ಅಲ್ಪಾಯುಷಿ ಮೈತ್ರಿಕೂಟಗಳು
Team Udayavani, Jun 6, 2019, 6:10 AM IST
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಬಳಿಕ ಹಲವು ರಾಜ್ಯಗಳಲ್ಲಿ ವಿಪಕ್ಷಗಳ ಮೈತ್ರಿಕೂಟ ಶಿಥಿಲಗೊಳ್ಳುತ್ತಿದೆ. ಮುಖ್ಯವಾಗಿ ಕರ್ನಾಟಕ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳು ವಿಪಕ್ಷಗಳ ಹತಾಶ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿವೆ. ಈ ಚುನಾವಣೆ ವಿಪಕ್ಷಗಳಿಗೆ ಕೊಟ್ಟಿರುವ ಹೊಡೆತ ಏನು ಎನ್ನುವುದಕ್ಕೆ ಅವುಗಳೊಳಗಿನ ತಳಮಳವೇ ಸಾಕ್ಷಿ.
ಚುನಾವಣೆಗೂ ಮೊದಲು ಎಲ್ಲ ಸಮಾನ ಮನಸ್ಕ ಪಕ್ಷಗಳು ಸೇರಿ ಮಹಾಘಟಬಂಧನ್ ರಚಿಸಿಕೊಳ್ಳುವ ಪ್ರಯತ್ನ ವಿಫಲಗೊಂಡ ಬಳಿಕ ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದ್ದವು. ರಾಷ್ಟ್ರೀಯ ಲೋಕದಳ ಕಿರಿಯ ಪಾಲುದಾರನಾಗಿ ಈ ಮೈತ್ರಿಯನ್ನು ಸೇರಿಕೊಂಡಿತ್ತು. ಕರ್ನಾಟಕದಲ್ಲಿ ಅದಾಗಲೇ ಅಸ್ತಿತ್ವದಲ್ಲಿ ಇದ್ದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮತ್ತು ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ಜತೆಯಾಗಿ ಸ್ಪರ್ಧಿಸಿದ್ದವು.
ಈ ಪೈಕಿ ಹೆಚ್ಚು ಗಮನ ಸೆಳೆದದ್ದು ಉತ್ತರ ಪ್ರದೇಶದ ಎಸ್‌ಪಿ-ಬಿಎಸ್‌ಪಿ ಮೈತ್ರಿ. ಬಿಜೆಪಿಯ ಹಿಂದುತ್ವ ಅಜೆಂಡಾದ ಮೇಲೆ ದಲಿತರು ಮತ್ತು ಒಬಿಸಿ ವರ್ಗದ ಮತಗಳನ್ನು ಸೆಳೆಯುವ ತಂತ್ರಕ್ಕೆ ಪ್ರತಿಯಾಗಿ ಈ ಎರಡು ವರ್ಗಗಳನ್ನು ಪ್ರತಿನಿಧಿಸುವ ಎಸ್‌ಪಿ ಮತ್ತು ಬಿಎಸ್‌ಪಿ ಜತೆಯಾದರೆ ಗೆಲ್ಲಬಹುದು ಎಂಬ ಜಾತಿ ಲೆಕ್ಕಾಚಾರದಲ್ಲಿ ರಚಿಸಲ್ಪಟ್ಟ ಪ್ರತಿತಂತ್ರದ ಮೈತ್ರಿಯಿದು. ಬಿಜೆಪಿಯ ಓಟವನ್ನು ತಡೆಯಬೇಕೆಂಬ ಉದ್ದೇಶದಿಂದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಸ್‌ಪಿಯ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಪುತ್ರ ಅಖೀಲೇಶ್ ಯಾದವ್ ಬಹುಕಾಲದ ವೈಷಮ್ಯವನ್ನು ಮರೆತು ಜತೆಯಾದರು. ಕೆಲವು ಉಪಚುನಾವಣೆಗಳಲ್ಲಿ ಜತೆಯಾಗಿ ಸ್ಪರ್ಧಿಸಿ ದಕ್ಕಿದ ಗೆಲುವು ಅವರಿಗೆ ಸ್ಫೂರ್ತಿಯಾಗಿತ್ತು. ಆದರೆ ಲೋಕಸಭಾ ಚುನಾವಣೆಯ ಫಲಿತಾಂಶ ಮೈತ್ರಿಯ ಲೆಕ್ಕಾಚಾರವನ್ನೆಲ್ಲ ಬುಡಮೇಲು ಮಾಡಿದೆ. 80 ಸ್ಥಾನಗಳ ಪೈಕಿ ಮೈತ್ರಿಗೆ ಸಿಕ್ಕಿರುವುದು ಬರೀ 15 ಸ್ಥಾನಗಳು. 2014ರಲ್ಲಿ ಶೂನ್ಯ ಗಳಿಕೆ ಮಾಡಿದ್ದ ಬಿಎಸ್‌ಪಿಗೆ 10 ಸ್ಥಾನಗಳು ಸಿಕ್ಕಿದರೆ ಎಸ್‌ಪಿ 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಬಿಎಸ್‌ಪಿಗೆ ಸ್ಥಾನಗಳ ಲೆಕ್ಕದಲ್ಲಿ ಲಾಭವಾಗಿದ್ದರೂ ಫಲಿತಾಂಶ ನಿರೀಕ್ಷಿತ ಮಟ್ಟಕ್ಕೇರಲಿಲ್ಲ ಎಂಬ ಅಸಮಾಧಾನ ಮಾಯಾವತಿಯದ್ದು. ಹೀಗಾಗಿ ಅವರೇ ಈ ಅನುಕೂಲಸಿಂಧು ಮೈತ್ರಿಯಿಂದ ಮೊದಲು ಹೊರಗಡಿಯಿಟ್ಟರು. ಅಖೀಲೇಶ್ ಯಾದವ್ ಕೂಡಾ ಒತ್ತಾಯದ ಮೈತ್ರಿ ಬೇಡ ಎಂದು ಈಗ ಗುಡ್‌ಬೈ ಹೇಳಿದ್ದಾರೆ.
ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರೂ ವಿಪಕ್ಷ ನಾಯಕರಿಗೆ ಇನ್ನೂ ಜನರ ನಾಡಿಮಿಡಿತವನ್ನು ಅರಿಯಲು ಸಾಧ್ಯವಾಗಿಲ್ಲ. ಬಿಜೆಪಿಯ ಸೈದ್ಧಾಂತಿಕ, ಸಂಘಟನಾತ್ಮಕ ಮತ್ತು ಸಾಂಪತ್ತಿಕ ಬಲಗಳಿಗೆ ಸರಿಮಿಗಿಲಾಗುವ ಸಾಮರ್ಥ್ಯ ಸದ್ಯ ಯಾವ ಪಕ್ಷದಲ್ಲೂ ಇಲ್ಲ. ಅದಾಗ್ಯೂ ಫಲಿತಾಂಶದಿಂದ ಈ ಪಕ್ಷಗಳು ಯಾವ ಪಾಠವನ್ನೂ ಕಲಿತಿಲ್ಲ ಎನ್ನುವುದಕ್ಕೆ ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳ ನಡುವೆ ಮುಂದುವರಿದಿರುವ ಮುಸುಕಿನ ಗುದ್ದಾಟವೇ ಸಾಕ್ಷಿ.
ವಿಪಕ್ಷಗಳು ಈಗಲೂ ಜಾತಿ ಬಲದಿಂದ ಚುನಾವಣೆ ಗೆಲ್ಲಬಹುದು ಎಂದು ಭಾವಿಸಿದ್ದರೆ ಮುಂದಿನ ಚುನಾವಣೆಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ. ಜನರು ಜಾತಿ ಲೆಕ್ಕಾಚಾರವನ್ನು, ವಂಶ ಪಾರಂಪರ್ಯ ನಾಯಕತ್ವವನ್ನು ಮೀರಿ ತಮಗೆ ಯಾರು ಹಿತವರು ಎಂದು ಯೋಚಿಸುವಷ್ಟು ಪ್ರಬುದ್ಧರಾಗಿದ್ದಾರೆ ಎನ್ನುವುದನ್ನು 2019ರ ಲೋಕಸಭಾ ಚುನಾವಣೆ ಅಗತ್ಯಕ್ಕಿಂತಲೂ ಹೆಚ್ಚು ಸ್ಪಷ್ಟವಾಗಿಯೇ ತಿಳಿಸಿಕೊಟ್ಟಿದೆ. ಅದರಲ್ಲೂ ಬರೀ ಜಾತಿ ಬಲದಿಂದಲೇ ರಾಜಕೀಯ ಮಾಡುತ್ತಿರುವ ಪಕ್ಷಗಳು ಇನ್ನಾದರೂ ವಿಶಾಲವಾಗಿ ಚಿಂತಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಎಲ್ಲ ಕಾಲಕ್ಕೂ ಜಾತಿಯ ಹೆಸರೇಳಿ ಮತದಾರರಿಗೆ ಮಂಕುಬೂದಿ ಎರಚಲು ಸಾಧ್ಯವಿಲ್ಲ ಎನ್ನುವುದನ್ನು ಈ ಪಕ್ಷಗಳು ತಿಳಿದುಕೊಳ್ಳಬೇಕು.
ಮೈತ್ರಿ ಮಾಡಿಕೊಳ್ಳುವಾಗ ಎಲ್ಲರೂ ಸಮಾನ ಮನಸ್ಕ ಪಕ್ಷಗಳು ಒಂದಾಗುವುದು, ಸಮಾನ ಸೈದ್ಧಾಂತಿಕ ಚಿಂತನೆ ಎಂದೆಲ್ಲ ಹೇಳುತ್ತವೆ. ನಿಜವಾಗಿ ಇವುಗಳದ್ದೆಲ್ಲ ಅವಕಾಶವಾದಿ ರಾಜಕಾರಣವಷ್ಟೇ. ಇವೆಲ್ಲ ಅಲ್ಪಾಯುಷಿ ಮೈತ್ರಿಗಳು. ಅಧಿಕಾರಕ್ಕಾಗಿ ಇವರೆಲ್ಲ ಸಂದರ್ಭ ಬಂದಾಗ ಒಗ್ಗಟ್ಟಾಗುತ್ತಾರೆ ಎನ್ನುವುದು ಈಗ ಮತದಾರರಿಗೆ ಸ್ಪಷ್ಟವಾಗಿದೆ. ಹೀಗಾಗಿ ಅವರು ಈ ಸಲ ಮೈತ್ರಿಕೂಟಗಳನ್ನೆಲ್ಲ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಬಿಜೆಪಿಗೆ ಪರ್ಯಾಯವಾಗವಂಥ ಬಲಿಷ್ಠ ಪಕ್ಷ ಇಲ್ಲದಂತಾಗಿದೆ. ಪ್ರಜಾತಂತ್ರದ ಆರೋಗ್ಯದ ದೃಷ್ಟಿಯಿಂದ ಇದು ಬಹಳ ಅಪಾಯಕಾರಿ ಸ್ಥಿತಿ. ಆದರೆ ಹೀಗಾಗಲು ವಿಪಕ್ಷಗಳ ನಡುವಿನ ಗೊಂದಲವೇ ಕಾರಣ.ಈ ನಿಟ್ಟಿನಲ್ಲಿ ಅವುಗಳು ಆತ್ಮವಲೋಕನ ನಡೆಸಿದರೆ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.