ಎರಡು ಕತೆಗಳು
Team Udayavani, Jun 9, 2019, 6:00 AM IST
ಕಥೆ 1 ಶೂರ್ಪನಖಿ
ಅಪ್ಪನಿಗೂ ಅಮ್ಮನಿಗೂ ಜಗಳ ಯಾಕೆಂದು ನನಗೆ ಸರಿಯಾಗಿ ಗೊತ್ತಾಗಲಿಲ್ಲ. ಒಂದು ದಿನ ರಾತ್ರಿ ನಿದ್ದೆ ನಟಿಸುತ್ತಿದ್ದಾಗ ಅಮ್ಮ ಅಳುತ್ತ, “”ಆ ಶೂರ್ಪನಖೀಯ ಹಿಂದೆ ಹೋಗುವುದನ್ನು ನಿಲ್ಲಿಸಿ. ದೇವರಾಣೆ” ಅಂತ ಹೇಳುತ್ತಿದ್ದುದು ಕೇಳಿಸಿಕೊಂಡಾಗ ಮಾತ್ರ ತುಂಬಾ ಗಾಬರಿಯಾಗಿತ್ತು! ಅಪ್ಪನಿಗೇನು ತಲೆಕೆಟ್ಟಿದೆಯೆ? ಕಳೆದ ಬಾರಿಯಷ್ಟೇ ಹತ್ತನೇ ಸಲ ನೋಡಿದ “ಮಾಯಾ ಶೂರ್ಪನಖೀ’ ಆಟ ನೆನಪಾಯಿತು. ದೊಡ್ಡ ಎದೆಯ, ಹಲ್ಲು ಉಜ್ಜದ, ಹತ್ತಿರ ಹೋದವರನ್ನೆಲ್ಲ ತಿಂದು ಹಾಕುವ, ಸುಖಾಸುಮ್ಮನೆ ಸೀತೆಗೆ ಉಪದ್ರ ಕೊಡುವ ಆ ಕಪ್ಪು ಡುಮ್ಮಿಯ ಹಿಂದೆ ಅಪ್ಪ ಯಾಕೆ ಹೋಗುತ್ತಾರೆ? ಯಾರ ಹತ್ತಿರ ಕೇಳುವುದು? ಮೋಹನನಿಗೆ ಗೊತ್ತಿರಬಹುದು. ಯಾಕೆಂದರೆ ತರಗತಿಯಲ್ಲಿ ಅವನೇ ಫಸ್ಟ್ ಬರೋದಲ್ವ? (ಅವನ ಹತ್ರ ಕೇಳ್ಳೋದು ಬೇಡ. ಮತ್ತೆ ಅವರೆಲ್ಲ ರಾಕ್ಷಸರಿಗೂ ನಮ್ ಫ್ಯಾಮಿಲಿಗೂ ಸಂಬಂಧ ಇದೆ ಅಂತ ಅಸಹ್ಯ ಪಟ್ಕೊಂಡ್ರೆ. ಹಾಗಂತ ಇದನ್ನ ನಿರ್ಲಕ್ಷ್ಯ ಮಾಡೋ ಹಾಗೂ ಇಲ್ಲ) ಹೇಗಾದ್ರೂ ಮಾಡಿ ರಹಸ್ಯ ಪತ್ತೆ ಹಚ್ಚಲೇಬೇಕು.
ಆ ದಿವಸ ಸ್ಕೂಲ್ ಡೇ ಕಾರ್ಯಕ್ರಮ ಮುಗಿಸಿ ನಾನು ಅಪ್ಪ-ಅಮ್ಮ ಬಸ್ಸು ಹತ್ತಿದ್ದೆವು. ಶಾಲೆಯಿಂದ ಬಸ್‌ಸ್ಟ್ಯಾಂಡ್ ಸ್ವಲ್ಪ ದೂರದಲ್ಲಿದೆ. ಬಸ್ ಹತ್ತುತ್ತಿದ್ದಂತೆ ಅಪ್ಪ ಬಸ್‌ಸ್ಟ್ಯಾಂಡ್‌ನ ಹಿಂದಿನ ಮನೆಯತ್ತ ನೋಡುತ್ತಿದ್ದುದನ್ನು ನಾನು ಕಂಡುಹಿಡಿದೆ. ಅವರು ನೋಡಿದತ್ತಲೇ ನೋಡಿದಾಗ ಸಣ್ಣ, ಹಂಚಿನ ಮನೆಯೊಂದು ಕಾಣಿಸಿತು. ಬಾಗಿಲ ಬಳಿ ಒಬ್ಬಳು ಹೆಂಗಸು. ಆಟದ ಮುದಿಹಾಸ್ಯಗಾರನ ಕಿರಿಯ ಹೆಂಡತಿಯ ಹಾಗೆ ಕಾಣಿಸುತ್ತಿದ್ದಳು. ಅಮ್ಮನೂ ನೋಡಿದಳು ಅಂತ ಕಾಣುತ್ತೆ! ದೊಡ್ಡ ದನಿ ತೆಗೆದು, “”ಮತ್ತೆ ಬಂದಳಾ ಶೂರ್ಪನಖೀ” ಅಂದಳು.ಈಗ ಗಾಬರಿ ಬೀಳುವ ಸರದಿ ನನ್ನದು! ಶೂರ್ಪನಖೀಯ ಮನೆ ಇದೇ ಏನು ಹಾಗಾದರೆ. ಇಲ್ಲಿಂದಲೇ ಏನು ಅವಳು ದಿನಾ ಬಂದು ಆಟ ಮಾಡುವುದು. ಅಯ್ಯೋ ದೇವರೆ! ಈ ಶೂರ್ಪನಖೀ ಬಂದೂ ಬಂದೂ ನಮ್ಮ ಶಾಲೆ ಪಕ್ಕದಲ್ಲೇ ಮನೆ ಮಾಡಿದ್ದಾಳಲ್ಲ! ಮತ್ತೂಮ್ಮೆ ಅವಳನ್ನು ನೋಡುವ ಮನಸ್ಸಾಯಿತು. ಆದರೆ ಅವಳಾಗಲೇ ಒಳಗೆ ಹೋಗಿದ್ದಳು.
ಮನೆ ತಲುಪಿದ ಕೂಡಲೇ ಅಮ್ಮ ಉಪದೇಶ ಪ್ರಾರಂಭಿಸಿದ್ದಳು! “”ಅವಳು ಶೂರ್ಪನಖೀ. ಅವಳನ್ನು ನೋಡಬಾರದು. ನಗಬಾರದು.ಅವಳ ಬಳಿ ಮಾತನಾಡಬಾರದು. ಅವಳು ಸನ್ನೆ ಮಾಡಿದರೆ ಹತ್ತಿರ ಹೋಗಬಾರದು. ತಿಂಡಿ ಕೊಟ್ಟರೆ ತಿನ್ನಬಾರದು. ಅಪ್ಪ ಅಲ್ಲೇನಾದರೂ ಕಂಡರೆ ತಪ್ಪದೆ ಬಂದು ಹೇಳಬೇಕು” ಪಟ್ಟಿ ಉದ್ದವಿತ್ತು. ಆದರೆ ಅನುಸರಿಸುವುದು ಕಷ್ಟವೇನಲ್ಲ. ಅದಾದ ನಂತರ ನಾನು ಬಸ್‌ಸ್ಟ್ಯಾಂಡ್‌ನಲ್ಲಿ ನಿಂತಾಗೆಲ್ಲಾ ಆ ಮನೆ ಕಡೆ ನೋಡುವುದು ಕಡಿಮೆ ಮಾಡಿದ್ದೆ. ಆ ಕಡೆಗೆ ಚಿಟ್ಟೆ ಹಾರಿ ಹೋದರೂ, ವಿಮಾನ ಹೋದರೂ ನಾನು ನೋಡುತ್ತಿರಲಿಲ್ಲ. ದೇವರಾಣೆಗೂ.
ಒಂದು ಮಳೆಗಾಲದ ಸಂಜೆ
ನಾನು ಕೊಡೆ ಮರೆತು ಬಿಟ್ಟಿದ್ದೆ. ಜೋರು ಮಳೆ. ರಭಸವಾಗಿ ಗಾಳಿ ಬೀಸುತ್ತಿತ್ತು. ಗುಡುಗು ನಿಧಾನವಾಗಿ ಶಬ್ದ ಹೆಚ್ಚಿಸಿಕೊಳ್ಳುತ್ತಿತ್ತು. ನಾನು ಗೆಳೆಯರೊಂದಿಗೆ ಛಾವಣಿಯಿಲ್ಲದ ಬಸ್‌ಸ್ಟ್ಯಾಂಡ್‌ನಲ್ಲಿ ನಿಂತಿದ್ದೆ. ಮಳೆ ಒಳ್ಳೆ ರಾಕ್ಷಸನ ಹಾಗಿತ್ತು. ಎಲ್ಲರ ಎದೆ ಭಯದಿಂದ ಬಡಿದುಕೊಳ್ಳುತ್ತಿತ್ತು. ಅಷ್ಟರಲ್ಲಿಯೇ, “”ಇಲ್ಲಿ ಬನ್ರೊ… ಇಲ್ಲಿ ಬನ್ರೊ…” ಅಂತ ಧ್ವನಿ ಕೇಳಿಸಿತು. ನೋಡಿದರೆ ಶೂರ್ಪನಖೀ. ಎಲಾ ಇವಳಾ… ಮಕ್ಕಳನ್ನು ನುಂಗಲು ಇದೇ ಸರಿಯಾದ ಸಮಯ ಅಂತ ಹೊಂಚು ಹಾಕಿರಬೇಕು! ಭಯವಾಯಿತು. “”ಬೇಡ ಬೇಡ ಅವಳು ಶೂರ್ಪನಖೀ” ಅಂತ ನಾನು ನನ್ನ ಜೀವದಂತಿದ್ದ ಗುಟ್ಟು ಬಿಟ್ಟು ಕೊಡುವ ಮೊದಲೇ ಗೆಳೆಯರು ನನ್ನನ್ನು ತಳ್ಳಿಕೊಂಡು ಅವಳ ಮನೆಯತ್ತ ಹೋಗಿದ್ದರು. ನಾನು ಮಳೆಗಿಂತ ಶೂರ್ಪನಖೀಯೇ ವಾಸಿ ಎಂದು ಲೆಕ್ಕ ಹಾಕಿ ಅವಳ ಮನೆಯತ್ತ ಓಡಿದೆ.
ತಲೆ ಒರಸಿಕೊಳ್ಳಲು ಟವೆಲ್ಲುಗಳು ಬಂದವು. ಅದರ ಹಿಂದೆ “”ಚಹಾ ಬೇಕೇನ್ರೊ” ಅಂತ ಧ್ವನಿಯೂ ತೂರಿ ಬಂತು. ತಿಂಡಿ ತುಂಬಿದ ತಟ್ಟೆಗಳೂ ಬಂದವು. ಹೊಟ್ಟೆ ತುಂಬಿಸಿ ಕೊಲ್ಲುವುದು ಇವಳ ಉಪಾಯವಿರಬೇಕು! ಹೊಟ್ಟೆ ತುಂಬಾ ತಿಂದಾಗ ನಾವು ದಪ್ಪವಾಗಿರುತ್ತೇವಲ್ಲ. ಆಗ ಇವಳಿಗೆ ಮಾಂಸ ಹೆಚ್ಚಿಗೇ ಸಿಗುತ್ತದಲ್ಲ. ಒಳ್ಳೆ ಐಡಿಯಾ ಮಾಡಿದ್ದಾಳೆ ರಾಕ್ಷಸಿ!
ಭಯದಲ್ಲೇ ಚಹಾ ಕುಡಿದೆ. ಕೆಲವು ಬಿಸ್ಕೆಟ್‌ಗಳನ್ನು ಬಾಯಿಗೆ ಹಾಕಿದೆ. ಅಷ್ಟರಲ್ಲಿ ಬಸ್ ಬಂತು. ಗುಂಪಿನಲ್ಲಿ ಗದ್ದಲ ಎದ್ದಿತು.ಮಳೆಯೂ ಕಡಿಮೆಯಾಗಿತ್ತು. ಬಸ್ಸಿನ ಕಡೆಗೆ ಓಡುತ್ತಿದ್ದವರ ಕೈಗೆ ಚಾಕ್ಲೇಟು ಹಾಕುತ್ತಿದ್ದಳು ಅವಳು, ಸರಿಯಾದ ಒಂದು ಬಸ್‌ಸ್ಟ್ಯಾಂಡ್ ಕಟ್ಟಿದ್ದರೆ ಈ ಮಕ್ಕಳಿಗೆ ಉಪಕಾರವಾಗುತ್ತಿತ್ತು ಅಂತ ಗೊಣಗುತ್ತಾ.
ಅರರೆ ಇದೇನು? ರಾಕ್ಷಸಿ ಪ್ಲೇಟ್ ಬದಲಾಯಿಸಿದಳು?
ನನ್ನ ಕೈಗೆ ಮೂರ್‍ನಾಲ್ಕು ಚಾಕ್ಲೇಟು ಹೆಚ್ಚಿಗೆ ಬಿದ್ದಿದ್ದವು. ಆಶ್ಚರ್ಯದಲ್ಲಿ ಅವಳ ಮುಖ ನೋಡಿದೆ. “”ಜೋಪಾನ ಲವಕುಶರೇ ಹೋಗಿ ಬನ್ನಿ…” ಅಂತನ್ನುವ ಸೀತೆಯ ಹಾಗೆ ಕಂಡಳು ಅವಳು. ಇವಳು ಶೂರ್ಪನಖೀಯಾಗಿರಲು ಸಾಧ್ಯವೇ ಇಲ್ಲ. ಹಾಗಾದರೆ ಇವಳು ಸೀತೆಯೆ?
ಸುತ್ತಲೂ ಅದೆಷ್ಟು ಮರಗಳಿವೆ! ಹಾಗಾದರೆ ಇದು ಆಶೋಕವನವೇ? ಹಾಗಾದ್ರೆ ರಾವಣ ಯಾರು? ಅಪ್ಪ ರಾವಣನಿರಬಹುದೆ? ಮತ್ತೆ ನನ್ನ ಅಮ್ಮ? ತಲೆ ಸಿಡಿಯುತ್ತಿತ್ತು.
“”ಏನಾಯೊ¤?” ಅವಳು ನನ್ನ ಕಣ್ಣುಗಳನ್ನು ದಿಟ್ಟಿಸಿ ಕೇಳಿದಳು. ನಾನು ನನ್ನೊಳಗೇ ಏನೇನೋ ಯೋಚಿಸಿ ಕನ್‌ಫ್ಯೂಶನ್ ಮಾಡಿಕೊಳ್ಳೋದು ಯಾಕೆ?
ಭಯದಿಂದಲೇ “”ನಿಮ್ಮ ಹೆಸರೇನು?” ಅಂದೆ. ಅವಳಿಗೆ ನಗು ಬಂತು ಅಂತ ತೋರುತ್ತದೆ. ನಾನು ಅವಳು ಬಾಯೆ¤ರೆದು ಉತ್ತರಿಸುವುದನ್ನೇ ಕಾದು ಕೂತೆ !
ಕಥೆ 2 ಅಹಲ್ಯೆ
ಮನೆಗೆ ತಾಗಿಕೊಂಡ ದಿನಸಿ ಅಂಗಡಿಯೊಳಗೆ ಅಕ್ಕಿ ಮೂಟೆಗಳೊಂದಿಗೆ ಮೂಟೆಯಾಗಿ ಕೂತ “ಅಹಲ್ಯೆ‘ಯಂತಿದ್ದ ಪಾರ್ವತಿಗೆ ದಿನಸಿ ಅಂಗಡಿಯಿಂದಾಚೆ ಇರುವ ಜಗತ್ತಿನಲ್ಲಿ ಏನಾಗುತ್ತದೆ ಅಂತ ಗೊತ್ತಾಗಬೇಕಾದರೆ ನೆರೆಮನೆಯ ಚಿಂಟೂ ಕಾಲೇಜಿನಿಂದ ಬರಬೇಕು. ಯಾವ ಜನ್ಮದ ಪುಣ್ಯಾನೋ ಏನೋ- ಹುಡುಗ ತಾಯಿಗಿಂತ ಹೆಚ್ಚಾಗಿ ಇವಳನ್ನೇ ಹಚ್ಚಿಕೊಂಡಿದ್ದಾನೆ. ಚಿಕ್ಕಂದಿನಲ್ಲಿ ಬಗೆಬಗೆಯ ಮಿಠಾಯಿ, ಚಾಕ್ಲೇಟು, ಪೆಪ್ಸಿ, ಜ್ಯೂಸ್ ಎಲ್ಲವನ್ನು ಕೇಳಿದ ತಕ್ಷಣ ದಯಪಾಲಿಸುತ್ತಿದ್ದ ಪಾರ್ವತಿ, ಚಿಂಟೂವಿನ ಪಾಲಿಗೆ ದೇವಸ್ಥಾನದಲ್ಲಿ ಕೂತ ಮಂಜುನಾಥನ ಮಡದಿ ನಗುಮುಖದ ಪಾರ್ವತಿಯೇ ಹೌದು. ಚಿಕ್ಕಂದಿನಲ್ಲೇ ಅವಳ ಮೇಲೆ ಮೂಡಿದ್ದ ಅಕ್ಕರೆ ಈಗ ಮೀಸೆ ಮೂಡುತ್ತಿದ್ದರೂ ಕಡಿಮೆಯಾಗಿರಲಿಲ್ಲ. ಕಾಲೇಜಿನಿಂದ ಬಂದವನೇ ಅಂಗಡಿಯ ಒಳಬಂದು ತನ್ನ ಸ್ಯಾಮ್‌ಸಂಗ್ ಮೊಬೈಲ್ ತೆಗೆದು, “”ಅಲ್ಲಿ ಹಾವು ಬಂದಿತ್ತಾಂಟೀ… ಇಲ್ಲಿ ಗೂಬೆ ಸತ್ತಿತ್ತು…” ಎಂದೆಲ್ಲ ಹಲವಾರು ವಿಡಿಯೋಗಳನ್ನು ತೋರಿಸಲಾರಂಭಿಸುತ್ತಾನೆ. ಮದುವೆಯಾಗಿ ಇಪ್ಪತ್ತು ವರ್ಷಗಳಾದವು-ತನ್ನದು ಅಂತ ಹೇಳಲು ಮಕ್ಕಳಿಲ್ಲ ಪಾರ್ವತಿಗೆ. ದಿನಸಿ ಅಂಗಡಿ ಬಿಟ್ಟರೆ ಚಿಂಟು ಮತ್ತು ಮೊಬೈಲ್‌ನಲ್ಲಿ ಅವನು ತೋರಿಸುವ ಪ್ರಪಂಚವೇ ಅವಳ ಸರ್ವಸ್ವ !
ಒಂದು ದಿನ ಅಂಗಡಿಯೊಳಗೆ ಬಂದ ಚಿಂಟೂ ಎಂದಿನಂತಿರಲಿಲ್ಲ. ಖುಷಿಯಲ್ಲಿ ಕುಣಿದಾಡುತ್ತಲೇ ಬಂದ. ಕಾಲು ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಎಲ್ಲಿಂದ ಮಾತು ಶುರು ಮಾಡೋದು ಅಂತ ಒಂದೈದು ನಿಮಿಷ ಯೋಚಿಸಿದ. “”ಏನೋ ಚಿಂಟೂ… ಏನಾಯೊ..” ಅಂತ ಇವಳು ಹತ್ತು-ಹದಿನೈದು ಸಲ ಕೇಳಿದ ಮೇಲೆ, “”ಆಂಟಿ, ನಾನು ಹೇಳಿದರೆ ನೀವು ನಂಬಲಿಕ್ಕಿಲ್ಲ. ನೀವೇ ಏನು- ಕಣ್ಣಾರೆ ಕಂಡದ್ದಲ್ಲದೇ ಹೋಗಿದ್ದರೆ ನಾನೂ ನಂಬುತ್ತಿರಲಿಲ್ಲ” ಎನ್ನುತ್ತಾ ಬಿ.ಕಾಂ. ಓದುತ್ತಿದ್ದ ಭೂಪ ಉತ್ತರಕ್ಕಿಂತ ಪೀಠಿಕೆಯನ್ನೇ ಉದ್ದ ಮಾಡಿದ. ಪಾರ್ವತಿ ಮರುನುಡಿಯಲರಿಯದೆ ಅವನ ಉತ್ಸಾಹವನ್ನೇ ನೋಡುತ್ತ¤ ಕುಳಿತಳು.
“”ನಾನೊಂದು ಫೋಟೋ ತೆಗೆದು ಇನ್‌ಸ್ಟಾಗ್ರಾಮ್‌ಗೆ ಹಾಕಿದ್ದೆ ಆಂಟಿ, ಅಷ್ಟೊಂದು ನಿರೀಕ್ಷೆ ಏನಿರಲಿಲ್ಲ- ಸುಮ್ನೆ ಹಾಕಿದ್ದು. ಈಗ ನೋಡಿದರೆ ಆ ಫೋಟೋ ಫೇಮಸ್ ಫೋಟೋಗ್ರಫಿ ಪೇಜ್ ಅಲ್ಲಿ ಫೀಚರ್ ಆಗಿ ಬಂದಿದೆ. ಲೈಕ್ಸ್ ಗಳು ಮೂವತ್ತು ಸಾವಿರದ ಗಡಿ ಮುಟ್ಟಿದೆ.”
ಪಾರ್ವತಿ ಸಾಧ್ಯವಾದಷ್ಟು ಗ್ರಹಿಸಿದಳು-ಚಿಂಟೂ ತೆಗೆದ ಫೋಟೋ ಜನಪ್ರಿಯವಾಗಿದೆ ಅಂತನ್ನೋದು ಗೊತ್ತಾಯಿತು ಅವಳಿಗೆ.
“”ಈಗ ಮುಖ್ಯ ವಿಚಾರ. ನಾನು ತೆಗೆದ ಫೋಟೋ ಯಾರದ್ದು ಗೊತ್ತ?”
“”ಯಾರದು?”
“”ಮತ್ಯಾರದ್ದು? ನಿಮ್ಮದೇ!”
ಪಾರ್ವತಿ ಬೆಚ್ಚಿ ಬಿದ್ದಳು. “”ಕತ್ತೆಮಗನೇ… ನನಗೆ ಗೊತ್ತಾಗದ ಹಾಗೆ ನನ್ನ ಫೋಟೋ ತೆಗೆದು ಮಜಾ ನೋಡ್ತಾ ಇದ್ದೀಯ. ಮೊದಲೇ ಹೇಳಿದ್ರೆ ಚಂದಕ್ಕೆ ಕೂದಲು ಕಟ್ಟಿ, ಸೀರೆ ಉಟ್ಟು ಫೋಟೋ ತೆಗಿಸಬಹುದಿತ್ತು”
“”ಫೋಟೋ ಚೆಂದ ಬಂದಿದೆ ಆಂಟಿ. ನೀವೇ ನೋಡಿ” ಅನ್ನುತ್ತ ಮೊಬೈಲ್ ಮುಂದೆ ಚಾಚಿದ. ಪಾರ್ವತಿ ಭಯಪಡುತ್ತಲೇ ಮೊಬೈಲ್ ನೋಡಿದಳು.
ಬಹಳ ದೂರದಿಂದ ತೆಗೆದ ಚಿತ್ರ. ಪಾರ್ವತಿಯ ಮನೆ ಮತ್ತದಕ್ಕೆ ತಾಗಿಕೊಂಡಿರುವ ದಿನಸಿ ಅಂಗಡಿ. ಅಂಗಡಿಯೊಳಗೆ ಅಕ್ಕಿ ಮೂಟೆಯ ಪಕ್ಕ ಕೂತ ಪಾರ್ವತಿ, ಎದುರು ಒಂಟಿ ರಸ್ತೆ. ಫೋಟೋದೊಳಗೆ ಪಾರ್ವತಿ ಅಳುತ್ತಿರುವಂತಿತ್ತು- ತಾನ್ಯಾವಾಗಲೂ ಇಷ್ಟೊಂದು ಬೇಸರದಲ್ಲಿ ಕೂತಿರುತ್ತೇನೆಯೆ?- ಅಂತ ಪಾರ್ವತಿ ಗಾಬರಿಗೊಂಡಳು.
.
ಪಾರ್ವತಿ ಹಾಗೂ ಶೇಖರನ ಜಾತಕ ಕೂಡಿ ಬಂದಾಗ ಎಲ್ಲರಿಗೂ ಖುಷಿಯಾಗಿತ್ತು. ಶೇಖರ ಎಲ್ಲರೂ ಒಪ್ಪಿಕೊಂಡ ಒಳ್ಳೆಯ ಮನೆತನದ ಹುಡುಗ. ಅವನ ಅಪ್ಪ ಚಿಕ್ಕಂದಿನಲ್ಲಿಯೇ ತೀರಿ ಹೋಗಿದ್ದರು.
ಕಷ್ಟ ಪಟ್ಟು ಬೆಳೆದ ಹುಡುಗ, ಅವನಿಗೆ ಎರಡು ದಿನಸಿ ಅಂಗಡಿಗಳಿದ್ದವು. ನಗರದ ನಡುವೆ, ಪೇಟೆಯಲ್ಲಿ ಒಂದು ಅಂಗಡಿ, ಅವನ ಮನೆಗೆ ತಾಗಿಕೊಂಡು ಮತ್ತೂಂದು ಅಂಗಡಿ. ಅವನಿಗೆ ಹೆಂಡತಿ ಬೇಕಾದಧ್ದೋ ಅಥವಾ ಮನೆಗೆ ತಾಗಿಕೊಂಡ ಅಂಗಡಿ ನೋಡಿಕೊಳ್ಳಲು ಸಂಬಳವಿಲ್ಲದ ಜನ ಬೇಕಾದಧ್ದೋ ಅಂತ ಗೆರೆ ಹಾಕಿ ಬೇರೆ ಮಾಡೋದು ಕಷ್ಟ!
ಮದುವೆಯಾದಾಗ ಪಾರ್ವತಿಯ ಅದೃಷ್ಟವನ್ನು ಎಲ್ಲರೂ ಬಾಯಿ ದಣಿಯುವಷ್ಟು ಹೊಗಳಿದರು. ಅವಳು ಗಂಡನ ಮನೆಗೆ ಕಾಲಿಟ್ಟ ಕೂಡಲೇ ಧಾರೆ ಸೀರೆ ಕಳಚಿ, ಹಳೆ ಸೀರೆ ಉಟ್ಟು ಅಂಗಡಿಗೆ ಕಾಲಿಟ್ಟಳು. ಮನೆ ಮತ್ತು ಅಂಗಡಿ ಎರಡೂ ನಿಭಾಯಿಸುವ ಚತುರೆಯಾಗಿ ಬದಲಾದಳು. “”ನಿಮ್ಮ ಪಾರ್ವತಿ ಅದು ಹೇಗೆ ಮನೆ ಮತ್ತು ಅಂಗಡಿ ಎರಡೂ ನಿಭಾಯಿಸ್ತಾಳೆ!” ಅಂತ ಅವಳ ನೆರೆಹೊರೆಯವರೆಲ್ಲ ಅವಳ ತಂದೆತಾಯಿಯ ಬಳಿ ಅವಳ ಕುರಿತಾಗಿ ಬಹಳ ಹೊಗಳುತ್ತಿದ್ದರು. ತರಕಾರಿ ದಿನಸಿ ಸಾಮಾನು ಇತ್ಯಾದಿ ತರಲು ಪಾರ್ವತಿ ಮನೆಯ ಹೊರಗೆ ಕಾಲಿಡಬೇಕಾಗಿಯೇ ಇರಲಿಲ್ಲ. ಎಲ್ಲ ಅಂಗಡಿಯಲ್ಲಿಯೇ ಇತ್ತು. ಮದುವೆ, ಸೀಮಂತ, ನಾಮಕರಣ ಇತ್ಯಾದಿಗೂ ಅವಳು ಹೋಗುತ್ತಿರಲಿಲ್ಲ – ಅಂಗಡಿ ಖಾಲಿ ಬಿಡಬೇಕಾಗುತ್ತದೆ ಅಂತ. ಹೊಸ ಹೊಸ ಅಡುಗೆ ಪ್ರಯೋಗ ಅವಳು ಮಾಡುತ್ತಿರಲಿಲ್ಲ – ಬಂದ ಗಿರಾಕಿ ತಪ್ಪೀತು ಅಂತ. ಮಲ್ಲಿಗೆ ಬಳ್ಳಿ ತುಂಬಾ ಹೂಗಳಾದರೂ ಕಟ್ಟಲು ಸಮಯ ಇಲ್ಲ- ದೇವರಿಗೆ ಹೇಗಾದರೂ ನಡೆಯುತ್ತದಲ್ಲ-ಪರಿಮಳ ಇದ್ದರೆ ಸಾಕು. “ಅ’ದಿಂದ “ಳ’ ತನಕ ಹುಡುಕಿ ಹುಡುಕಿ ಬರೆದಿಟ್ಟಿದ್ದ ಚಿತ್ರಗೀತೆಗಳ ಪುಸ್ತಕವನ್ನು ತಂಗಿ ಎಷ್ಟು ಪೀಡಿಸಿದರೂ ಕೊಡದೆ ಗಂಡನ ಮನೆಗೆ ತಂದಿದ್ದಳು- ಎಲ್ಲಿ ಹೋಗಿದೆಯೋ ಈಗ. ಮಕ್ಕಳಾಗದೇ ಇದ್ದುದರಿಂದ ಅವಳಿಗೆ ಮಕ್ಕಳ ಹೋಮ್‌ವರ್ಕ್, ಶಿಕ್ಷಕ ರಕ್ಷಕ ಸಂಘದ ಸಭೆ ಅಂತೆಲ್ಲ ಅಂಗಡಿ ಮುಚ್ಚುವ ಪ್ರಮೇಯವೇ ಇರಲಿಲ್ಲ.
ಮದುವೆಯಾದ ಮೇಲೆ ಪಾರ್ವತಿ ಮನೆ ಬಿಟ್ಟು ಹೋದದ್ದೇ ಕಡಿಮೆ. ತಂಗಿಯ ಮದುವೆಗೂ ಒಂದು ದಿನ ಅಂಗಡಿ ಮುಚ್ಚಲು ಗಂಡನನ್ನು ಒಪ್ಪಿಸಲು ಸಾಕೋ ಸಾಕಾಗಿತ್ತು. “”ಅವಳು ನಮ್ಮನ್ನಾದರೂ ಬಿಟ್ಟಾಳು-ಅಂಗಡಿ ಬಿಟ್ಟಾಳೆ!” ಅಂತ ತವರು ಮನೆಯವರ ಪಾಲಿಗೆ ಹಣವೆಂದರೆ ಬಾಯಿಬಿಡುವ ಹೆಣದ ಹಾಗಾಗಿದ್ದಳು.
.
“”ಆಂಟಿ… ಆಂಟಿ… ಏನು ಯೋಚಿಸುತ್ತ ಇದ್ದೀರಿ?”
“”ನಾನ್ಯಾಕೆ ಸತ್ತವರ ಮನೆಯವ್ರ ಥರ ಈ ರೀತಿ ಮೋರೆ ಮಾಡಿ ಕೂತಿದ್ದೇನೆ ಅಂತ”
“”ನೀವು ಯಾವಾಗ್ಲೂ ಹಾಗೇ ತಾನೆ ಕೂರೋದು…”
ಅಷ್ಟರಲ್ಲಿ ಶೇಖರ ಬಂದ. “”ಅಂಕಲ್ ನೋಡಿ, ಆಂಟಿಯ ಫೋಟೋ. ಎಷ್ಟು ಬೇಸರದಲ್ಲಿದ್ದಾರೆ ನೋಡಿ”
ಶೇಖರ ಮೊಬೈಲ್‌ನತ್ತ ಕಣ್ಣು ಹಾಯಿಸಿ ನಕ್ಕ. “”ಗಂಡ ಸತ್ತವಳ ಹಾಗೆ ಕೂತಿದ್ದೀಯಲ್ಲೇ-ನೋಡಿದವ್ರು ಏನಾಯ್ತಿವಳಿಗೆ-ಹೊಟ್ಟೆಗೆ ಹಾಕಲ್ವೇನು ಅಂತ ಅಂದೊಳ್ಬೇಕು!”
“”ಇನ್ಸಾಗ್ರಾಮ್‌ಗೆ ಹಾಕಿದ್ದೆ ಅಂಕಲ್… ಸುಮಾರು ಲೈಕ್ಸ್ ಬಂದಿವೆ”
“”ಇವರಿಗೇನಪ್ಪಾ ! ಮನೇಲಿ ಕೂತ್ಕೊಂಡು ಅತ್ತುಕೊಂಡೇ ಹೆಸರು ಮಾಡ್ತಾರೆ. ಅಗೋ ಗಿರಾಕಿ ಬಂದ್ರು ನೋಡ್ಕೊ” ಅಂತ ಗೊಣಗುತ್ತ ಶೇಖರ ಮನೆಯೊಳಗೆ ಹೋದ.
ಪಾರ್ವತಿ ಹಣೆಗೆ ವಿಕ್ಸ್ ಉಜ್ಜುತ್ತ, ತನಗಿವತ್ತು ಏನೋ ಆಗಿದೆ ಅಂತಂದುಕೊಂಡು ಗಿರಾಕಿಗಳತ್ತ ತಿರುಗಿದಳು.
ಯಶಸ್ವಿನಿ ಕದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.