ಬಾವಿ- ಬೋರ್‌ವೆಲ್‌ಗಳಿಗೆ ಮಳೆಕೊಯ್ಲು
Team Udayavani, Jun 15, 2019, 5:00 AM IST
ಮಹಾನಗರ: ಮಹಾನಗರ ಪಾಲಿಕೆ ಈಗಾಗಲೇ ನಿರ್ಮಿಸಿರುವ ಬಾವಿ ಮತ್ತು ಬೋರ್‌ವೆಲ್‌ಗಳ ಪ್ರಸ್ತುತ ಸ್ಥಿತಿ- ಗತಿಯನ್ನು ಪರಿಶೀಲಿಸಿ ಜಲ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಸುವ ಉದ್ದೇಶದಿಂದ ಅಗತ್ಯವಿರುವಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸುವ ಬಹಳ ಮಹತ್ವದ ಕಾರ್ಯ ಯೋಜನಯೊಂದನ್ನು ಜಾರಿಗೊಳಿಸಲು ಮಂಗಳೂರು ಪಾಲಿಕೆ ಮುಂದಾಗಿದೆ.
ಉದಯವಾಣಿ “ಸುದಿನ’ ಒಂದು ವಾರದಿಂದ ನಗರದಲ್ಲಿ ಮಳೆಕೊಯ್ಲು ಯೋಜನೆಯ ಕುರಿತಾಗಿ ನಡೆಸುತ್ತಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಪೂರಕವಾಗಿ ಸ್ಪಂದಿಸಿರುವ ಪಾಲಿಕೆಯು ನಗರದಲ್ಲಿರುವ ಎಲ್ಲ ಬಾವಿ-ಬೋರ್‌ವೆಲ್‌ಗಳನ್ನು ಮಳೆಕೊಯ್ಲು ಯೋಜನೆಯ ಮೂಲಕ ಇನ್ನಷ್ಟು ಜಲಸ್ನೇಹಿಯಾಗಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಶೀಘ್ರದಲ್ಲಿ ಈ ಬಗ್ಗೆ ಪಾಲಿಕೆಯು ಸಾರ್ವಜನಿಕರಿಗೆ ಪ್ರಕಟನೆಯ ಮೂಲಕ ಮನವಿ ಮಾಡಲು ನಿರ್ಧರಿಸಿದೆ.
ಪಾಲಿಕೆಯ ಮಾಹಿತಿಯ ಪ್ರಕಾರ, ಮಂಗಳೂರಿನಲ್ಲಿ ಸುಮಾರು 42 ಸರಕಾರಿ ಬಾವಿ, 150ಕ್ಕೂ ಅಧಿಕ ಬೋರ್‌ವೆಲ್‌ಗಳಿವೆ. ಇದರಲ್ಲಿ 25ಕ್ಕೂ ಅಧಿಕ ಬಾವಿ, 100ಕ್ಕೂ ಅಧಿಕ ಬೋರ್‌ವೆಲ್‌ಗಳಲ್ಲಿ ಉತ್ತಮ ನೀರಿದೆ. ಇಲ್ಲಿ ಮಳೆಕೊಯ್ಲು ಸದ್ಯ ಇಲ್ಲ. ಜತೆಗೆ, 250ಕ್ಕೂ ಅಧಿಕ ಖಾಸಗಿ ಬೋರ್‌ವೆಲ್ ಹಾಗೂ 40ರಷ್ಟು ಖಾಸಗಿ ಬಾವಿಗಳು ನಗರದಲ್ಲಿದೆ. ಈ ಪೈಕಿ ಹೆಚ್ಚಾ ಕಡಿಮೆ 200ರಷ್ಟು ಬೋರ್‌ವೆಲ್‌ಗಳು, ಸುಮಾರು 35ರಷ್ಟು ಬಾವಿಗಳು ಉತ್ತಮ ನೀರು ಹೊಂದಿದೆ.
ಈ ಪೈಕಿ ಪಾಲಿಕೆಯ ಬೋರ್‌ವೆಲ್, ಬಾವಿಗಳ ಅಕ್ಕ-ಪಕ್ಕ ಮನೆ ಅಥವಾ ಕಟ್ಟಡ ಇರುವುದಾದಲ್ಲಿ ಅದರ ತಾರಸಿಯಿಂದ ಬರುವ ಮಳೆ ನೀರನ್ನು ಅವುಗಳಿಗೆ ಹರಿಸುವುದು ಪಾಲಿಕೆಯ ಯೋಚನೆಯಾಗಿದೆ. ಆ ಮೂಲಕ ನಗರದಲ್ಲಿ ಅಂತರ್ಜಲ ವೃದ್ಧಿಸಲು, ಬೇಸಗೆ ಕಾಲದಲ್ಲಿ ಆ ಬಾವಿಗಳ ನೀರನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಿದೆ.
ಸದ್ಬಳಕೆ ಮಾಡುವುದು ಹೇಗೆ?
ಪಾಲಿಕೆ ನಿರ್ಮಿಸಿರುವ ಬೋರ್‌ವೆಲ್‌ಗಳ ಪೈಕಿ ಮನೆ ಅಥವಾ ಕಟ್ಟಡದ ಹತ್ತಿರ ಇರುವ ಬೋರ್‌ವೆಲ್‌ಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅಂದರೆ, ಮನೆಯಿಂದ ಅಥವಾ ಕಟ್ಟಡದಿಂದ ಮಳೆಕೊಯ್ಲು ಮೂಲಕ ಸಿಗುವ ನೀರನ್ನು ನೇರವಾಗಿ ಪಾಲಿಕೆಯ ಬೋರ್‌ವೆಲ್/ಬಾವಿಗಳಿಗೆ ಬಿಡಲು ಅವಕಾಶ ಕಲ್ಪಿಸಲಾಗುತ್ತದೆ. ಮಹಡಿ-ತಾರಸಿಯ ನೀರನ್ನು ಇಲ್ಲಿ ನೇರವಾಗಿ ಬೋರ್‌ವೆಲ್‌ನ ಒಳಗೆ ಹರಿಸಲು ಅವಕಾಶವಿದೆ. ಪಾಲಿಕೆಯೇ ಇದನ್ನು ಕೆಲವು ಕಡೆ ಮಾಡಿದರೆ, ಇನ್ನುಳಿದೆಡೆ ಬಾವಿ/ಬೋರ್‌ವೆಲ್ ಆಶ್ರಯಿಸಿರುವ ಸ್ಥಳೀಯರು ಈ ಪರಿಕಲ್ಪನೆ ಜಾರಿಗೆ ತರಲು ಪಾಲಿಕೆ ಸಹಾಯ ಮಾಡಲಿದೆ.
ಬೋರ್‌ವೆಲ್ ಜಲಮರುಪೂರಣ ಸಾಧ್ಯ
ನೇರವಾಗಿ ಮಳೆ ನೀರನ್ನು ಬೋರ್‌ವೆಲ್‌ಗೆ ಹಾಕುವ ಜತೆಗೆ, ಸಾಧ್ಯತೆ ಇರುವ ಸ್ಥಳದ ಬೋರ್‌ವೆಲ್‌ಗಳ ಸುತ್ತ ಹೊಂಡ ತೆಗೆದು ಅದರ ಮೂಲಕ ಮಳೆ ನೀರು ನಿಲ್ಲುವಂತೆ ಮಾಡಲು ಅವಕಾಶವಿದೆ. ಸದ್ಯ ನಗರದ ಸುಮಾರು 50 ಕಡೆಗಳ ಬೋರ್‌ವೆಲ್ ವ್ಯಾಪ್ತಿಯಲ್ಲಿ ಇಂತಹ ಪ್ರಯೋಗ ಮಾಡಬಹುದು ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು. ಈ ಬಗ್ಗೆ ಶೀಘ್ರ ಸಭೆ ನಡೆಸಿ ಜಲತಜ್ಞರ ಅಭಿಪ್ರಾಯ ಪಡೆದು ಅನುಷ್ಠಾನ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಎಚ್ಚರಿಕೆಯೂ ಅಗತ್ಯ
ನಗರದಲ್ಲಿ ಮಳೆ ನೀರು ಹರಿಯುವ ಚರಂಡಿಗಳು ಅಸಮರ್ಪಕ ರೀತಿಯಲ್ಲಿದೆ. ಅಂದರೆ, ಬಹುತೇಕ ಚರಂಡಿಗಳಿಗೆ ನಗರ ಒಳಚರಂಡಿ ನೀರು ಕೂಡ ಲಿಂಕ್ ಆಗಿರುತ್ತದೆ. ಹೀಗಾಗಿ ಮಳೆಯ ನೀರಿನೊಂದಿಗೆ ಚರಂಡಿ ನೀರು ಕೂಡ ಹರಿಯುವ ಕಾರಣ ಸರಕಾರಿ ಬಾವಿ ಅಥವಾ ಬೋರ್‌ವೆಲ್‌ಗಳಿಗೆ ಮಳೆನೀರು ಕೊಯ್ಲು ಅನುಷ್ಠಾನಿಸುವುದು ಬಹಳಷ್ಟು ಸುಲಭ ಅಲ್ಲ ಅನ್ನುವ ಅಭಿಪ್ರಾಯವೂ ಇದೆ.
ಮಹಡಿ/ತಾರಸಿಯಿಂದ ನೇರವಾಗಿ ಮಳೆ ನೀರು ಬಾವಿ ಅಥವಾ ಬೋರ್‌ವೆಲ್‌ಗೆ ಪೈಪ್ ಮುಖಾಂತರ ಬರುವುದಾದರೆ ಯಾವುದೇ ಸಮಸ್ಯೆ ಇಲ್ಲ; ಆದರೆ, ಮಳೆ ನೀರು ಚರಂಡಿಯಲ್ಲಿ ಹರಿದು ಬಂದ ಅನಂತರ ಅದನ್ನು ಬಾವಿ/ಬೋರ್‌ವೆಲ್‌ಗೆ ಹಾಕುವುದರಿಂದ ಲಾಭವಾಗಲಾರದು. ಜತೆಗೆ ಇಂಗುಗುಂಡಿ ಮಾಡುವಾಗಲೂ ಇದೇ ರೀತಿಯ ಎಚ್ಚರಿಕೆ ಅಗತ್ಯ.
ಬಾವಿಯ ಒರತೆಯ ಸಾಮರ್ಥ್ಯ ವೃದ್ಧಿ
ಒಂದೆರಡು ವರ್ಷದಲ್ಲಿ ನಗರದಲ್ಲಿರುವ ಹಲವು ಬಾವಿಗಳ ನೀರಿನ ಒರತೆ ಕಡಿಮೆಯಾಗಿದೆ. ಒಮ್ಮೆ ಬಾವಿಯ ನೀರನ್ನು ಸಂಪೂರ್ಣ ಪೈಪ್ ಮೂಲಕ ತೆಗೆದರೆ ಮತ್ತೆ ಬಾವಿ ತುಂಬಲು ಕೆಲವು ಹೊತ್ತು ಕಾಯಬೇಕಾಗುತ್ತದೆ. ಆದರೆ ಕೆಲವು ಬಾವಿಗಳಂತೂ ಒರತೆಯ ಸಂಪರ್ಕವನ್ನು ಸಂಪೂರ್ಣ ಕಡಿದುಕೊಂಡಿದ್ದು, ಬತ್ತಿಹೋಗುವ ಆತಂಕದಲ್ಲಿವೆ. ಇಂತಹ ಬಾವಿಗಳಿಗೆ ಮಳೆಕೊಯ್ಲು ಅತ್ಯಂತ ಪರಿಣಾಮಕಾರಿಯಾಗಿ ಒರತೆಯ ಸಾಮರ್ಥ್ಯ ವೃದ್ಧಿಸಲಿದೆ. ಸರಕಾರಿ ಬೋರ್‌ವೆಲ್ ಅಥವಾ ಬಾವಿಗೆ ಮಳೆನೀರು ಕೊಯ್ಲು ಯೋಜನೆಯಡಿ ನೀರು ಹರಿಸುವುದಾದರೆ ಮೊದಲಿಗೆ ಅದರ ಹತ್ತಿರದಲ್ಲಿಯೇ ಮನೆ/ಕಟ್ಟಡ ಇರಬೇಕು ಎಂಬುದು ಸಾಮಾನ್ಯ ಸಂಗತಿ. ಒಂದು ಕಟ್ಟಡ ಅಥವಾ ಮನೆಯಿಂದ ಬಾವಿ/ಬೋರ್‌ವೆಲ್‌ಗಳಿಗೆ ಅಜಗಜಾಂತರವಿದ್ದರೆ ಮಳೆ ನೀರು ಹರಿಯಲು ಕಷ್ಟವಾಗಬಹುದು. ಪೈಪ್‌ಲೈನ್ ವ್ಯವಸ್ಥೆ ಇದ್ದರೆ ಸಮಸ್ಯೆ ಇಲ್ಲ;
ಸರಕಾರಿ ಬಾವಿ ಸಾರ್ವಜನಿಕರ ನಿರ್ವಹಣೆ
“ಉದಯವಾಣಿ ಸುದಿನ’ ಮಳೆಕೊಯ್ಲು ಬಗ್ಗೆ ನಗರದ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ. ಇದಕ್ಕೆ ಪೂರಕವಾಗಿ, ಪಾಲಿಕೆಯಲ್ಲಿರುವ ಸರಕಾರಿ ಬಾವಿ, ಬೋರ್‌ವೆಲ್‌ಗಳ ಪೈಕಿ ಆವಶ್ಯಕವಿರುವ ಕೆಲವನ್ನು ಆ ಭಾಗದ ಸ್ಥಳೀಯರ ನಿರ್ವಹಣೆ, ನೀರು ಬಳಸಲು ನೀಡುವ ಬಗ್ಗೆ ಪಾಲಿಕೆ ಯೋಚನೆ ಮಾಡಿದೆ. ಅಲ್ಲಿ ಮಳೆ ನೀರು ಕೊಯ್ಲು ಯೋಜನೆಯನ್ನು ಅವರು ಅಥವಾ ಪಾಲಿಕೆ ಮಾಡುವ ಬಗ್ಗೆ ಯೋಚನೆ ಇದೆ. ಶೀಘ್ರದಲ್ಲಿ ಇದರ ಬಗ್ಗೆ ಪಾಲಿಕೆ ತೀರ್ಮಾನ ಕೈಗೊಳ್ಳಲಿದೆ.
- ನಾರಾಯಣಪ್ಪ, ಮನಪಾ ಆಯುಕ್ತರು
ಮಳೆ ಕೊಯ್ಲು ಯಶೋಗಾಥೆ
ನೀರಿನ ಕೊರತೆಯಿಲ್ಲ
ಕದ್ರಿ ಕೈಬಟ್ಟಲು ನಿವಾಸಿ ಡೆನಿಸ್ ಲೋಬೋ ಮತ್ತು ಮರಿಯಮ್ಮ ಥೋಮಸ್ ದಂಪತಿ ತಮ್ಮ ಮನೆಯಲ್ಲಿ ಮೂರು ವರ್ಷಗಳ ಹಿಂದೆ ಮಳೆಕೊಯ್ಲು ವಿಧಾನ ಅಳವಡಿಸಿದ್ದಾರೆ. ಈ ಹಿಂದೆ ಇಂಗುಗುಂಡಿ, ಸದ್ಯ ಬಾವಿಗೆ ಮಳೆ ನೀರನ್ನು ಬಿಡಲಾಗುತ್ತಿದ್ದು, ಇದರಿಂದಾಗಿ ನೀರಿನ ಹಾಹಾಕಾರ ನೀಗಿದೆ.
ಅಲ್ಲದೆ, ತಮ್ಮ ಕಾಂಪೌಂಡ್‌ನಲ್ಲಿ ಬಾಡಿಗೆಗೆ ವಾಸವಿರುವ 20 ಮಂದಿಯ ಸಂಸಾರಕ್ಕೆ ಬಾವಿ ನೀರು ಆಧಾರವಾಗಿದೆ. ಹಿಂದೆ ಬೇಸಗೆಯಾಗುತ್ತಿದ್ದಂತೆ ಬಾವಿಯಲ್ಲಿ ನೀರು ಬತ್ತುತ್ತಿತ್ತು. ಆದರೆ ಈಗ ಬಾವಿಯಲ್ಲಿ ನೀರಿದೆ. ಕೆಲವು ಬಾರಿ ಬಾವಿಯಲ್ಲಿ ನೀರು ಬರಿದಾದರೂ, ಒರತೆ ಕಾರಣದಿಂದ ಪುನಃ ನೀರು ತುಂಬುತ್ತದೆ. ಈ ಬಾರಿ ತಮ್ಮ ಎರಡೂ ಮನೆಗಳ ಮೇಲ್ಛಾವಣಿಗೆ ಕೊಳವೆಗಳನ್ನು ಅಳವಡಿಸಿ, ಟ್ಯಾಂಕ್ ನಿರ್ಮಿಸಿ, ಕಲ್ಲಿದ್ದಲು, ಮರಳು ತುಂಬಿಸಿ, ಸೋಸುವಿಕೆಯ ಬಳಿಕ ನೀರನ್ನು ನೇರವಾಗಿ ಬಾವಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಇತರ ಹಿತ್ತಲಿನ ನೀರನ್ನು ಎರಡು ಹೊಂಡಗಳಿಗೆ ಬಿಡಲಾಗುತ್ತಿದೆ.
ಮಳೆ ನೀರು ಬಾವಿಗೆ
ಕೂಳೂರು ನಿವಾಸಿ ಹರೀಶ್ ಕಾವಾ ಒಂದು ವರ್ಷದಿಂದ ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದ್ದಾರೆ. ಇದರಿಂದ ಬೇಸಗೆ ನೀರಿನ ಸಮಸ್ಯೆ ಉದ್ಭವಿಸಿಲ್ಲ. ತಾರಸಿಯಲ್ಲಿ ಪೈಪ್ ಅಳವಡಿಸಿ, ನೀರನ್ನು ಫಿಲ್ಟರ್ ಮಾಡಿ ಬಾವಿಯ ಬಳಿ ನಿರ್ಮಿಸಿದ ಸುಮಾರು 4×3 ಅಡಿ ಗುಂಡಿಗೆ ಬಿಡಲಾಗುತ್ತದೆ. ಅದರಲ್ಲಿ ಜಲ್ಲಿ , ಮರಳು ಮತ್ತು ಕಲ್ಲಿದ್ದಲು ಹಾಕಿದ್ದು, ಇದರಿಂದ ನೇರವಾಗಿ ಬಾವಿಗೆ ನೀರು ಬಿಡಲಾಗಿದೆ.
ಹರೀಶ್ ಹೇಳುವ ಪ್ರಕಾರ, ಮೊದಲ ಒಂದೆರಡು ಮಳೆ ನೀರನ್ನು ಹೊರಗೆ ಬಿಡಬೇಕು. ಏಕೆಂದರೆ ಈ ವೇಳೆ ಕಸ-ಕಡ್ಡಿಗಳು ತಾರಸಿಯಲ್ಲಿರುವುದರಿಂದ ಫಿಲ್ಟರ್ ಅಥವಾ ಬಾವಿಯನ್ನು ಸೇರದಂತೆ ತಡೆಯಬಹುದಾಗಿ. ಬಳಿಕ ಬರುವ ಮಳೆ ನೀರನ್ನು ನೇರವಾಗಿ ಬಾವಿಗೆ ಬಿಡಬಹುದು.
ಮನೆಯಂಗಳ ಇಂಟರ್‌ಲಾಕ್ ಹಾಕಿದಾಗ ಮಳೆ ನೀರು ಭೂಮಿಯಲ್ಲಿ ಇಂಗದೆ
ರಸ್ತೆಯಲ್ಲಿ ಹರಿದುಹೋಗಿ ವ್ಯರ್ಥವಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಇವರ
ಅಂಗಳಕ್ಕೆ 6 ಎಂ.ಎಂ. ಜಲ್ಲಿ ಹುಡಿಹಾಕಿ ಇಂಟರ್‌ಲಾಕ್ ಅಳವಡಿಸಲಾಗಿದ್ದು, ಇಂಟರ್‌ಲಾಕ್ ನಡುವಿನ ಅಂತರ ಹೆಚ್ಚು ಮಾಡಲಾಗಿದೆ, ಇದರಿಂದ ಮಳೆ ನೀರು ರಸ್ತೆಗೆ ಹರಿಯದೆ ಭೂಮಿಗೆ ಇಂಗುತ್ತದೆ.
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.