ಚೆಂಡು ಒಂದು ಅಡಿ ದೂರ ಹೋಗಿದ್ದರೆ ಫಲಿತಾಂಶವೇ ಬದಲಾಗುತ್ತಿತ್ತು !
ಬ್ರಾಥ್ ವೇಟ್ ಹೋರಾಡಿದರೂ ಸೋತ ವಿಂಡೀಸ್
Team Udayavani, Jun 23, 2019, 10:49 AM IST
ಮ್ಯಾಂಚೆಸ್ಟರ್: ಈ ವಿಶ್ವಕಪ್ ನ ಅತೀ ರೋಮಾಂಚನಕಾರಿ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಐದು ರನ್ ಅಂತರದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದೆ. ಅದ್ಭುತ ಬ್ಯಾಟಿಂಗ್ ಮಾಡಿದ ವಿಂಡೀಸ್ ನ ಕಾರ್ಲೋಸ್ ಬ್ರಾಥ್ ವೇಟ್ ಶತಕ ಸಿಡಿಸಿದರೂ ತಂಡಕ್ಕೆ ಗೆಲುವು ತರುವಲ್ಲಿ ವಿಫಲರಾದರು.
ಇಲ್ಲಿನ ಓಲ್ಡ್ ಟ್ರಫಾರ್ಡ್ ಮೈದಾನದಲ್ಲಿ ಶನಿವಾರ ನಡೆದ 29ನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿತ್ತು. ವೇಗಿ ಕಾಟ್ರೆಲ್ ವಿಂಡೀಸ್ ಗೆ ಉತ್ತಮ ಆರಂಭವನ್ನೇ ನೀಡಿದರು. ಕೇವಲ 7 ರನ್ ಗೆ ಕಿವೀಸ್ ಆರಂಭಿಕರಿಬ್ಬರು ಪೆವಿಲಿಯನ್ ಸೇರಿಯಾಗಿತ್ತು. ನಂತರ ಒಂದಾದ ನಾಯಕ ವಿಲಿಯಮ್ಸನ್ ಮತ್ತು ಅನುಭವಿ ರಾಸ್ ಟೇಲರ್ ತಂಡಕ್ಕೆ ಆಧಾರವಾದರು. ಟೇಲರ್ 69 ರನ್ ಬಾರಿಸಿದರೆ, ವಿಲಿಯಮ್ಸನ್ ಕೂಟದ ಮತ್ತೊಂದು ಶತಕ ಬಾರಿಸಿದರು(148 ರನ್ ) . ಕೊನೆಯಲ್ಲಿ ಮತ್ತೆ ಕುಸಿತ ಕಂಡ ಕಿವೀಸ್ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು.
ಉತ್ತಮ ಆರಂಭ ಪಡೆಯದ ವಿಂಡೀಸ್
292 ರನ್ ಗುರಿ ಸವಾಲು ಪಡೆದ ವಿಂಡೀಸ್ ಗೆ ಕೂಡ ನಿರೀಕ್ಷಿತ ಆರಂಭ ಸಿಗಲಿಲ್ಲ. ಶೈ ಹೋಪ್ ಮತ್ತು ನಿಕೊಲಸ್ ಪೂರನ್ ತಲಾ ಒಂದು ರನ್ ಗಳಿಸಿ ಔಟಾದರು. ನಂತರ ಜೊತೆಯಾದ ಅನುಭವಿ ಗೇಲ್ ಮತ್ತು ಯುವ ಆಟಗಾರ ಶಿಮ್ರನ್ ಹೆತ್ಮೈರ್ ಮೂರನೇ ವಿಕೆಟ್ ಗೆ 122 ರನ್ ಜೊತೆಯಾಟ ನಡೆಸಿದರು. ಹೆತ್ಮೈರ್ 54 ರನ್ ಗಳಿಸಿ ಔಟಾದರೆ, ಗೇಲ್ 87 ರನ್ ಗಳಿಸಿದರು. ಅಲ್ಲಿಯ ತನಕ ವಿಂಡೀಸ್ ಕೈಯಲ್ಲೇ ಇದ್ದ ಪಂದ್ಯವನ್ನು ನ್ಯೂಜಿಲ್ಯಾಂಡ್ ನಿಧಾನವಾಗಿ ತನ್ನೆಡೆಗೆ ಸೆಳೆದುಕೊಂಡಿತು. ವಿಂಡೀಸ್ ಆಟಗಾರರು ಪೆವಿಲಿಯನ್ ಪೆರೇಡ್ ನಡೆಸಿದರು.
ಬ್ರಾಥ್ ವೇಟ್ ಅಬ್ಬರ
ಒಂದು ಹಂತದಲ್ಲಿ 167 ರನ್ ಗೆ ಏಳು ವಿಕೆಟ್ ಕಳೆದು ಕೊಂಡ ವಿಂಡೀಸ್ ಇನ್ನೂರು ರನ್ ಒಳಗೆ ಆಲೌಟ್ ಆಗುವ ಲಕ್ಷಣ ಕಂಡು ಬಂದಿತ್ತು. ಆಗ ಏಕಾಂಗಿಯಾಗಿ ಹೋರಾಡಿದ ಕಾರ್ಲೋಸ್ ಬ್ರಾಥ್ ವೇಟ್ ಕಿವೀಸ್ ಫೀಲ್ಡರ್ ಗಳಿಗೆ ಮೈದಾನದ ಮೂಲೆ ಮೂಲೆಯ ಪರಿಚಯ ಮಾಡಿಸಿದರು. ಬಾಲಂಗೋಚಿಗಳ ಜೊತೆ ಸೇರಿ ಹೋರಾಟ ನಡೆಸಿದ ಬ್ರಾಥ್ ವೇಟ್ ವಿಂಡೀಸ್ ಗೆ ಮತ್ತೆ ಗೆಲುವಿನ ಅಸೆ ಚಿಗುರಿಸಿದರು. ಕೇವಲ 82 ಎಸೆತಗಳಲ್ಲಿ 101 ರನ್ ಬಾರಿಸಿದ ಬ್ರಾಥ್ ವೇಟ್ ಒಂಬತ್ತು ಫೋರ್ ಮತ್ತು ಐದು ಸಿಕ್ಸರ್ ಚಚ್ಚಿದರು.
ಕ್ಷಣ ಕ್ಷಣದ ರೋಮಾಂಚನ
ಕೊನೆಯ ಮೂರು ಓವರ್ ಗಳಲ್ಲಿ ಗೆಲುವಿಗೆ 33 ರನ್ ಅಗತ್ಯವಿತ್ತು. ಈ ಕೂಟದ ಯಶಸ್ವಿ ಬೌಲರ್ ಆದ ಮ್ಯಾಟ್ ಹೆನ್ರಿ ಎಸೆದ 48ನೇ ಓವರ್ ನಲ್ಲಿ ಭರ್ಜರಿ ಮೂರು ಸಿಕ್ಸರ್ ಸಹಾಯದಿಂದ 25 ರನ್ ಚಚ್ಚಿದ ಬ್ರಾಥ್ ವೇಟ್ ಗೆ ಕೊನೆಯ 12 ಎಸೆತಗಳಲ್ಲಿ ಕೇವಲ 8 ರನ್ ಗಳಿಸಲಷ್ಟೇ ಬಾಕಿ ಇತ್ತು. ಆದರೆ ನೀಶಮ್ ಎಸೆದ 49ನೇ ಓವರ್ ನ ಮೊದಲ ಮೂರು ಎಸೆತಗಳಲ್ಲಿ ಯಾವುದೇ ರನ್ ಬರಲಿಲ್ಲ. ನಾಲ್ಕನೇ ಎಸೆತಕ್ಕೆ ಎರಡು ರನ್ ತೆಗೆದ ಬ್ರಾಥ್ ವೇಟ್ ಅದ್ಭುತ ಶತಕ ಪೂರೈಸಿದರು.
ಗೆಲುವಿಗೆ ಕೇವಲ 6 ರನ್ ಅಗತ್ಯವಿತ್ತು. ಕೊನೆಯ ಒಂದು ವಿಕೆಟ್ ಕೈಯಲ್ಲಿತ್ತು. ಓವರ್ ನ ಅಂತಿಮ ಎಸೆತವನ್ನು ಬಾನೆತ್ತೆರಕ್ಕೆ ಎತ್ತಿದ ಕಾರ್ಲೋಸ್ ಬ್ರಾಥ್ ವೇಟ್ ವಿಂಡೀಸ್ ಗೆ ಅದ್ಭುತ ಗೆಲುವು ತಂದರು ಎಂದೇವಿಂಡೀಸ್ ಅಭಿಮಾನಿಗಳು ಭಾವಿಸಿರುವಾಗ ಚೆಂಡು ಸಿಕ್ಸರ್ ಗೆರೆಯ ಹತ್ತಿರವೇ ನಿಂತಿದ್ದ ಟ್ರೆಂಟ್ ಬೌಲ್ಟ್ ಕೈ ಸೇರಿತ್ತು. ಕಿವೀಸ್ 5 ರನ್ ಅಂತರದಿಂದ ಗೆದ್ದಿತು. ಚೆಂಡು ಒಂದು ಅಡಿ ದೂರ ಹೋಗಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುತಿತ್ತು. ಒಂದು ಕ್ಷಣ 2016 ಟಿ ಟ್ವೆಂಟಿ ವಿಶ್ವಕಪ್ ಫೈನಲ್ ನೆನಪು ಮಾಡಿದ್ದ ಕಾರ್ಲೋಸ್ ಬ್ರಾಥ್ ವೇಟ್ ಕೊನೆಯವರೆಗೂ ಹೋರಾಡಿದರೂ ಗೆಲುವು ದಕ್ಕಲಿಲ್ಲ.
ಕಿವೀಸ್ ನಾಯಕ ವಿಲಿಯಮ್ಸನ್ ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ನ್ಯೂಜಿಲ್ಯಾಂಡ್ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ನೆಗೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.