ಡಿಕೆಶಿ ಭೇಟಿ ಹಿಂದೆ ರಾಜಕೀಯ ಉದ್ದೇಶ?
ನೀರು ಬಂದ ಮೇಲೆ ಭೇಟಿ ಯಾವ ಪುರುಷಾರ್ಥಕ್ಕೆ•ಅತೃಪ್ತ ಶಾಸಕರ ಓಲೈಕೆ?
Team Udayavani, Jun 22, 2019, 1:22 PM IST
ಕೇಶವ ಆದಿ
ಬೆಳಗಾವಿ: ನೀರಿನ ಸಮಸ್ಯೆ ಇದ್ದಾಗ ನೀರಾವರಿ ಸಚಿವರು ಬಂದು ಜನರ ಕಷ್ಟ ಕಾರ್ಪಣ್ಯ ಕೇಳಬೇಕು. ಅದೆಲ್ಲ ಬಿಟ್ಟು ತಾನಾಗೇ ನದಿಗೆ ನೀರು ಬರುತ್ತಿರುವಾಗ ಈಗ ನದಿ ತೀರದ ಪ್ರದೇಶಗಳಿಗೆ ಭೇಟಿ ನೀಡಲು ಬರುತ್ತಿರುವುದು ಯಾವ ಪುರುಷಾರ್ಥಕ್ಕೆ.
ಇದು ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರದ ಅಥಣಿ, ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ತೀರದ ಜನರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಕೇಳುತ್ತಿರುವ ಪ್ರಶ್ನೆ. ಶಿವಕುಮಾರ ಅವರ ಬೆಳಗಾವಿ ಜಿಲ್ಲೆಯ ಭೇಟಿ ಹಿಂದೆ ರಾಜಕೀಯ ಉದ್ದೇಶ ಇದೆ ಎಂಬ ಅನುಮಾನ ರೈತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿ ನೀರಿಗಾಗಿ ಹಾಹಾಕಾರ ಉಂಟಾದಾಗ ಸರಕಾರದ ಯಾವ ಪ್ರತಿನಿಧಿಯೂ ಗಡಿ ಭಾಗದ ಹಳ್ಳಿಗಳಿಗೆ ಬರಲಿಲ್ಲ. ಜನರ ಗೋಳು ಕೇಳಲಿಲ್ಲ. ಮಹಾರಾಷ್ಟ್ರಕ್ಕೆ ನಿಯೋಗದ ಮೂಲಕ ಹೋಗಿ ನೀರು ತರುವ ಪ್ರಯತ್ನ ಮಾಡಲಿಲ್ಲ. ಈಗ ನದಿಗೆ ತಾನಾಗೇ ನೀರು ಬಂದ ಮೇಲೆ ಅದರ ಪರಿಶೀಲನೆಗೆ ಸಚಿವರು ಬರುತ್ತಿದ್ದಾರೆ. ಸಚಿವರಿಗೆ ನಿಜವಾಗಿಯೂ ಕಾಳಜಿ ಇದ್ದರೆ ಮೂರು ತಿಂಗಳ ಹಿಂದೆಯೇ ಇಲ್ಲಿಗೆ ಬರಬೇಕಿತ್ತು ನೀರು ಬಿಡಿಸುವ ಪ್ರಯತ್ನ ಮಾಡಬೇಕಿತ್ತು. ಅದನ್ನು ಬಿಟ್ಟು ಈಗ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಬರುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಶನಿವಾರ ಜಿಲ್ಲೆಗೆ ಆಗಮಿಸಲಿದ್ದು ತಮ್ಮ ಪ್ರವಾಸದ ಸಮಯದಲ್ಲಿ ಕೃಷ್ಣಾ ನದಿ ತೀರದ ಬ್ಯಾರೇಜ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಚಿವರ ಈ ಭೆೇಟಿ ಪ್ರಶ್ನಿಸಿರುವ ರೈತರು ಯಾವ ಉದ್ದೇಶಕ್ಕಾಗಿ ಬರುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಗಡಿ ಭಾಗದ ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕುಗಳಲ್ಲಿ ಭೀಕರ ಬರಗಾಲ ಹಾಗೂ ನೀರಿಗಾಗಿ ಹಾಹಾಕಾರ ಉಂಟಾದಾಗ ನಮ್ಮ ನೆರವಿಗೆ ಬನ್ನಿ ಎಂದು ನದಿ ತೀರದ ಜನರು ಸರಕಾರದ ಮುಂದೆ ಅಂಗಲಾಚಿ ಬೇಡಿಕೊಂಡಿದ್ದರು. ಮಹಾರಾಷ್ಟ್ರದಿಂದ ನೀರು ಬಿಡುಗಡೆ ಮಾಡಿಸಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದರು. ಆದರೆ ನದಿ ಜನರ ಅರ್ತನಾದ ಸರಕಾರ ಹಾಗೂ ಸಚಿವರಿಗೆ ಕೇಳಿಸಿರಲಿಲ್ಲ.
ಈಗ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರ ಸರಕಾರ ತಾನಾಗೇ ಅಲ್ಲಿನ ಬ್ಯಾರೇಜ್‌ಗಳ ಗೇಟ್ ಗಳನ್ನು ತೆರೆದು ನೀರು ಬಿಡಲಾರಂಭಿಸಿದ್ದು ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ ನೀರು ಬರಲಾರಂಭಿಸಿದೆ. ಅಥಣಿ ತಾಲೂಕು ತಲುಪಿದೆ. ಇದು ಕೊಯ್ನಾ, ವಾರಣಾ ಅಥವಾ ಕಾಳಮ್ಮವಾಡಿ ಜಲಾಶಯಗಳಿಂದ ಬಿಡುಗಡೆ ಮಾಡಿದ ನೀರಲ್ಲ. ಹೀಗಿರುವಾಗ ಸಚಿವರು ಯಾವ ಸಾಧನೆ ಮಾಡಿದ್ದಾರೆ ಎಂದು ಜಿಲ್ಲೆಗೆ ಬರುತ್ತಿದ್ದಾರೆ ಎಂಬುದು ನದಿ ತೀರದ ಜನರ ಪ್ರಶ್ನೆ.
ಕಳೆದ ನಾಲ್ಕು ದಶಕಗಳ ಇತಿಹಾಸದಲ್ಲಿ ಒಮ್ಮೆಯೂ ಕೃಷ್ಣಾ ನದಿ ಮೂರು ತಿಂಗಳ ಕಾಲ ಖಾಲಿಯಾಗಿ ಕಂಡಿರಲಿಲ್ಲ. 1978 ರಿಂದ ಇದೇ ಮೊದಲ ಬಾರಿಗೆ ನದಿಗೆ ನೀರು ಬರದೇ ಹೋಯಿತು. ಮೂರು ತಿಂಗಳು 28 ದಿನಗಳ ಕಾಲ ನದಿಯಲ್ಲಿ ಒಂದು ಹನಿ ನೀರು ಕಾಣಲಿಲ್ಲ. ಆಗ ನೀರಾವರಿ ಸಚಿವರು ಈ ಕಡೆ ತಲೆ ಕೂಡ ಹಾಕಿ ಮಲಗಲಿಲ್ಲ, ಈಗ ಮಳೆ ನೀರು ಬಂದ ಮೇಲೆ ಬ್ಯಾರೇಜ್‌ಗಳ ಭೇಟಿಗೆ ಆಗಮಿಸುತ್ತಿರುವುದರಿಂದ ಯಾವ ಪ್ರಯೋಜನ ಇಲ್ಲ ಎಂಬುದು ಮಾಜಿ ಶಾಸಕ ಮೋಹನ ಶಾ ಹೇಳಿಕೆ.
ಕೃಷ್ಣಾ ನದಿಯಲ್ಲಿ ನೀರು ಸಂಪೂರ್ಣ ಖಾಲಿಯಾದ ನಂತರ ಜಿಲ್ಲೆಯ ಜನರು ಮಹಾರಾಷ್ಟ್ರದಿಂದ ತಕ್ಷಣ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸರಕಾರದ ಮೇಲೆ ಒತ್ತಡ ಹಾಕಿದರು. ಹೋರಾಟ ನಡೆಸಿದರು. ಆದರೆ ಏನೂ ಪ್ರಯೋಜನ ಆಗಲಿಲ್ಲ. ಸಮಸ್ಯೆ ಗಂಭೀರವಾಗಿದ್ದರೂ ಸರಕಾರದ ನಿಯೋಗ ಮಹಾರಾಷ್ಟ್ರಕ್ಕೆ ಹೋಗಲಿಲ್ಲ. ನೀರು ಇಲ್ಲದ್ದರಿಂದ ಮೂರು ತಾಲೂಕುಗಳಲ್ಲಿ ಶೇ.40 ರಷ್ಟು ಕಬ್ಬಿನ ಬೆಳೆ ಒಣಗಿಹೋಗಿದೆ ಎನ್ನುತ್ತಾರೆ ಮಾಜಿ ಶಾಸಕ.
ನೀರು ಬರದ ಕಾರಣ ನದಿ ಪಾತ್ರದ ಜನರು ಬಹಳ ಕಷ್ಟ ಅನುಭವಿಸಿದರು. ಈಗ ಸಚಿವರು ಬರುತ್ತಿದ್ದಾರೆ ಎಂದ ಮೇಲೆ ಜನರಿಗೆ ಸಹಜವಾಗಿಯೇ ಸಿಟ್ಟು ಬರುತ್ತದೆ. ಅವರ ಭೇಟಿಯ ಉದ್ದೇಶ ಸ್ಪಷ್ಟವಾಗಬೇಕು ಎನ್ನುವುದು ಮಾಜಿ ಶಾಸಕ ಲಕ್ಷ್ಮಣ ಸವದಿ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.