ಜಿಲ್ಲಾ ಪಂಚಾಯತ್ ರಸ್ತೆಗಳ ಚರಂಡಿ ಸುಸ್ಥಿತಿಗೆ ತರಲು ಮನವಿ
Team Udayavani, Jun 11, 2019, 5:50 AM IST
ಬೆಳ್ತಂಗಡಿ: ತಾಲೂಕಿನಲ್ಲಿರುವ ಪ್ರಮುಖ ರಸ್ತೆಗಳ ಚರಂಡಿಯ ಹೂಳೆತ್ತಿ ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಜೆಸಿಬಿ ಮಾಲಕರು ಸಮಾಜಕ್ಕೋಸ್ಕರ ಸಹಕರಿಸಬೇಕು ಎಂದು ಶಾಸಕ ಹರೀಶ್ ಪೂಂಜ ಮನವಿ ಮಾಡಿದರು. ಸೋಮವಾರ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಜೆಸಿಬಿ ಮಾಲಕರು, ಪಿಡಬ್ಲ್ಯುಡಿ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳ ಜತೆ ಕರೆದ ಸಭೆಯಲ್ಲಿ ಅವರು ಮಾತನಾಡಿದರು.
ಹೊಸ ಪ್ರಯೋಗ
ಮಳೆ ವಿಳಂಬವಿದ್ದರೂ ತಾಲೂಕಿನಲ್ಲಿ ಅತಿವೃಷ್ಟಿಯಾದಲ್ಲಿ ಮುನ್ನೆಚ್ಚರಿಕೆಯಾಗಿ ತಾಲೂಕಿನ ರಸ್ತೆ ಅಂಚಿನಲ್ಲಿರುವ ಚರಂಡಿ ಗಳ ಹೂಳೆತ್ತುವ ಕಾರ್ಯ ವಿಳಂಬವಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಜೆಸಿಬಿ ಮಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳೀಯವಾಗಿ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡುವಂತೆ ಹೊಸ ಪ್ರಯೋಗವಾಗಿ ಸಭೆ ಕರೆಯಲಾಗಿದೆ ಎಂದರು. ಜೆಸಿಬಿ ಮಾಲಕರು ಆಯಾಯ ಭಾಗದಲ್ಲಿರುವ ಸ್ಥಳೀಯ ಒಂದು ಜಿ.ಪಂ. ರಸ್ತೆಯ ಚರಂಡಿ ದುರಸ್ತಿಗೊಳಿಸಿ, ಕಟ್ಟಿದ ಕಸ ಹಾಗೂ ಹೂಳು ಮೇಲೆತ್ತುವ ಮೂಲಕ ಸಾಮಾಜಿಕ ಸೇವೆ ನೀಡುವಂತೆ ವಿನಂತಿಸಿದರು.
ಕಾರ್ಯ ನಿರ್ವಹಿಸಲು ಬದ್ಧ
ಜೆಸಿಬಿ ಮಾಲಕರು ಸ್ಪಂದಿಸಿ, ಲೋಕೋಪಯೋಗಿ ಅಭಿಯಂತರರು ಪ್ರಮುಖ ರಸ್ತೆಯ ಮಾರ್ಗ ಸೂಚಿ ನಕ್ಷೆ ಸಿದ್ಧಪಡಿಸಿದಲ್ಲಿ ಅದಕ್ಕೆ ಆನುಗುಣವಾಗಿ ಕಾರ್ಯ ನಿರ್ವಹಿಸಲು ಬದ್ಧರೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನುಳಿ ದಂತೆ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಜತೆಯಾಗಿ ಮಳೆ ಆರಂಭಕ್ಕೂ ಮುನ್ನ ಕೆಲಸ ನಿರ್ವಸಿದರೆ ಸೂಕ್ತ ಎಂಬ ಸಲಹೆಯೂ ಕೇಳಿ ಬಂತು. ಸಭೆಯಲ್ಲಿ ಬಂಟ್ವಾಳ ಹಿರಿಯ ಮೋಟರ್ ವಾಹನ ನಿರೀಕ್ಷಕ ಚರಣ್ ಕೆ., ಜಿ.ಪಂ. ಎಇಇ ಚೆನ್ನಪ್ಪ ಮೋಯ್ಲಿ, ಪಿಡಬ್ಲ್ಯುಡಿ ಗುತ್ತಿಗೆದಾರರು ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಮಾರ್ಗಸೂಚಿ
ಸ.ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ ಪ್ರತಿಕ್ರಿಯಿಸಿ, ಸದ್ಯ ಜಿ.ಪಂ. ಒಳಪಡುವ 1,734 ಗ್ರಾಮೀಣ ರಸ್ತೆಗಳಲ್ಲಿ ಪ್ರಮುಖ ರಸ್ತೆ ಚರಂಡಿಗಳನ್ನು ಸುಸ್ಥಿತಿಗೆ ತರಲಾಗುವುದು. ಹೊಸಂಗಡಿ-ಬಡಕೊಡಿ- ಕಾಶಿಪಟ್ಣ, ಪಡ್ಡಂದಡ್ಕ- ಕಾಶಿಪಟ್ಣ, ಮಾಲಾಡಿ- ಪಡಂಗಡಿ, ಓಡಿಲಾ°ಳ- ಪಡಂಗಡಿ, ಕಾಪಿನಡ್ಕ-ಬಳೆಂಜ ಸೇರಿದಂತೆ ಮಾರ್ಗ ಸೂಚಿ ನೀಡಲಾಗುವುದು. ಜೆಸಿಬಿ ಮಾಲೀಕರು ಸಹಕರಿಸುವಂತೆ ಕೋರಿದರು.
ಅಧಿಕಾರಿಗಳ ಸಭೆ
15 ದಿನದೊಳಗೆ ರಸ್ತೆ ಚರಂಡಿ ಸುಸ್ಥಿಗೆ ತರುವಂತೆ ಕೆಲಸ ಮಾಡಿಕೊಡಲು ಜೆಸಿಬಿ ಮಾಲಕರೊಂದಿಗೆ ಚರ್ಚಿಸಲಾಗಿದೆ. ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಮುಂದಿನ ದಿನಗಳಲ್ಲಿ ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗುವುದು.
-ಹರೀಶ್ ಪೂಂಜ, ಶಾಸಕರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.