ನಂ. 1 ಕುಕ್ಕೆ ದೇಗುಲಕ್ಕೆ ಅಭದ್ರತೆಯ ಕರಿನೆರಳು!
ದೇವಸ್ಥಾನದ ಆಸ್ತಿ-ಪಾಸ್ತಿ ರಕ್ಷಣೆ ಜತೆಗೆ ಭಕ್ತರ ಹಿತರಕ್ಷಣೆಗೂ ಇರಲಿ ಒತ್ತು
Team Udayavani, Jun 8, 2019, 6:00 AM IST
ಸುಬ್ರಹ್ಮಣ್ಯ: ರಾಜ್ಯದ ನಂ. 1 ದೇವ ಸ್ಥಾನ ಎನಿಸಿಕೊಂಡಿರುವ ಕುಕ್ಕೆ ಸುಬ್ರಹ್ಮಣ್ಯವು ಅಭದ್ರತೆಯ ಭೀತಿ ಎದುರಿಸುತ್ತಿದೆ. ಧಾರ್ಮಿಕ ದತ್ತಿ ಇಲಾಖೆಯ ಎ ಮತ್ತು ಬಿ ಗ್ರೇಡ್ ದೇಗುಲಗಳು ತಮ್ಮದೇ ಭದ್ರತಾ ವ್ಯವಸ್ಥೆ ಹೊಂದಿರಬೇಕೆಂಬುದು ನಿಯಮ. ಆದರೆ ಅದು ಎಷ್ಟರ ಮಟ್ಟಿಗೆ ಜಾರಿಯಲ್ಲಿದೆ? ಸಿಬಂದಿ ಸಂಖ್ಯೆ ಎಷ್ಟಿದೆ? ನಿಯಮಗಳೆಲ್ಲ ಪಾಲನೆಯಾಗುತ್ತಿವೆಯೇ ಎನ್ನುವುದು ಪ್ರಶ್ನೆ.
ಅಪಾರ ಸ್ಥಿರಾಸ್ತಿ ಹೊಂದಿರುವ ಕುಕ್ಕೆ ದೇಗುಲಕ್ಕೆ ಭದ್ರತೆಯದ್ದೇ ಸಮಸ್ಯೆ. ಸಿಬಂದಿ ಇದ್ದರೂ ಅವರು ಸಾಕಷ್ಟು ತರಬೇತಿ ಹೊಂದಿದವರಲ್ಲ. ಅಗತ್ಯವಾದ ಶಸ್ತ್ರಾಸ್ತ್ರಗಳೂ ಇಲ್ಲಿಲ್ಲ. ದೇಗುಲದ ಮುಖ್ಯ ದ್ವಾರದಲ್ಲೇ ತಪಾಸಣೆ ವ್ಯವಸ್ಥೆ ಇಲ್ಲ. ಯಾರು ಕೂಡ ನೇರವಾಗಿ ಮುನ್ನುಗ್ಗಿ ಹೋಗಬಹುದು.
ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಕರ್ತವ್ಯಕ್ಕೆಂದು 16 ಮಂದಿ ಪಹರೆಯವರು, 40 ಖಾಸಗಿ ಭದ್ರತಾ ಸಿಬಂದಿ, 25 ಗೃಹರಕ್ಷಕರು, ಬೆರಳಣಿಕೆಯ ಪೊಲೀಸರು ಕರ್ತವ್ಯದಲ್ಲಿರುತ್ತಾರೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪ್ರತಿನಿತ್ಯ ಸಹಸ್ರಾರು ಭಕ್ತರು ಬರುತ್ತಾರೆ. ರಜೆ ಹಾಗೂ ವಿಶೇಷ ದಿನಗಳಲ್ಲಿ ಬರುವ ಭಕ್ತರಿಗೆ ಸೂಕ್ತ ವಸತಿ ಕಲ್ಪಿಸುವುದರ ಜತೆಗೆ ಅವರ ರಕ್ಷಣೆ ಹಾಗೂ ದೇವಸ್ಥಾನದ ಆಸ್ತಿಪಾಸ್ತಿಗೆ ರಕ್ಷಣೆ ನೀಡುವುದು ಸೀಮಿತ ಸಿಬಂದಿಗೆ ಸವಾಲಿನ ಕಾರ್ಯವೇ ಆಗಿದೆ.
ಒಳಾಂಗಣ ಮತ್ತು ಹೊರಾಂಗಣ, ದೇಗುಲದ ಮುಂಭಾಗ, ರಥಬೀದಿ, ದೇಗುಲದ ಪ್ರವೇಶ ದ್ವಾರ ಇತ್ಯಾದಿ ಸೂಕ್ಷ್ಮ ಪ್ರದೇಶಗಳಲ್ಲಿ ಒಟ್ಟು 80 ಸಿಸಿ ಕೆಮರಾಗಳಿವೆ. ಕಾಶಿಕಟ್ಟೆ, ಮಹಾಗಣಪತಿ ಗುಡಿ, ಆಂಜನೇಯ ಗುಡಿ ಸಹಿತ ಕೆಲ ಪ್ರಮುಖ ಸ್ಥಳಗಳಲ್ಲಿ ಕೆಮರಾವಾಗಲಿ ರಾತ್ರಿ ಹೊತ್ತು ಭದ್ರತಾ ಸಿಬಂದಿಯಾಗಲಿ ಇಲ್ಲ. ಲಗೇಜು ಕೊಠಡಿ ಇನ್ನಿತರ ಕಡೆಗಳಲ್ಲಿ ಬ್ಯಾಗು, ಲಗೇಜು ಪರಿಶೀಲಿಸುವ ವ್ಯವಸ್ಥೆಯೂ ಇಲ್ಲ. ಕಳ್ಳರ ಹಾವಳಿ, ಪಿಕ್‌ಪಾಕೆಟ್‌ನಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಸಂಶಯಾಸ್ಪದ ವ್ಯಕ್ತಿಗಳೂ ಇಲ್ಲಿ ಕಂಡುಬರುತ್ತಿರುತ್ತಾರೆ.
ದೇವಸ್ಥಾನಕ್ಕೆ ಸೇರಿದ ಹಾಗೂ ಖಾಸಗಿಯವರ ವಸತಿಗೃಹಗಳು ಇಲ್ಲಿವೆ. ನಿಯಮಾನುಸಾರವಾಗಿ ವಸತಿಗೃಹಗಳಲ್ಲಿ ತಂಗುವವರ ಪೈಕಿ ಕನಿಷ್ಠ ಒಬ್ಬರದ್ದಾದರೂ ವಿಳಾಸ, ಫೊಟೋ ಇರುವ ಮಾಹಿತಿಯ ಐಡೆಂಟಿಟಿ ಕಾರ್ಡ್ ಅನ್ನು ವಸತಿಗೃಹದವರಿಗೆ ನೀಡಬೇಕಾಗಿದೆ. ಕನಿಷ್ಠ ಪಕ್ಷ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನಾದರೂ ದಾಖಲಿಸಿಕೊಳ್ಳಬೇಕು. ಆದರೆ ಹೆಚ್ಚಿನ ಕಡೆಗಳಲ್ಲಿ ಭೇಟಿ ನೀಡುವವರ ಸಮರ್ಪಕ ವಿಳಾಸ, ಇತ್ಯಾದಿ ಮಾಹಿತಿಗಳನ್ನು ದಾಖಲಿಸಿಕೊಳ್ಳುವುದೂ ಇಲ್ಲ. ಹೊರ ರಾಜ್ಯಗಳ ಕಾರ್ಮಿಕರನ್ನು ಕಟ್ಟಡ ನಿರ್ಮಾಣ, ಕೃಷಿಕರ ತೋಟಗಳಲ್ಲಿ ನೇಮಿಸಿಕೊಳ್ಳಲಾಗಿದೆ. ಅಂಥಹವರ ವೈಯಕ್ತಿಕ ಮಾಹಿತಿಗಳು ನೇಮಿಸಿಕೊಂಡವರ ಬಳಿ, ಪೊಲೀಸರ ಬಳಿ ಇಲ್ಲವೆಂದೇ ಹೇಳಬಹುದು.
ಪಾಲನೆಯಾಗುತ್ತಿಲ್ಲ?
ಬಂಗಾರ, ಬೆಳ್ಳಿ, ನಗದನ್ನು ಕಬ್ಬಿಣ ಬಳಸಿ ಕಟ್ಟಿದ ಆರ್‌ಸಿಸಿ ಕೋಣೆಯಲ್ಲಿ ಇಡಬೇಕು. ಭದ್ರತಾ ಕೊಠಡಿಗೆ ಬ್ಯಾಟರಿ ಚಾಲಿತ ಸೈರನ್, ಸಿಸಿ ಕೆಮರಾ ಅಳವಡಿಸಿರಬೇಕು. ಕಾವಲುಗಾರರನ್ನು ನಿಯೋಜಿಸಿರಬೇಕು. ಅಪರಿಚಿತರು ಊರಿಗೆ ಬಂದರೆ ಪೊಲೀಸರಿಗೆ ತಿಳಿಸಬೇಕು. ಭೇಟಿ ನೀಡುವ ಅಪರಿಚಿತರ ಬ್ಯಾಗುಗಳನ್ನು ಪರಿಶೀಲಿಸಿ ಪಡೆದುಕೊಳ್ಳಬೇಕು ಎಂಬೆಲ್ಲ ನಿಯಮಗಳು ಇವೆ. ಆದರೆ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿವೆ?
ಸರಣಿ ಕೃತ್ಯ ಭೀತಿ
ನಗರದಲ್ಲಿ ರಾತ್ರಿ ಗೋಕಳ್ಳತನ ನಿರಂತರವಾಗಿದೆ. ಕೆಲವೇ ದಿನಗಳ ಹಿಂದೆ ನಾಲ್ವರು ಮುಸುಕುಧಾರಿ ದನಗಳ್ಳರ ತಂಡ ಸ್ಕಾರ್ಪಿಯೋ ಕಾರಲ್ಲಿ ಬಂದು ಹೋರಿಯೊಂದಕ್ಕೆ ಕಡಿದಿದ್ದರು. ಇದನ್ನು ಪ್ರತ್ಯಕ್ಷ ಕಂಡ ಭಕ್ತರಿಗೂ ತಲವಾರು ಝಳಪಿಸಿ ಬೆದರಿಸಿ ಪರಾರಿಯಾಗಿದ್ದರು. ಪರ್ವತಮುಖೀ ಎನ್ನುವಲ್ಲಿ ಕೃಷಿಕರ ಹಟ್ಟಿಯಿಂದ ಗೋಕಳ್ಳತನ ಪ್ರಯತ್ನವೂ ನಡೆದಿತ್ತು. ಸ್ವರ್ಣ ರಥ ಹೊಂದುತ್ತಿರುವ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಭದ್ರತೆ ಮತ್ತಷ್ಟೂ ಹೆಚ್ಚಿಸಬೇಕಿದೆ.
ಕೆಲವೆಡೆ ಭದ್ರತೆ ಅಗತ್ಯ
ದೇವಸ್ಥಾನದ ಆಭರಣ, ಹುಂಡಿ ಸಂಗ್ರಹ ಸಹಿತ ಸಮಸ್ತ ಆಸ್ತಿಗೂ ಭದ್ರತೆ ಸಾಕಷ್ಟು ಪ್ರಮಾಣದಲ್ಲಿ ಇರಬೇಕಿದೆ. ಮುಖ್ಯ ದ್ವಾರ, ಗರ್ಭಗುಡಿ, ಹುಂಡಿ, ಸೇವಾ ಚೀಟಿಗಳನ್ನು ವಿತರಿಸುವುದು, ಭಕ್ತರ ಸರದಿ ಸಾಲು, ಜನಜಂಗುಳಿ ಹೆಚ್ಚಿರುವ ಪ್ರದೇಶಗಳು, ದಾಸೋಹ ಭವನ ಮೊದಲಾದೆಡೆ ಸಾಕಷ್ಟು ಭದ್ರತೆ ಒದಗಿಸಬೇಕಿದೆ. ರಾತ್ರಿ ಹೊತ್ತು ನಡೆಯುವ ಚಟುವಟಿಕೆಗಳು ಸ್ಪಷ್ಟವಾಗಿ ಕಾಣಲು ಐಪಿ ಕೆಮರಾ ಅಗತ್ಯವಿದೆ.
ಭದ್ರತಾ ವರದಿ ಪಡೆಯುವೆ
ಕುಕ್ಕೆ ಠಾಣೆಯಿಂದ ಭದ್ರತೆ ಕುರಿತು ವರದಿ ಪಡೆಯುವೆ. ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗುತ್ತಿದೆ. ಜನಸಂದಣಿ ಸಂದರ್ಭ ಭದ್ರತೆಗೆ ಗೃಹರಕ್ಷಕ ಸಿಬಂದಿಯನ್ನು ನಿಯೋಜಿಸುತ್ತಿದ್ದೇವೆ. ಕ್ಷೇತ್ರದ ಸುರಕ್ಷತೆ ದೃಷ್ಟಿಯಿಂದ ಕಟ್ಟೆಚ್ಚರ ವಹಿಸುತ್ತಿದ್ದೇವೆ. ಚಿನ್ನದ ರಥ ಹೊಂದಿದ ಬಳಿಕ ಭದ್ರತೆ ಕುರಿತು ಪರಾಮರ್ಶೆ ನಡೆಸುತ್ತೇವೆ. ಕ್ಷೇತ್ರದ ಭದ್ರತೆ ಕುರಿತು ಅಗತ್ಯ ಕ್ರಮಗಳನ್ನು ವಹಿಸುತ್ತೇವೆ.
– ಬಿ.ಎಂ ಲಕ್ಷ್ಮೀಪ್ರಸಾದ್, ಎಸ್‌ಪಿ, ಮಂಗಳೂರು
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.