ರೋಗಿಗಳಿಗೆ ಸೂಕ್ತ ಸ್ಪಂದನ, ಚಿಕಿತ್ಸೆ: ಲೋಕಾಯುಕ್ತ ಸೂಚನೆ
Team Udayavani, Jun 9, 2019, 10:17 AM IST
ಬೆಳ್ತಂಗಡಿ: ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಶನಿವಾರ ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಮತ್ತು ವಸತಿ ನಿಲಯಗಳಿಗೆ ಭೇಟಿ ನೀಡಿ ಅವ್ಯವಸ್ಥೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಹಲವು ಸಮಸ್ಯೆಗಳನ್ನು ಮನಗಂಡರು. ಆಡಳಿತ ವೈದ್ಯಾಧಿಕಾರಿ ಡಾ| ವಿದ್ಯಾವತಿ ಆಸ್ಪತ್ರೆಯ ಸೇವೆ, ಸಿಬಂದಿ ವಿವರ, ಆಧುನಿಕ ಚಿಕಿತ್ಸಾ ಸೌಕರ್ಯ ಅನಿವಾ ರ್ಯತೆ ಕುರಿತು ಗಮನ ಸೆಳೆದರು.
ಆ್ಯಂಬುಲೆನ್ಸ್ ಕೊರತೆ ಬಗ್ಗೆ ರೋಗಿಗಳು ಹೇಳಿಕೊಂಡರು. ತಾಲೂಕು ವೈದ್ಯಾಧಿಕಾರಿ ಡಾ| ಕಲಾಮಧು ಅವ ರೊಂದಿಗೆ ಚರ್ಚಿಸಿ ತಿಂಗಳೊಳಗಾಗಿ ಆ್ಯಂಬುಲೆನ್ಸ್ ಒದಗಿಸುವಂತೆ ಸೂಚಿಸಿದರು. ಸರಕಾರಿ ಆಸ್ಪತ್ರೆಗಳು ಉತ್ತಮ
ಸೇವೆ ಮತ್ತು ಚಿಕಿತ್ಸೆಯಿಂದ ರೋಗಿಗಳನ್ನು ಆಕರ್ಷಿಸುವಂತೆ ವೈದ್ಯರು ಕಾರ್ಯ ನಿರ್ವಹಿಸಿ ಎಂದು ಸಲಹೆನೀಡಿದ ಅವರು ಅವ್ಯವಸ್ಥೆ ಸರಿಪಡಿಸದಿ ದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಡಾ| ಆದಂ ಮತ್ತು ಡಾ| ಚಂದ್ರಕಾಂತ್ ಇದ್ದರು.
ವಾರ್ಡನ್‌ಗೆ ತರಾಟೆ
ಬೆಳ್ತಂಗಡಿ ಮೆಸ್ಕಾಂ ಸಮೀಪದ ಸರಕಾರಿ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ಲೋಕಾಯುಕ್ತರು ಅಸ ಮರ್ಪಕ ಮೂಲ ಸೌಕರ್ಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಹಾಸ್ಟೆಲ್ ವಾಸಿಗಳನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ, ಇಲ್ಲವಾದಲ್ಲಿ ಖಾಲಿ ಹುದ್ದೆ ಇರುವ ಬೇರೆ ಜಿಲ್ಲೆಗೆ ಹೋಗಲು ಸಿದ್ಧರಾಗಿ ಎಂದು ಎಚ್ಚರಿಸಿದರು.
ಉಳಿಯಲು ಯೋಗ್ಯವಿಲ್ಲ
ಉಜಿರೆ ಹಳೆಪೇಟೆಯ ವಿದ್ಯಾರ್ಥಿ ನಿಲಯದ ಸ್ಥಿತಿಗತಿ ಕಂಡ ಲೋಕಾಯುಕ್ತರು, ಕೋಳಿ ಗೂಡಿನಂತಿರುವ ಕಟ್ಟಡಕ್ಕೆ ಇಲಾಖೆಯಿಂದ ತಿಂಗಳಿಗೆ 82,500 ರೂ. ಬಾಡಿಗೆ ನೀಡಲಾಗುತ್ತಿದೆ. ಸೂಕ್ತ ಗಾಳಿ, ಬೆಳಕು ಇಲ್ಲ. ವಾಸ್ತವ್ಯಕ್ಕೆ ಕಟ್ಟಡ ಯೋಗ್ಯವಿಲ್ಲ ಎಂದು ಅಧಿಕಾರಿಗಳು ಪ್ರಮಾಣ ಪತ್ರ ನೀಡಿದರೂ ಅಲ್ಲಿ ಇರುವುದೇಕೆ ಎಂದು ಪ್ರಶ್ನಿಸಿದರು.
ಲೋಕಾಯುಕ್ತ ವೃತ್ತನಿರೀಕ್ಷಕರಾದ ಭಾರತಿ, ವಿಜಯಪ್ರಸಾದ್, ಸಿಬಂದಿ ಸುರೇಂದ್ರ, ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರೀ, ಬಂಟ್ವಾಳ ಎಎಸ್‌ಪಿ ಸೈದುಲ್ ಅಡಾವತ್, ಬೆಳ್ತಂಗಡಿ ಎಸ್‌ಐ ರವಿ ಬಿ.ಎಸ್., ಜಿ.ಪಂ. ಎಂಜಿನಿಯರ್ ಉಪವಿಭಾಗ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಇದ್ದರು.
ಕಾನೂನು, ಶಿಕ್ಷೆಯಿಂದ ಸುಧಾರಣೆ ಸಾಧ್ಯವಿಲ್ಲ
ಆಸ್ಪತ್ರೆ ಮತ್ತು ವಿದ್ಯಾರ್ಥಿನಿಲಯ ಭೇಟಿ ಬಳಿಕ ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಅವರು ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ತಾನು ಭೇಟಿ ನೀಡುವ ಇಲಾಖೆಯ ಸಮಸ್ಯೆ ಸಂಬಂಧಪಟ್ಟಂತೆ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಸುಧಾರಣೆ ಮಾಡಲು ಪ್ರಯತ್ನಿಸುತ್ತೇನೆ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಂತ ಹಂತವಾಗಿ ಎಲ್ಲರೂ ಪೂರಕವಾಗಿ ಕೆಲಸ ಮಾಡಿದಾಗ ಸಮಾಜದ ಸುಧಾರಣೆ ಸಾಧ್ಯ ಎಂದರು.
ಸಮಾಜದ ತಪ್ಪುಗಳನ್ನು ಒಬ್ಬನಿಂದ ತಿದ್ದಲು ಸಾಧ್ಯವಿಲ್ಲ. ಬದಲಾಗಿ ಏಕರೂಪದಲ್ಲಿ ಬದ್ಧತೆ ತೋರಿದರೆ ಮಾತ್ರ ಸುಧಾರಣೆ ಸಾಧ್ಯ ಹೊರತು ಕಾನೂನು ಮತ್ತು ಶಿಕ್ಷೆಯಿಂದ ಸಾಧ್ಯವಿಲ್ಲ ಎಂದರು.
ಉಜಿರೆಯಲ್ಲಿರುವ ಅಂಗನವಾಡಿ ಮಕ್ಕಳೊಂದಿಗೆ ಮಾತನಾಡಿದ ಲೋಕಾಯುಕ್ತರು ಶಿಕ್ಷಕಿ ಮೀನಾಕ್ಷಿ ಅವರಿಂದ ಮಾಹಿತಿ ಪಡೆದರು. ಸ್ಥಳದಲ್ಲಿದ್ದ ಬೆಳ್ತಂಗಡಿ ಸಿಡಿಪಿಒ ಪ್ರಿಯಾ ಆ್ಯಗ್ನೆಸ್ ಜತೆ ತಾಲೂಕಿನ ಅಂಗನವಾಡಿಗಳ ಸ್ಥಿತಿಗತಿ ಕುರಿತು ಚರ್ಚಿಸಿ ಪ್ರತಿ ದಿನ ಒಂದರಂತೆ ತಾಲೂಕಿನ ಎಲ್ಲ ಅಂಗನವಾಡಿಗೆ ಭೇಟಿ ನೀಡಿ ಮಕ್ಕಳ ಕುರಿತು ಗಮನ ಹರಿಸಬೇಕು ಎಂದು ಸೂಚಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.