ಸಾವಿರ ಗ್ರಾಮಗಳಲ್ಲಿ “ಸ್ವಚ್ಛಮೇವ ಜಯತೆ’ ಆಂದೋಲನ
Team Udayavani, Jun 10, 2019, 3:08 AM IST
ಬೆಂಗಳೂರು: ರಾಜ್ಯದ ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ “ಸ್ವಚ್ಛಮೇವ ಜಯತೆ’ಗೆ ಕಾಲ ಕೂಡಿ ಬಂದಿದೆ. 2019-20ನೇ ಸಾಲಿನ ಬಜೆಟ್ ಘೋಷಣೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ “ಸ್ವಚ್ಛ ಭಾರತ-ಸ್ವಸ್ಥ ಭಾರತ’ ನಿರ್ಮಾಣದ ಗುರಿಗೆ ಪೂರಕವಾಗಿ ಈಗಾಗಲೇ ಕರ್ನಾಟಕ ಸಂಪೂರ್ಣ “ಬಯಲು ಬಹಿರ್ದೆಸೆ ಮುಕ್ತ’ ರಾಜ್ಯ ಎಂದು ಘೋಷಿಸಿಕೊಂಡಿದೆ. ಅದರ ಮುಂದಿನ ಹೆಜ್ಜೆಯಾಗಿ ರಾಜ್ಯವನ್ನು ಸ್ವಚ್ಛ ಮತ್ತು ಸುಂದರವನ್ನಾಗಿ ಮಾಡುವ ವಿಶಾಲ ದೃಷ್ಠಿಕೋನದಿಂದ ಗ್ರಾಮೀಣ ಭಾಗದ ಘನ ಮತ್ತು ದ್ರವ ತ್ಯಾಜ್ಯದ ಸಮರ್ಪಕ ನಿರ್ವಹಣೆಯ ಉದ್ದೇಶವನ್ನು ಈ “ಸ್ವಚ್ಛಮೇವ ಜಯತೆ’ ಕಾರ್ಯಕ್ರಮ ಹೊಂದಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು 2019ರ ಫೆ.8ರಂದು ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಈ “ಸ್ವಚ್ಛಮೇವ ಜಯತೆ’ ಕಾರ್ಯಕ್ರಮಕ್ಕೆ ರಾಜ್ಯಮಟ್ಟದಲ್ಲಿ ಜೂನ್ 11ರಂದು ಚಾಲನೆ ನೀಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಇದರ ಜತೆಗೆ ಈಗಾಗಲೇ ಜಾರಿಯಲ್ಲಿರುವ “ಜಲಾಮೃತ’ ಯೋಜನೆಯಡಿಯಲ್ಲಿ ರಾಜ್ಯದ 6 ಸಾವಿರ ಗ್ರಾಪಂಗಳಲ್ಲಿ 30 ಲಕ್ಷ ಸಸಿಗಳನ್ನು ನೆಡುವ ವಿಶೇಷ ಕಾರ್ಯಕ್ರಮಕ್ಕೂ ಇದೇ ವೇಳೆ ಚಾಲನೆ ನೀಡಲಾಗುತ್ತಿದೆ. ಸ್ವಚ್ಛಮೇವ ಜಯತೆ ಮತ್ತು ಜಲಾಮೃತ ಯೋಜನೆಗಳಡಿ ವಿವಿಧ ಕಾರ್ಯಕ್ರಮಗಳನ್ನು ಜೂ.11ರಿಂದ ಜುಲೈ 11ರವರೆಗೆ ಅಭಿಯಾನದ ರೂಪದಲ್ಲಿ ಅನುಷ್ಠಾನಕ್ಕೆ ತರಲು ಇಲಾಖೆ ಕ್ರಿಯಾ ಯೋಜನೆಯನ್ನು ರೂಪಿಸಿದೆ.
ಏನಿದು ಸ್ವಚ್ಛಮೇವ ಜಯತೆ: ಹಳ್ಳಿಗಳಲ್ಲಿ ದಿನೇ ದಿನೆ ಪ್ಲಾಸ್ಟಿಕ್, ಗಾಜು, ಬಾಟಲ್ ಇತ್ಯಾದಿ ಘನ ತ್ಯಾಜ್ಯಗಳ ಶೇಖರಣೆ ಹೆಚ್ಚಾಗುತ್ತಿದೆ. ಇದು ಗ್ರಾಮೀಣ ಜನತೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಗ್ರಾಮಗಳ ಸ್ವಚ್ಛತೆ ಹಾಗೂ ಸೌಂದರ್ಯ ನಶಿಸುತ್ತಿದೆ. ನಗರ ಪ್ರದೇಶಗಳಿಗೆ ಹತ್ತಿರದಲ್ಲಿರುವ ಗ್ರಾಮಗಳಲ್ಲಿ ಕಸದ ಸಮಸ್ಯೆ ಇನ್ನೂ ಹೆಚ್ಚಾಗುತ್ತಿದೆ. ಅಲ್ಲದೇ ನಗರದ ಕಸವನ್ನು ಗ್ರಾಮಗಳಲ್ಲಿ ತಂದು ಹಾಕುವ ಪ್ರವೃತ್ತಿ ಬೆಳೆಯುತ್ತಿದೆ.
ಈ ಸಮಸ್ಯೆಗೆ ಪರಿಹಾರ ಒದಗಿಸುವ ಅವಶ್ಯಕತೆಯಿದೆ. ಘನ ತ್ಯಾಜ್ಯ ವಿಲೇವಾರಿಯಲ್ಲಿ ಒಣ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ, ಒಣ ಕಸವನ್ನು ಮರು ಬಳಕೆ ಮಾಡುವುದು ಹಾಗೂ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ವ್ಯವಸ್ಥೆ ರೂಪಿಸಲು 2019-20ನೇ ಸಾಲಿನಲ್ಲಿ “ಸ್ವಚ್ಛಮೇವ ಜಯತೆ’ ಕಾರ್ಯಕ್ರಮದಡಿ ಆಯ್ದ ಸಾವಿರ ಗ್ರಾಪಂಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕಾಗಿ 2 ಸಾವಿರ ಕೋಟಿ ರೂ.ಮೀಸಲಿಡಲಾಗಿದೆ.
6 ಸಾವಿರ ಗ್ರಾಪಂಗಳಲ್ಲಿ 30 ಲಕ್ಷ ಸಸಿ: 2019ನೇ ವರ್ಷವನ್ನು “ಜಲ ವರ್ಷ’ ಎಂದು ಘೋಷಿಸಿರುವ ರಾಜ್ಯ ಸರ್ಕಾರ ಜಲ ಸಾಕ್ಷರತೆ, ನೀರಿನ ಮಿತ ಬಳಕೆ, ಸಾಂಪ್ರದಾಯಿಕ ಜಲ ಮೂಲಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ಹಾಗೂ ಹಸಿರೀಕರಣಕ್ಕೆ ಒತ್ತು ಕೊಡುವ “ಜಲಾಮೃತ’ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿದ್ದು, ಅದನ್ನು 2019ರ ಫೆ.28ರಂದು ಜಾರಿಗೆ ತರಲಾಗಿದೆ.
ಈಗ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ “ಜಲಾಮೃತ’ ಯೋಜನೆಯಡಿ ರಾಜ್ಯದ 6,021 ಗ್ರಾಪಂಗಳಲ್ಲಿ ಪ್ರತಿ ಗ್ರಾ.ಪಂ.ನಲ್ಲಿ 500ರಂತೆ ರಾಜ್ಯಾದ್ಯಂತ 30 ಲಕ್ಷ ಸಸಿಗಳನ್ನು ನೆಡುವ, 20 ಸಾವಿರ ಚೆಕ್ ಡ್ಯಾಂ ನಿರ್ಮಿಸುವ ಕಾರ್ಯಕ್ಕೆ ಜೂ.11ರಿಂದ ಚಾಲನೆ ನೀಡಲು ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ಧರಿಸಿದೆ. ಜಲಾಮೃತ ಯೋಜನೆಗೆ 500 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.
ಗ್ರಾಮೀಣ ಭಾಗದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸಿ ಅದನ್ನು ಮರು ಬಳಕೆ ಮಾಡುವ ಉದ್ದೇಶದ “ಸ್ವಚ್ಛಮೇವ ಜಯತೆ’ ಕಾರ್ಯಕ್ರಮಕ್ಕೆ ಜೂ.11ರಂದು ಚಾಲನೆ ನೀಡಲಾಗುತ್ತಿದೆ. ಇದೇ ವೇಳೆ, “ಜಲಾಮೃತ’ ಯೋಜನೆಯಡಿ 30 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಅಲ್ಲದೆ, ಜಲ ಸಂರಕ್ಷಣಾ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.
-ಎಲ್.ಕೆ.ಅತೀಕ್, ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ
* ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.