ಪೊಳಲಿ- ವಾಸ್ತುಶಿಲ್ಪದ “ಗರ್ಭಗುಡಿ’
ದೇವಾಲಯಕ್ಕೆ ಹೋದಾಗ ತಪ್ಪದೇ ಗರ್ಭಗುಡಿ ನೋಡಿ
Team Udayavani, Jun 8, 2019, 6:37 AM IST
ಪೊಳಲಿಯ ಸನ್ನಿಧಿಯಲ್ಲಿ ದೇವರಷ್ಟೇ ಆಕರ್ಷಕವಾಗಿರುವುದು ಗರ್ಭಗುಡಿ. ದೇಗುಲದ ಮಹತ್ವವನ್ನು ಸಾರುವ ವೇಸರ ಶೈಲಿಯ ಶಿಲ್ಪಗಳು ಇಲ್ಲಿವೆ. ಇದನ್ನು ನೋಡುತ್ತಾ ಹೋದರೆ ಇತಿಹಾಸ ತಿಳಿಯುವುದರ ಜೊತೆಗೆ, ಈ ಕಾಲದಲ್ಲೂ ಹೀಗೂ ಮಾಡಬಹುದಾ ಅನ್ನೋ ಕೌತುಕ ಹುಟ್ಟದೇ ಇರದು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಬಂಟ್ವಾಳದ ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿಧಿಯು ಇತ್ತೀಚೆಗಷ್ಟೇ ಪುನರ್ ನಿರ್ಮಾಣಗೊಂಡು, ವಿಶಿಷ್ಟ ವಾಸ್ತುಶಿಲ್ಪದೊಂದಿಗೆ ಆಕರ್ಷಿಸುತ್ತಿದೆ. ನೀವು ಈ ದೇವಾಲಯಕ್ಕೆ ಹೋದರೆ, ದೇವರ ಜೊತೆಗೆ ಗರ್ಭಗುಡಿಯ ಸುತ್ತಮುತ್ತ ಸೂಕ್ಷ್ಮವಾಗಿ ಗಮನಿಸುವುದನ್ನು ಮರೆಯಬೇಡಿ.
ಪೊಳಲಿ ಕ್ಷೇತ್ರವನ್ನು ಸುರಥ ಮಹಾರಾಜ ನಿರ್ಮಾಣ ಮಾಡಿದ್ದಾನೆ ಎಂಬ ಕಥೆಯನ್ನು ಹೇಳುವ ಕೆತ್ತನೆಗಳು ಗರ್ಭಗುಡಿಯಲ್ಲಿವೆ. ಇದು ದೀರ್ಘ ಚದುರಸ ಗರ್ಭಗೃಹ ಶೈಲಿಯಲ್ಲಿದೆ. ಹೊರಭಾಗ ಮರದ ದಳಿಯ ಕೆತ್ತನೆಗಳನ್ನು ಗಮನಿಸಿದಾಗ ಈ ವಿನೂತನ ಶಿಲ್ಪಕಲೆಯ ವಿಶಿಷ್ಟತೆ ಅರಿವಾಗುತ್ತದೆ.
ದಂಡಯಾತ್ರೆಯಲ್ಲಿ ಸೋತ ಸುರಥ ಮಹಾರಾಜನು ಪೊಳಲಿ ಪರಿಸರದಲ್ಲಿ ಮಲಗಿರುವಾಗ ಆತನಿಗೆ ಒಂದು ಕನಸು ಬಿದ್ದು, ಕಡುಶರ್ಕರಾದಿ ಮೃಣ್ಮಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವಂತೆ ಆದೇಶವಾಗುತ್ತದೆ. ಅದೇ ರೀತಿ ಸುರಥ ಮಹಾರಾಜ ದೇವಾಲಯ ನಿರ್ಮಿಸಿದ್ದು. ಆದರೆ, ಈ ನಿರ್ಮಾಣ ಕಾರ್ಯ ಹೇಗಾಯಿತು, ಕಲ್ಲುಗಳನ್ನು ಎಲ್ಲಿಂದ ತರಲಾಗಿದೆ? ಶಿಲ್ಪಿಗಳು ಯಾರು, ಶೂಲ ಪ್ರತಿಷ್ಠೆ ಆಗಿದದ್ದು ಹೇಗೆ… ಈ ಎಲ್ಲಾ ಕೌತುಕಗಳಿಗೂ ಇಲ್ಲಿನ ಕೆತ್ತನಗಳಲ್ಲಿ ಉತ್ತರ ಸಿಗುತ್ತದೆ. ಸುರಥ ರಾಜನ ಬಳಿಕ ಚೌಟ ಮಹಾರಾಜನ ಕಾಲದ ಕತೆಯನ್ನು ಕೆಳಭಾಗದ ಕಲ್ಲಿನ ವೇದಿಕೆ ಭಾಗದಲ್ಲಿ ವಿವರಿಸಲಾಗಿದೆ. ಪುತ್ತಿಗೆ ದೇಗುಲದಲ್ಲಿ ಜಾತ್ರೆ ಬೂಳ್ಯ ಇಡುವ ಪದ್ಧತಿ, ದೇಗುಲಕ್ಕೆ ಬಂದು ಕಿವಿಯಲ್ಲಿ ಹೇಳಿ ಡಂಗುರ ಸಾರುವ ಪದ್ಧತಿ, ಜಾತ್ರೆಯ ಪದ್ಧತಿ, ಪೊಳಲಿ ಚೆಂಡಿನ ವಿಶೇಷತೆ, ಗುತ್ತಿನ ಮನೆತನ, ರಥಗಳು ಹೀಗೆ ಅನೇಕ ವಿಷಯಗಳನ್ನು ಸುಮಾರು 25 ಚಿತ್ರಗಳ ಮೂಲಕ ಉಲ್ಲೇಖೀಸಿದ್ದಾರೆ. ಕಲ್ಲಿನ ಭಾಗದಲ್ಲೇ ಮರದ ಕೆತ್ತನೆಯೂ ಆಗಿದೆ. ಕೇರಳ, ತಮಿಳುನಾಡು ಭಾಗದ ಧಾರ್ಮಿಕ ಕ್ಷೇತ್ರಗಳಲ್ಲಿ ಇಂಥ ಕೆತ್ತನೆಗಳನ್ನು ಕಾಣಬಹುದು. ದೇವಾಲಯ ವಿಶೇಷ ಆಕರ್ಷಣೆಗೆ ಕಾರಣವಾಗಿದ್ದು, ಶಿಲ್ಪಿಗಳ ಇಂಥ ಕೈ ಚಳಕದಿಂದ.
ವಾಸ್ತುಶಿಲ್ಪದ ಪ್ರಕಾರ ದೇವಾಲಯಗಳ ನಿರ್ಮಾಣದಲ್ಲಿ ವೇಸರ, ನಾಗರ, ದ್ರಾವಿಡ ಎಂಬ ಮೂರು ಶೈಲಿಗಳಿವೆ. ಪೊಳಲಿ ದೇಗುಲವು ವೇಸರ ಶೈಲಿಯ ದೀರ್ಘ ಚದುರಸ ಮುಖಾಯಾಮಯುಕ್ತ ಗರ್ಭಗೃಹವಾಗಿದೆಯಂತೆ.
ಗರ್ಭಗೃಹದ ನಿರ್ಮಾಣಕ್ಕೂ ಸಾಂಪ್ರದಾಯಿಕ ಶೈಲಿಯನ್ನೇ ಅನುಸರಿಸಲಾಗಿದೆ. ಅಂದರೆ, ಸುರಥ ಮಹಾರಾಜನ ಕಾಲದಲ್ಲಿ ಯಾವ ವಸ್ತುಗಳನ್ನು ಬಳಸಲಾಗಿದೆಯೋ ಅದೇ ರೀತಿ ಈಗಿನ ನಿರ್ಮಾಣವನ್ನು ಮಾಡಲಾಗಿದೆ. ಗರ್ಭಗುಡಿಗೆ ಒಂದೇ ಜಾತಿಯ ಮರವನ್ನು ಉಪಯೋಗಿಸಿರುವುದೂ ಇನ್ನೊಂದು ವಿಶೇಷ.
ಗರ್ಭಗುಡಿಯ ಹೊರಭಾಗದಲ್ಲಿ ಹಾಗೂ ಕೆಳಗಿನ ಕಲ್ಲಿನ ಭಾಗದಲ್ಲಿ ಕ್ಷೇತ್ರದ ಇತಿಹಾಸ ಸಾರುವ ಕೆತ್ತನೆಯ ಚಿತ್ರಗಳನ್ನು ಬಳಸಲಾಗಿದೆ. ಇಂಥ ಕೆತ್ತನೆಗಳು ಕ್ಷೇತ್ರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿವೆ ಎಂದು ವಾಸ್ತುಶಿಲ್ಪಿ ಮಹೇಶ ಭಟ್ ಮುನಿಯಂಗಳ ಅವರು ವಿವರಿಸುತ್ತಾರೆ.
ಅತ್ಯಂತ ಎತ್ತರ ಹಾಗೂ ವಿಶಿಷ್ಟ ಮೃಣ್ಮಯ(ಮಣ್ಣಿನ) ಮೂರ್ತಿಯಾಗಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಹಿಂದೆ, ಕಡುಗೆಂಪು ವರ್ಣದಲ್ಲಿ ಶೋಭಿಸುತ್ತಿದ್ದಳು. ಆದರೆ ಈಗ ತಾಯಿ ಚಂದನ ವದನಾರಿಯಾಗಿ ಭಕ್ತರನ್ನು ಹರಸುತ್ತಿದ್ದಾಳೆ. ಕಡುಶರ್ಕರ ಲೇಪನದ ಮೂಲಕ ದೇವಿಯ ಮುಖವರ್ಣಿಕೆಯು ವಿಶೇಷ ರೀತಿಯಲ್ಲಿ ಕಂಗೊಳಿಸುತ್ತಿದೆ.
ಹಿಂದೆ ದೇವಿಯನ್ನು ಲೇಪಾಷ್ಟಬಂಧ ಲೇಪನದಿಂದ ಸಿಂಗಾರಗೊಳಿಸಲಾಗುತ್ತಿತ್ತು. ಅಂದರೆ ಪ್ರಾಕೃತಿಕವಾಗಿ ಲಭ್ಯವಾಗುವ 8 ವಿಧದ ಮಣ್ಣು ಸೇರಿದಂತೆ 64 ದ್ರವ್ಯಗಳ ಮೂಲಕ ಲೇಪಾಷ್ಟಬಂಧವನ್ನು ತಯಾರಿಸಲಾಗುತ್ತಿತ್ತು. ಈ ರೀತಿಯ ಲೇಪನದಿಂದ ದೇವಿಯು ಕಡುಕೆಂಪು ವರ್ಣದಲ್ಲಿ ಕಂಗೊಳಿಸುತ್ತಿದ್ದಳು. ಆದರೆ ಜೀರ್ಣೋದ್ಧಾರದ ಸಂದರ್ಭದಲ್ಲಿ ತಜ್ಞ ಕೃಷ್ಣ ನಂಬೂದಿರಿಪಾಡ್ ಹಾಗೂ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಕೇರಳ ತಜ್ಞರು ಕಡುಶರ್ಕರ ಲೇಪನ ಮುಖೇನ ದೇವಿಯ ಮುಖವರ್ಣಿಕೆ ಚಿತ್ರಿಸಿದ್ದಾರೆ.
ಕಡುಶರ್ಕರ ತಯಾರಿ ಹೀಗೆ…
ಸುಮಾರು 64 ಬಗೆಯ ಗಿಡ ಮೂಲಿಕೆಗಳ ಕಷಾಯವನ್ನು ತಯಾರಿಸಿ 45 ದಿನಗಳ ಕಾಲ ಇಡಲಾಗುತ್ತದೆ. ಜತೆಗೆ 32 ಬಗೆಯ ಮಣ್ಣನ್ನು ಕೂಡ ಹದ ಮಾಡುವುದಕ್ಕೆಂದು, 45 ದಿನಗಳ ಕಾಲ ಮುಚ್ಚಿ ಇಡಲಾಗುತ್ತದೆ. ಮುಂದೆ ಬೆಳ್ಳಿ, ಚಿನ್ನ, ತಾಮ್ರ ಸಹಿತ ಪಂಚಲೋಹದ ಹುಡಿಯನ್ನು ಮಿಶ್ರಣಗೊಳಿಸಲಾಗುತ್ತದೆ. ಈ ರೀತಿಯಲ್ಲಿ ಕಡುಶರ್ಕರ ಸಿದ್ಧವಾಗುತ್ತದೆ.
ಮುಂದೆ ಮೃಣ್ಮಯ ಮೂರ್ತಿಯ ಹಾನಿಯಾದ ಭಾಗಕ್ಕೆ ಕಡುಶರ್ಕರ ಲೇಪನ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಬಹಳ ಎಚ್ಚರಿಕೆಯಿಂದ ಈ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಇದು ಪೂರ್ತಿಗೊಂಡ ಬಳಿಕ ಬಿಳಿ, ಹಳದಿ, ಕಪ್ಪು, ಕೆಂಪು, ಹಸಿರು ಬಣ್ಣದ ಮೂಲಕ ಮೂರ್ತಿಯ ಮುಖವನ್ನು ಸಿಂಗಾರಗೊಳಿಸಲಾಗುತ್ತದೆ. ಇದರ ಕುರಿತು ತಂತ್ರ ಸಂಶಯ, ಕುಳಿಕ್ಕಾಟು ಪಚ್ಚ ಗ್ರಂಥದಲ್ಲಿ ಉಲ್ಲೇಖವಿದೆ.
ಉತ್ತರ ಭಾರತದ ಹಿಮಾಲಯ ಸೇರಿದಂತೆ ದೇಶದ ಹಲವು ಕಡೆಗಳ ಅಪರೂಪದ ಗಿಡಮೂಲಿಕೆ, ನದಿ, ಸಮುದ್ರ, ಗದ್ದೆಯ ಆಳದ ಮಣ್ಣು, ಆವೆ, ಹುತ್ತದ ಮಣ್ಣು, ಗಜ ಮೃತ್ತಿಕೆ, ಗೋವಿನ ಮೃತ್ತಿಕೆ ಸಹಿತ ಹಲವು ವಸ್ತುಗಳ ಮೂಲಕ ಕಡುಶರ್ಕರವನ್ನು ತಯಾರಿಸಲಾಗಿದೆ. ವಿಶೇಷವೆಂದರೆ ಸುಮಾರು 3 ತಿಂಗಳ ಪರಿಶ್ರಮದ ಮೂಲಕ ಈ ಲೇಪನ ತಯಾರಿಸಲಾಗುತ್ತದೆ.
ಕಿರಣ್ ಸರಪಾಡಿ
ಚಿತ್ರಗಳು- ಸತೀಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.