ಮಾಸ್ತಿ ಎಂಬ ಆಸ್ತಿ
Team Udayavani, Jun 8, 2019, 6:24 AM IST
ಮಾಸ್ತಿ ಬದುಕಿದ್ದರೆ ಜೂ.6ಕ್ಕೆ ನೂರ ಇಪ್ಪತ್ತೆಂಟು ವರ್ಷ. ಆ ನೆನಪಲ್ಲಿ ಕನ್ನಡದ ಆಸ್ತಿಯನ್ನು ನೆನೆಯುವ.
ಕನ್ನಡದ ಆಸ್ತಿ ಎಂದಾಕ್ಷಣ ನೆನಪಾಗುವುದು ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್. ಕನ್ನಡಕ್ಕೆ ನಾಲ್ಕನೇಯ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಡಾ.ಮಾಸ್ತಿ ಅವರು, ಸಣ್ಣ ಕಥೆಗಳ ಜನಕರೆಂದೇ ಪ್ರಖ್ಯಾತಿ ಪಡೆದವರು.
ಮಾಸ್ತಿಯವರ ಊರು, ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ತಮಿಳುನಾಡು ಗಡಿ ಭಾಗವಾದ ಮಾಸ್ತಿ ಗ್ರಾಮ. ಮಾಸ್ತಿ ಮನೆತನದ ಹೆಸರು ಪೆರಿಯಾರ್. ಪೆರಿಯಾರ್ ಎಂದರೆ ದೊಡ್ಡ ಮನೆತನದವರು ಎಂದರ್ಥ, ಈ ಮನೆತನದ ಪೂರ್ವಜರೊಬ್ಬರು ಸುಲ್ತಾನರೊಬ್ಬರ ಬಳಿ ದಿವಾನರಾಗಿದ್ದರಂತೆ! ಇವರ ಮನೆತನದ ಮಹಿಳೆಯೊಬ್ಬರು ಸಹ ಮನ್ವೀತರೆ ಆಗಿದ್ದರಂತೆ. ಈ ಊರಿನ ಮಹಿಳೆಯೊಬ್ಬರು ಪತಿ ಸತ್ತಾಗ ಸಹಗಮನ ಪದ್ಧತಿ ಅನುಸರಿಸಿ ಮಹಾಸತಿ ಎನಿಸಿದ್ದರು. ಮಹಾಸತಿ ಎಂಬುದೇ ಕಾಲಾಂತರದಲ್ಲಿ ಮಾಸ್ತಿ ಎಂದು ಬದಲಾಯಿತು ಎಂಬ ನಂಬಿಕೆ ಹಲವರದು.
ಮಾಲೂರು ತಾಲ್ಲೂಕಿನ ಹುಂಗೇನಹಳ್ಳಿಯಲ್ಲಿ, ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲಮ್ಮ ದಂಪತಿಗೆ ಜೂನ್ 6. 1891ರಲ್ಲಿ ಜನಿಸಿದ ಮಗುವಿಗೆ ವೆಂಕಟೇಶ್ ಅಯ್ಯಂಗಾರ್ ಎಂಬ ಹೆಸರು ನಾಮಕರಣ ಮಾಡಲಾಯಿತು. ಒಂದು ಕಾಲಕ್ಕೆ ಶ್ರೀಮಂತಿಕೆಯಲ್ಲಿ ಬಾಳಿದ್ದ ಕುಟುಂಬ, ಮಾಸ್ತಿಯವರ ಹುಟ್ಟು ಕಾಲಕ್ಕೆ ಅವರ ವಿದ್ಯಾಭ್ಯಾಸ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಶಿಲ್ಪಿಗಳ ತವರೂರಾದ ಶಿವಾರಪಟ್ಟಣದಲ್ಲಿ ಪ್ರಾರಂಬಿಸಿ ಶ್ರೀರಂಗಪಟ್ಟಣ, ಮಳವಳ್ಳಿ, ಕೃಷ್ಣರಾಜಪೇಟೆಯ ಪ್ರೌಡಶಾಲೆಯಲ್ಲಿ ವಿದ್ಯಾಭ್ಯಾಸವಾಯಿತು.
ಮೈಸೂರಿನ ಸಿವಿಲ್ ಸರ್ವೀಸ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ 1930ರಲ್ಲಿ ಜಿಲ್ಲಾಧಿಕಾರಿಯಾಗಿ ಆಯ್ಕೆಯಾದ ಮಾಸ್ತಿ, ಕೋಲಾರ, ಮಧುಗಿರಿ, ಚಿಕ್ಕಮಗಳೂರಿನಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಹೆಸರುಗಳಿಸಿದರು.
ಮಾಸ್ತಿಯವರು “ಶ್ರೀನಿವಾಸ’ ಎಂಬ ಹೆಸರಿನಲ್ಲಿ ಸಾಹಿತ್ಯ ರಚಿಸಿದರು. 1920ರಲ್ಲಿ ಅವರ ಮೊದಲ ಕೃತಿ “ಸಣ್ಣ ಕಥೆಗಳು’ ಪ್ರಕಟವಾಯಿತು. ಈ ಪುಸ್ತಕದಲ್ಲಿ ಜನಸಾಮಾನ್ಯರ ಬದುಕನ್ನು ಬಹಳ ಸುಂದರವಾಗಿ ಚಿತ್ರಿಸಿದ್ದಾರೆ. ಕಲ್ಪನೆಗಿಂತ ಅವರ ವಾಸ್ತವಿಕ ಬದುಕಿನ ಚಿತ್ರಣ ತುಂಬ ಆಪ್ಯಾಯಮಾನವಾದುದು. “ಸುಬ್ಬಣ್ಣ’ ಕಾದಂಬರಿಯ ಸಂಗೀತಗಾರನೊಬ್ಬನ ಬದುಕನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಚೆನ್ನಬಸವನಾಯಕ ಕಾದಂಬರಿಯಲ್ಲಿ ಬಿದನೂರಿನ ರಾಜ ಮನೆತನದ ಏಳು-ಬಿಳುಗಳನ್ನು ಚಿತ್ರಿಸಿದ್ದಾರೆ. ಚಿಕ್ಕವೀರರಾಜೇಂದ್ರ, ಮಾಸ್ತಿಯವರು ಬರೆದ ಅಪೂರ್ವ ಕಾದಂಬರಿ ಮುಂತಾದವು ಮಾಸ್ತಿ ಅವರ ಕೃತಿಗಳು ಕನ್ನಡದ ಆಸ್ತಿ ಎಂದೇ ಕರೆಸಿಕೊಂಡ ಈ ಹಿರಿಯಣ್ಣನ ಜನನ ಮತ್ತು ಮರಣ ಒಂದೇ ದಿನದಲ್ಲಿ ಬಂದದ್ದು ವಿಸ್ಮಯದ ಸಂಗತಿ.
ಮಾಸ್ತಿ ಎಂ. ಮೂರ್ತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.