ರೆಡ್ ಮಿ 7 ಎಸ್: ಏಳರ ಕೂಟಕ್ಕೆ ಇನ್ನೊಂದು
ಕಾಸು ಕಮ್ಮಿ, ಲಾಭ ಜಾಸ್ತಿ !
Team Udayavani, Jun 10, 2019, 6:00 AM IST
ಶಿಯೋಮಿಯ ಉಪ ಬ್ರಾಂಡ್ ಆದ ರೆಡ್‌ಮಿ, ರೆಡ್‌ಮಿ 7 ಎಸ್ ಎಂಬ ಇನ್ನೊಂದು ಹೊಸ ಮೊಬೈಲನ್ನು ಇದೀಗ ಬಿಡುಗಡೆ ಮಾಡಿದೆ. ರೆಡ್‌ಮಿ 7 ಪ್ರೊಗೆ ದರ ಹೆಚ್ಚಾಯಿತು. ನನ್ನ ಬಳಕೆಗೆ 11-12 ಸಾವಿರದೊಳಗೆ ಇರುವ ಮೊಬೈಲ್ ಸಾಕು ಎನ್ನುವವರಿಗೆ ಇದು ಸೂಕ್ತ ಆಯ್ಕೆ ಎನ್ನಲಡ್ಡಿಯಿಲ್ಲ.
ಶಿಯೋಮಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮೊಬೈಲ್ ಬ್ರಾಂಡ್ ಎಂಬುದು ಎಲ್ಲರಿಗೂ ತಿಳಿದೇ ಇದೆ. ಈ ಬ್ರಾಂಡ್‌ನ ಯಶಸ್ಸಿಗೆ ಕಾರಣ ಆರಂಭಿಕ ದರ್ಜೆ ಹಾಗೂ ಮಧ್ಯಮ ದರ್ಜೆಯಲ್ಲಿ ಮಿತವ್ಯಯದ ದರಕ್ಕೆ ಉತ್ತಮ ತಾಂತ್ರಿಕ ಅಂಶಗಳನ್ನೊಳಗೊಂಡ ಫೋನ್‌ಗಳನ್ನು ನೀಡುತ್ತಿರುವುದು. ಭಾರತದಲ್ಲಿ ಬಹಳ ಎಚ್ಚರಿಕೆಯಿಂದ ತನ್ನ ಫೋನ್‌ಗಳನ್ನು ಬಿಡುಗಡೆ ಮಾಡುವ ಈ ಬ್ರಾಂಡ್ ಆದಷ್ಟೂ
15 ಸಾವಿರ ದರಪಟ್ಟಿಯೊಳಗೆ ತನ್ನ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದೆ.( ಶೀಘ್ರವೇ ಭಾರತದಲ್ಲಿ ತನ್ನ ಫ್ಲಾಗ್‌ಶಿಪ್ (ಉನ್ನತ ದರ್ಜೆಯ) ಫೋನ್ ಬಿಡುಗಡೆ ಮಾಡಲಿದೆ) ಕೆಲವೇ ತಿಂಗಳ ಹಿಂದೆ ರೆಡ್‌ಮಿ ನೋಟ್ 7 ಪ್ರೊ ಎಂಬ ಮೊಬೈಲನ್ನು ರೆಡ್‌ಮಿ ಬಿಡುಗಡೆ ಮಾಡಿದ್ದು, ಅದು ಬೆಸ್ಟ್ ಸೆಲ್ಲರ್ ಕೂಡ ಆಗಿದೆ.
ಅದಕ್ಕಿಂತ ಒಂದೆರಡು ಸಾವಿರ ಕಡಿಮೆ ದರದಲ್ಲಿ ಇನ್ನೊಂದು ಫೋನನ್ನು ರೆಡ್ ಮಿ ಬಿಡುಗಡೆ ಮಾಡಿದೆ. ಅದುವೇ ರೆಡ್‌ಮಿ ನೋಟ್ 7 ಎಸ್. ರೆಡ್ ಮಿ ಕಂಪೆನಿಯವರು ರೆಡ್‌ಮಿ 7, ರೆಡ್‌ಮಿ ನೋಟ್ 7, ರೆಡ್‌ಮಿ ನೋಟ್ 7 ಪ್ರೊ, ರೆಡ್‌ಮಿ ನೋಟ್ 7ಎಸ್ ಎಂದುಕೊಂಡು ಏಳರ ಹಿಂದೆ ಬಿದ್ದಿದ್ದಾರೆ! ಇವರ ಏಳರಾಟದ ಕಾಟ ಗ್ರಾಹಕರಿಗೆ ತುಂಬಾ ಗೊಂದಲ ಉಂಟು ಮಾಡಿರುವುದಂಟೂ ನಿಜ! ರೆಡ್‌ಮಿ ನೋಟ್ 7 ಎಸ್, ರೆಡ್‌ಮಿ ನೋಟ್ 7 ಪ್ರೊ ಗಿಂತ ಸ್ವಲ್ಪ ಕಡಿಮೆ ಗುಣವಿಶೇಷಗಳನ್ನೊಳಗೊಂಡಿರುವ ಫೋನ್. 10 ರಿಂದ 13 ಸಾವಿರದ ದರ ಪಟ್ಟಿಯಲ್ಲಿ ಇದೊಂದು ಉತ್ತಮ ಫೋನ್ ಎಂದು ನಿಸ್ಸಂದೇಹವಾಗಿ ಹೇಳಬಹುದು.
ರೆಡ್‌ಮಿ ನೋಟ್ 7 ಪ್ರೊ ಹಾಗೂ 7ಎಸ್ ಎರಡರ ಬಾಹ್ಯ ವಿನ್ಯಾಸ, ಅಳತೆ, ತೂಕ ಎಲ್ಲ ಎರಡೂ ಸೇಮ್ ಟು ಸೇಮ್ ಇವೆ. ಆದರೆ ಇವೆರಡರ ನಡುವೆ ಪ್ರಮುಖ ವ್ಯತ್ಯಾಸ ಏನೆಂದರೆ, 7ಪ್ರೊ ದಲ್ಲಿರುವುದು ಸ್ನಾಪ್‌ಡ್ರಾಗನ್ 675 ಪ್ರೊಸೆಸರ್ ಮತ್ತು ಸೋನಿ ಸೆನ್ಸರ್ ಉಳ್ಳ 48 ಮೆ.ಪಿ. ಕ್ಯಾಮರಾ. 7ಎಸ್ ನಲ್ಲಿರುವುದು ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ ಮತ್ತು ಸ್ಯಾಮ್‌ಸಂಗ್ ಸೆನ್ಸರ್ ಉಳ್ಳ 48 ಮೆ.ಪಿ. ಕ್ಯಾಮರಾ.
ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ 14 ನ್ಯಾನೋ ಮೀಟರ್‌ನ ಎಂಟು ಕೋರ್‌ಗಳ ಪ್ರೊಸೆಸರ್ ಆಗಿದೆ. 2.2 ಗಿ.ಹ ಸಾಮರ್ಥ್ಯವಿದೆ. 6.3 ಇಂಚಿನ ಎಫ್ಎಚ್‌ಡಿ ಪ್ಲಸ್ (2340*1080) 409 ಪಿಪಿಐ, ವಾಟರ್‌ಡ್ರಾಪ್ ನಾಚ್ ಡಿಸ್‌ಪ್ಲೇ ಇದೆ. ಡಿಸ್‌ಪ್ಲೇ ಮೇಲೆ ಮತ್ತು ಮೊಬೈಲ್‌ನ ಹಿಂಬದಿಯ ಗಾಜಿನ ದೇಹಕ್ಕೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಇದೆ.
3 ಜಿಬಿ ರ್ಯಾಮ್ 32 ಜಿಬಿ ಆಂತರಿಕ ಸಂಗ್ರಹ ಹಾಗೂ 4 ಜಿಬಿ ರ್ಯಾಮ್, 64 ಜಿಬಿ ಆಂತರಿಕ ಸಂಗ್ರಹದ ಎರಡು ಆವೃತ್ತಿಗಳಿವೆ. ಎರಡು ಸಿಮ್ ಹಾಕಿದರೆ ಮೆಮೊರಿ ಕಾರ್ಡ್ ಹಾಕಲಾಗುವುದಿಲ್ಲ. (ಹೈಬ್ರಿಡ್ ಸಿಮ್ ಸ್ಲಾಟ್) ಒಂದು ಸಿಮ್ ಹಾಕಿಕೊಂಡು ಇನ್ನೊಂದಕ್ಕೆ ಮೆಮೊರಿ ಕಾರ್ಡ್ ಹಾಕಿಕೊಳ್ಳಬಹುದು. ಎರಡೂ ಸಿಮ್ ಸ್ಲಾಟ್ 4ಜಿ ಹೊಂದಿದೆ.
ಶಿಯೋಮಿಯವರು 48 ಮೆಗಾಪಿಕ್ಸಲ್ ಎಂಬುದು ಗ್ರಾಹಕರನ್ನು ತಕ್ಷಣ ಸೆಳೆಯುತ್ತದೆ ಎಂಬುದನ್ನು ತಿಳಿದು ಇದರಲ್ಲೂ 48 ಮೆ.ಪಿ. ಕ್ಯಾಮರಾ ಮತ್ತು 5 ಮೆ.ಪಿ. ಡುಯಲ್ ಕ್ಯಾಮರಾ ಅಳವಡಿಸಿದ್ದಾರೆ. ಅರೆ! ರೆಡ್‌ಮಿ ನೋಟ್ 7 ಪ್ರೊದಲ್ಲೂ 48 ಮೆ.ಪಿ. ಕ್ಯಾಮರಾ ಇದೆಯಲ್ಲ ಎಂದು ನೀವು ಕೇಳಬಹುದು. ಆದರೆ 7 ಪ್ರೊ ದಲ್ಲಿರುವುದು ಸೋನಿ ಐಎಂಎಕ್ಸ್ 586 ಸೆನ್ಸರ್ ಇರುವ ಕ್ಯಾಮರಾ. 7ಎಸ್ ನಲ್ಲಿರುವುದು ಸ್ಯಾಮ್‌ಸಂಗ್ ಜಿಎಂ1 ಕ್ಯಾಮರಾ ಸೆನ್ಸರ್. ಸೋನಿ ಐಎಂಎಕ್ಸ್ ಸೆನ್ಸರ್ 48 ಮಿಲಿಯನ್ ಪಿಕ್ಸಲ್‌ಗಳನ್ನು ಹೊಂದಿದೆ. ಆದರೆ ಸ್ಯಾಮ್‌ಸಂಗ್ ಜಿಎಂ1 12 ಮಿಲಿಯನ್‌ಪಿಕ್ಸಲ್ ಹೊಂದಿದೆ. ಹಾಗಾಗಿ ಸೋನಿ ಸೆನ್ಸರ್ ಹೆಚ್ಚು ಗುಣಮಟ್ಟದ ಫೋಟೋಗಳನ್ನು ನೀಡುತ್ತದೆ.
ರೆಡ್‌ಮಿ ನೋಟ್ 7 ಎಸ್ ನ ಸೆಲ್ಫಿà ಕ್ಯಾಮರಾ 13 ಮೆಗಾಪಿಕ್ಸಲ್‌ನ ಒಂದೇ ಕ್ಯಾಮರಾ ಹೊಂದಿದೆ. 4000 ಎಂಎಎಚ್ ಬ್ಯಾಟರಿ ಹೊಂದಿದೆ. ಬ್ಯಾಟರಿ ಬಾಳಿಕೆ ಚೆನ್ನಾಗಿ ಬರಬೇಕೆಂಬುವರಿಗೆ ಸೂಕ್ತವಾಗಿದೆ. ಬ್ಯಾಟರಿ ಚಾರ್ಜ್ ಮಾಡಲು, ಯುಎಸ್‌ಬಿ ಟೈಪ್ ಸಿ ಪೋರ್ಟ್ ನೀಡಲಾಗಿದೆ. ಚಾಣಾಕ್ಷ ಶಿಯೋಮಿಯವರು ಇದಕ್ಕೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಿದ್ದಾರೆ. ಆದರೆ ಮೊಬೈಲ್ ಜೊತೆ ಬರುವ ಚಾರ್ಜರ್ ಫಾಸ್ಟ್ ಚಾರ್ಜರ್ ಅಲ್ಲ! ನಿಮಗೆ ವೇಗದ ಚಾರ್ಜರ್ ಬೇಕೆಂದರೆ 600-700 ರೂ. ಖರ್ಚು ಮಾಡಿ ಹೊಸದಾಗಿ ಖರೀದಿಸಬೇಕು.
ಈ ಮೊಬೈಲ್ ಆಂಡ್ರಾಯ್ಡ ಪೈ ವರ್ಷನ್ ಹೊಂದಿದೆ. ಮಿ ಯೂಸರ್ ಇಂಟರ್‌ಫೇಸ್ ಒಳಗೊಂಡಿದೆ. ಎಂಐಯುಐ ಎಂಬ ಈ ಇಂಟರ್‌ಫೇಸ್‌ನಲ್ಲಿ ಸಾಕಷ್ಟು ಗ್ರಾಹಕ ಸ್ನೇಹಿ ಫೀಚರ್‌ಗಳಿರುತ್ತವೆ.
ಈ ಮೊಬೈಲ್‌ನ ದರಪಟ್ಟಿ ನಿಜಕ್ಕೂ ಗ್ರಾಹಕರ ಕೈಗೆಟಕುವಂತಿದೆ. ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ ಉತ್ತಮವಾದ, ವೇಗವಾದ ಪ್ರೊಸೆಸರ್ ಆಗಿದ್ದು, ಇದನ್ನೊಳಗೊಂಡಿರುವ ಮೊಬೈಲ್ 11 ಸಾವಿರಕ್ಕೇ ನೀಡಲಾಗಿದೆ. 3 ಜಿಬಿ ರ್ಯಾಮ್ ಮತ್ತು 32 ಜಿಬಿ ಆಂತರಿಕ ಸಂಗ್ರಹದ ಆವೃತ್ತಿಗೆ 11 ಸಾವಿರ ರೂ. ದರವಿದೆ. 4 ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹವುಳ್ಳ ಆವೃತ್ತಿಗೆ 13 ಸಾವಿರ ರೂ. ದರವಿದೆ. ಕೆಂಪು, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿದ್ದು, ಮಿ ಸ್ಟೋರ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ದೊರಕುತ್ತದೆ. ಸದ್ಯ, ಈ ಮಾಡೆಲ್ ಫ್ಲಾಶ್‌ಸೇಲ್‌ನ ಗೊಡವೆಯಿಲ್ಲದೇ ಮುಕ್ತವಾಗಿ ದೊರಕುತ್ತಿದೆ!
-ಕೆ.ಎಸ್.ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.