ಜನ ಜಾಗೃತಿ ಮೂಡಿಸಿದ “ಮನೆಮನೆ ಮಳೆ ಕೊಯ್ಲು’
ಜಲ ಸಾಕ್ಷರತೆ ಅಲೆ ಸೃಷ್ಟಿಸಿದ ಉದಯವಾಣಿ ಅಭಿಯಾನ
Team Udayavani, Jun 20, 2019, 5:00 AM IST
ಉರ್ವಸ್ಟೋರ್: ವರ್ತಮಾನದ ಆವಶ್ಯಕತೆ, ಭವಿಷ್ಯದ ಅಸ್ತಿತ್ವಕ್ಕಾಗಿ ಜೀವಜಲವನ್ನು ಜತನದಿಂದ ಕಾಪಾಡುವ ಮನಸ್ಸುಗಳು ಮನೆಗಳಿಂದಲೇ ಸೃಷ್ಟಿಯಾಗಬೇಕು. ಆಸಕ್ತ ಮನಸ್ಸುಗಳಿಗೆ ವೇದಿಕೆಯಾಗಬೇಕು ಎಂಬ ಆಶಯದೊಂದಿಗೆ “ಉದಯವಾಣಿ’ ಬುಧವಾರ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ “ಮನೆಮನೆ ಮಳೆಕೊಯ್ಲು’ ಕಾರ್ಯಾಗಾರ ಜಲ ಸಾಕ್ಷರತೆ ಅಲೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ಕರಾವಳಿಯಲ್ಲಿ ಜಲ ಸಾಕ್ಷರತೆ ಜಾಗೃತಿ ಮೂಡಿಸಲು ಹೊರಟಿರುವ ಉದಯವಾಣಿಯ ಈ ಸಾಮಾಜಿಕ ಕಳಕಳಿಯ ಅಭಿಯಾನದ ಪ್ರಾರಂಭದಲ್ಲಿಯೇ ಓದುಗರಿಂದ, ಅಧಿಕಾರ ವರ್ಗದಿಂದ ಅಭೂತಪೂರ್ವ ಬೆಂಬಲ-ಶ್ಲಾಘನೆ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ಜಿಲ್ಲೆಗಳಿಂದ ಈ ಮಳೆಕೊಯ್ಲು ಕಾರ್ಯಾಗಾರಕ್ಕೆ ಎಷ್ಟೊಂದು ಜನ ಬೆಂಬಲ ಸಿಕ್ಕಿದೆ ಎನ್ನುವುದಕ್ಕೆ ಬುಧವಾರ ಉರ್ವಸ್ಟೋರ್‌ನಲ್ಲಿರುವ ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ತುಂಬಿದ್ದ ಜನರೇ ಇದಕ್ಕೆ ಸಾಕ್ಷಿ.
ಒಂದೊಮ್ಮೆ ಜಲ ಸಮೃದ್ಧಿ ನಾಡಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಬರದ ನಾಡಾಗುವತ್ತ ಸಾಗುತ್ತಿರುವ ಕಾಲಘಟ್ಟದಲ್ಲಿ ಜಲಸಂರಕ್ಷಣೆ, ಮಳೆಕೊಯ್ಲು ಮತ್ತು ಜಲಸಾಕ್ಷರತೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ “ಮನೆಮನೆಗೆ ಮಳೆ ಕೊಯ್ಲು’ ಅಭಿಯಾನ ಅವಶ್ಯವಾಗಿತ್ತು. “ಉದಯವಾಣಿ- ಸುದಿನ’ವು ಈ ಮಹಾ ಉದ್ದೇಶವನ್ನು ಇಟ್ಟುಕೊಂಡು ಜೂ. 7ರಿಂದ 19ರ ವರೆಗೆ 12 ದಿನಗಳ ಕಾಲ ನಿರಂತರವಾಗಿ ಮಳೆಕೊಯ್ಲು ಮಹತ್ವ, ಆವಶ್ಯಕತೆ, ಮಾಹಿತಿ, ಮಳೆಕೊಯ್ಲು ಮಾಡಿ ಜಲಕ್ಷಾಮ ಸಮಸ್ಯೆಗೆ ಪರಿಹಾರ ಕಂಡುಕೊಂಡವರ ಯಶೋಗಾಥೆಗಳನ್ನು ಪ್ರಕಟಿಸಿತ್ತು. ಆ ಮೂಲಕ ಓದುಗರನ್ನು ಜಲ ಸಾಕ್ಷರತೆಯತ್ತ ಜಾಗೃತಗೊಳಿಸುವ ಮೊದಲ ಪ್ರಯತ್ನಕ್ಕೆ ಮುಂದಾಗಿತ್ತು. ಇದಕ್ಕೆ ಓದುಗರಿಂದಲೂ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿತ್ತು. ಇದು ಇನ್ನಷ್ಟು ವಿಸ್ತೃತ ರೂಪವನ್ನು ಪಡೆದುಕೊಳ್ಳಬೇಕು ಎಂಬ ಸದಾಶಯದೊಂದಿಗೆ ಬುಧವಾರ ಮಾಹಿತಿ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಉಪಯುಕ್ತ ಮಾಹಿತಿ ಪಡೆದುಕೊಂಡರು. ಮೈಸೂರು, ಕಾರವಾರದಂಥ ದೂರದ ಜಿಲ್ಲೆಯಿಂದಲೂ ಕಾರ್ಯಾಗಾರಕ್ಕೆ ಜನರು ಆಗಮಿಸಿದ್ದು ವಿಶೇಷವಾಗಿತ್ತು.
ಭವಿಷ್ಯದ ದೃಷ್ಟಿಯಿಂದ ಅಭಿಯಾನ
ಮೂರ್‍ನಾಲ್ಕು ವರ್ಷಗಳಿಂದೀಚೆಗೆ ಜಿಲ್ಲೆಯಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಈ ಬೇಸಗೆಯಲ್ಲಿ ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆ ಅತಿಯಾದ ನೀರಿನ ಅಭಾವ ಎದುರಿಸಿತ್ತು. ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನೇ ದಿನೇ ನೀರಿನ ಮಟ್ಟ ಇಳಿಕೆಯಾದ್ದರಿಂದ ಎಪ್ರಿಲ್ ತಿಂಗಳಲ್ಲೇ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡುವ ಅನಿವಾರ್ಯ ನಗರಕ್ಕೆ ಬಂದೊದಗಿತ್ತು. ಈ ಪರಿಸ್ಥಿತಿ ಭವಿಷ್ಯದಲ್ಲಿ ಉಂಟಾಗಬಾರದು ಎಂಬ ಮುಂದಾಲೋಚನೆಯೊಂದಿಗೆ ಜನರಿಗೆ ನೀರುಳಿಸುವಿಕೆಯ ದಾರಿಯನ್ನು ತಿಳಿಸಿಕೊಡಬೇಕೆಂಬ ಪ್ರಯತ್ನದೊಂದಿಗೆ ಉದಯವಾಣಿಯು “ಮನೆಮನೆಗೆ ಮಳೆಕೊಯ್ಲು’ ಅಭಿಯಾನವನ್ನು ಹಮ್ಮಿಕೊಂಡಿತ್ತು.
ಯಶೋಗಾಥೆ ಪ್ರಸ್ತುತಿ
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಆರಂಭವಾದ ಕಾರ್ಯಕ್ರಮದಲ್ಲಿ ಮೊದಲಿಗೆ ಉದಯವಾಣಿ ಆನ್‌ಲೈನ್ ವಿಭಾಗವು ಸಿದ್ಧಪಡಿಸಿದ ಮಳೆಕೊಯ್ಲು ಅಳವಡಿಸಿ ಯಶಸ್ವಿಯಾದವರ ಯಶೋಗಾಥೆಗಳನ್ನು ಪ್ರಸ್ತುತಪಡಿಸಲಾಯಿತು. ಐವರು ಸಾಧಕರು ತಮ್ಮ ಮನೆಗಳಲ್ಲಿ ಅಳವಡಿಸಿದ ಮಳೆಕೊಯ್ಲು ವ್ಯವಸ್ಥೆಯಿಂದಾಗಿ ಮನೆ ಖರ್ಚಿಗೆ ಸಾಕಾಗುವಷ್ಟು ನೀರು ಪಡೆಯುತ್ತಿರುವುದಲ್ಲದೆ, ಅಕ್ಕಪಕ್ಕದವರಿಗೂ ನೀಡಿ ಸಹಕರಿಸುತ್ತಿರುವ ಬಗ್ಗೆ ಮನದಾಳ ಹಂಚಿಕೊಳ್ಳುವ ಚಿತ್ರಣವನ್ನು ವೀಡಿಯೋ ಮೂಲಕ ತೋರಿಸಲಾಯಿತು.
ಮಳೆಕೊಯ್ಲಿನಿಂದಲೇ ಉದ್ಘಾಟನೆ
ಮಳೆನೀರು ಕೊಯ್ಲು ಪ್ರಾತ್ಯಕ್ಷಿಕೆಯ ಮಾದರಿಯನ್ನಿಟ್ಟು, ಫಿಲ್ಟರ್‌ಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಉದ್ಘಾಟಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಉದ್ಘಾಟನೆ ನೆರವೇರಿಸಿದರು.
ನಿರ್ಮಿತಿ ಕೇಂದ್ರದಿಂದ ಪ್ರಾತ್ಯಕ್ಷಿಕೆ
ಮಳೆಕೊಯ್ಲು ಮಾಡುವುದು ಹೇಗೆ, ಸಣ್ಣ ಜಾಗದಲ್ಲೂ ಮಾಡುವುದು ಸಾಧ್ಯವೇ ಸೇರಿದಂತೆ ಓದುಗರ ಅನೇಕ ಪ್ರಶ್ನೆಗಳನ್ನು ಪರಿಹರಿಸುವ ಸಲುವಾಗಿ ನಿರ್ಮಿತಿ ಕೇಂದ್ರದಿಂದ ಮಳೆಕೊಯ್ಲು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಸಭಾಂಗಣದ ಪಕ್ಕದಲ್ಲೇ ಏರ್ಪಡಿಸಿದ್ದ ಈ ಪ್ರಾತ್ಯಕ್ಷಿಕೆಯಲ್ಲಿ ಹಲವರು ಆಗಮಿಸಿ ಮಾಹಿತಿಗಳನ್ನು ಪಡೆದುಕೊಂಡರು. ಮಳೆಕೊಯ್ಲು ಅಳವಡಿಸಲು ಇರುವ ಸರಳ ವಿಧಾನಗಳು, ತಾಂತ್ರಿಕ ಮಾಹಿತಿಗಳನ್ನು ಜನರಿಗೆ ನೀಡಲಾಯಿತು. ಅಲ್ಲದೆ, ಹೆಸರು ನೋಂದಾವಣೆ ಮಾಡಿಕೊಂಡ ಆಸಕ್ತರ ಮನೆಗಳಿಗೆ ನಿರ್ಮಿತಿ ಕೇಂದ್ರದವರೇ ತೆರಳಿ ಉಚಿತ ತಾಂತ್ರಿಕ ಮಾಹಿತಿ ನೀಡಲು ನಿರ್ಮಿತಿ ಕೇಂದ್ರದ ತಂತ್ರಜ್ಞರು ಮುಂದೆ ಬಂದಿದ್ದು, ಈ ವ್ಯವಸ್ಥೆಯಡಿ ಅನೇಕರು ನೋಂದಣಿ ಮಾಡಿಕೊಂಡಿದ್ದಾರೆ.
ಲ್ಯಾಬ್ ಟೆಸ್ಟ್‌ನಲ್ಲಿಯೂ ನೀರು ಓಕೆ
ನಿರ್ಮಿತಿ ಕೇಂದ್ರದಲ್ಲಿ ಇರುವ ಸಂಪ್ ಟ್ಯಾಂಕ್‌ನಲ್ಲಿ ಡಿಸೆಂಬರ್ ತಿಂಗಳ ಮಳೆಯನ್ನು ಸಂಗ್ರಹಿಸಿ ಮಾರ್ಚ್‌ನವರೆಗೆ ಪ್ರತಿ ತಿಂಗಳು ನೀರನ್ನು ಎನ್‌ಐಟಿಕೆಗೆ ಪರೀಕ್ಷೆಗೆ ನೀಡಿದ್ದೇವೆ. ಹೀಗೆ ನೀಡಿದ ನಾಲ್ಕು ತಿಂಗಳ ನೀರಿನ ಗುಣಮಟ್ಟದಲ್ಲಿ ಕೂಡ ಪಾಸಿಟಿವ್ ಫಲಿತಾಂಶ ಬಂದಿದ್ದು, ಅಡುಗೆಗೆ ಬಳಕೆ ಮಾಡಬಹುದು ಎಂಬುದಾಗಿ ತಜ್ಞರು ಹೇಳಿದ್ದಾರೆ. ಜಿಲ್ಲಾಧಿಕಾರಿಯವರ ಆದೇಶದ ಪ್ರಕಾರ ನಗರ
ಪ್ರದೇಶಗಳಲ್ಲಿ ಈಗಾಗಲೇ ಇರುವ ಜಲ ಮೂಲಗಳಿಂದ (ಕೊಳವೆಬಾವಿ, ಬಾವಿ) 500 ಮೀ. ದೂರದಲ್ಲಿ ಇನ್ನೊಂದು ಕೊಳವೆಬಾವಿ ಕೊರೆಯುವ ಹಾಗೆ ಇಲ್ಲ. ಇದನ್ನು ಜನರು ಅರ್ಥ ಮಾಡಿಕೊಂಡಲ್ಲಿ ಅಲ್ಲಲ್ಲಿ ಕೊಳವೆಬಾವಿಗಳನ್ನು ಕೊರೆಯುವುದನ್ನು ತಪ್ಪಿಸಬಹುದು. ನಿಯಮ ಮೀರಿ ಕೊರೆಸುವವರನ್ನು ಪ್ರಶ್ನಿಸುವುದಕ್ಕೆ ಜನ ಮುಂದಾಗಬೇಕು.
- ರಾಜೇಂದ್ರ ಕಲ್ನಾವಿ, ಯೋಜನ ನಿರ್ದೇಶಕ ನಿರ್ಮಿತಿ ಕೇಂದ್ರ
ಮನೆಯಲ್ಲಿ ಅಳವಡಿಸಿಕೊಳ್ಳುತ್ತೇನೆ
ಮಳೆಕೊಯ್ಲು ಕಾರ್ಯಾ ಗಾರದಿಂದ ಈ ವ್ಯವಸ್ಥೆಗೆ ಬೇಕಾದ ಪೂರಕ ಮಾಹಿತಿ ದೊರಕಿತು. ನಮ್ಮ ಮನೆಯಲ್ಲಿ ಈವರೆಗೆ ಇದನ್ನು ಅಳವಡಿಸಿರಲಿಲ್ಲ. ಇದೀಗ ಇದರ ಉಪಯುಕ್ತತೆ ಗೊತ್ತಾಗಿದ್ದು, ಮುಂದೆ ನಮ್ಮ ಮನೆಯಲ್ಲೂ ಅಳವಡಿಸಲಾಗುವುದು.
– ಆನಂದ್, ಮಾಣಿ
ಅರ್ಥಪೂರ್ಣ ಕಾರ್ಯಕ್ರಮ
ಕಾರ್ಯಕ್ರಮ ಅರ್ಥಪೂರ್ಣ ವಾಗಿತ್ತು. ನನ್ನ ಮನೆಯಲ್ಲಿ ಮಳೆಕೊಯ್ಲು ಅಳವಡಿಸಲು ಯೋಜಿಸಿದ್ದೆ. ಈ ಕಾರ್ಯಕ್ರಮ ದಿಂದ ಮಳೆಕೊಯ್ಲು ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿದೆ. ಇದು ವೈಜ್ಞಾನಿಕ ಅಳವಡಿಕೆಗೆ ಇನ್ನಷ್ಟು ಪ್ರಯೋಜನಕಾರಿಯಾಗಿದೆ.
– ಸತೀಶ್‌ಕುಮಾರ್, ಕುಂಪಲ
ಗೊಂದಲ ನಿವಾರಣೆ
ಮಳೆಕೊಯ್ಲು ಬಗ್ಗೆ ತುಂಬಾ ಮಾಹಿತಿ ಪಡೆದುಕೊಳ್ಳು ವಂತಾ ಯಿತು. ನಮ್ಮ ಮನೆಯಲ್ಲಿ ಮಳೆಕೊಯ್ಲು ವಿಧಾನದ ಮೂಲಕ ಹೂವಿನ ಗಿಡಗಳಿಗೆ ಮುಂದಿನ ದಿನಗಳಲ್ಲಿ ನೀರುಣಿಸುವ ಯೋಚನೆ ಇದೆ. ಕೆಲವೊಂದು ಗೊಂದಲಗಳಿದ್ದವು. ಅದನ್ನು ಈ ಮೂಲಕ ಪರಿಹರಿಸಿಕೊಂಡೆ.
– ಶರಾವತಿ, ಉಡುಪಿ ಎಲ್ಲೂರು
ಪೋಷಕರಿಗೆ ತಿಳಿಸುವೆ
ಮಳೆಕೊಯ್ಲು ಎಂದರೆ ಕೇವಲ ಇಂಗುಗುಂಡಿ ತೋಡುವುದು ಎಂಬ ಯೋಚನೆ ನನ್ನಲ್ಲಿತ್ತು. ಆದರೆ ಈ ಕಾರ್ಯಾಗಾರ ದಿಂದ ಅದರ ವಿಸ್ತೃತ ಮಾಹಿತಿ ಲಭ್ಯವಾಯಿತು. ಪೋಷಕರಿಗೆ ಈ ಬಗ್ಗೆ ತಿಳಿಸಿ ನಮ್ಮ ಮನೆಯಲ್ಲಿಯೂ ಅಳವಡಿಸಲು ಹೇಳುತ್ತೇನೆ.
– ನೆಲಿಶಾ ಪಿಂಟೋ, ಕಾರ್ಕಳ
ಮನೆಮನೆ ಮಳೆಕೊಯ್ಲು ಮಾಹಿತಿ ಕಾರ್ಯಾಗಾರದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಜಲತಜ್ಞ ಶ್ರೀ ಪಡ್ರೆ ಅವರಿಂದ ಉತ್ತರ.
– ಡೆನ್ನಿಸ್ ಲೋಬೋ, ಕದ್ರಿ
ಪ್ರ- ನಗರ ಪ್ರದೇಶಗಳಲ್ಲಿ ಅತಿ ಸಣ್ಣ ಜಾಗಗಳಲ್ಲಿ ಮನೆ ಮಾಡಿಕೊಂಡವರಿಗೆ ಇಂಗುಗುಂಡಿ ಮಾಡುವುದರಿಂದ ಮನೆ ಕಟ್ಟಡಕ್ಕೆ ತೊಂದರೆಯಿದೆಯೇ ?
ಉ- ಸಣ್ಣ ಸಣ್ಣ ಇಂಗುಗುಂಡಿಗಳನ್ನು ಮನೆ ಸುತ್ತ ಮಾಡಿಕೊಳ್ಳುವುದರಿಂದ ಕಟ್ಟಡಕ್ಕೆ ತೊಂದರೆಯಾಗುವುದಿಲ್ಲ. ಆದರೆ ಗುಂಡಿಗಳು ಕಟ್ಟಡದ ಅಡಿಪಾಯಕ್ಕಿಂತ ಸ್ವಲ್ಪ ದೂರವಿರಲಿ.
– ಜಿ. ಪ್ರಶಾಂತ್ ಪೈ, ಪ್ರಧಾನ ಸಂಚಾಲಕ, ಕಾವೂರು ಕೆರೆ ಅಭಿವೃದ್ಧಿ ಸೇವಾ ಟ್ರಸ್ಟ್
ಪ್ರ- ಐತಿಹಾಸಿಕ ಕಾವೂರು ಕೆರೆಯನ್ನು ಅಭಿವೃದ್ಧಿಪಡಿಸಿ ಆ ಮೂಲಕ ನೀರನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಉ- ಅಭಿನಂದನೀಯ. ಇದ ರಿಂದ ಸುತ್ತಲಿನ ಮನೆಗಳಿಗೆ ನೀರು ಸಿಗುವಂತಾಗಲಿ.
– ಹರೀಶ್, ನರಿಕೊಂಬು
ಪ್ರ- ಕಲ್ಲಿನ ಕೋರೆಗಳನ್ನು ಇಂಗುಗುಂಡಿಗಳನ್ನಾಗಿ ಬಳಸಬಹುದೇ?
ಉ- ಕಲ್ಲಿನ ಕೋರೆಗಳು ಅಪಾಯಕಾರಿ ಅಲ್ಲದಿದ್ದರೆ ಖಂಡಿತವಾಗಿ ಬಳಸಬಹುದು.
– ಮಮತಾ ಗಟ್ಟಿ, ಜಿ.ಪಂ. ಸದಸ್ಯೆ
ಪ್ರ- ಮುಡಿಪುವಿನ ಜಾಗವೊಂದರಲ್ಲಿ ಕಲ್ಲಿನ ಕೋರೆಯಲ್ಲಿ ಮಳೆಗಾಲದಲ್ಲಿ ನೀರು ತುಂಬುತ್ತದೆ. ಅದನ್ನೇ ಇಂಗಿಸಿ ಹತ್ತಿರದ ಮನೆಗಳಿಗೆ ನೀರೊದಗಿಸಲು ಸಾಧ್ಯವೇ?
ಉ- ಖಂಡಿತಾ ಸಾಧ್ಯವಿದೆ. ಆದರೆ ಸ್ವಲ್ಪ ಖರ್ಚು ಜಾಸ್ತಿ. ಈ ರೀತಿಯ ಹೊಸ ಕೆಲಸಕ್ಕೆ ಕೈ ಹಾಕುವುದಾದರೆ, ಸಂಬಂಧಪಟ್ಟ ವ್ಯಕ್ತಿಗಳ ಸಂಪರ್ಕ ನೀಡಲಾಗುವುದು.
– ಕೃಷ್ಣಪ್ಪ , ಬೋಂದೆಲ್
ಪ್ರ- ಮನೆಯ ಮೇಲ್ಛಾವಣಿಯಿಂದ ನೇರ ತೆಂಗಿನ ಮರದ ಬುಡಕ್ಕೆ ನೀರು ಇಂಗಿಸಿದರೆ ಇಂಗುಗುಂಡಿಯಷ್ಟೇ ಪ್ರಯೋಜನ ಸಿಗುವುದೇ?
ಉ- ಇದು ಹಳೆಯ ಸಂಸ್ಕೃತಿಯಾದರೂ ಪ್ರಯೋಜನ ಇದೆ. ಆದರೂ ಇಂಗುಗುಂಡಿ, ಮಳೆಕೊಯ್ಲು ಮಾಡಿಕೊಳ್ಳುವುದು ಉತ್ತಮ.
– ಹ್ಯಾರಿಸ್
ಪ್ರ- ಹತ್ತಿರದ ಶಾಲೆ ಬಾವಿಗೆ ಮಳೆಕೊಯ್ಲು ಮಾಡಲಾಗಿದೆ. ಆದರೆ, ಅಲ್ಲೇ ಇರುವ ಬೋರ್‌ವೆಲ್ ಬತ್ತಿದೆ. ಮಳೆಕೊಯ್ಲಿ ನಿಂದ ಬೋರ್‌ವೆಲ್ ನೀರೂ ಹೆಚ್ಚಾಗುವುದಿಲ್ಲವೇ?
ಉ- ಬೋರ್‌ವೆಲ್ ಮತ್ತು ಬಾವಿಗೆ ಸಂಪರ್ಕ ಇದ್ದಲ್ಲಿ ಎರಡಕ್ಕೂ ಒಂದೇ ವ್ಯವಸ್ಥೆಯಿಂದ ನೀರಿಂಗುವ ಸಾಧ್ಯತೆ ಇರುತ್ತದೆ. ಆದರೆ, ಬೋರ್‌ವೆಲ್‌ಗೆ ಜಲ ಮರುಪೂರಣ ಸೂಕ್ತ.
– ಯು. ರಾಮರಾವ್
ಪ್ರ- ಮಳೆ ನೀರನ್ನು ನೇರವಾಗಿ ಕುಡಿಯಲು, ಅಡುಗೆ ಕೆಲಸಗಳಿಗೆ ಬಳಕೆ ಮಾಡಬಹುದಾ?
ಉ- ಮಳೆ ನೀರನ್ನು ನೇರವಾಗಿ ಬಳಸಿದರೆ ತೊಂದರೆ ಇಲ್ಲ. ಇದು ರುಚಿಯಾಗಿರುತ್ತದೆ. ಆದರೆ, ಫಿಲ್ಟರ್ ಮಾಡಿ ಕುಡಿದರೆ ಉತ್ತಮ. ಏಕೆಂದರೆ ಕಸ ಕಡ್ಡಿಗಳು ಸೇರಿರುತ್ತವೆ.
– ಅಶೋಕ್‌ಕುಮಾರ್
ಪ್ರ- ನೀರು ಸಂಗ್ರಹಿಸುವ ಟ್ಯಾಂಕ್‌ಗಳು ಮುಚ್ಚಿದ ಸ್ಥಿತಿಯಲ್ಲಿರಬೇಕೇ? ತೆರೆದಿಡಬಹುದೇ?
ಉ- ನೀರು ಸಂಗ್ರಹಿಸುವ ಟ್ಯಾಂಕ್‌ಗಳನ್ನು ಮುಚ್ಚಿಡುವುದು ಉತ್ತಮ. ತೆರೆದಿಟ್ಟರೆ ಅದರಲ್ಲಿ ಪಾಚಿ ಬೆಳೆಯುವ ಸಾಧ್ಯತೆಗಳಿವೆ. ಅಲ್ಲದೆ, ಕಸಕಡ್ಡಿಗಳೂ ಬೀಳಬಹುದು.
– ನಳಿನಿ, ಬಿಜೈ
ಪ್ರ- ಒಳಚರಂಡಿ ನೀರು ಸಂಪರ್ಕ ಹೊಂದುವ ಬಾವಿಗಳಿಗೆ ಮಳೆಕೊಯ್ಲು ಮಾಡುವುದರಿಂದ ಆ ನೀರು ಇನ್ನಷ್ಟು ಬಳಕೆಗೆ ಅಯೋಗ್ಯವಾಗುತ್ತದೆಯಲ್ಲವೇ?
ಉ- ಪಾಲಿಕೆಯ ಸಹಕಾರವಿದ್ದರೆ ಸಾಧ್ಯ. ಆದರೆ ಅದು ಎಷ್ಟು ಸಾಧ್ಯವೋ ಗೊತ್ತಿಲ್ಲ. ಒಳಚರಂಡಿ ಸಂಪರ್ಕ ಹೊಂದಿದ ಬಾವಿಗಳಿಗೂ ಮಳೆಕೊಯ್ಲು ಮಾಡಿ ದರೆ, ಮುಂದೆ ಪ್ರಯೋಜನವಾಗಬಹುದು.
– ಶಿವಪ್ರಸಾದ್
ಪ್ರ- ತುಂಬಿ ತುಳುಕುವ ಬಾವಿಗಳಿಗೆ ಮಳೆಕೊಯ್ಲು ಅಗತ್ಯವಿದೆಯೇ? ಹಾಸು ಕಲ್ಲು ಇರುವ ಬಾವಿಗಳನ್ನು ಮತ್ತಷ್ಟು ಆಳ ಮಾಡಬೇಕೇ?
ಉ- ಮಳೆಗಾಲದಲ್ಲಿ ತುಂಬುವ ಬಾವಿಗಳಿಗೆ ಮಳೆನೀರು ಕೊಯ್ಲು ಅಗತ್ಯವಿರುವುದಿಲ್ಲ. ಅದೇ ನೀರು ಭೂಮಿಯಲ್ಲಿ ಇಂಗಿ ಸಮಸ್ಯೆ ನಿವಾರಿಸುತ್ತದೆ. ಹಾಸು ಕಲ್ಲು
ಇರುವ ಬಾವಿಗಳಿಗೆನೀರು ಇಂಗಿಸುವುದಕ್ಕೆ ಮುಂದಾಗಿ.
– ಸುಚರಿತ ಶೆಟ್ಟಿ, ಜಿ.ಪಂ. ಸದಸ್ಯ
ಪ್ರ- ಸಾರ್ವಜನಿಕ ಕೊಳವೆ ಬಾವಿಗಳಿಗೂ ಜಲ ಮರುಪೂರಣ ಮಾಡಲು ಸಾಧ್ಯವೇ?
ಉ- ಕೊಳವೆ ಬಾವಿಗಳಿಗಿಂತ ತೆರೆದ ಬಾವಿಗಳಿಗೆ ಜಲ ಮರುಪೂರಣ ಹೆಚ್ಚು ಸೂಕ್ತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.