ಕಾಪು ತಾಲೂಕು ಆದರೂ ಮುಗಿಯದ ಉಡುಪಿ ಅಲೆದಾಟ
Team Udayavani, Jun 13, 2019, 6:10 AM IST
ಕಾಪು: ಹೊಸ ತಾಲೂಕಾಗಿ ಕಾಪು ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷವಾದರೂ, ಕಂದಾಯ ಇಲಾಖೆಗೆ ಸಂಬಂಧಪಟ್ಟ ಪ್ರಮುಖ ಕೆಲಸಗಳಿಗಾಗಿ ಜನರು ಇನ್ನೂ ಉಡುಪಿಯನ್ನೇ ಅವಲಂಬಿಸಬೇಕಾದ ಅನಿವಾರ್ಯ ಸ್ಥಿತಿ ಇದೆ.
ಕಾಪುವಿಗೆ ಪೂರ್ಣಾವಧಿ ತಹಶೀಲ್ದಾರ್ ನೇಮಕವಾಗಿ ಬಂದಿದ್ದರೂ ಸೌಲಭ್ಯಗಳು ಇನ್ನೂ ಸಿಗುತ್ತಿಲ್ಲ.
ಪ್ರಮುಖ ಕಚೇರಿಗಳು ಇಲ್ಲ
ಸಬ್ ರಿಜಿಸ್ಟ್ರಾರ್ ಕಚೇರಿ, ಭೂನ್ಯಾಯ ಮಂಡಳಿ, ಖಜಾನೆ, ಹಳೆಯ ಜನನ ಪ್ರಮಾಣ ಪತ್ರ, ಕೈಬರಹದ ಪಹಣಿ ಪತ್ರಿಕೆ, ಆಹಾರ ಇಲಾಖೆ, ರೇಷನ್ ಕಾರ್ಡ್, ತಾಲೂಕು ಪಂಚಾಯತ್ ಇನ್ನಿತರ ಅಗತ್ಯದ ಸೇವೆಗಳಿಗಾಗಿ ಜನ ಉಡುಪಿಗೇ ತೆರಳುವಂತಾಗಿದೆ. ಇದರಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಕೆಲಸ ಕಾರ್ಯಗಳಿಗಾಗಿ ಜನರು ಉಡುಪಿ ಮತ್ತು ಮೂಲ್ಕಿಗೆ ಓಡಾಡಬೇಕಿದೆ.
ಉಡುಪಿ-ಮೂಲ್ಕಿ ಅಲೆದಾಟ
ಕಾಪುವಿನಲ್ಲಿ ಆರಂಭವಾಗ ಬೇಕಾಗಿರುವ ಸಬ್ ರಿಜಿಸ್ಟ್ರಾರ್ ಕಚೇರಿ ಉಡುಪಿ ಮತ್ತು ಮೂಲ್ಕಿಯಲ್ಲೇ ಉಳಿದುಕೊಂಡಿದ್ದು, ಭೂಮಿ ನೋಂದಣಿ ಸಹಿತವಾಗಿ ವಿವಿಧ ಕೆಲಸಗಳಿಗಾಗಿ ಕಾಪು ತಾಲೂಕಿನ ಜನತೆ ಇನ್ನೂ ಕೂಡ ಉಡುಪಿ – ಮೂಲ್ಕಿಗೆ ಹೋಗಬೇಕಿದೆ. ಭೂನ್ಯಾಯ ಮಂಡಳಿಯಲ್ಲೂ ಕೂಡ ಅನೇಕ ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಬಾಕಿ ಉಳಿದಿದ್ದು, ಒಂದು ವರ್ಷದಿಂದ ಇದಕ್ಕೆ ಸಂಬಂಧಪಟ್ಟ ಸಮಿತಿಯೇ ರಚನೆಯಾಗಿಲ್ಲ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಈ ಸಮಸ್ಯೆ ಪರಿಹರಿಸಲು ಕೂಡಲೇ ಶ್ರಮಿಸಬೇಕು ಎನ್ನುವುದು ಜನರ ಒತ್ತಾಯವಾಗಿದೆ.
ಎ.ಸಿ. ಕಚೇರಿ ಕೆಲಸಕ್ಕೂ ತೊಂದರೆ
ಕಾಪು ತಾಲೂಕಿಗೆ ಸಂಬಂಧಪಟ್ಟು ಎ.ಸಿ.ಯವರ ನ್ಯಾಯಾಲಯದಲ್ಲಿರುವ ಪ್ರಕರಣಗಳು ಇನ್ನೂ ಕೂಡ ಇತ್ಯರ್ಥವಾಗದೇ ಬಾಕಿಯುಳಿದಿವೆ. ಅದಕ್ಕಾಗಿ ಜನ ಕುಂದಾಪುರಕ್ಕೆ ಅಲೆದಾಡಬೇಕಿದೆ. ಭೂ ಪರಿವರ್ತನೆಗೆ ಸಂಬಂಧಪಟ್ಟ ನಿಯಮಗಳು ಕೂಡ ಪದೇ ಪದೇ ಬದಲಾಗುತ್ತಿದ್ದು ಇದರಿಂದಾಗಿ ಜನರು ಕಚೇರಿಯಿಂದ ಕಚೇರಿಗೆ ಅಲೆಯುವಂತಾ ಗಿದೆ. ಚುನಾವಣೆ ಕಾರಣಗಳಿಂದಾಗಿಯೂ ಕಡತಗಳು ಕೂಡ ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ.
ಮ್ಯುಟೇಶನ್ ಪ್ರಕ್ರಿಯೆ ಸಮಸ್ಯೆ
ಮ್ಯುಟೇಶನ್ ಪ್ರಕ್ರಿಯೆ ಆನ್‌ಲೈನ್ ಸಿಸ್ಟಮ್‌ನಲ್ಲಿ ಹಲವು ರೀತಿಯ ತಪ್ಪುಗಳು ನಡೆಯುತ್ತಿದ್ದು, ಅದನ್ನು ಸರಿಪಡಿಸಿಕೊಡಲು ಸಹಾಯಕ ಕಮಿಷನರ್ ಅವರನ್ನು ಕಾಯುವಂತಾಗಿದೆ. ಈ ಸಮಸ್ಯೆಗಳ ಬಗ್ಗೆ ಅಪೀಲು ಸಲ್ಲಿಸಿ ಒಂದು ವರ್ಷವಾದರೂ, ತಿದ್ದುಪಡಿ ಆದೇಶಗಳು ಇನ್ನೂ ಬರುತ್ತಿಲ್ಲ. ಸಹಾಯಕ ಕಮಿಷನರ್ ಅವರು ಪದೇ ಪದೆ ವರ್ಗಾವಣೆಯಾಗುತ್ತಿರುವುದೂ ಕೂಡಾ ಇದಕ್ಕೆ ಮುಖ್ಯ ಕಾರಣವಾಗಿದೆ. ಈ ಸಮಸ್ಯೆಗಳಿಗೂ ಮುಕ್ತಿ ದೊರಕಿಸಿಕೊಡಲು ಜಿಲ್ಲಾಡಳಿತ ಶ್ರಮಿಸಬೇಕು ಎನ್ನುವುದು ಗ್ರಾಮೀಣ ಭಾಗದ ಜನರ ಆಗ್ರಹವಾಗಿದೆ. ಇನ್ನು ಆಹಾರ ಇಲಾಖೆ ವಾರದೊಳಗೆ ಕಾಪುವಿಗೆ ವರ್ಗಾವಣೆಗೊಳ್ಳುವ ಸಾಧ್ಯತೆಗಳಿವೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಂತ ಹಂತವಾಗಿ ವ್ಯವಸ್ಥೆಗಳ ಜೋಡಣೆಗೆ ಕ್ರಮ
ಕಾಪು ತಾಲೂಕಿನ ಜನರ ಬೇಡಿಕೆಯಂತೆ ಭೂಮಿ ಶಾಖೆ ಕಳೆದ ಮೂರು ದಿನಗಳಿಂದ ತಾಲೂಕು ಕಚೇರಿ ಕಾರ್ಯ ನಿರ್ವಹಣೆ ಆರಂಭಿಸಿದೆ. ಆರ್.ಟಿ.ಸಿ., ಮ್ಯುಟೇಶನ್ ಪ್ರತಿ, ಖಾತೆ ಬದಲಾವಣೆಗಳಿಗೆ ಇಲ್ಲಿಂದಲೇ ಅರ್ಜಿಗಳನ್ನು ನೀಡಲು ವ್ಯವಸ್ಥೆಯಿದೆ. ಪ್ರಾಯೋಗಿಕವಾಗಿ ಆರ್‌ಟಿಸಿ ಮತ್ತು ಮ್ಯುಟೇಶನ್ ದಾಖಲೆಗಳನ್ನು ಪ್ರಿಂಟ್ ಮಾಡಲಾಗುತ್ತಿದ್ದು, 2-3 ದಿನಗಳಲ್ಲಿ ಜನರ ಪೂರ್ಣ ಸೇವೆಗಾಗಿ ಈ ಸೌಲಭ್ಯಗಳು ತೆರೆದುಕೊಳ್ಳಲಿವೆ. 2002ರಿಂದ ಗಣಕೀಕೃತಗೊಂಡಿರುವ ಮ್ಯುಟೇಶನ್ ಆದೇಶಗಳು, ಪಹಣಿ ಪತ್ರಗಳು ಕಾಪು ತಾಲೂಕಿನ ಭೂಮಿ ಶಾಖೆಯಲ್ಲಿ ದೊರೆಯಲಿವೆ. ಎಲ್ಲ ಸೌಲಭ್ಯ ದೊರಕಿಸಲು ಯತ್ನಿಸಲಾಗುವುದು.
-ಸಂತೋಷ್ ಕುಮಾರ್, ತಹಶೀಲ್ದಾರ್, ಕಾಪು
ಸರಕಾರಕ್ಕೆ ಪತ್ರ ಬರೆದು ಒತ್ತಾಯ
ರಾಜ್ಯದಲ್ಲಿ ಹೊಸ ಸರಕಾರ ರಚನೆಯಾಗಿ ವರ್ಷ ಕಳೆದರೂ ಭೂನ್ಯಾಯ ಮಂಡಳಿ ಇನ್ನೂ ಕೂಡ ರಚನೆಯಾಗದೇ ಇರುವುದು ತಾಲೂಕಿನ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಹೊಸ ತಾಲೂಕು ರಚನೆಯಾದ ಬಳಿಕ 30ಕ್ಕೂ ಅಧಿಕ ಇಲಾಖೆಗಳು ಕಾಪು ತಾಲೂಕಿಗೆ ಬರಬೇಕಿತ್ತು. ಆದರೆ ಇದರಲ್ಲಿ 14 ಇಲಾಖೆಗಳನ್ನು ತತ್‌ಕ್ಷಣಕ್ಕೆ ನೀಡುವ ಭರವಸೆ ಸರಕಾರದಿಂದ ದೊರಕಿತ್ತು. ಪ್ರಥಮ ಹಂತದಲ್ಲಿ ಕಂದಾಯ ಇಲಾಖೆ ಬಂದಿದ್ದರೂ ಕೂಡ ಅದಕ್ಕೆ ಸಂಬಂಧಪಟ್ಟ ಹಲವಾರು ವಿಭಾಗಗಳು ಇನ್ನೂ ಕಾಪುವಿಗೆ ಬಂದಿಲ್ಲ. ಮಿನಿ ವಿಧಾನಸೌಧ ನಿರ್ಮಾಣ ಸಹಿತವಾಗಿ ಎಲ್ಲ ಇಲಾಖೆಗಳನ್ನೂ ಶೀಘ್ರ ಪ್ರಾರಂಭಿಸುವ ಬಗ್ಗೆ ಸರಕಾರಕ್ಕೆ ಪತ್ರ ಬರೆದು, ಕ್ರಮಕ್ಕೆ ಒತ್ತಾಯಿಸಲಾಗಿದೆ.
-ಲಾಲಾಜಿ ಆರ್. ಮೆಂಡನ್, ಶಾಸಕರು, ಕಾಪು ಕ್ಷೇತ್ರ
ಶಾಸಕರು, ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿ
ಕಾಪು ತಾಲೂಕು ರಚನೆಯಾದ ಬಳಿಕ ಅದರಿಂದ ಸಿಗಬೇಕಾದ ಯಾವುದೇ ಲಾಭ ಜನರಿಗೆ ಸಿಗುತ್ತಿಲ್ಲ. ಸಮಸ್ಯೆ ಪರಿಹರಿಸಲು ಶಾಸಕರು ಯತ್ನಿಸಬೇಕು. ಜಿಲ್ಲಾಡಳಿತ ಕೂಡ ಸರಕಾರದ ಮೂಲಕವಾಗಿ ಕ್ರಮ ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ.
-ಮೆಲ್ವಿನ್ ಡಿ’ಸೋಜಾ, ನ್ಯಾಯವಾದಿ, ಶಿರ್ವ
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.