ಅಗ್ನಿ ಮತ್ತು ಮಳೆಗೆ ಜಗ್ಗದ ಜೀವ
Team Udayavani, Jun 11, 2019, 3:01 AM IST
ಕನ್ನಡದ ಏಳನೇ ಜ್ಞಾನಪೀಠ ಪುರಸ್ಕೃತರ ಅಗಲಿಕೆ, ಕೇವಲ ಕನ್ನಡ ಸಾರಸ್ವತ ಲೋಕದ ಶೋಕ ಕಂಪನವಲ್ಲ. ದೇಶದ ಸಾಹಿತ್ಯ ವಲಯವನ್ನು, ವೈಚಾರಿಕ ಪ್ರಜ್ಞಾ ಬಳಗವನ್ನೂ, ರಂಗ ಪ್ರಪಂಚವನ್ನೂ, ಸಿನಿಮಾ ಸಮೂಹವನ್ನೂ ಒಮ್ಮೆಲೆ ಹೊಯ್ದಾಡಿಸಿದಂಥ ಸುದ್ದಿ.ಪುರಾಣವನ್ನೂ, ಚರಿತ್ರೆಯನ್ನೂ ಕಲ್ಪನೆಯೆಂಬ ಹೆಗಲಿಂದ ಎತ್ತಿ, ಸಮಕಾಲೀನತೆಯ ಅಂಗಳದಲ್ಲಿ ಎತ್ತಿಡುತ್ತಲೇ, ಸದಾ “ಅನ್ವೇಷಣೆ’ಗೆ ಮುಂದಾಗುತ್ತಿದ್ದ ಕಾರ್ನಾಡರು, ಕನ್ನಡ ಸಾರಸ್ವತ ಪ್ರಪಂಚಕ್ಕೆ ಪಾಶ್ಚಾತ್ಯ ಪ್ರಭಾವವನ್ನು ಸೆಳೆಯುವಂತೆ ಮಾಡಿದವರಲ್ಲಿ ಪ್ರಮುಖರು.
“ಒಂದಾನೊಂದು ಕಾಲ’ದ, ಆಕಾಶದೆತ್ತರಕ್ಕೆ ಬೆಳೆದ ಮರ, ದೊಪ್ಪನೆ ಧರೆಗುರುಳಿ ಬಿದ್ದಂಥ ಅತೀವ ದುಃಖದ ಸದ್ದೊಂದು ಗಿರೀಶ್ ಕಾರ್ನಾಡರನ್ನು ಕಳಕೊಂಡ ನಾಡನ್ನು ತಬ್ಬಿದೆ. “ಯಯಾತಿ’ಯಂತೆ ಮುಪ್ಪಿನೆದುರೂ ಮಂಡಿಯೂರುವ, ಮಾನವ ಸಹಜ ಸಂಕಟ ಅವರನ್ನು ಮೌನಿ ಆಗಿಸಿದೆ. ವೈಚಾರಿಕ ಬೇರುಗಳ “ವಂಶವೃಕ್ಷ’, ಯಾವ ಟೀಕೆಗಳ “ಅಗ್ನಿ ಮತ್ತು ಮಳೆ’ಗೂ ಜಗ್ಗದ ಜೀವ ಸ್ತಬ್ಧವಾದಾಗ, “ಹಯವದನ’ವೂ ಬಾಡಿದಂತೆ ಭಾಸವಾಗುತಿದೆ. ತುಘಲಕ್ ಮಾತು ಹೊಮ್ಮದೇ ನಿಂತಿದ್ದಾನೆ. “ಚೆಲುವಿ’ಯ ಮೊಗದಲ್ಲಿ “ಒಡಕಲು ಬಿಂಬ’ವೇ ಕಾಣಿಸುತ್ತಿತ್ತು.
ಕನ್ನಡದ ಏಳನೇ ಜ್ಞಾನಪೀಠ ಪುರಸ್ಕೃತರ ಅಗಲಿಕೆ, ಕೇವಲ ಕನ್ನಡ ಸಾರಸ್ವತ ಲೋಕದ ಶೋಕ ಕಂಪನವಲ್ಲ. ದೇಶದ ಸಾಹಿತ್ಯ ವಲಯವನ್ನು, ವೈಚಾರಿಕ ಪ್ರಜ್ಞಾ ಬಳಗವನ್ನೂ, ರಂಗ ಪ್ರಪಂಚವನ್ನೂ, ಸಿನಿಮಾ ಸಮೂಹವನ್ನೂ ಒಮ್ಮೆಲೆ ಹೊಯ್ದಾಡಿಸಿದಂಥ ಸುದ್ದಿ. ಪುರಾಣವನ್ನೂ, ಚರಿತ್ರೆಯನ್ನೂ ಕಲ್ಪನೆಯೆಂಬ ಹೆಗಲಿಂದ ಎತ್ತಿ, ಸಮಕಾಲೀನತೆಯ ಅಂಗಳದಲ್ಲಿ ಎತ್ತಿಡುತ್ತಲೇ, ಸದಾ “ಅನ್ವೇಷಣೆ’ಗೆ ಮುಂದಾಗುತ್ತಿದ್ದ ಕಾರ್ನಾಡರು, ಕನ್ನಡ ಸಾರಸ್ವತ ಪ್ರಪಂಚಕ್ಕೆ ಪಾಶ್ಚಾತ್ಯ ಪ್ರಭಾವವನ್ನು ಸೆಳೆಯುವಂತೆ ಮಾಡಿದವರಲ್ಲಿ ಪ್ರಮುಖರು.
ಸಮಾಜ ಒಪ್ಪಿತ ಮಾರ್ಗವನ್ನು ತರ್ಕದ ಕಣ್ಣಿಂದ ನೋಡಿ, ತಮಗೆ ಸರಿಯೆನಿಸಿದ್ದನ್ನು ರಚನೆಗಳ ಮೂಲಕ ಹೇಳುವಾಗ, ಸಾಮಾನ್ಯ ಓದುಗನಿಗೆ ಇವರೇನೋ ರೆಬೆಲ್ ಅಂತನ್ನಿಸಿದ್ದೂ ಇದೆ. ಆ ಕಾರಣಕ್ಕಾಗಿಯೇ ಲೋಕದ ಕಣ್ಣಿಗೆ ತುಘಲಕ್ ದ್ವಂದ್ವದ ದೊರೆಯಾಗಿ ಕಂಡರೆ, ಕಾರ್ನಾಡರಿಗೆ ಅವನದ್ದು ಚಾಣಾಕ್ಷತೆಯ ದರ್ಬಾರ್ ಅಂತನ್ನಿಸಿತು. ಅವನೇಕೆ ಹಾಗಾದ ಎಂಬುದರ ಸ್ಪಷ್ಟನೆಯೂ ಅಲ್ಲಿತ್ತು. ಕಾರ್ನಾಡರ “ಯಯಾತಿ’ ನಾಟಕದಲ್ಲಿ ಒಂದು ಮಾತಿದೆ. “ನಾನು ಕೊಳಕ್ಕೆ ಕಲ್ಲನ್ನು ಮಾತ್ರ ಎಸೆಯಬಲ್ಲೆ, ಅದು ಸೃಷ್ಟಿಸುವ ಅಲೆಗಳ ಮೇಲೆ ನನ್ನ ಅಧಿಕಾರವಿಲ್ಲ…’!
ಕಾರ್ನಾಡರ ಬದುಕಿನಲ್ಲೂ ಈ ಸಾಲುಗಳು ಹಾದುಹೋದಂತಿವೆ. ಸಾಹಿತ್ಯವಿರಲಿ, ಸಾಹಿತ್ಯೇತರವಿರಲಿ, ಕಾರ್ನಾಡರು ಇದ್ದೆಡೆ, ಚರ್ಚೆಯೂ- ವಿವಾದವೂ ಅಕ್ಕಪಕ್ಕದಲ್ಲೇ ಕುಳಿತಿರುತ್ತಿದ್ದವು. ಅದರಲ್ಲೂ ದೇಶದ ಆಗು ಹೋಗುಗಳಿಗೆ ಅವರು ನೀಡುತ್ತಿದ್ದ ತಕ್ಷಣ ಪ್ರತಿಕ್ರಿಯೆಗಳು, ಅವರನ್ನು ಭಿನ್ನ ನೆಲೆಯಲ್ಲಿ ನಿಲ್ಲಿಸಿದ್ದವು. ಇಷ್ಟೆಲ್ಲದರ ನಡುವೆಯೂ ಕಾರ್ನಾಡರನ್ನು ಇಷ್ಟಪಡುವ ದೊಡ್ಡ ಸಮೂಹವೇ ಇದೆ. ಬಣ್ಣ ಹಚ್ಚಿಕೊಂಡು ವೇದಿಕೆ ಮೇಲೆ ಬಂದಾಗ, ಏರು ಯವ್ವನದಿಂದ ಇಳಿವಯಸ್ಸಿನವರೆಗೂ ಅವರು ಕನ್ನಡ- ಕನ್ನಡೇತರ ಪರದೆಗಳ ಮೇಲೆ ಅದೇ ಖಡಕ್ ಧ್ವನಿ ಮೂಡಿಸುತ್ತಾ ಕಾಣಿಸಿಕೊಂಡಾಗ, “ನಮ್ಮ ಕಾರ್ನಾಡರು’ ಎಂಬ ಹೆಮ್ಮೆ, ಪ್ರತಿ ಕನ್ನಡಿಗನಲ್ಲೂ ಹರ್ಷ ತುಳುಕುವಂತೆ ಮಾಡಿದ್ದಂತೂ ಸುಳ್ಳಲ್ಲ.
ಅದೇ ಕಾರ್ನಾಡರ ಶಕ್ತಿ. ಕಾರ್ನಾಡರು ತಮಗೆ ತಾವೇ ಚೌಕಟ್ಟು ಹಾಕಿಕೊಂಡವರು ಎಂದು ಹೇಳುವವರಿದ್ದಾರೆ. ಅದನ್ನು ಎಷ್ಟೋ ಜನ ರಿಸರ್ವ್, ಬ್ಯಾರಿಕೇಡ್ ಅಂತಲೂ ಕರೆದಿದ್ದಾರೆ. ಹಿತವಾದ, ನಿಷ್ಠುರ ಮಾತಿಗೆ ಒಗ್ಗಿಹೋಗಿದ್ದ ಕಾರ್ನಾಡರು, ತಮ್ಮ ಲ್ಯಾಂಡ್‌ಲೈನ್ ಫೋನ್ ಇಡುವ ಜಾಗದಲ್ಲಿ, ಕುರ್ಚಿಯನ್ನೇ ಇಡುತ್ತಿರಲಿಲ್ಲ ಎನ್ನುವ ಮಾತೊಂದು ಇತ್ತು. ಜಾಸ್ತಿ ಮಾತಿಗೆ ಕಾಲಹರಣ ಮಾಡುವ ಜಾಯಮಾನ ಅವರದ್ದಲ್ಲ. ಹಾಗಾಗಿ, ಅವರು ಹೊರಟು ಹೋದಾಗ, ಆ ಸದ್ದು ತಕ್ಷಣಕ್ಕೆ ಯಾರಿಗೂ ಕೇಳಿಸಲಿಲ್ಲ. ಅಂತಿಮಯಾತ್ರೆಯಲ್ಲೂ, ಯಾವ ಆಡಂಬರವನ್ನೂ ಬಯಸದೇ, ಒಂಟಿಯಾಗಿಯೇ ಹೊರಟರು.
ಜನನ: ಮೇ 19, 1938 (ಮಾಥೆರಾನ್, ಮಹಾರಾಷ್ಟ್ರ)
ಶಿಕ್ಷಣ: 1958 (ಕರ್ನಾಟಕ ವಿ.ವಿ.ಇಂದ ಬಿ.ಎ. ಪದವಿ), (ಬಿ.ಎ. ಪರೀಕ್ಷೆಯಲ್ಲಿ ವಿ.ವಿ.ಗೆ ಮೊದಲಿಗ), 1963 (ಆಕ್ಸ್‌ಫರ್ಡ್ ವಿ.ವಿ. ಇಂದ ಎಂ.ಎ. ಪದವಿ)
ಚಲನಚಿತ್ರ ಪ್ರಶಸ್ತಿಗಳು
ಸಂಸ್ಕಾರ (ರಾಷ್ಟ್ರಪತಿಗಳಿಂದ ಸುವರ್ಣ ಪದಕ) 1970
ವಂಶವೃಕ್ಷ (ರಾಷ್ಟ್ರೀಯ ಪ್ರಶಸ್ತಿ) 1970
ವಂಶವೃಕ್ಷ (ರಾಜ್ಯಪ್ರಶಸ್ತಿ) 1972
ಕಾಡು (ರಾಷ್ಟ್ರಪತಿ ರಜತಪದಕ) 1974
ಒಂದಾನೊಂದು ಕಾಲದಲ್ಲಿ (ರಾಷ್ಟ್ರಪ್ರಶಸ್ತಿ) 1978
ಸಂತ ಶಿಶುನಾಳ ಶರೀಫ (ಶ್ರೇಷ್ಠ ಸಹನಟ) 1991
ಗೌರವಗಳು
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ- 1972
ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ- 1972
ಪದ್ಮಶ್ರೀ- 1974
ಪದ್ಮಭೂಷಣ- 1992
ಕರ್ನಾಟಕ ವಿ.ವಿ.ಗೌರವ ಡಿ.ಲಿಟ್- 1994
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ತಲೆದಂಡ) 1993
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ತಲೆದಂಡ) 1994
ಗುಬ್ಬಿ ವೀರಣ್ಣ ಪ್ರಶಸ್ತಿ- 1997
ಮಧ್ಯಪ್ರದೇಶ ಸರ್ಕಾರದಿಂದ ಕಾಳಿದಾಸ ಸಮ್ಮಾನ- 1999
ಭಾರತೀಯ ಜ್ಞಾನಪೀಠ ಪ್ರಶಸ್ತಿ- 1999
ಮಿದ್ನಾಪುರದ ವಿದ್ಯಾಸಾಗರ ವಿ.ವಿ. ಗೌರವ ಡಿ.ಲಿಟ್- 2010
ಭುವನೇಶ್ವರದ ರ್ಯಾವನ್ ಷಾ ವಿ.ವಿ. ಗೌರವ ಡಿ.ಲಿಟ್- 2011
ಲಾಸ್ ಏಂಜಲಿಸ್‌ನ ಯುನಿವರ್ಸಿಟಿ ಆಫ್ ಸದನ್ ಕ್ಯಾಲಿಫೋರ್ನಿಯದಿಂದ ಹಾನರರಿ ಡಾಕ್ಟರ್ ಆಫ್ ಹ್ಯೂಮನ್ ಲೆಟರ್- 2011
ವೃತ್ತಿ
1963 1970 ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರಸ್, ಮದ್ರಾಸ್‌ನಲ್ಲಿ ಸಹಾಯಕ ಮ್ಯಾನೇಜರ್, ಮ್ಯಾನೇಜರ್.
1974 75 ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ.
1976 78- ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ.
1988 1993- ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ.
2000 2003 ಲಂಡನ್‌ನ ನೆಹರು ಸೆಂಟರ್‌ನ ನಿರ್ದೇಶಕ ಹಾಗೂ ಭಾರತದ ಹೈ ಕಮಿಷನ್‌ನಲ್ಲಿ ಸಚಿವ.
ಪ್ರಮುಖ ನಾಟಕಗಳು
ಮಾ ನಿಷಾಧ- ಏಕಾಂಕ ನಾಟಕ
ಯಯಾತಿ-1961
ತುಘಲಕ್ 1964
ಹಯವದನ 1971
ಅಂಜುಮಲ್ಲಿಗೆ- 1977
ಹಿಟ್ಟಿನ ಹುಂಜ 1980
ನಾಗಮಂಡಲ- 1989
ತಲೆದಂಡ- 1991
ಅಗ್ನಿ ಮತ್ತು ಮಳೆ 1994
ಟಿಪ್ಪೂ ಸುಲ್ತಾನ ಕನಸುಗಳು- 1997
ಒಡಕಲು ಬಿಂಬ- 2005
ಮದುವೆ ಆಲ್ಬಮ್- ಫ್ಲವರ್ಸ್- 2012
ಬೆಂದಕಾಳೂರು ಆನ್ ಟೋಸ್ಟ್- 2012
ರಕ್ಕಸತಂಗಡಿ 2019
ಸಿನಿಮಾ ಸಾಧನೆ
ಸಂಸ್ಕಾರ-ಚಿತ್ರಕಥೆ, ನಟನೆ- 1969
ವಂಶವೃಕ್ಷ- ನಿರ್ದೇಶನ-ಚಿತ್ರಕತೆ-ನಟನೆ- 1971
ಕಾಡು- ಚಿತ್ರಕತೆ, ನಿರ್ದೇಶನ- 1973
ಒಂದಾನೊಂದು ಕಾಲದಲ್ಲಿ- ಕತೆ, ಚಿತ್ರಕತೆ, ನಿರ್ದೇಶನ- 1978
ಕಾನೂರು ಹೆಗ್ಗಡತಿ- ನಿರ್ದೇಶನ, ನಟನೆ- 1999
ಒಬ್ಬ ಅಗಸ ತೊಳೆದಷ್ಟು ಕೊಳೆಯನ್ನು ಜಗತ್ತಿನ ಯಾವ ಧರ್ಮಗುರುವೂ ತೊಳೆದಿಲ್ಲ
-ತುಘಲಕ್ ನಾಟಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.