ಹೂ ಕೋಸು ಕೈ ತುಂಬ ಕಾಸು
Team Udayavani, Jun 10, 2019, 6:00 AM IST
ಮನೆಗೆ ಹತ್ತಿರದಲ್ಲೇ ಇರುವ ಹೊಲದಲ್ಲಿ ಐದಾರು ಬಗೆಯ ಬೆಳೆಗಳನ್ನು ಬೆಳೆದಿರುವ ಇಮ್ರಾನ್, ಪ್ರತಿಯೊಂದು ಬೆಳೆಯಿಂದಲೂ ಲಾಭ ಕಂಡಿರುವುದೇ ವಿಶೇಷ.
ದಾವಣಗೆರೆ ಜಿಲ್ಲೆ ಹೊನ್ನಾಳಿಯ ಮಲ್ಲಾಪುರ ಗ್ರಾಮ ಅರೆ ಮಲೆನಾಡಿನ ಸೆರಗಿನಲ್ಲಿದೆ. ಇಲ್ಲೂ ಕೂಡ ಅಡಿಕೆ ಹುಲಸಾಗಿ ಬೆಳೆಯಬಲ್ಲದು. ವಿಷಯ ಅದಲ್ಲ, ಈ ಗ್ರಾಮದ ಯುವ ರೈತ ಇಮ್ರಾನ್ ತನ್ನ ಮನೆ ಪಕ್ಕದ ಹೊಲದಲ್ಲಿ ಅಡಿಕೆ ಸಸಿ ನೆಟ್ಟು ಅವುಗಳ ನಡುವೆ ಹೂ ಕೋಸಿನ ಕೃಷಿ ನಡೆಸಿ ಬಂಪರ್ ಫಸಲು ತೆಗೆಯುತ್ತಿರುವುದು. ಆಯನೂರು-ಸವಳಂಗದ ಮುಖ್ಯ ರಸ್ತೆಗೆ ತಾಗಿಕೊಂಡಂತೆ ಇವರ ಮನೆ ಕಮ್ ಹೊಲವಿದೆ. ಈ ಭಾಗದಲ್ಲಿ ಪ್ರಯಾಣಿಸುವವರನ್ನು ಇಮ್ರಾನ್‌ರ ಕೃಷಿ ಆಕರ್ಷಿಸುತ್ತದೆ.
ಕೃಷಿ ಹೇಗೆ ?
ಇಮ್ರಾನ್, ಮೂರು ವರ್ಷದ ಹಿಂದೆ ಮನೆ ಹಿಂಭಾಗದ 50 ಗುಂಟೆಯಲ್ಲಿ ಅಡಿಕೆ ಸಸಿ ನಾಟಿ ಮಾಡಿದರು. ಆ ವರ್ಷ ಈ ಹೊಲದಲ್ಲಿ ಅಡಿಕೆ ಸಸಿಗಳ ನಡುವೆ ಶುಂಠಿ ಕೃಷಿ ನಡೆಸಿ ಉತ್ತಮ ಫಸಲು ಪಡೆದರು. ತೊಗರಿ ಬೆಳೆಯಲ್ಲೂ ಯಶಸ್ವಿಯಾದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೆಣಸಿನ ಸಸಿ ಬೆಳೆಸಿ ಫಸಲು ಪಡೆದದ್ದೂ ಆಯಿತು. ಈಗ ಹೂ ಕೋಸು ಬೆಳೆಯ ಕಡೆ ತಿರುಗಿದ್ದಾರೆ.
ಇವರಿಗೆ ಹೂ ಕೋಸು ಬೆಳೆಯುವುದು ಸುಲಭ. ಏಕೆಂದರೆ, ಅಡಿಕೆ ಸಸಿಗಳನ್ನು ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 9 ಅಡಿ ಅಂತರದಲ್ಲಿ ನೆಟ್ಟಿದ್ದಾರೆ. ಇವರಲ್ಲಿ ಒಟ್ಟು 800 ಅಡಿಕೆ ಸಸಿಗಳಿವೆ. ಅಡಿಕೆ ಸಸಿಗಳ ನಡುವಿನ ಜಾಗದಲ್ಲಿ ಚಿಕ್ಕ ಟ್ರಾÂಕ್ಟರ್ ನಿಂದ ಭೂಮಿಯನ್ನು ಹದಗೊಳಿಸಿ ಪಟ್ಟೆ ಸಾಲು ನಿರ್ಮಿಸಿದ್ದಾರೆ. ಸಮೀಪದ ಬುಳ್ಳಾಪುರದ ನರ್ಸರಿಯಿಂದ ಒಂದು ರೂ.ಗೆ ಒಂದು ಸಸಿಯಂತೆ ಹೂ ಕೋಸಿನ ಸಸಿ ಖರೀದಿಸಿ, ಅದನ್ನು ಮರದ ನಡುವೆ ಸಾಲಿನಿಂದ ಸಾಲಿಗೆ ಒಂದೂವರೆ ಅಡಿ ಮತ್ತು ಗಿಡದಿಂದ ಗಿಡಕ್ಕೆ ಒಂದು ಅಡಿಯಂತೆ ನಾಲ್ಕು ಸಾಲು ಮಾಡಿ ಸಸಿ ನೆಟ್ಟಿದ್ದಾರೆ. 100 ಅಡಿ ಉದ್ದದ ಪಟ್ಟೆ ಸಾಲಿದೆ. ಸಸಿ ನೆಟ್ಟು ಒಂದು ವಾರದ ನಂತರ ಡಿಎಪಿ ಗೊಬ್ಬರ ನೀಡಿದ್ದಾರೆ. ಕೊಳವೆ ಬಾವಿಯಿಂದ ನೇರ ಹೂ ಕೋಸಿನ ಗಿಡಗಳಿಗೆ ತಲುಪುವಂತೆ ನೀರಿನ ವ್ಯವಸ್ಥೆ ಮಾಡಿದ್ದಾರೆ. ಹೀಗೆ, ಪ್ರತಿ 3 ದಿನಕ್ಕೊಮ್ಮೆ ನೀರು ಹಾಯಿಸುತ್ತಿದ್ದಾರೆ.
ಲಾಭ ಹೇಗೆ ?
ಪ್ರಸ್ತುತ ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ಅಡಿಕೆ ಸಸಿಯ ತೋಟವಿದೆ. ನಡುವೆ ಒಟ್ಟು 1,500 ಹೂ ಕೋಸಿನ ಸಸಿ ನೆಟ್ಟಿದ್ದಾರೆ. ಪ್ರತಿ 20 ದಿನಕ್ಕೆ ಒಮ್ಮೆಯಂತೆ 3 ಸಲ ಕಾಂಪ್ಲೆಕ್ಸ್ ಗೊಬ್ಬರ ಕೊಟ್ಟಿದ್ದಾರೆ. ಪ್ರತಿ ಗಿಡದಿಂದ ಸರಾಸರಿ 3 ಕಿ.ಗ್ರಾಂ. ಹೂ ಕೋಸಿನ ಫಸಲು ದೊರೆತಿದೆ. 1,500 ಗಿಡದಿಂದ ಒಟ್ಟು 45 ಕ್ವಿಂಟಾಲ್ ಫಸಲು ಮಾರಾಟವಾಗಿದೆ. ಕ್ವಿಂಟಾಲ್ ಒಂದಕ್ಕೆ ಸರಾಸರಿ 1,000ರೂ. ಬೆಲೆ ಸಿಕ್ಕಿದೆ. ಇದರಿಂದ ಇಮ್ರಾನ್‌ಗೆ 45 ಸಾವಿರ ರೂ. ಜೇಬು ತುಂಬಿದೆ. ಸಸಿ ಖರೀದಿ, ಗೊಬ್ಬರ, ಕೂಲಿ ನಿರ್ವಹಣೆ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ರೂ.8 ಸಾವಿರ ಖರ್ಚಾಗಿದೆ ಅಷ್ಟೇ. ಅಂದರೆ, 37 ಸಾವಿರ ರೂ. ನಿವ್ವಳ ಲಾಭ. ಅಡಿಕೆ ಸಸಿಗಳ ನಡುವಿನ ಖಾಲಿ ಜಾಗದಲ್ಲಿ ಕೇವಲ 3 ತಿಂಗಳ ಕೃಷಿಯಿಂದ ಇವರಿಗೆ ಈ ಲಾಭ ದೊರೆತಿದ್ದು ಸುತ್ತ ಮುತ್ತಲ ರೈತರ ಗಮನ ಸೆಳೆದಿದ್ದಾರೆ. ಅಲ್ಲದೆ ಅಡಿಕೆ ತೋಟಕ್ಕೆ ಬೇಲಿಯಂತೆ 400 ಸಿಲ್ವರ್ ಗಿಡಗಳನ್ನು ನೆಟ್ಟಿದ್ದಾರೆ. ಅಡಕೆ ಸಸಿಗಳ ನಡುವಿನ ಖಾಲಿ ಸ್ಥಳದಲ್ಲಿ 400 ಕಾಫಿ ಸಸಿ ನೆಟ್ಟಿದ್ದಾರೆ. ಮುಂದೆ ಲಾಭವೋ ಲಾಭ.
-ಎನ್.ಡಿ.ಹೆಗಡೆ ಆನಂದಪುರಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.