ಹೊಸ ಸಿಲೇಬಸ್‌ನಲ್ಲಿ ಉಪ್ಪಿ ಫಿಲಾಸಫಿ
ಚಿತ್ರ ವಿಮರ್ಶೆ
Team Udayavani, Jun 15, 2019, 3:02 AM IST
ಪ್ರೀತಿ ಅಂದರೆ ಅದೊಂದು ಪವಿತ್ರ ಭಾವನೆ, ಒಲವೇ ಜೀವನ ಸಾಕ್ಷಾತ್ಕಾರ ಅನ್ನುತ್ತಾಳೆ ಆಕೆ. ಆದರೆ, ಆತನ ಪ್ರಕಾರ ಪ್ರೀತಿ ಅಂದರೆ ಸೆಕ್ಸ್‌ನ ಮತ್ತೂಂದು ಮುಖ. ಆತ ಎಲ್ಲರಿಗೂ ಅದನ್ನೇ ಬೋಧಿಸುತ್ತಿರುತ್ತಾನೆ. ಹೀಗೆ ಎರಡು ವಿರುದ್ಧ ದಿಕ್ಕುಗಳ ಪಯಣವೇ “ಐ ಲವ್ ಯು’. ನೀವು ಉಪೇಂದ್ರ ಹಾಗೂ ಆರ್.ಚಂದ್ರು ಅವರ ಸಿನಿಮಾಗಳನ್ನು ನೋಡಿರುವವರಾದರೆ ಅಲ್ಲೊಂದು ಅಂಶ ನಿಮಗೆ ಸ್ಪಷ್ಟವಾಗುತ್ತದೆ.
ಉಪೇಂದ್ರ ತಮ್ಮ ಸಿನಿಮಾದಲ್ಲಿ ಪ್ರೀತಿಗೆ ಬೇರೆಯದ್ದೇ ವ್ಯಾಖ್ಯಾನ ಕೊಡುತ್ತಾ, ಮಾಸ್ ಆಗಿ ಪ್ರೀತಿಯನ್ನು ಸಾರಿದವರು. ಆದರೆ, ಚಂದ್ರು ತಮ್ಮ ಸಿನಿಮಾದಲ್ಲಿ ಪ್ರೀತಿ, ಪ್ರೇಮದ ಬಗ್ಗೆ ಹೆಚ್ಚು ಹೇಳಿಕೊಂಡು ಬಂದವರು. “ಐ ಲವ್ ಯು’ ಮೂಲಕ ಒಂದಾಗಿರುವ ಇಬ್ಬರು ಎರಡನ್ನು ಸಮನವಾಗಿ ನೀಡಿದ್ದಾರೆ. ಹೌದು, ಸಿನಿಮಾ ನೋಡಿ ಹೊರಬಂದಾಗ ನಿಮಗೆ ಟಿಪಿಕಲ್ ಉಪ್ಪಿ ಶೈಲಿಯ ಜೊತೆಗೆ ಚಂದ್ರು ಅವರ ಫೀಲಿಂಗ್ಸ್ ಕಾಡುತ್ತದೆ.
ಆ ಮಟ್ಟಕ್ಕೆ ಚಂದ್ರು ಒಂದು ಲವ್‌ಸ್ಟೋರಿಯನ್ನು ವಿಭಿನ್ನವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಇದನ್ನು ನೀವು ಇವತ್ತಿನ ಟ್ರೆಂಡಿ ಲವ್‌ಸ್ಟೋರಿ ಎಂದು ಕರೆಯಲು ಅಡ್ಡಿಯಿಲ್ಲ. ಚಿತ್ರದ ಮೊದಲರ್ಧ ಉಪೇಂದ್ರ ಅವರಿಗೆ ಮೀಸಲಾದರೆ ದ್ವಿತೀಯಾರ್ಧ ಚಂದ್ರು ಶೈಲಿಗೆ ಮೀಸಲು. ಆಧುನಿಕತೆಯಲ್ಲಿ ಪ್ರೀತಿಯ ಅರ್ಥ ಬದಲಾಗುವ ಜೊತೆಗೆ ನೈಜ ಪ್ರೀತಿಯನ್ನು ಗುರುತಿಸುವ ಮನಸ್ಥಿತಿಯು ಇರೋದಿಲ್ಲ ಎಂಬ ಅಂಶದೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಮೊದಲೇ ಹೇಳಿದಂತೆ ಚಿತ್ರದಲ್ಲಿ ಉಪ್ಪಿ ಶೈಲಿ ಗಾಢವಾಗಿದೆ. ಹಾಗಾಗಿ, ಈ ಚಿತ್ರ ಉಪೇಂದ್ರ ಅಭಿಮಾನಿಗಳಿಗೆ ಸ್ವಲ್ಪ ಹೆಚ್ಚೇ ಇಷ್ಟವಾಗಬಹುದು. ಚಿತ್ರದುದ್ದಕ್ಕೂ ಸಾಕಷ್ಟು “ಫಿಲ್ಟರ್’ ಇಲ್ಲದ ಮಾತುಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತದೆ. ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಎಲ್ಲವನ್ನು ವೇಗವಾಗಿ ಹೇಳುವ ಉದ್ದೇಶ ನಿರ್ದೇಶಕ ಚಂದ್ರು ಅವರಿಗಿರುವುದು ಚಿತ್ರದಲ್ಲಿ ಕಾಣುತ್ತದೆ.
ಈ ವೇಗದಲ್ಲಿ ಕೆಲವು ಅಂಶಗಳಿಗೆ ಕತ್ತರಿ ಹಾಕುವ ಅವಕಾಶವನ್ನು ಅವರು ಮರೆತಿದ್ದಾರೆನ್ನುವುದು ಬಿಟ್ಟರೆ “ಐ ಲವ್ ಯು’ ನಿಮ್ಮನ್ನು ರಂಜಿಸುವಲ್ಲಿ ಹಿಂದೆ ಬೀಳುವುದಿಲ್ಲ. ಎರಡು ಭಿನ್ನ ಮನಸ್ಥಿತಿಗಳು ಪ್ರೀತಿಯನ್ನು ಹೇಗೆ ನೋಡುತ್ತಾರೆ ಎಂಬ ಚರ್ಚೆಯೊಂದಿಗೆ ಆರಂಭವಾಗುವ ಸಿನಿಮಾ, ಆರಂಭದಲ್ಲಿ ಅಷ್ಟೇನೂ ಗಂಭೀರವಾಗದೇ, ಜಾಲಿ ಮೂಡ್‌ನಲ್ಲೇ ಸಾಗುತ್ತದೆ.
ಆದರೆ, ಚಿತ್ರದ ಒಂದೊಂದೇ ಟ್ವಿಸ್ಟ್‌ಗಳು ತೆರೆದುಕೊಳ್ಳುವ ಮೂಲಕ ಸಿನಿಮಾಕ್ಕೆ ಸೆಂಟಿಮೆಂಟ್ ಟಚ್ ಸಿಗುತ್ತದೆ. ಈ ಚಿತ್ರದಲ್ಲಿ ಚಂದ್ರು ಒಂದು ಸಂದೇಶ ಕೂಡಾ ಕೊಟ್ಟಿದ್ದಾರೆ. ಅದು ನಿಜವಾಗಿಯೂ “ಐ ಲವ್ ಯು’ ಯಾರಿಗೆ ಹೇಳಬೇಕು ಎಂಬುದು. ಹಾಗಂತ ಸಿನಿಮಾದುದ್ದಕ್ಕೂ ಸಂದೇಶ ತುಂಬಿಲ್ಲ. ಉಪ್ಪಿ ಅಭಿಮಾನಿಗಳ ಜೊತೆ ಫ್ಯಾಮಿಲಿ ಆಡಿಯನ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.
ಕಥೆಯ ಬಗ್ಗೆ ಸಿಂಪಲ್ ಆಗಿ ಹೇಳುವುದಾದರೆ ಪ್ರೇಮ, ಕಾಮ ಬಗೆಗಿನ ಚರ್ಚೆ ಜೊತೆಗೆ ಹಳೆಯ ಪ್ರೇಯಸಿ ನೆನಪು ಮತ್ತು ಹೆಂಡತಿಯ ಕಾಳಜಿ … ಈ ಅಂಶಗಳನ್ನು ಒಟ್ಟು ಸೇರಿಸಿ “ಐ ಲವ್ ಯು’ ಮಾಡಿದ್ದಾರೆ ಚಂದ್ರು. ಮೊದಲೇ ಹೇಳಿದಂತೆ ಈ ಚಿತ್ರದಲ್ಲಿ ನಿಮಗೆ ಉಪ್ಪಿ ಸ್ಟೈಲ್ ಸಿಗುತ್ತದೆ. ಉಪೇಂದ್ರ ಅವರು ಕೂಡಾ ತಮ್ಮ ಸ್ಟೈಲ್ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಅಭಿಮಾನಿಗಳನ್ನು ರಂಜಿಸುವಲ್ಲಿ ಅವರು ಹಿಂದೆ ಬಿದ್ದಿಲ್ಲ. ನಾಯಕಿ ರಚಿತಾ ರಾಮ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಜೊತೆಗೆ ತಮ್ಮ ಪಾತ್ರಕ್ಕೂ ನ್ಯಾಯ ಒದಗಿಸಿದ್ದಾರೆ. ಸೋನು ಗೌಡ ಅವರ ಪಾತ್ರ ಈ ಚಿತ್ರದ ಹೈಲೈಟ್‌ಗಳಲ್ಲೊಂದು. ಸಾಕಷ್ಟು ಟ್ವಿಸ್ಟ್‌ಗಳ ಮೂಲಕ ಸಾಗುವ ಪಾತ್ರ ಅಂತಿಮವಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಉಳಿದಂತೆ ಬ್ರಹ್ಮಾನಂದಂ, ಪಿ.ಡಿ.ಸತೀಶ್, ಹೊನ್ನಾವಳ್ಳಿ ಕೃಷ್ಣ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಎರಡು ಹಾಡುಗಳು ಇಷ್ಟವಾಗುತ್ತವೆ. ಸುಜ್ಞಾನ್ ಛಾಯಾಗ್ರಹಣದಲ್ಲಿ “ಐ ಲವ್ ಯು’ ಸುಂದರ.
ಚಿತ್ರ: ಐ ಲವ್ ಯು
ನಿರ್ಮಾಣ – ನಿರ್ದೇಶನ: ಆರ್.ಚಂದ್ರು
ತಾರಾಗಣ: ಉಪೇಂದ್ರ, ರಚಿತಾ ರಾಮ್, ಸೋನು, ಬ್ರಹ್ಮಾನಂದಂ, ಸತೀಶ್, ವಿಜಯ್ ಚೆಂಡೂರು ಮತ್ತಿತರು.
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.