ಒಂದೇ ಕಲ್ಲಿಗೆ ಎರಡು ಹಕ್ಕಿ: ಮೋದಿ ಸ್ಟ್ರಾಟಜಿ
ಮಾಲ್ಡೀವ್ಸ್, ಲಂಕಾ ಪ್ರವಾಸ ಇಂದಿನಿಂದ
Team Udayavani, Jun 8, 2019, 6:00 AM IST
ನವದೆಹಲಿ: ಎರಡನೇ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಮೊದಲ ವಿದೇಶಿ ಪ್ರವಾಸ ಇದೇ ಶನಿವಾರ ರಾತ್ರಿ ಆರಂಭಗೊಳ್ಳಲಿದೆ. ಪ್ರವಾಸದ ಮೊದಲ ಹೆಜ್ಜೆಯಲ್ಲಿ ಮಾಲ್ಡೀವ್ಸ್ಗೆ ಭೇಟಿ ನೀಡಲಿರುವ ಅವರು, ಭಾನುವಾರ ಬೆಳಗ್ಗೆ ಅಲ್ಲಿನ ಕೆಲವು ಕಾರ್ಯಕ್ರಮಗಳು ಹಾಗೂ ರಾಜತಾಂತ್ರಿಕ ಸಭೆಗಳನ್ನು ಮುಗಿಸಿಕೊಂಡು ಸ್ವದೇಶಕ್ಕೆ ಮರಳಲಿದ್ದು, ಮಾರ್ಗ ಮಧ್ಯೆ ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ.
ಅಸಲಿಗೆ, ಈ ಪ್ರವಾಸ ವಿವಿಧೋದ್ದೇಶವುಳ್ಳದ್ದು. ಜತೆಗೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ‘ನೆರೆಹೊರೆಯವರಿಗೆ ಮೊದಲ ಆದ್ಯತೆ’ ಎಂಬ ವಿದೇಶಿ ನೀತಿಗೆ ಇಂಬು ನೀಡುವಂಥದ್ದು. ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯ ಸ್ಥಾಪಿಸಲು ಯತ್ನಿಸುತ್ತಿರುವ ಚೀನಾದ ಪ್ರಾಬಲ್ಯ ಮುರಿಯುವ ಹಾಗೂ ಚೀನಾದ ಬುಡದಲ್ಲಿ ಅವಿತುಕೊಂಡು ಭಾರತದ ವಿರುದ್ಧ ಕ್ಯಾತೆ ತೆಗೆಯುವ ಪಾಕಿಸ್ತಾನವನ್ನು ಮೂಲೆಗುಂಪು ಮಾಡುವ ‘ಒಳ ಉದ್ದೇಶ’ವನ್ನೂ ಈ ಭೇಟಿ ಹೊಂದಿದೆ.
ಭಾರತ- ಮಾಲ್ಡೀವ್ಸ್ ನಂಟಿನ ಹೊಸ ಅಧ್ಯಾಯ: ಮಾಲ್ಡೀವ್ಸ್ ನಲ್ಲಿ ಇತ್ತೀಚೆಗೆ ನಡೆದ ರಾಜಕೀಯ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಮೋದಿಯವರು ಆ ದೇಶಕ್ಕೆ ಭೇಟಿ ನೀಡುತ್ತಿರುವುದು ಅತಿ ಮಹತ್ವದ ಬೆಳವಣಿಗೆ.
ಕಳೆದ ವರ್ಷ ಫೆಬ್ರವರಿಯಲ್ಲಿ, ಮಾಲ್ಡೀವ್ಸ್ನ ಹಿಂದಿನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಆ ದೇಶದಲ್ಲಿ ಏಕಾಏಕಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಅಲ್ಲಿ ರಾಜಕೀಯ ಅರಾಜಕತೆಗೆ ಕಾರಣವಾಗಿದ್ದರು. ಆಗ, ಭಾರತ ಆ ದೇಶಕ್ಕೆ ನೈತಿಕ ಬೆಂಬಲ ತೋರಲು ಮುಂದಾದಾಗ, ಚೀನಾ ಪರ ಧೋರಣೆ ಹೊಂದಿರುವ ಯಮೀನ್, ಭಾರತದ ಸಲಹೆಗಳನ್ನು ಕಡೆಗಣಿಸುವ ಮೂಲಕ ದಶಕಗಳ ಇತಿಹಾಸ ಇರುವ ಭಾರತ-ಮಾಲ್ಡೀವ್ಸ್ ಬಾಂಧವ್ಯಕ್ಕೆ ಕೊಳ್ಳಿಯಿಟ್ಟಿದ್ದರು. ಅದರ ಹಿಂದೆ ಚೀನಾದ ಕುತಂತ್ರವೂ ಇದ್ದದ್ದು ಸುಳ್ಳೇನಲ್ಲ.
ಆದರೆ, ಕಳೆದ ವರ್ಷಾಂತ್ಯಕ್ಕೆ ನಡೆದ ಆ ದೇಶದ ಮಹಾ ಚುನಾವಣೆಯಲ್ಲಿ ಭಾರತ ಪರ ನಿಲುವು ಹೊಂದಿರುವ ಇಬ್ರಾಹೀಂ ಮೊಹಮ್ಮದ್ ಸೊಲಿಹ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕಮರಿ ಹೋಗಿದ್ದ ಭಾರತ-ಮಾಲ್ಡೀವ್ಸ್ ಸಂಬಂಧ ಮತ್ತೆ ಚಿಗುರಿತು. ಇದೇ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡಿದ್ದ ಮೋದಿ ಸರ್ಕಾರ, ಮಾಲ್ಡೀವ್ಸ್ನ ಹಲವಾರು ಯೋಜನೆಗಳಿಗೆ ಆರ್ಥಿಕ ಸಹಕಾರ ನೀಡುವ ಮೂಲಕ ಅಲ್ಲಿನ ಸರ್ಕಾರದ ಮೇಲೆ ಭಾರತದ ಪ್ರಭಾವ ಹೆಚ್ಚುವಂತೆ ಮಾಡಿಕೊಂಡಿತು.
ಅದರ ಫಲವಾಗಿ, ಅಲ್ಲಿ ಕರಾವಳಿ ರೇಡಾರ್ ವ್ಯವಸ್ಥೆ, ಯೋಧರ ತರಬೇತಿ ಕೇಂದ್ರಗಳು ಭಾರತದ ಸಹಕಾರದೊಂದಿಗೆ ಸ್ಥಾಪನೆಯಾಗಿವೆ. ಭಾನುವಾರ ಇವನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಮೋದಿ, ಮುಂದೆ ಮಾಲ್ಡೀವ್ಸ್ನಲ್ಲಿ ಭಾರತದ ನೆರವಿನೊಂದಿಗೆ ಅನುಷ್ಠಾನಗೊಳ್ಳಲಿರುವ ಜಲ ಸಾರಿಗೆ, ಬಂದರು ಅಭಿವೃದ್ಧಿ ಹಾಗೂ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಯೋಜನೆಗಳ ಬಗ್ಗೆ ಅಧ್ಯಕ್ಷ ಇಬ್ರಾಹೀಂ ಸೋಲಿಹ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.