ಬಾರೋ ಸಾಧಕರ ಕೇರಿಗೆ…
Team Udayavani, Jun 11, 2019, 6:00 AM IST
ಸಾಧಕರೇನೇ ಮಾಡಲಿ ಅದು ಚೆಂದ ಅಂತ ಬರಮಾಡಿಕೊಂಡು, ಅಲ್ಲೊಂದು ಸ್ಫೂರ್ತಿಯನ್ನೋ, ಸ್ವಾರಸ್ಯವನ್ನೋ ಕಂಡುಕೊಳ್ಳುವವರು ನಾವು. ಅವರು ಇಡುವ ಹೆಜ್ಜೆಗಳ ಮೇಲೆ ಏನೋ ಕುತೂಹಲ. ಚರಿತ್ರೆಯ ನೆನಪೇ ಆದರೂ, ಆ ವಿಸ್ಮಯ, ವಿನೋದಗಳನ್ನು ಸಾಲಾಗಿ ನಿಲ್ಲಿಸಿ, ಎದುರು ನೋಡುವುದೇ ಒಂದು ಖುಷಿ. ಅಂಥ ಸ್ವಾರಸ್ಯಗಳನ್ನೇ ಹೊತ್ತು ತರುತ್ತಿರುವ ಈ ಹೊಸ ಅಂಕಣ ಇನ್ನುಮುಂದೆ ನಿಮ್ಮ “ಜೋಶ್’ಗಾಗಿ…
ನೀರಲ್ಲೇ ಕೊಟ್ಟ ಸಂದರ್ಶನ
ಜಾನ್ ಕ್ವಿನ್ಸಿ ಆಡಮ್ಸ್, ಅಮೆರಿಕ ಸಂಯುಕ್ತ ಸಂಸ್ಥಾನದ ಆರನೇ ಅಧ್ಯಕ್ಷ (1825-29). ಅಮೆರಿಕದ ಇತಿಹಾಸದಲ್ಲಿ, ಅಧ್ಯಕ್ಷನಾಗಿ ಒಂದು ಮಹಿಳಾ ಪತ್ರಕರ್ತೆಗೆ ಸಂದರ್ಶನ ಕೊಟ್ಟ ಮೊತ್ತಮೊದಲ ದಾಖಲೆ ಜಾನ್ ಕ್ವಿನ್ಸಿ ಆಡಮ್ಸ್‌ನದು. ಸಂದರ್ಶನದಲ್ಲಿ ಆತ ಏನು ಹೇಳಿದ ಎಂಬುದಕ್ಕಿಂತಲೂ ಸಂದರ್ಶನ ನಡೆದದ್ದು ಹೇಗೆ ಎಂಬುದೇ ಹೆಚ್ಚು ಕುತೂಹಲಕರ ವಿಷಯ.
ಆತ ಅಧ್ಯಕ್ಷನಾಗಿದ್ದ ಸಮಯದಲ್ಲಿ ಆನ್ಯೆ ರಾಯಲ್ ಎಂಬಾಕೆ ಒಂದು ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಳು. ಆ ಕಾಲದಲ್ಲಿ ಅಮೆರಿಕದಲ್ಲಿ ಪತ್ರಿಕೋದ್ಯಮ ರಂಗದಲ್ಲಿ ಮಹಿಳೆಯರೇ ಇರಲಿಲ್ಲ. ಮಹಿಳೆ ಮತ್ತು ಪತ್ರಿಕೋದ್ಯಮ ವಿರುದ್ಧಾರ್ಥಕ ಪದಗಳಂತಿದ್ದವು. ಅಂಥ ಸಂದರ್ಭದಲ್ಲಿ ಆ ರಂಗಕ್ಕೆ ಕಾಲಿರಿಸಿದ ಆನ್ಯೆ ಗಟ್ಟಿಗಿತ್ತಿ ಎಂಬುದರಲ್ಲಿ ಸಂಶಯವಿಲ್ಲ. ಪತ್ರಿಕೋದ್ಯಮದ ಕೆರಿಯರ್‌ನಲ್ಲಿ ದೊಡ್ಡ ಹೆಸರು ಮಾಡಬೇಕಾದರೆ ಯಾರಾದರೂ ದೊಡ್ಡ ವ್ಯಕ್ತಿಯ ಸಂದರ್ಶನ ಮಾಡಬೇಕು ಎಂಬ ಆಸೆ ಎಲ್ಲ ಪತ್ರಕರ್ತರಿಗೂ ಇರುವಂಥದ್ದೇ. ಆನ್ಯೆಗೆ ಕೂಡ ಎಲ್ಲರಂತೆ, ವೃತ್ತಿಜೀವನದಲ್ಲಿ ಏನಾದರೂ ಮಹತ್ವದ್ದನ್ನು ಸಾಧಿಸಬೇಕು ಎಂಬ ಆಸೆಯಿತ್ತು. ಅಧ್ಯಕ್ಷರದ್ದೇ ಒಂದು ಸಂದರ್ಶನ ಮಾಡಿದರೆ ಹೇಗೆ ಎಂಬ ಯೋಚನೆ ಬಂತು. ಅಧ್ಯಕ್ಷರ ಕಚೇರಿಯನ್ನು ಸಂಪರ್ಕಿಸಿದಳು. ಅಲ್ಲಿಂದ (ಎಂದಿನಂತೆ!) ನಕಾರದ ಉತ್ತರ ಬಂತು. ರಾಜಕಾರಣಿಗಳು, ಪತ್ರಕರ್ತರನ್ನು ಸಾಕಷ್ಟು ಕುಣಿಸುತ್ತಾರೆ ಎಂಬುದು ಗೊತ್ತಿರುವ ವಿಚಾರವೇ ತಾನೆ? ಆದರೆ, ಆನ್ಯೆ ಬಿಡಲಿಲ್ಲ; ಅಧ್ಯಕ್ಷರ ಕಚೇರಿಯನ್ನು ಮೇಲಿಂದ ಮೇಲೆ ಸಂಪರ್ಕಿಸತೊಡಗಿದಳು. ಪ್ರತಿ ಬಾರಿಯೂ ಆಕೆಗೆ ಇಲ್ಲ ಎಂಬ ಉತ್ತರವೇ ಬಂತು. ಬೆನ್ನಿಗೊಂದು ಹಲಗೆ ಕಟ್ಟಿಕೊಂಡು ಚಂದ್ರನ ಅಂಗಳಕ್ಕಾದರೂ ಹೋಗಿ ಬರಬಹುದು, ಆದರೆ ಅಮೆರಿಕದ ಅಧ್ಯಕ್ಷರನ್ನು ಮಾತಾಡಿಸುವ ಅವಕಾಶ ಮಾತ್ರ ಸಿಗುವುದಿಲ್ಲ ಎಂಬಂಥ ಸನ್ನಿವೇಶ ಏರ್ಪಟ್ಟಿತ್ತು.
ಬೆನ್ನು ಬಿಡದ ಬೇತಾಳನಂತೆ ಅಮೆರಿಕನ್ ಅಧ್ಯಕ್ಷನ ಖಾಸಗಿ ವಿವರಗಳನ್ನು ಕಲೆ ಹಾಕತೊಡಗಿದ ಆನ್ಯೆಗೆ ಒಂದು ಸಂಗತಿ ತಿಳಿದುಬಂತು. ವಾಷಿಂಗ್ಟನ್ ಡಿ.ಸಿ.ಯನ್ನು ಹಾದುಹೋಗುವ ಪೋಟೋಮ್ಯಾಕ್ ನದಿಯ ಒಂದು ನಿರ್ದಿಷ್ಟ ಸ್ಥಳದಲ್ಲಿ ಅಧ್ಯಕ್ಷ ಜಾನ್ ಕ್ವಿನ್ಸಿ ಆಡಮ್ಸ್ ಪ್ರತಿ ದಿನ ಮುಂಜಾನೆ ಈಜುತ್ತಾನೆ ಎಂಬ ಸಂಗತಿ ಅದು. ಇದೇ ತಕ್ಕ ಅವಕಾಶವೆಂದರಿತ ಆನ್ಯೆ, ಅದೊಂದು ಮುಂಜಾನೆ ಆ ಸ್ಥಳದಲ್ಲಿ ಹೊಂಚುಹಾಕಿ ಕೂತಳು. ನಿರೀಕ್ಷೆಯಂತೆಯೇ ಜಾನ್ ಕ್ವಿನ್ಸಿ ಆಡಮ್ಸ್ ಅಲ್ಲಿಗೆ ಬಂದ. ತನ್ನ ಬಟ್ಟೆಗಳನ್ನು ಕಳಚಿಟ್ಟು, ನಗ್ನನಾಗಿ ನೀರಿಗಿಳಿದ. ಸುಮಾರು ಹೊತ್ತು ಮನದಣಿಯೆ ಈಜಾಡಿದ. ಈಜು ಮುಗಿಸಿ ನದಿಯ ತೀರಕ್ಕೆ ಬರುವಾಗ ಅವನು ಕಂಡದ್ದೇನು! ತನ್ನ ಬಟ್ಟೆಗಳ ಮೇಲೆ ಹೆಂಗಸೊಬ್ಬಳು ಕೂತಿದ್ದಾಳೆ! ಆನ್ಯೆ, ಆತನ ಬಟ್ಟೆಗಳ ಮೇಲೆ ಗಟ್ಟಿಯಾಗಿ ಕೂತುಕೊಂಡೇ ತಾನು ಬಂದಿರುವ ಉದ್ದೇಶವನ್ನು ಅಧ್ಯಕ್ಷನಿಗೆ ಕೂಗಿ ಹೇಳಿದಳು. “ಸರಿ ಮಹರಾಯ್ತಿ! ನಿನಗೆ ಸಂದರ್ಶನ ಕೊಡುತ್ತೇನೆ. ಮೊದಲು ಬಟ್ಟೆಗಳನ್ನು ಇತ್ತ ಕೊಡು. ಅವನ್ನು ಧರಿಸಿಕೊಂಡು ಬರುತ್ತೇನೆ’ ಎಂದು ಆತ ಕೂಗಿ ಹೇಳಿದ. ಆದರೆ, ಅವನ ಸಂದರ್ಶನಕ್ಕಾಗಿ ಅವಳು ಅದೆಷ್ಟು ಒದ್ದಾಡಿದ್ದಳೆಂದರೆ ಸಂದರ್ಶನದ ನಂತರವೇ ಬಟ್ಟೆ ಕೊಡುವುದೆಂದು ಹಠ ಹಿಡಿದಳು! ಅಮೆರಿಕದ ಅಧ್ಯಕ್ಷ ಅದೆಷ್ಟು ಗೋಗರೆದರೂ ಜಪ್ಪಯ್ಯ ಅನ್ನಲಿಲ್ಲ ಆ ಹೆಂಗಸು! ಕೊನೆಗೆ ಆಕೆಯ ಪ್ರಶ್ನೆಗಳಿಗೆ ಆತ ನೀರಲ್ಲಿ ನಿಂತುಕೊಂಡೇ ಉತ್ತರಿಸಬೇಕಾಯಿತು. ಪೂರ್ಣ ಸಂದರ್ಶನ ಮುಗಿದ ಮೇಲೆ ಆನ್ಯೆ ಎದ್ದು ಅಧ್ಯಕ್ಷನಿಗೆ ಅವನ ಬಟ್ಟೆಗಳನ್ನು ಕೊಟ್ಟಳು!
ಒಂದು ನಡೆಯದ ಕಾಳಗ
20ನೇ ಶತಮಾನದ ಪ್ರಾರಂಭದಲ್ಲಿ ಇಂಗ್ಲೆಂಡಿನ ಲೀಡ್ಸ್ ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಕೆಲಸ ಮಾಡಿದವನು ಲೆಸೆಲ್ಸ್ ಆಬರ್‌ಕ್ರಾಂಬಿ. ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಕುರಿತಾಗಿ ಹಲವು ಗ್ರಂಥಗಳನ್ನೂ ಬರೆದಾತ. ಕವಿ ಕೂಡ.
ಒಮ್ಮೆ ಆಬರ್‌ಕ್ರಾಂಬಿಗೂ ಇಂಗ್ಲಿಷ್ ಭಾಷೆಯ ಇನ್ನೊಬ್ಬ ಪ್ರಸಿದ್ಧ ಕವಿಯಾದ ಎಜ್ರಾ ಪೌಂಡ್‌ಗೂ ಯಾವುದೋ ವಿಷಯಕ್ಕೆ ಜಗಳ ಹತ್ತಿತು. ಅದು ಪತ್ರವಿನಿಮಯದ ಮೂಲಕ ಯುದ್ಧ ನಡೆಯುತ್ತಿದ್ದ ಕಾಲ! ಎಜ್ರಾ ಪೌಂಡ್ ಅದೆಷ್ಟು ಕ್ರುದ್ಧನಾಗಿದ್ದನೆಂದರೆ ಬರೆದ: “ಪ್ರಿಯ ಮಿಸ್ಟರ್ ಆಬರ್‌ಕ್ರಾಂಬಿಯವರೇ, ಮೂರ್ಖತನ ಒಂದು ಮಿತಿಯಲ್ಲಿದ್ದರೆ ಚೆನ್ನ. ಮಿತಿಮೀರಿ ಹೋಗಿಬಿಟ್ಟರೆ ಅದು ಸಾರ್ವಜನಿಕ ರಗಳೆಯಾಗುತ್ತದೆ. ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಒಂದು ದ್ವಂದ್ವ ಕಾಳಗದ ಮೂಲಕ ಪರಿಹರಿಸಿಕೊಳ್ಳೋಣ. ಸಮಯ ಮತ್ತು ಸ್ಥಳದ ಆಯ್ಕೆ ನಿಮಗೆ ಬಿಟ್ಟದ್ದು. ಈ ಕಾಳಗ ಆದಷ್ಟು ಬೇಗ ಏರ್ಪಟ್ಟರೆ ಚೆನ್ನ’.
ಪತ್ರ ಓದಿದ ಆಬರ್‌ಕ್ರಾಂಬಿಗೆ ಚಿಂತೆ ಶುರುವಾಯಿತು. ಯಾಕೆಂದರೆ, ಕತ್ತಿವರಸೆಯಲ್ಲಿ ಪೌಂಡ್‌ನ ಸಾಮರ್ಥ್ಯ ಏನು ಎನ್ನುವುದು ಅವನಿಗೆ ಗೊತ್ತಿಲ್ಲದ್ದೇನಲ್ಲ. ಅಂಥ ಕತ್ತಿಕಾಳಗ ನಡೆದರೆ ತಾನು ಒಂದು ಕೈಯೋ ಒಂದು ಕಾಲೋ ಕಳೆದುಕೊಳ್ಳಬೇಕಾಗಬಹುದು ಎಂಬುದೂ ಅವನಿಗೆ ಸ್ಪಷ್ಟವೇ ಇತ್ತು. ಕೂಡಲೇ ಒಂದು ಪತ್ರ ಬರೆದ: “ಪ್ರಿಯ ಎಜ್ರಾ ಪೌಂಡ್ ಅವರೇ, ನಿಮ್ಮ ಆಹ್ವಾನ ಸ್ವೀಕೃತ. ದ್ವಂದ್ವ ಎಂದಿದ್ದೀರೇ ವಿನಾ ಯಾವ ಆಯುಧ ಬಳಸಿ ಹೋರಾಡುವುದು ಎಂದು ತಾವು ತಿಳಿಸಿಲ್ಲ. ನಾವಿಬ್ಬರೂ ನಮ್ಮಲ್ಲಿರುವ ಮಾರಾಟವಾಗದ ಪುಸ್ತಕಗಳ ಪ್ರತಿಗಳನ್ನು ಎದುರಾಳಿಯ ಮೇಲೆ ಎಸೆಯುವುದರ ಮೂಲಕ ಕಾಳಗ ಮಾಡಿಕೊಂಡರೆ ಹೇಗೆ? ಒಂದಷ್ಟು ವಿದ್ವಾಂಸರ ಮುಂದೆ ಈ ದ್ವಂದ್ವಯುದ್ಧ ಏರ್ಪಾಟಾಗಲಿ’.
“ಎದುರಾಳಿಯ ಬಳಿ ಇರುವುದಕ್ಕಿಂತ ಹೆಚ್ಚು ಆಯುಧಗಳು ತನ್ನ ಬಳಿ ಸ್ಟಾಕ್ ಇವೆ ಎಂಬುದು ಲೋಕಕ್ಕೆಲ್ಲ ಗೊತ್ತಾಗುವುದು ಪೌಂಡ್‌ಗೆ ಬೇಕಿರಲಿಲ್ಲ. “ಸರಿ… ಸರಿ… ಕ್ಷಮಿಸಿದ್ದೇನೆ’ ಎಂದು ಪ್ರಕರಣಕ್ಕೆ ಸುಖಾಂತ್ಯ ಹಾಡಿದ ಪೌಂಡ್!
(“ಬಾರೋ ಸಾಧಕರ ಕೇರಿಗೆ…’ ಅಂಕಣವು ಪ್ರತಿವಾರ ಮೂಡಿಬರಲಿದೆ…)
– ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.