ಪನೀರಲ್ಲಾದರೂ ಹಾಕು ರಾಘವೇಂದ್ರ!
ಕೈ ಕೊಟ್ಟ ರುಚಿಯ ಕಾಡುವ ಪ್ರಸಂಗ
Team Udayavani, Jun 19, 2019, 5:00 AM IST
ಲಂಚ್‌ಬಾಕ್ಸ್‌ನಲ್ಲಿ ಒಂದು ದಿನ ಪನೀರ್ ಬಟರ್ ಮಸಾಲ ಇದ್ದರೆ, ಮತ್ತೂಂದು ದಿನ ಪನೀರ್ ಬುರ್ಜಿ… ಗೆಳತಿಯರೂ ಕಾಲೆಳೆಯುತ್ತಿರುತ್ತಾರೆ. ಎಲ್ಲಿ ಪನೀರ್ ಕಂಡರೂ ನೋಡೇ ನಿನ್ನ ಅಚ್ಚುಮೆಚ್ಚಿನ ಪನೀರ್ ಅಂತಾರೆ. ಆದರೆ, ಒಮ್ಮೆ ಇದೇ ಪನೀರು….
ನನಗೆ ಚಿಕ್ಕಂದಿನಲ್ಲಿ ಹಾಲು ಅಂದ್ರೆ ಅಷ್ಟಕಷ್ಟೆ. ಇದೊಂಥರಾ ವಾಸನೆ ಅಂತ ಮೂಗು ಮುರಿಯುತ್ತಿದ್ದೆ. ಆದರೆ, ಮೊಸರೆಂದರೆ ಪಂಚಪ್ರಾಣ. ಊಟದ ಕೊನೆಗೆ ಮೊಸರಿಲ್ಲದಿದ್ದರೆ ಊಟ ಅಪೂರ್ಣ ಅನ್ನುವಷ್ಟು ಆತ್ಮೀಯತೆ ಮೊಸರಿನೊಂದಿಗೆ. ಮದುವೆಗೂ ಮುನ್ನ ನನ್ನೂರಾದ ಬಂಟ್ವಾಳದಲ್ಲೇ ಇದ್ದಾಗ, ನನಗೆ ಗೊತ್ತಿದ್ದಿದ್ದು ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಕೆನೆ ಮಾತ್ರ. ಹಾಲಿನ ಇತರ ಉತ್ಪನ್ನಗಳ ಹೆಸರು ಕೇಳಿದ್ದೆನೇ ಹೊರತು, ನಾಲಗೆಗೆ ಇನ್ನೂ ಅವುಗಳ ಪರಿಚಯವಾಗಿರಲಿಲ್ಲ.
ಬೆಂಗಳೂರಿಗೆ ಬಂದಮೇಲೆ ಮೊದಲು ಪರಿಚಯವಾಗಿದ್ದೇ ಪನೀರ್. ಆಹಾ, ಹೆಸರಲ್ಲೇ ಏನೋ ಆಕರ್ಷಣೆಯಿದೆ ಅನ್ನಿಸಿದರೂ, ಅದೆಂಥ ಹಾಲನ್ನು ಹಾಳು ಮಾಡಿ ತಿನ್ನೋದು ಅಂತ ಕಮೆಂಟ್ ಕೂಡಾ ಮಾಡಿದ್ದೆ. ಜೀವನದಲ್ಲಿ ಒಮ್ಮೆಯೂ ಟೇಸ್ಟ್ ಮಾಡಿರದ ಪದಾರ್ಥವನ್ನು ದಿನಾ ತಿನ್ನುವಂತಾಗಿದ್ದು ಇಲ್ಲಿಗೆ ಬಂದ ಮೇಲೆಯೇ. ಆಫೀಸಿನ ಟೀಮ್‌ಲಂಚ್‌ಗಳಂತೂ ಪನೀರ್‌ಮಯ! ಪನೀರ್, ಆ ನಂತರ ಪರಿಚಯವಾದ ಚೀಸ್… ಹೀಗೆ ನನ್ನ ಆಹಾರದಲ್ಲಿ ಬಹಳ ಬದಲಾವಣೆಯಾಯ್ತು.
ಮೊದಮೊದಲು ಹೊರಗಡೆ ಮಾತ್ರ ತಿನ್ನೋಕೆ ಸೀಮಿತವಾಗಿದ್ದ ಪನೀರ್, ನಿಧಾನಕ್ಕೆ ಅಡುಗೆ ಕೋಣೆಯೊಳಗೂ ಲಗ್ಗೆ ಇಟ್ಟಿತು. ಈಗ ಎಷ್ಟರ ಮಟ್ಟಿಗೆ ಪನೀರ್‌ಗೆ ಒಗ್ಗಿ ಹೋಗಿದ್ದೇನೆಂದರೆ, ವಾರಕ್ಕೆ ಎರಡು ಮೂರು ಬಾರಿಯಾದರೂ ತಂದು, ಮಾಡಿ ತಿನ್ನುತ್ತೇವೆ.ಲಂಚ್‌ಬಾಕ್ಸ್‌ನಲ್ಲಿ ಒಂದು ದಿನ ಪನೀರ್ ಬಟರ್ ಮಸಾಲ ಇದ್ದರೆ, ಮತ್ತೂಂದು ದಿನ ಪನೀರ್ ಬುರ್ಜಿ… ಗೆಳತಿಯರೂ ಕಾಲೆಳೆಯುತ್ತಿರುತ್ತಾರೆ. ಎಲ್ಲಿ ಪನೀರ್ ಕಂಡರೂ, ನೋಡೇ ನಿನ್ನ ಅಚ್ಚುಮೆಚ್ಚಿನ ಪನೀರ್ ಅಂತಾರೆ.
ಅವತ್ತೂಂದಿನ ಊಟದ ಸಮಯದಲ್ಲಿ, ನನ್ನ ಕಿವಿ ನಿಮಿರುವ ಘಟನೆ ನಡೆಯಿತು. ಗೆಳತಿಯೊಬ್ಬಳು ಪನೀರ್‌ನಿಂದ ಮಾಡಿದ ಪದಾರ್ಥವನ್ನು ತಂದಿದ್ದಳು. ಜೊತೆಗೆ, ಮನೆಯಲ್ಲೇ ಮಾಡಿದ ಪನೀರ್ ಕಣೇ ಅಂದಾಗ, “ಹೌದಾ?’ ಅಂತ ಕಣ್ಣರಳಿಸಿದೆ. ಒಂದು ಲೀಟರ್ ಹಾಲಿಗೆ ಸ್ವಲ್ಪವೇ ಸಿಟ್ರಿಕ್ ಆ್ಯಸಿಡ್ ಹಾಕಿದೆ. ಸ್ವಲ್ಪ ಸಮಯದಲ್ಲೇ ಹಾಲು ಒಡೆದು, ಪನೀರ್ ಚೂರುಗಳು ನೀರಿನಿಂದ ಬೇರ್ಪಟ್ಟಿತು ಅಂದಳು. ಅಷ್ಟೇನಾ? ಅಂತ ಕೇಳಿದ್ದಕ್ಕೆ, ಹೂಂ, ಅಷ್ಟೇ ಅಂದುಬಿಟ್ಟಳು. ಅರೇ, ನನ್ನ ಇಷ್ಟದ ಪನೀರ್ ಮಾಡೋದು ಇಷ್ಟು ಸುಲಭ ಅಂತ ನಂಗೆ ಗೊತ್ತೇ ಇರಲಿಲ್ಲವಲ್ಲ ಅಂತ ಪೇಚಾಡಿದೆ.
ಹೊಸರುಚಿಗಳನ್ನು ಪ್ರಯೋಗಿಸಲು ಹಾತೊರೆಯುವ ನಾನು ಬಿಡುತ್ತೀನಾ? ಸರಿ, ಒಂದು ವೀಕೆಂಡ್‌ನಲ್ಲಿ ಪನೀರ್ ಮಾಡುವ ಸಾಹಸಕ್ಕೆ ಕೈ ಹಾಕಿದೆ. ಕೊಬ್ಬಿನ ಅಂಶ ಜಾಸ್ತಿ ಇರುವ ಹಾಲನ್ನು ತನ್ನಿ ಅಂತ ಪತಿರಾಯರಿಗೆ ಹೇಳಿ ಅಂಗಡಿಗೆ ಕಳಿಸಿದೆ. ಇತ್ತ, ಅಡುಗೆ ಮನೆಯಲ್ಲಿ ನಾನು ಲಿಂಬೆ ಹಣ್ಣು ಹಿಂಡಿ ರಸ ತೆಗೆದಿಟ್ಟುಕೊಂಡೆ. ಹಾಲು ಬಂತು, ಕಾಯಲು ಇಟ್ಟೆ. ಗೆಳತಿಯ ಮಾತಿನ ಬಗ್ಗೆ ಸ್ವಲ್ಪ ಅನುಮಾನವಿದ್ದುದರಿಂದ, ಯೂಟ್ಯೂಬ್‌ನಲ್ಲಿ ವಿಡಿಯೋ ಕೂಡಾ ನೋಡಿದ್ದೆ. ಆ ವೀಡಿಯೊ ಪ್ರಕಾರ, ಒಲೆಯ ಮೇಲೆ ಹಾಲು ಕಾಯುತ್ತಿರುವಾಗಲೇ ಲಿಂಬೆ ರಸ ಹಾಕಬೇಕಿತ್ತು. ಅಷ್ಟೆಲ್ಲ ಸರ್ಕಸ್ ಬೇಡ, ಹಾಲು ಉಕ್ಕಿದ ಮೇಲೆಯೇ ಹುಳಿ ಹಿಂಡೋಣ ಅಂತ ಕಾದು, ನಂತರ ಲಿಂಬೆ ರಸವನ್ನು ನಿಧಾನಕ್ಕೆ ಹಾಲಿನ ಪಾತ್ರೆಗೆ ಸುರಿಯುತ್ತಾ ಸೌಟಿನಿಂದ ಕಲಸತೊಡಗಿದೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಹಾಲು ಹಾಳಾಗುತ್ತೆ, ಮುಂದೆ ಏನೇನು ಮಾಡಬೇಕು ಅಂತ ತಯಾರಿ ಮಾಡ್ಕೊಂಡೆ.
ಅರ್ಧ ಗಂಟೆಯಾಯ್ತು. ಉಹೂ, ಏನೂ ಆಗಲಿಲ್ಲ. ಒಂದು ಗಂಟೆ ಆದರೂ ಹಾಲಿನಲ್ಲಿ ಏನೂ ಬದಲಾವಣೆಯಾಗದೆ, ಚೆನ್ನಾಗೇ ಇತ್ತು. ಗಡಿಯಾರದ ಮುಳ್ಳುಗಳು ಓಡುತ್ತೋಡುತ್ತಾ ಮೂರು ಗಂಟೆ ಆಯ್ತು ಅಂದವು. ಹಾಲಿನಿಂದ ಪನೀರ್ ಎದ್ದು ಬರಲೇ ಇಲ್ಲ! ಹುಳಿ ಹಿಂಡಿದ್ದು ಸಾಕಾಗಲಿಲ್ಲವೇನೋ ಅಂತ ಮತ್ತಷ್ಟು ಲಿಂಬೆರಸ ಹಿಂಡಿ, ಪಾತ್ರೆ ಮುಚ್ಚಿಟ್ಟೆ. ಸ್ವಲ್ಪ ಹೊತ್ತಿನ ನಂತರ ಕುತೂಹಲದಿಂದ ಮುಚ್ಚಳ ತೆಗೆದು ಇಣುಕಿದರೆ, ಏನು ನೋಡೋದು? ಹಾಲಿಗೆ ಏನೂ ಆಗೇ ಇರಲಿಲ್ಲ!
ಅಯ್ಯೋ ಕರ್ಮವೇ ಅಂದುಕೊಂಡು ಇಡೀ ರಾತ್ರಿ ಕಾಯೋಣ ಅಂತ ಬೇಜಾರಿನಲ್ಲೇ ಮಲಗಿದೆ. ಬೆಳಗ್ಗೆ ಕಣ್ಣು ಬಿಟ್ಟ ಕೂಡಲೇ ಅಡುಗೆಮನೆಗೆ ಓಡೋಡಿ ಬಂದು ಹಾಲಿನ ಪಾತ್ರೆ ತೆಗೆದೆ. ಪಾತ್ರೆಯಲ್ಲಿ ಪನೀರ್ ಚೂರುಗಳು ನನಗಾಗಿ ಕಾಯುತ್ತಿರುತ್ತವೆ ಅಂತ ಕನಸು ಕಂಡವಳಿಗೆ ಸಿಕ್ಕಿದ್ದು, ಒಂದು ಲೀಟರ್ ಮೊಸರು! ಅಷ್ಟೂ ಹಾಲು ಪನೀರ್ ಆಗದೆ ಗಟ್ಟಿ ಮೊಸರಾಗಿ ಕೂತಿತ್ತು! ಸಮಸ್ಯೆ ಹಾಲಿನಧ್ದೋ, ಲಿಂಬೆಯಧ್ದೋ ಅಂತ ತಿಳಿಯದೆ ಮಂಗನಂತಾಗಿದ್ದ ನನ್ನನ್ನು ನೋಡಿ ಮೊಸರು ಮುಸಿ ಮುಸಿ ನಕ್ಕಂತಾಯ್ತು…
– ಸುಪ್ರೀತಾ ವೆಂಕಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗಂಜಿಮಠ ಪ್ಲಾಸ್ಟಿಕ್ ಪಾರ್ಕ್: ವಿವಾದಿತ ಭೂಮಿ ಕೈಬಿಟ್ಟು ಪರಿಷ್ಕೃತ ಯೋಜನೆ ರೂಪಿಸಿ: ಸಂಸದ
Mudubidire: ಕಡಲಕೆರೆ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ಚಾಲನೆ
Mysuru; ‘ಗೃಹಲಕ್ಷ್ಮಿ’ಯಿಂದ ಶೌಚಗೃಹ ನಿರ್ಮಿಸಿದ ಮಹಿಳೆ!
Sports Padma Awards ; ಶ್ರೀಜೇಶ್‌ಗೆ ಪದ್ಮಭೂಷಣ ಅಶ್ವಿನ್, ವಿಜಯನ್‌ಗೆ ಪದ್ಮಶ್ರೀ
IND vs ENG: ತಿಲಕ್ ವರ್ಮಾ ಹೋರಾಟದಿಂದ 2ನೇ ಟಿ-20 ಪಂದ್ಯ ಗೆದ್ದ ಭಾರತ ತಂಡ