36 ಅರ್ಜಿಗಳ ದಾಖಲಾತಿ, ಹಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ
Team Udayavani, Jun 16, 2019, 5:00 AM IST
ಬಂಟ್ವಾಳ: ಸಾರ್ವಜನಿಕ ಉದ್ದೇಶದ ಯಾವುದೇ ಕಾಮಗಾರಿಗಳು ಬಾಕಿಯಾಗಬಾರದು. ವಿದ್ಯುತ್ ಗುತ್ತಿಗೆ ದಾರರ ಸಮಸ್ಯೆಗೆ ಪ್ರತ್ಯೇಕ ಸಭೆ ಕರೆಯಲಾಗುವುದು. ಮೆಸ್ಕಾಂ ಜನ ಸಂಪರ್ಕ ಸಭೆ ಸಾರ್ವಜನಿಕರ ಸಮಸ್ಯೆ ಪರಿಹಾರದ ಉದ್ದೇಶಕ್ಕಾಗಿ ಇರುವುದು ಎಂದು ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಮಂಜಪ್ಪ ಹೇಳಿದರು.
ಕೈಕುಂಜೆ ಮೆಸ್ಕಾಂ ಉಪವಿಭಾಗ ಬಿ.ಸಿ. ರೋಡ್ ಕಚೇರಿಯಲ್ಲಿ ಜೂ. 15ರಂದು ನಡೆದ ಮೆಸ್ಕಾಂ ಬಂಟ್ವಾಳ ನಂ. 1, ನಂ. 2 ಉಪವಿಭಾಗ ಜನಸಂಪರ್ಕ ಸಭೆಯಲ್ಲಿ ಅವರು ಸಾರ್ವಜನಿಕರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಮಾತನಾಡಿ, ವಾಮದಪದವಿನಲ್ಲಿ ಮೆಸ್ಕಾಂ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಮೆಸ್ಕಾಂ ಇಲಾಖೆಯಲ್ಲಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ವಿದ್ಯುತ್ ಸ್ಪರ್ಶಿಸಿ ಜಾನುವಾರುಗಳು ಸಾಯುತ್ತಿವೆೆ. ಬಂಟ್ವಾಳ, ಕೊಡಂಬೆಟ್ಟು , ಅಜ್ಜಿಬೆಟ್ಟು ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 40 ವರ್ಷಗಳ ಹಳೆಯದಾದ ವಿದ್ಯುತ್ ತಂತಿಗಳನ್ನು ಬದಲಾಯಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಪರಿಹಾರಕ್ಕೆ ಮೆಸ್ಕಾಂ ಸೂಕ್ತ ದಾಖಲೆಪತ್ರಗಳ ಬಳಿಕ ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ತಂತಿಗಳ ಬದಲಾವಣೆಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಆದ್ಯತೆಯಲ್ಲಿ ನಡೆಸುವುದಾಗಿ ಮಂಜಪ್ಪ ತಿಳಿಸಿದರು.
ಒಂದು ವಾರದಲ್ಲಿ ಮೆಸ್ಕಾಂ ಬಿಲ್‌ಗಳ ಪ್ರಿಂಟ್ ಮಾಸಿ ಹೋಗುತ್ತದೆ. ಮಳೆಗಾಲದಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚು ಎಂದು ಬಳಕೆದಾರ ನರೇಶ್ ಭಟ್ ಅಧಿಕಾರಿಯ ಗಮನಕ್ಕೆ ತಂದರು. ಉತ್ತಮ ಗುಣಮಟ್ಟದ ಪೇಪರ್ ತರಿಸಿ ಬಿಲ್ ನೀಡಲು ಸ್ಥಳದಲ್ಲಿಯೇ ಸಂಬಂಧಪಟ್ಟ ಸಿಬಂದಿಗೆ ಸೂಚನೆ ನೀಡಿ ಕ್ರಮ ಕೈಗೊಂಡು ಮಾಹಿತಿ ನೀಡಲು ತಿಳಿಸಿದರು.
ಹೆಚ್ಚುವರಿ ಬಿಲ್
ಗ್ರಾಮಾಂತರ ಮನೆಗಳಿಗೆ ವಿದ್ಯುತ್ ಮೀಟರ್ ರೀಡಿಂಗ್ ಮಾಡಲು ಸಿಬಂದಿ ಬಾರದೆ ಸತಾಯಿಸಲಾಗುತ್ತದೆ. ಒಮ್ಮೆಲೆ ಕೆಲವು ತಿಂಗಳ ಬಿಲ್ ನೀಡುವ ಮೂಲಕ ಪಾವತಿಗೆ ಸಮಸ್ಯೆ ಆಗುವಂತಾಗಿದೆ. ಬಿಲ್ ನೀಡುವಾಗ ಕೆಲವೊಂದು ಸಂದರ್ಭಗಳಲ್ಲಿ ಹೆಚ್ಚುವರಿ ಬಿಲ್ ಬರುತ್ತದೆ. ಗ್ರಾಹಕರು ಅನಂತರ ಇಲಾಖೆಗೆ ಬಂದು ಬಿಲ್ ಪರಿಶೀಲನೆ ನಡೆಸಿ ಪರಿಹಾರ ಕಾಣುವಾಗ ಸಮಯ ಮುಗಿದಿರುತ್ತದೆ ಎಂದು ಗ್ರಾಹಕರೊಬ್ಬರು ದೂರಿದರು.
ಮಂಜಪ್ಪ ಪ್ರತಿಕ್ರಿಯಿಸಿ, ಸಮಸ್ಯೆ ಗಮನಿಸಲಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಇಂತಹ ತಪ್ಪುಗಳು ತಾಂತ್ರಿಕವಾಗಿ ಕಂಡು ಬರುತ್ತದೆ. ಗ್ರಾಹಕರು ಗಮನಿಸಿ ಅಧಿಕಾರಿಗಳ ಗಮನಕ್ಕೆ ತಂದಾಗ ಸೂಕ್ತ ತಿದ್ದುಪಡಿ ಮಾಡಿ ನೀಡಲಾಗುತ್ತದೆ ಎಂದರು. ನಂದಾವರ ನಿವಾಸಿ ಕೃಷಿಕ ಇದಿನಬ್ಬ ಅಹವಾಲು ಸಲ್ಲಿಸಿ, ನಂದಾವರದಲ್ಲಿ ಸುಮಾರು 55 ವರ್ಷಗಳಿಂದ ಹಳೆಯದಾದ ತಂತಿಗಳನ್ನು ಬದಲಿಸಿಲ್ಲ. ಪರಿಹಾರ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ದೂರನ್ನು ದಾಖಲಿಸಿಕೊಂಡಿದೆ. ಸ್ಥಳಕ್ಕೆ ಬಂದು ಪರಿಶೀಲಿಸಿ ಕ್ರಮ ಮಾಡಲಾಗುವುದು. ಸಂಬಂಧಪಟ್ಟ ಅಧಿಕಾರಿ ನಿಮ್ಮ ಸಮಸ್ಯೆಗೆ ಗಮನ ನೀಡುವರು ಎಂದು ಮಂಜಪ್ಪ ತಿಳಿಸಿದರು. ಮೆಸ್ಕಾಂ ಇ.ಇ. ರಾಮಚಂದ್ರ, ಎ.ಇ.ಇ. ನಾರಾಯಣ ಭಟ್, ಪ್ರಶಾಂತ್ ಪೈ ಉಪಸ್ಥಿತರಿದ್ದರು. ಸಾರ್ವಜನಿಕರ ಸಮಸ್ಯೆಯ ದೂರು ದಾಖಲಾತಿ ಬಳಿಕ ಗುತ್ತಿಗೆದಾರರ ಸಭೆಯನ್ನು ನಡೆಸಲಾಯಿತು.
36 ದೂರು ಸಲ್ಲಿಕೆ
ಬಂಟ್ವಾಳ ಮತ್ತು ಪಾಣೆಮಂಗಳೂರು ಹೋಬಳಿ ವ್ಯಾಪ್ತಿಯಿಂದ ಒಟ್ಟು 36 ದೂರುಗಳನ್ನು ಅದಾಲತ್‌ನಲ್ಲಿ ದಾಖಲಿಸಲಾಗಿದೆ. ಅದರಲ್ಲಿ 20 ದೂರುಗಳು ಹಳೆ ತಂತಿಗಳನ್ನು ಬದಲಾಯಿಸುವುದು. 12 ದೂರುಗಳು ಸಮರ್ಪಕ ಬಿಲ್ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದು, 2 ದೂರು ಲೈನ್ ಸ್ಥಳಾಂತರಕ್ಕೆ ಬೇಡಿಕೆ, 2 ದೂರುಗಳು ಲೋ ವೋಲ್ಟೆàಜ್ ಕುರಿತು ಸಲ್ಲಿಕೆಯಾಗಿದೆ.
ಸಹಕರಿಸಿ
ಗ್ರಾಮೀಣ ಭಾಗದಲ್ಲಿ ನಿರ್ದಿಷ್ಟ ಸ್ಥಳವನ್ನು ಬಿಟ್ಟು ಕೃಷಿ ಮಾಡಬೇಕು. ಸಮಸ್ಯೆ ಬಂದಾಗ ಸೂಕ್ತ ಕ್ರಮ ಮಾಡುವಂತೆ ರೈತರಲ್ಲಿ ನಾವು ವಿನಂತಿಸುತ್ತೇವೆ. ಅದಕ್ಕಾಗಿ ಕರಪತ್ರ ಪ್ರಕಟಿಸಿ ನೀಡಲು ಎಲ್ಲ ಶಾಖಾಧಿಕಾರಿಗಳಿಗೆ ತಿಳಿಸಿದೆ. ಅಡಿಕೆ ತೋಟಕ್ಕೆ ಕೊಪರ್ ಸಲ್ಫೆàಟ್ ಸಿಂಪಡಣೆಯಿಂದ ವಿದ್ಯುತ್ ತಂತಿಗಳು ಕಾಲಕ್ರಮೇಣ ಹಾನಿಗೆ ಒಳಗಾಗುತ್ತವೆ. ರೈತರು ಮೆಸ್ಕಾಂ ಜತೆ ಸಹಕರಿಸಬೇಕು.
– ಮಂಜಪ್ಪ
ಸೂಪರಿಂಟೆಂಡೆಂಟ್ ಎಂಜಿನಿಯರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.