ಸೈಕಲ್ ನಿಲುಗಡೆಗೂ ವಿರೋಧ!
Team Udayavani, Jun 12, 2019, 3:08 AM IST
ಬೆಂಗಳೂರು: ಒಂದೆಡೆ ಸರ್ಕಾರ “ಪರಿಸರ ಸ್ನೇಹಿ’ ಬೈಸಿಕಲ್ ಸವಾರಿಯನ್ನು ಪ್ರೋತ್ಸಾಹಿಸುತ್ತಿದ್ದು, ಈ ಸಂಬಂಧ ಹತ್ತಾರು ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಪಥವನ್ನೇ ನಿರ್ಮಿಸುತ್ತಿದೆ. ಆದರೆ, ಮತ್ತೂಂದೆಡೆ ಈ ಬೈಸಿಕಲ್‌ಗಳ ನಿಲುಗಡೆಗೇ ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪರಿಣಾಮ ಬಹುನಿರೀಕ್ಷಿತ “ಸಾರ್ವಜನಿಕ ಬೈಸಿಕಲ್ ಹಂಚಿಕೆ’ (ಪಿಬಿಎಸ್) ಯೋಜನೆಗೆ ಹಿನ್ನಡೆ ಆಗುತ್ತಿದೆ.
ಹೆಚ್ಚುತ್ತಿರುವ ವಾಯು ಮಾಲಿನ್ಯ ತಗ್ಗಿಸಲು ಹಾಗೂ ಪ್ರಯಾಣಿಕರಿಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ಅನುಕೂಲವಾಗಲೆಂದು ನಗರದ ಹೃದಯಭಾಗದಲ್ಲಿ ಸಾರ್ವಜನಿಕ ಬೈಸಿಕಲ್ ಹಂಚಿಕೆ ಯೋಜನೆಗೆ ಮಾರ್ಚ್‌ನಲ್ಲಿ ಸರ್ಕಾರ ಚಾಲನೆ ನೀಡಿದೆ. ಅದರಂತೆ ವಿಧಾನಸೌಧದ ಎದುರು ನಿಲುಗಡೆ ವ್ಯವಸ್ಥೆ ಕೂಡ ಕಲ್ಪಿಸಲಾಯಿತು. ನಗರದ ಉಳಿದ ಭಾಗಗಳಲ್ಲಿ ಬೈಸಿಕಲ್ ಸ್ಟಾಂಡ್‌ಗಳ ನಿರ್ಮಾಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಟೆಂಡರ್ ಕೂಡ ಕರೆದಿದೆ. ಬೈಸಿಕಲ್‌ಗಳ ಪೂರೈಕೆಗೆ ಅನುಮತಿಯೂ ದೊರಕಿದೆ. ಆದರೆ, ಈ ಮಧ್ಯೆ ಕೆಲ ಸದಸ್ಯರಿಂದ ಆಕ್ಷೇಪ ವ್ಯಕವಾಗಿದೆ.
ಆಕ್ಷೇಪಕ್ಕೆ ಕಾರಣ: ಬೈಸಿಕಲ್ ತಾಣಗಳಿಗೆ ಪಾದಚಾರಿ ಮಾರ್ಗ, ಉದ್ಯಾನ ಜಾಗ ಹೋಗುತ್ತದೆ. ಈ ಮೊದಲೇ ಫುಟ್‌ಪಾತ್‌ಗಳ ಬಹುತೇಕ ಜಾಗವನ್ನು ರಸ್ತೆಗಳು ಆಕ್ರಮಿಸಿಕೊಂಡಿವೆ. ಈ ಮಧ್ಯೆ ಅಲ್ಲಿ ಬೈಸಿಕಲ್ ತಾಣಗಳೂ ಬಂದರೆ, ಪಾದಚಾರಿಗಳಿಗೆ ಸಮಸ್ಯೆ ಆಗುತ್ತದೆ. ಅಲ್ಲದೆ, ತಮ್ಮ ಅಂಗಡಿ-ಮುಂಗಟ್ಟುಗಳ ಮುಂದೆ ಈ ಬೈಸಿಕಲ್ ಸ್ಟಾಂಡ್‌ಗಳು ಬೇಡವೇ ಬೇಡ ಎಂದು ವ್ಯಾಪಾರಿಗಳು ಆಕ್ಷೇಪ ಎತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪರಿಣಾಮ ಈವರೆಗೆ ಒಂದೇ ಒಂದು ಬೈಸಿಕಲ್ ಸ್ಟಾಂಡ್ ಪೂರ್ಣಗೊಂಡಿಲ್ಲ.
“ಸುಮಾರು ಏಳೂವರೆ ಕೋಟಿ ವೆಚ್ಚದಲ್ಲಿ 280 ತಾಣಗಳು ನಿರ್ಮಾಣಗೊಳ್ಳುತ್ತಿದ್ದು, ಇದರಲ್ಲಿ ಶೇ.50ರಷ್ಟು ತಾಣಗಳು ಇಂದಿರಾನಗರ, ಕೋರಮಂಗಲದಲ್ಲೇ ಬರುತ್ತವೆ. ಇಲ್ಲಿ ಬೈಸಿಕಲ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ಭಾಗವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 15ರಿಂದ 20 ತಾಣಗಳಲ್ಲಿ ಜನಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾಗಿದೆ. ಅವರೆಲ್ಲಾ ಶಾಸಕರು ಮತ್ತು ಸಚಿವರೊಂದಿಗೆ ಸಮಾಲೋಚನೆ ನಡೆಸಿ, ನಂತರ ಅವಕಾಶ ನೀಡುವ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದ್ದಾರೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
“ಪಾಲಿಕೆಯಲ್ಲಿ ಅನುಮೋದನೆಗೊಂಡ ನಂತರ ಕರ್ನಾಟಕ ನಾನ್ ಮೋಟರೈಸ್ಡ್ ಟ್ರಾಫಿಕ್ ಸೊಸೈಟಿ (ಕೆಎನ್‌ಎಂಟಿ) ರಚಿಸಲಾಗಿದೆ. ಇದರಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರೂಪುಗೊಂಡ ಈ ಸೊಸೈಟಿಯಲ್ಲಿ ಬಿಬಿಎಂಪಿ ಆಯುಕ್ತರು, ಬಿಎಂಟಿಸಿ, ಬಿಎಂಆರ್‌ಸಿಎಲ್, ಡಿಯುಎಲ್‌ಟಿಯ ವ್ಯವಸ್ಥಾಪಕ ನಿರ್ದೇಶಕರೆಲ್ಲರೂ ಸದಸ್ಯರಾಗಿದ್ದಾರೆ. ಪಿಬಿಎಸ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಈಗ ಕೆಲವೆಡೆ ಆಕ್ಷೇಪಗಳು ಕೇಳಿಬರುತ್ತಿವೆ. ಸದಸ್ಯರ ಮನವೊಲಿಸುವುದರ ಜತೆಗೆ ಬೈಸಿಕಲ್ ಅಗತ್ಯತೆ ಬಗ್ಗೆ ಮನದಟ್ಟು ಮಾಡಲಾಗುವುದು’ ಎಂದು ಡಿಯುಎಲ್‌ಟಿಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ತಾಣಗಳು ಯಾಕೆ ಬೇಕು?: ಈಗಾಗಲೇ ಮೂರು ಸಾವಿರ ಬೈಸಿಕಲ್‌ಗಳು ನಗರದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಆದರೆ, ಅವುಗಳ ನಿಲುಗಡೆಗೆ ನಿರ್ದಿಷ್ಟ ವ್ಯವಸ್ಥೆ ಇಲ್ಲ. ಹಾಗಾಗಿ, ಬಳಕೆದಾರರು ಎಲ್ಲೆಂದರಲ್ಲಿ ನಿಲುಗಡೆ ಮಾಡಿ ಹೋಗುತ್ತಾರೆ. ಇದರಿಂದ ಸಮಸ್ಯೆ ಆಗುತ್ತದೆ. ತಾಣಗಳನ್ನು ನಿರ್ಮಿಸಿದಾಗ, ಬಳಕೆದಾರರು ಹತ್ತಿರದಲ್ಲಿರುವ ಕಡೆ ನಿಲುಗಡೆ ಮಾಡಲು ಅನುಕೂಲ ಆಗುತ್ತದೆ.
ಸಾರ್ವಜನಿಕ ಬೈಸಿಕಲ್‌ಗಳು ಸಾಮಾನ್ಯವಾಗಿ “ಜಿಯೊಫೆನ್ಸ್’ ತಂತ್ರಜ್ಞಾನ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಬಳಕೆದಾರರು ಬೈಸಿಕಲ್ ಪೂರೈಸಿರುವ ಕಂಪೆನಿಗಳು ಸೂಚಿಸಿರುವ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ತಮಗೆ ಹತ್ತಿರದಲ್ಲಿ ಬೈಸಿಕಲ್ ಇರುವ ಜಾಗವನ್ನು ತಿಳಿಯಬಹುದು. ಅಲ್ಲಿ ಹೋಗಿ ಕ್ಯುಆರ್ ಕೋಡ್‌ನಿಂದ ಅನ್‌ಲಾಕ್ ಮಾಡಿ, ಬೈಸಿಕಲ್ ಏರಿಹೋಗಬಹುದು. ಇವುಗಳ ಬಾಡಿಗೆ ಒಂದೊಂದು ಕಂಪನಿಯದು ಭಿನ್ನವಾಗಿದೆ. ಆದರೆ, ಪ್ರತಿ ಅರ್ಧ ಗಂಟೆಗೆ ಸರಾಸರಿ 5 ರೂ. ನಿಗದಿಪಡಿಸಲಾಗಿದೆ.
270 ನಿಲುಗಡೆ ತಾಣಗಳು: ನಗರ ಕೇಂದ್ರ ಭಾಗದಲ್ಲಿ 384 ಹಾಗೂ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಬೈಸಿಕಲ್ ನಿಲುಗಡೆ ತಾಣಗಳು ಹಾಗೂ 125 ಕಿ.ಮೀ. ಬೈಸಿಕಲ್ ಪಥ ನಿರ್ಮಿಸುವ ಗುರಿಯನ್ನು ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ನಿರ್ಧರಿಸಿದೆ. ಈ ಪೈಕಿ ಮೊದಲ ಹಂತದಲ್ಲಿ 270 ತಾಣಗಳ ನಿರ್ಮಾಣಕ್ಕೆ ಬಿಬಿಎಂಪಿ ಗುತ್ತಿಗೆ ನೀಡಿದ್ದು, 49 ಕಿ.ಮೀ. ಪ್ರತ್ಯೇಕ ಪಥ ನಿರ್ಮಿಸಲಾಗುತ್ತಿದೆ. ಒಟ್ಟಾರೆ ಗುರುತಿಸಿರುವ 270 ತಾಣಗಳಲ್ಲಿ 60ರಿಂದ 70 ಕಡೆ ಈಗಾಗಲೇ ಜಾಗ ಅಂತಿಮಗೊಂಡಿದ್ದು, 22 ಕಡೆಗಳಲ್ಲಿ ಕಾಮಗಾರಿ ಆರಂಭಗೊಂಡಿದೆ. ಶೇ. 60ರಷ್ಟು ತಾಣಗಳು 9×2 ಮೀಟರ್, ಶೇ. 30ರಷ್ಟು 18×2 ಮೀ. ಹಾಗೂ ಶೇ. 10ರಷ್ಟು ತಾಣಗಳು 36×2 ಮೀ. ಜಾಗದಲ್ಲಿ ಇವು ನಿರ್ಮಾಣಗೊಳ್ಳುತ್ತಿವೆ.
ಮೈಸೂರು ಟ್ರಿನ್ ಟ್ರಿನ್ ಮಾದರಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ “ಟ್ರಿನ್ ಟ್ರಿನ್’ ಹೆಸರಿನಲ್ಲಿ ಸಾರ್ವಜನಿಕ ಬೈಸಿಕಲ್ ಹಂಚಿಕೆ ವ್ಯವಸ್ಥೆ ಜಾರಿಗೊಳಿಸಿತು. ಅಲ್ಲಿ ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ನಗರದಲ್ಲಿ ಇದನ್ನು ಪರಿಚಯಿಸಲಾಗುತ್ತಿದೆ. ಸಮೂಹ ಸಾರಿಗೆ ಬಳಸುವ ಪ್ರಯಾಣಿಕರಿಗೆ ಇದು ಪೂರಕ ವ್ಯವಸ್ಥೆಯಾಗಿದೆ. ಉದಾಹರಣೆಗೆ ಮೆಟ್ರೋದಲ್ಲಿ ಬಂದಿಳಿದವರು, ಅಲ್ಲಿಯೇ ಇರುವ ಬೈಸಿಕಲ್ ಏರಿ ಹತ್ತಿರದಲ್ಲಿ ಕೆಲಸ ಮುಗಿಸಿಕೊಂಡು ಬರಬಹುದು. ಪರಿಸರ ಮತ್ತು ಆರೋಗ್ಯ ದೃಷ್ಟಿಯಿಂದಲೂ ಇದು ಅನುಕೂಲ.
ಕೋರಮಂಗಲ ಕಮರ್ಷಿಯಲ್ ಏರಿಯಾ. ಹೆಚ್ಚು ವಾಹನದಟ್ಟಣೆ ಇರುವ ಜಾಗ. ಇಲ್ಲಿ ಎಲ್ಲೆಂದರಲ್ಲಿ ಬೈಸಿಕಲ್‌ಗಳ ನಿಲುಗಡೆ ಸಮಸ್ಯೆಯಾಗಿ ಪರಿಣಮಿಸಿದೆ. ವೃದ್ಧರು, ಮಕ್ಕಳಿಗೆ ತುಂಬಾ ಕಿರಿಕಿರಿ ಆಗುತ್ತಿದೆ. ಆದ್ದರಿಂದ ನಾನು ಆಕ್ಷೇಪಿಸುತ್ತಿದ್ದೇನೆ. ಫುಟ್‌ಪಾತ್‌ನಲ್ಲಿ ಬೈಸಿಕಲ್ ಸ್ಟಾಂಡ್ ನಿರ್ಮಿಸಿದರೆ, ಪಾದಚಾರಿಗಳು ಹೇಗೆ ಓಡಾಡಬೇಕು? ಜನರಿಗೆ ತೊಂದರೆ ಆಗದಂತೆ ಅವರು ಎಲ್ಲಿ ಬೇಕಾದರೂ ನಿಲ್ಲಿಸಲಿ. ಅದಕ್ಕೆ ನಮ್ಮ ತಕರಾರಿಲ್ಲ.
-ಎಂ. ಚಂದ್ರಪ್ಪ, ಕೋರಮಂಗಲ ವಾರ್ಡ್ ಸದಸ್ಯ
ಬೈಸಿಕಲ್ ನಿಲುಗಡೆಗಾಗಿ ಗುರುತಿಸಿದ ಜಾಗಗಳ ಬಗ್ಗೆ ಕೆಲವು ಆಕ್ಷೇಪಣೆಗಳು ಬಂದಿದ್ದರಿಂದ ಮರುಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು. ನಂತರವೂ ಆಕ್ಷೇಪಣೆಗಳು ಪುನರಾವರ್ತನೆಯಾದರೆ, ಮುಖ್ಯ ಕಾರ್ಯದರ್ಶಿಗಳ ಹಂತದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
-ವಿ. ಪೊನ್ನುರಾಜ್, ಡಿಯುಎಲ್‌ಟಿ ಆಯುಕ್ತ
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.