ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Jun 8, 2019, 6:00 AM IST
ಲಾಟರಿ ಏಜೆಂಟ್‌ನ ನಗದು, ಫೋನ್
ಎಗರಿಸಿದ ಪ್ರಕರಣ : ಇಬ್ಬರ ಬಂಧನ
ಕಾಸರಗೋಡು: ಲಾಟರಿ ಏಜೆಂಟ್ ಕಲ್ಲಕಟ್ಟ ನಿವಾಸಿ ಅಶೋಕನ್ ಅವರ ಮೊಬೈಲ್ ಫೋನ್, 1,500 ರೂ. ಇದ್ದ ಪರ್ಸ್ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಧೂರು ಕಲ್ಲಕಟ್ಟ ನಿವಾಸಿ ಮೊಹಮ್ಮದ್ ಸಾಲಿ (22) ಮತ್ತು 17 ವರ್ಷ ಪ್ರಾಯದ ಬಾಲಕನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
2018ರ ಮಾರ್ಚ್ 21ರಂದು ರಾತ್ರಿ ಮನೆಗೆ ನಡೆದು ಹೋಗುತ್ತಿದ್ದಾಗ ದಾರಿ ಮಧ್ಯೆ ಪರ್ಸ್ ಎಗರಿಸಿದ ಘಟನೆ ನಡೆದಿತ್ತು. ಅಂದು ಬಂಧಿತ ಇಬ್ಬರು ಆರೋಪಿಗಳ ಸಹಿತ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು. ಈ ಪ್ರಕರಣದ ಇನ್ನೋರ್ವ ಆರೋಪಿ ಕೊಲ್ಲಿಗೆ ಪರಾರಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ನಿಗೂಢ ಸಾವು : ತೀವ್ರ ತನಿಖೆ
ಕುಂಬಳೆ: ಇಚ್ಲಂಗೋಡು ಪಾಣಂ ವೀಟಿಲ್ ಅಬೂಬಕ್ಕರ್ ಅವರ ಪತ್ನಿ ಮರಿಯುಮ್ಮ (49) ಅವರ ನಿಗೂಢ ಸಾವಿಗೆ ಸಂಬಂಧಿಸಿ ಕುಂಬಳೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಮರಿಯುಮ್ಮ ಅವರ ಸಾವಿನ ಬಗ್ಗೆ ನಿಗೂಢತೆ ವ್ಯಕ್ತಪಡಿಸಿ ಅವರ ಪುತ್ರಿಯೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೂರು ನೀಡಿದ್ದರು. ಅದರಂತೆ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಎಪ್ರಿಲ್ 7ರಂದು ಮರಿಯುಮ್ಮ ಮನೆಯ ಬೆಡ್ ರೂಂನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನೆಲದಲ್ಲಿ ಇದ್ದ ಮೃತದೇಹದ ಮೂಗು ಹಾಗೂ ಕಿವಿಯಿಂದ ರಕ್ತ ಒಸರುತ್ತಿತ್ತೆಂದು ಹೇಳಲಾಗುತ್ತಿದೆ. ಇದು ಮೃತದೇಹಕ್ಕೆ ಸ್ನಾನ ಮಾಡಿಸಿದವರ ಗಮನಕ್ಕೂ ಬಂದಿತ್ತು ಎನ್ನಲಾಗಿದೆ. ಮೃತದೇಹವನ್ನು ಮೊದಲು ಕಂಡ ಯುವಕ ಹಾಗೂ ಮೃತದೇಹಕ್ಕೆ ಸ್ನಾನ ಮಾಡಿಸಿದವರ ಸಹಿತ ಹಲವರಿಂದ ಪೊಲೀಸರು ಹೇಳಿಕೆ ಸಂಗ್ರಹಿಸಿದ್ದಾರೆ.
ಕಾರು-ಸ್ಕೂಟರ್ ಢಿಕ್ಕಿ
ನೀರ್ಚಾಲು: ನೀರ್ಚಾಲು ಮೇಲಿನ ಪೇಟೆಯಲ್ಲಿ ಕಾರು-ಸ್ಕೂಟರ್ ಢಿಕ್ಕಿ ಹೊಡೆದು ಬದಿಯಡ್ಕ ಬಸ್ ನಿಲ್ದಾಣದಲ್ಲಿ ಪತ್ರಿಕೆ ಮಾರಾಟ ಮಾಡುವ ಪೊಯೆÂಕಂಡ ನಿವಾಸಿ ಬಾಲಕೃಷ್ಣ(54) ಅವರು ಗಾಯಗೊಂಡಿದ್ದಾರೆ. ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಹಲ್ಲೆ ಪ್ರಕರಣ : ಸಜೆ
ಕಾಸರಗೋಡು: 2012ರ ಸೆ. 6ರಂದು ಕಾಸರಗೋಡು ನಗರದ ಐಸಿಐಸಿಐ ಬ್ಯಾಂಕ್‌ನ ಶಾಖೆಯ ಮೆಟ್ಟಿಲಲ್ಲಿ ಕೂಡ್ಲು ನಿವಾಸಿ ಸುಧೀಶ್ ಕುಮಾರ್ ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೂಡ್ಲು ಕೇಳುಗುಡ್ಡೆ ಹಿಝತ್‌ನಗರದ ಮೊಹಮ್ಮದ್ ಹಾರಿಸ್(21)ಗೆ ಕಾಸರಗೋಡು ಸಿಜೆಎಂ ನ್ಯಾಯಾಲಯ ಒಂದು ಸೆಕ್ಷನ್‌ನಲ್ಲಿ ಒಂದು ತಿಂಗಳು, ಎರಡು ಸೆಕ್ಷನ್‌ಗಳಲ್ಲಿ ತಲಾ ಎರಡು ತಿಂಗಳು ಸಜೆ ಸಹಿತ ಒಟ್ಟು ಐದು ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದೆ. ಸಜೆಯನ್ನು ಒಟ್ಟಿಗೆ ಎರಡು ತಿಂಗಳಲ್ಲಾಗಿ ಅನುಭವಿಸಿದರೆ ಸಾಕೆಂದೂ ತೀರ್ಪಿನಲ್ಲಿ ತಿಳಿಸಿದೆ.
ಲೈಂಗಿಕ ಪ್ರಚೋದನೆ ಯತ್ನ :
ಇಬ್ಬರಿಗೆ ಸಜೆ, ದಂಡ
ಕಾಸರಗೋಡು: ಹದಿನೈದು ವರ್ಷದ ಬಾಲಕಿಗೆ ಆಮಿಷವೊಡ್ಡಿ ಲೈಂಗಿಕ ಪ್ರಚೋದನೆ ನೀಡಲೆತ್ನಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ಪ್ರಥಮ) ತಲಾ ಮೂರು ವರ್ಷ ಕಠಿನ ಸಜೆ ಮತ್ತು 10,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬೇಳ ಉಳ್ಳೋಡಿ ಚೇಡೆಕ್ಕಲ್ ಹೌಸಿನ ಚೋಮ (47) ಮತ್ತು ಕುಂಬಳೆ ಕೊಯಿಪ್ಪಾಡಿ ಪೆರುವಾಡಿ ಮುಳಯಂ ಹೌಸಿನ ಸಿದ್ದಿಕ್(48)ಗೆ ಶಿಕ್ಷೆ ವಿಧಿಸಲಾಗಿದೆ.
ದಂಡ ಪಾವತಿಸದಿದ್ದಲ್ಲಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. ಕುಂಬಳೆ ಪೊಲೀಸರು ಈ ಬಗ್ಗೆ ಕೇಸು ದಾಖಲಿಸಿಕೊಂಡಿದ್ದರು.
ಘರ್ಷಣೆ : ಐವರಿಗೆ ಗಾಯ
ಮುಳ್ಳೇರಿಯ: ಬೆಳ್ಳೂರು ಕುಳದಪಾರೆಯಲ್ಲಿ ಎರಡು ತಂಡಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡ ಸಿಪಿಎಂ ನೇತಾರ ಕುಳದಪಾರೆಯ ಶಶಿಧರ, ಸ್ನೇಹಿತರಾದ ಸುಜಿತ್, ಮಹೇಶ್, ಶಶಿಧರ ಅವರ ಪತ್ನಿ ಜಯಂತಿ ಅವರನ್ನು ಚೆಂಗಳದ ಆಸ್ಪತ್ರೆಗೂ, ಬಿಜೆಪಿ ಕಾರ್ಯಕರ್ತ ಹರ್ಷಿತ್ ಅವರನ್ನು ಕಾಸರಗೋಡಿನ ಜನರಲ್ ಆಸ್ಪತೆಗೂ ಸೇರಿಸಲಾಗಿದೆ.
ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ
ಪ್ರಕರಣ: ಆರೋಪಿಗಳ ಖುಲಾಸೆ
ಕಾಸರಗೋಡು: ಮಧೂರು ದೇವಸ್ಥಾನ ಪರಿಸರದಲ್ಲಿ 2013ರ ಎಪ್ರಿಲ್ 14ರಂದು ಫ್ಲೆಕ್ಸ್ ಬೋರ್ಡ್ ತೆರವುಗೊಳಿಸುವ ವಿಷಯದಲ್ಲಿ ಉಂಟಾದ ಘರ್ಷಣೆಯಲ್ಲಿ ಅಂದು ವಿದ್ಯಾನಗರ ಪೊಲೀಸ್ ಠಾಣೆಯ ಎಸ್.ಐ. ಆಗಿದ್ದ ಉತ್ತಮ್‌ದಾಸ್ ಅವರಿಗೆ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ ಹಲ್ಲೆಗೊಳಿಸಲಾಯಿತೆಂದು ಆರೋಪಿಸಿ ವಿದ್ಯಾನಗರ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಕಾಸರಗೋಡು ಸಿಜೆಎಂ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಮಧೂರು ಪರಿಸರ ನಿವಾಸಿಗಳಾದ ಧನಂಜಯನ್ (22), ಪ್ರಸನ್ನ ಕುಮಾರ್ (25), ಸಂದೀಪ್ (22), ವಿಜಯನ್ (25), ರಾಘವನ್ (27) ಮತ್ತು ವಿಶ್ವನಾಥ (42) ಅವರನ್ನು ಖುಲಾಸೆಗೊಳಿಸಿದೆ.
ದೇವಸ್ಥಾನ ಪರಿಸರದಲ್ಲಿ ಚೆಗುವರ ಅವರನ್ನು ಆಕ್ಷೇಪಿಸುವ ರೀತಿಯಲ್ಲಿ ಫ್ಲೆಕ್ಸ್ ಬೋರ್ಡ್ ಸ್ಥಾಪಿಸಲಾಗಿತ್ತೆಂದೂ ಅದನ್ನು ಪೊಲೀಸರು ತೆರವುಗೊಳಿಸಲು ಬಂದಾಗ ಘರ್ಷಣೆಗೆ ದಾರಿ ಮಾಡಿಕೊಟ್ಟಿದ್ದು, ಪೊಲೀಸರು ಕೇಸು ದಾಖಲಿಸಿದ್ದರು.