ಪ್ರೋತ್ಸಾಹ ಧನಕ್ಕಾಗಿ ಕಾದ ರೈತರು ಸಂಕಷ್ಟಕ್ಕೆ
Team Udayavani, Jun 19, 2019, 3:10 AM IST
ಬೆಂಗಳೂರು: ಸಾಲಮನ್ನಾ ವ್ಯಾಪ್ತಿಗೆ ಒಳಪಡದ ವಾಣಿಜ್ಯ ಬ್ಯಾಂಕುಗಳಲ್ಲಿ ಚಾಲ್ತಿ ಖಾತೆ ಹೊಂದಿರುವ ರೈತರು ಸರ್ಕಾರದ 25 ಸಾವಿರ ರೂ.ಪ್ರೋತ್ಸಾಹ ಧನಕ್ಕಾಗಿ ಕಾದು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ರಾಜ್ಯ ಸರ್ಕಾರವು ಸಾಲಮನ್ನಾ ಘೋಷಣೆ ಮಾಡುವ ಸಂದರ್ಭದಲ್ಲಿ ಸುಮಾರು 7 ಲಕ್ಷ ರೈತರು ಚಾಲ್ತಿ ಖಾತೆ ಹೊಂದಿದ್ದರು. ಆ ರೈತರಿಗೆ ಪ್ರತಿ ಖಾತೆಗೂ 25 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ, ನಿಗದಿತ ಸಮಯದಲ್ಲಿ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡದಿರುವುದರಿಂದ ರೈತರು ಈಗ ಬಾಕಿ ಸಾಲಗಾರರಾಗಿದ್ದಾರೆ. ಬ್ಯಾಂಕ್‌ನಿಂದ ಎರಡು ಪಟ್ಟು ಬಡ್ಡಿ ಕಟ್ಟುವಂತೆ ಸೂಚನೆ ಬಂದಿರುವುದರಿಂದ ತೊಂದರೆಗೊಳಗಾಗಿದ್ದಾರೆ.
ಸರ್ಕಾರದ ಪ್ರೋತ್ಸಾಹ ಧನ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಕಾದು ಕುಳಿತಿದ್ದ ರೈತರು, ಈಗ ಕಟ್‌ಬಾಕಿ (ಬಾಕಿ ಸಾಲಗಾರರು) ಸಾಲಗಾರರಾಗಿ ಹೆಚ್ಚಿನ ಬಡ್ಡಿ ಹೊರೆಯಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳ ಜೊತೆಗೆ ಸಂಘರ್ಷ ನಡೆಸುವಂತಾಗಿದೆ.
ಪ್ರೋತ್ಸಾಹ ಧನ ಬಂದರೆ ಒಂದು ವರ್ಷದ ಕನಿಷ್ಠ 2 ಲಕ್ಷ ರೂ.ಬೆಳೆ ಸಾಲದ ಮೇಲಿನ ಬಡ್ಡಿ ಹೊರೆ ಕಡಿಮೆಯಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ರೈತರಿದ್ದರು. ಆದರೆ, ಸರ್ಕಾರದ ಪ್ರೋತ್ಸಾಹ ಧನ ಬಂದು ರೈತರ ಖಾತೆಗೆ ಜಮೆಯಾಗುವ ಹೊತ್ತಿಗೆ ರೈತರು ಸಾಲ ಪಡೆದ ಒಂದು ವರ್ಷದ ಅವಧಿ ಮುಕ್ತಾಯವಾಗಿರುವುದರಿಂದ ಅವರ ಸಾಲದ ಮೇಲಿನ ಬಡ್ಡಿಯ ಪ್ರಮಾಣ ಶೇ.7ರಿಂದ 14ಕ್ಕೆ ಏರಿಕೆಯಾಗಿದೆ.
ಒಂದು ವರ್ಷದ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದ್ದರೆ, ಶೇ.7ರ ಬಡ್ಡಿಯಲ್ಲಿ ಸರ್ಕಾರ ಶೇ.4ರಷ್ಟು ಬಡ್ಡಿ ಸಹಾಯಧನ ನೀಡುತ್ತಿತ್ತು. ಆಗ ರೈತರಿಗೆ ಕೇವಲ ಶೇ.3ರ ಬಡ್ಡಿ ಹೊರೆ ಬೀಳುತ್ತಿತ್ತು. ಆದರೆ, ಚಾಲ್ತಿ ಖಾತೆ ಹೊಂದಿದ್ದ ಸುಮಾರು 7 ಲಕ್ಷ ರೈತರು ಸಾಲ ಪಡೆದ ಒಂದು ವರ್ಷದ ಅವಧಿ ಮುಕ್ತಾಯವಾಗಿದ್ದರಿಂದ ಸಾಲ ಮರು ಪಾವತಿಸಬೇಕಾದರೆ,
ಶೇ.14ರ ಬಡ್ಡಿ ಕಟ್ಟಬೇಕೆಂದು ರಾಷ್ಟ್ರೀಕೃತ ಬ್ಯಾಂಕ್‌ನವರು ರೈತರಿಗೆ ಸೂಚನೆ ನೀಡುತ್ತಿದ್ದಾರೆ. ಅಲ್ಲದೇ ಸರ್ಕಾರ ನೀಡಿರುವ 25 ಸಾವಿರ ರೂ. ಪ್ರೋತ್ಸಾಹ ಧನವನ್ನು ರೈತರ ಸಾಲದ ಬಡ್ಡಿಗೆ ಬ್ಯಾಂಕ್‌ಗಳು ಜಮೆ ಮಾಡಿಕೊಳ್ಳುತ್ತಿರುವುದರಿಂದ ಪ್ರೋತಾಹ ಧನದ ಲಾಭ ಸಿಗದಂತಾಗಿದೆ.
ಸಾಲ ಮನ್ನಾ ಘೋಷಣೆಯ ಸಂದರ್ಭದಲ್ಲಿ ಸಾಲ ಪಡೆದ 22 ಲಕ್ಷ ರೈತರಲ್ಲಿ ಸಾಲ ಮರು ಪಾವತಿಸಿ ಚಾಲ್ತಿ ಖಾತೆ ಹೊಂದಿದ್ದ 7 ಲಕ್ಷ ರೈತರೂ ಸೇರಿಕೊಂಡಿದ್ದರು. ಪ್ರಾಮಾಣಿಕವಾಗಿ ಸಾಲ ತುಂಬುವ ರೈತರಿಗೆ ಸರ್ಕಾರ ನಿಗದಿತ ಸಮಯದಲ್ಲಿ ಪ್ರೋತ್ಸಾಹ ಧನ ನೀಡಿದ್ದರೆ, ಸಾಲ ಮರುಪಾವತಿ ಮಾಡಿ ಅನುಕೂಲ ಪಡೆದುಕೊಳ್ಳಬಹುದಿತ್ತು. ಆದರೆ, ಸರ್ಕಾರದ ವಿಳಂಬ ನೀತಿಯಿಂದ ಸುಸ್ತಿ ಸಾಲಗಾರರಾಗಿ ಹೆಚ್ಚಿನ ಬಡ್ಡಿ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ.
ಸಾಲ ಕಟ್ಟದ ರೈತರ 2 ಲಕ್ಷ ರೂ. ಸಾಲಮನ್ನಾ ಮಾಡಿ ಅವರ ಬೆನ್ನಿಗೆ ನಿಲ್ಲುವ ಸರ್ಕಾರ, ಪ್ರಾಮಾಣಿಕವಾಗಿ ಸಾಲ ಕಟ್ಟಿದ ರೈತರ ಕನಿಷ್ಠ 1 ಲಕ್ಷ ರೂ.ಪ್ರೋತ್ಸಾಹ ಧನ ಅಥವಾ ಹೆಚ್ಚಿನ ಬಡ್ಡಿಯ ಹೊರೆನ್ನಾದರೂ ಕಡಿಮೆ ಮಾಡಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ.
ತಗ್ಗಿದ ಹೊರೆ: ರಾಜ್ಯ ಸರ್ಕಾರ ಸಾಲಮನ್ನಾ ಘೋಷಣೆ ಮಾಡುವ ಸಂದರ್ಭದಲ್ಲಿ 22 ಲಕ್ಷ ರೈತರ 37 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲಾಗುತ್ತಿದೆ ಎಂದು ಘೋಷಿಸಲಾಯಿತು. ಸರ್ಕಾರ ಅದೇ ಲೆಕ್ಕಾಚಾರದಲ್ಲಿ ಒಂದೇ ವರ್ಷದಲ್ಲಿ ಅಷ್ಟೊಂದು ಸಾಲಮನ್ನಾ ಮಾಡಿದರೆ ಸರ್ಕಾರಕ್ಕೆ ಹೊರೆಯಾಗುತ್ತದೆ ಎಂದು ಐದು ವರ್ಷದಲ್ಲಿ ಹಂತ ಹಂತವಾಗಿ ಸಂಪೂರ್ಣ ಸಾಲಮನ್ನಾ ಮಾಡಲು ತೀರ್ಮಾನಿಸಿತು.
ಆದರೆ, ಸರ್ಕಾರ ಘೋಷಣೆ ಮಾಡಿದ್ದ 22 ಲಕ್ಷ ರೈತರ ಪಟ್ಟಿಯಲ್ಲಿ ಚಾಲ್ತಿ ಖಾತೆ ಹೊಂದಿರುವ ಸುಮಾರು 7 ಲಕ್ಷ ರೈತರಿದ್ದರು. ಆ ರೈತರ ಸಾಲವೇ ಸುಮಾರು 10 ಸಾವಿರ ಕೋಟಿ ರೂ.ಇದೆ. ಅವರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿರುವುದು ಕೇವಲ 1,400 ರಿಂದ 1,500 ಕೋಟಿ ಮಾತ್ರ. ಇನ್ನು ಸಾಲಮನ್ನಾ ಮೊತ್ತ 18 ರಿಂದ 20 ಸಾವಿರ ಕೋಟಿ ರೂ.ಗೆ ಇಳಿಕೆಯಾಗಿದೆ.
ಸಾಲಮನ್ನಾ ಯೋಜನೆಗೆ ಯಾರು ಅರ್ಹರಿದ್ದಾರೋ ಅಂತಹ ರೈತರಿಗೆ ಸಾಲಮನ್ನಾದ ಹಣವನ್ನು ಮಂಜೂರು ಮಾಡಲಾಗುತ್ತಿದೆ. ಸರ್ಕಾರಿ ಆದೇಶದಲ್ಲಿ ಏನು ಹೇಳಲಾಗಿದೆ ಅದನ್ನು ಜಾರಿಗೊಳಿಸಲಾಗುತ್ತಿದೆ. ಚಾಲ್ತಿ ಖಾತೆ ಹೊಂದಿರುವ ಎಲ್ಲ ರೈತರಿಗೂ 25 ಸಾವಿರ ಪ್ರೋತ್ಸಾಹ ಧನ ಬಿಡುಗಡೆ ಮಾಡಲಾಗಿದೆ.
-ಮನೀಷ್ ಮೌದ್ಗಿಲ್, ಸಾಲಮನ್ನಾ ಯೋಜನೆಯ ನೋಡಲ್ ಅಧಿಕಾರಿ
* ಶಂಕರ ಪಾಗೋಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.