ವೈದ್ಯರ ರಕ್ಷಣೆಗೆ ಕಾನೂನು ಮಾರ್ಪಾಡು: ಸಿಎಂ ಭರವಸೆ
ಕಿದ್ವಾಯಿ ಆಸ್ಪತ್ರೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ನಿರ್ಮಿಸಿಕೊಟ್ಟಿರುವ ಐದು ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿಗಳ ಲೋಕಾರ್ಪಣೆ
Team Udayavani, Jun 21, 2019, 2:50 PM IST
ಬೆಂಗಳೂರು: ‘ರಾಜ್ಯದಲ್ಲಿರುವ ವೈದ್ಯರ ರಕ್ಷಣೆಗೆ ಈಗಾಗಲೇ ಕಾನೂನು ರೂಪಿಸಲಾಗಿದೆ. ಅಗತ್ಯಬಿದ್ದರೆ ಆ ಕಾನೂನಿನಲ್ಲಿ ಮಾರ್ಪಾಡು ಮಾಡಲೂ ಸರ್ಕಾರ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ನಿರ್ಮಿಸಿರುವ ಐದು ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ ಗಳನ್ನು ಗುರುವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.
ವೈದ್ಯರ ರಕ್ಷಣೆಗಾಗಿ 2006ರಲ್ಲೇ ಕಾನೂನು ಜಾರಿಗೆ ತರಲಾಗಿದೆ. ಅದರಂತೆ ವೈದ್ಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿ, ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶ ಇದೆ. ಈ ಕಾನೂನನ್ನು ಇನ್ನಷ್ಟು ಬಲಪಡಿಸಲು ಅಥವಾ ಅಗತ್ಯಬಿದ್ದರೆ ಮಾರ್ಪಾಡುಗಳನ್ನು ಮಾಡಲು ಸರ್ಕಾರ ಸಿದ್ಧವಾಗಿದೆ. ಯಾವುದೇ ಕಾರಣಕ್ಕೂ ವೈದ್ಯರು ಆತಂಕಪಡುವ ಅಗತ್ಯವಿಲ್ಲ’ ಎಂದು ಭರವಸೆ ನೀಡಿದರು.
ವೈದ್ಯರಿಗೆ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಸದೃಢ ಕಾನೂನು ಮತ್ತು ಅದರ ಸಮರ್ಪಕ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧದ ಸುತ್ತೋಲೆಯನ್ನು ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಿ, ಸೂಕ್ತ ರಕ್ಷಣೆ ನೀಡುವಂತೆ ಆದೇಶಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿವೆ. ಆದರೆ, ವೈದ್ಯರಿಲ್ಲ. ರಾಜ್ಯದಲ್ಲಿ 1,200ರಿಂದ 1,300 ವೈದ್ಯರ ಕೊರತೆ ಇದ್ದು, ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವೈದ್ಯರ ಮೇಲೆ ವಿಶ್ವಾಸ ಇರಲಿ: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಮಾತನಾಡಿ, ‘ವೈದ್ಯರಲ್ಲಿ ವಿಶ್ವಾಸ ಇಡಿ. ವೈದ್ಯರೂ ರೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ಇಡೀ ವೈದ್ಯಕೀಯ ವ್ಯವಸ್ಥೆ ಮುರಿದುಬೀಳುತ್ತದೆ’ ಎಂದು ಕಿವಿಮಾತು ಹೇಳಿದರು.
ನನ್ನ ತಂದೆ ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಈಗಿನಂತೆ ಆ ಕಾಲದಲ್ಲಿ ವೈದ್ಯರ ಮೇಲೆ ಹಲ್ಲೆಗಳು ಆಗುತ್ತಿರ ಲಿಲ್ಲ. ಜನ ಪ್ರೀತಿ, ಗೌರವದಿಂದ ಕಾಣುತ್ತಿದ್ದರು. ವೈದ್ಯ ಮತ್ತು ರೋಗಿ ನಡುವೆ ವಿಶೇಷ ಸಂಬಂಧ ಇರುತ್ತಿತ್ತು. ಪ್ರತಿಷ್ಠಾನವು ಲಕ್ಷಾಂತರ ರೂ. ಖರ್ಚು ಮಾಡಿ, ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ನಿರ್ಮಿಸಿರಬಹುದು. ಆದರೆ, ಅಲ್ಲಿ ಕೆಲಸ ಮಾಡುವ ವೈದ್ಯರಿಂದ ಆ ಕೊಠಡಿಗಳು ಸಾಕಾರ ರೂಪ ಪಡೆಯುತ್ತವೆ. ವೈದ್ಯರೇ ಇಲ್ಲದಿದ್ದರೆ, ಅವು ಜೂಜಾಟದ ಕೇಂದ್ರಗಳೂ ಆಗಬಹುದು ಎಂದು ಸೂಚ್ಯವಾಗಿ ಹೇಳಿದರು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಸಚಿವರಾದ ಶಿವಾನಂದ ಪಾಟೀಲ, ಇ.ತುಕಾರಾಂ, ಮೇಯರ್ ಗಂಗಾಂಬಿಕೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಐದು ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು, ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ ನಿರ್ದೇಶಕ ಡಾ.ಸಿ. ರಾಮಚಂದ್ರ ಅವರಿಗೆ ಹಸ್ತಾಂತರಿಸಿದರು.
ಹೊಸದಾಗಿ ಐದು ಶಸ್ತ್ರಚಿಕಿತ್ಸಾ ಕೊಠಡಿಗಳ ಸೇರ್ಪಡೆಯಿಂದ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿನ ಶಸ್ತ್ರಚಿಕಿತ್ಸಾ ಕೊಠಡಿಗಳ ಸಂಖ್ಯೆ ಈಗ 13ಕ್ಕೆ ಏರಿಕೆಯಾಗಿದೆ. ಇದರಿಂದ ರೋಗಿಗಳು 15 ದಿನಗಟ್ಟಲೆ ಕಾಯುವುದು ತಪ್ಪಲಿದೆ.
ಈ ಮೊದಲು 8 ಚಿಕಿತ್ಸಾ ಕೊಠಡಿಗಳಿದ್ದವು. ಆದರೆ, ರೋಗಿಗಳ ಸಂಖ್ಯೆ ಅತ್ಯಧಿಕವಾಗಿತ್ತು. ಪರಿಣಾಮ ಸಕಾಲದಲ್ಲಿ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆಪರೇಷನ್‌ಗಾಗಿ ಕನಿಷ್ಠ 10ರಿಂದ 15 ದಿನ ಕಾಯಬೇಕಾಗಿತ್ತು. ಈಗ ಮತ್ತೆ ಐದು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು ಸೇರ್ಪಡೆ ಆಗಿರುವುದರಿಂದ ಕಾಯುವ ಸಮಸ್ಯೆ ತಪ್ಪಲಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದರು.
ಇದರೊಂದಿಗೆ, 72 ಸಾವಿರ ಚದರ ಅಡಿಯಲ್ಲಿ ಹೊರ ರೋಗಿಗಳ ವಿಭಾಗ ನಿರ್ಮಾಣವಾಗುತ್ತಿದೆ. ಮೂರು ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿರುವ ಆರು ಮಹಡಿಗಳ ಈ ಕಟ್ಟಡ ದೇಶದಲ್ಲೇ ಅತಿದೊಡ್ಡ ಒಪಿಡಿ ಆಗಲಿದೆ. ಅಸ್ತಿಮಜ್ಜೆ ಕಸಿ ಘಟಕ, ಸಾಕು ಪ್ರಾಣಿಗಳ ಸ್ಕ್ಯಾನ್ ಘಟಕ ಕೆಲವೇ ದಿನಗಳಲ್ಲಿ ಬರಲಿದೆ. ಜತೆಗೆ ಬಹುಮಹಡಿ ವಾಹನಗಳ ನಿಲುಗಡೆ ವ್ಯವಸ್ಥೆ, ವೈಟ್ಟಾಪಿಂಗ್ ರಸ್ತೆ ಮತ್ತಿತರ ಸೌಲಭ್ಯಗಳನ್ನು ಬಿಬಿಎಂಪಿ ಕಲ್ಪಿಸುತ್ತಿದೆ ಎಂದು ಮಾಹಿತಿ ನೀಡಿದರು.
ಅಭಿನಂದನೆ ಸಲ್ಲಿಸಿದ ಬಾಲಕ
ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ಕೊಠಡಿಗಳ ಉದ್ಘಾಟನೆ ವೇಳೆ ಮೈಸೂರು ಮೂಲದ 9 ವರ್ಷದ ಸೃಜನ್, ತಂದೆ ಸೋಮಶೇಖರ್ ಜತೆಗೆ ಬಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಮುಖ್ಯಮಂತ್ರಿಗಳು ಬಾಲಕನನ್ನು ಅಕ್ಕರೆಯಿಂದ ಪಕ್ಕಕ್ಕೆ ಕರೆದು ಆರೋಗ್ಯ ವಿಚಾರಿಸಿದರು. ಅಂದಹಾಗೆ ಸೃಜನ್ 16 ತಿಂಗಳ ಮಗುವಾಗಿದ್ದಾಗ ರಕ್ತದ ಕ್ಯಾನ್ಸರ್‌ಗೆ ತುತ್ತಾಗಿದ್ದ. ಅಂದು ಚಿಕಿತ್ಸೆಗೆ 30 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಖಾಸಗಿ ಆಸ್ಪತ್ರೆಗಳು ಹೇಳಿದ್ದವು. ಆದ್ದರಿಂದ ಸಹಾಯ ಕೋರಿ ಸೋಮಶೇಖರ್ ತಮ್ಮ ಬಳಿ ಬಂದಿದ್ದರು. ಆಗ ಕಿದ್ವಾಯಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿ, ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು. ಇದೀಗ ಸೃಜನ್ ಬಹುತೇಕ ಗುಣಮುಖನಾಗಿದ್ದಾನೆ. ಬಾಲಕನ ಬಗ್ಗೆ ಕುಮಾರಸ್ವಾಮಿ ಕೂಡ ತಮ್ಮ ಭಾಷಣದಲ್ಲಿ ಉಲ್ಲೇಖೀಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.