ಜಗತ್ತಿಗೆ ಕಲ್ಯಾಣ ಮಾಡಿದಂತೆ ಈ ವಿದ್ಯಾರ್ಥಿಗಳೂ ಜಗತ್ತಿಗೆ ಕಲ್ಯಾಣ ಮಾಡುವಂತಾಗಲಿ ಎಂದು ಹಾರೈಸಿದರು.
ಸಮವಸ್ತ್ರ ವಿತರಣೆ
ಈ ಸಂದರ್ಭದಲ್ಲಿ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಗೆ ಪಲಿಮಾರು ಶ್ರೀಗಳು ಗೌರವ ಸಮರ್ಪಣೆ ಮಾಡಿದರು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಸಮವಸ್ತ್ರ ವಿತರಿಸಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಚಿನ್ನ ಸಂತರ್ಪಣೆಯ ಒಕ್ಕೂಟದ ಮುಖ್ಯಸ್ಥ ಅಶೋಕ್‌ಕುಮಾರ್ ಮಾಡ ಅವರಿಗಾಗಿ ಶ್ರೇಯ ಪ್ರಾರ್ಥನೆ ಮಾಡಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೇದವ್ಯಾಸ ತಂತ್ರಿಗಳು ಪ್ರಸ್ತಾವನೆಗೈದರು. ವಾಸುದೇವ ಉಪಾಧ್ಯಾಯ, ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
7ನೇ ತರಗತಿ ವಿದ್ಯಾರ್ಥಿ
ಪರ್ಯಾಯ ಪಲಿಮಾರು ಶ್ರೀಗಳು ತಮ್ಮ ಕಳೆದ ಪರ್ಯಾಯದ ಅವಧಿಯಲ್ಲಿ ಸ್ವರ್ಣಗೋಪುರದ ಯೋಜನೆ ಹಾಕಿಕೊಂಡಿದ್ದರು. ಆವಾಗ ನಾನು 7ನೇ ತರಗತಿಯ ವಿದ್ಯಾರ್ಥಿಯಾಗಿದ್ದೆ. ಆ ಒಂದು ವರ್ಷ ಕೃಷ್ಣ ಮಾಸಾಚರಣೆ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನವನ್ನೂ ನೀಡಿ ಬಹುಮಾನ ಪಡೆದುಕೊಂಡಿದ್ದೆ. ಈಗ ಅದೇ ವಿದ್ಯಾರ್ಥಿಯಿಂದ ಪಲಿಮಾರು ಶ್ರೀಗಳು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುತ್ತಿದ್ದಾರೆ ಎಂದರೆ ಶ್ರೀ ಕೃಷ್ಣನ ಪ್ರಸಾದಕ್ಕೆ ಎಷ್ಟು ಪ್ರಾಮುಖ್ಯವಿದೆ ಎಂದು ತಿಳಿಯುತ್ತದೆ. ಈ ಮೂಲಕ ಪಲಿಮಾರು ಶ್ರೀಗಳು ಚಿನ್ನದ ಸ್ವಾಮಿಯಾಗಿದ್ದಾರೆ ಎಂದು ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಸ್ಮರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ; ಕಾರ್ಕಳ ಪ್ರಥಮ, ಹೆಬ್ರಿಗೆ ದ್ವಿತೀಯ ಸ್ಥಾನ
ಗೋವಂಶ ಸುರಕ್ಷೆಗಾಗಿ ಕೋಟಿ ವಿಷ್ಣುಸಹಸ್ರನಾಮ ಪಠನ, ಜಪ ಅಭಿಯಾನ: ವಿವಿಧ ಮಠಾಧೀಶರ ಬೆಂಬಲ
Udupi: ದಿಢೀರ್ ಅಸ್ವಸ್ಥ; ಅಂಬಾಗಿಲಿನ ವ್ಯಕ್ತಿಯೊಬ್ಬರು ಸಾವು
Udupi: ವಿದೇಶದಲ್ಲಿ ಎಂಪಿಎಚ್ ಸೀಟ್ ಭರವಸೆ; ಹಣ ಪಡೆದು ವಂಚನೆ: 3 ಮಂದಿಯ ಬಂಧನ