ಪರಿಶಿಷ್ಟರ ಕಲ್ಯಾಣ; ತ್ವರಿತ ಜಾರಿಗೆ ತಾಕೀತು
•ದೌರ್ಜನ್ಯಕ್ಕೊಳಗಾದವರಿಗೆ ತಕ್ಷಣ ಪರಿಹಾರ ಒದಗಿಸಿ •ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ: ಡಿಸಿ
Team Udayavani, Jun 23, 2019, 11:00 AM IST
ಹಾವೇರಿ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪಜಾತಿ, ಪಪಂಗಡ ಜಾಗ್ರತ ಸಮಿತಿ ಸಭೆ ನಡೆಯಿತು.
ಹಾವೇರಿ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಈ ವರ್ಗದ ಕಲ್ಯಾಣ ಕಾರ್ಯಕ್ರಮಗಳ ಕುರಿತಂತೆ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಹಾಗೂ ನೀಡಿದ ಸೂಚನೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಅನುಷ್ಠಾನ ಗೊಳಿಸಬೇಕು ಎಂದು ಜಿಲ್ಲಾ ಜಾಗ್ರತ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗ್ರತ ಸಮಿತಿ ಹಾಗೂ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯ ಕಾರ್ಯಕ್ರಮ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ತ್ರೈಮಾಸಿಕ ಅವಧಿಯಲ್ಲಿ ಜಿಲ್ಲಾ ಜಾಗೃತಿ ಸಮಿತಿಯ ಅಧಿಕಾರೇತರ ಸದಸ್ಯರು ಪ್ರಸ್ತಾಪ ಮಾಡಿದ ಹಲವು ಸಮಸ್ಯೆಗಳನ್ನು ಇತ್ಯರ್ಥಪಡಿಸದೇ ಬಾಕಿ ಉಳಿಸಿಕೊಂಡಿರುವ ಇಲಾಖಾ ಅಧಿಕಾರಿಗಳಿಂದ ವಿವರ ಪಡೆದ ಕೃಷ್ಣ ಭಾಜಪೇಯಿ, ಮುಂದಿನ ದಿನಗಳಲ್ಲಿ ಪರಿಶಿಷ್ಟ ಕಲ್ಯಾಣ ಯೋಜನೆಗಳ ಕುರಿತಂತೆ ಸಭೆಗಳಲ್ಲಿ ಚರ್ಚೆಯಾಗುವ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು. ಮುಂದಿನ ಸಭೆಯೊಳಗಾಗಿ ಪೂರ್ಣ ವರದಿಯೊಂದಿಗೆ ಹಾಜರಾಗಬೇಕು ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ದೌರ್ಜನ್ಯಕ್ಕೊಳಗಾದವರಿಗೆ ತಕ್ಷಣ ಪರಿಹಾರ ಒದಗಿಸಬೇಕಾಗಿದೆ. ಆದರೆ, ಈ ಸಂದರ್ಭದಲ್ಲಿ ದೌರ್ಜನ್ಯ ಎಸೆಗಿದವರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿದವರಲ್ಲ ಎಂಬುದನ್ನು ದೃಢಿಕರಿಸಲು ಜಾತಿ ಪ್ರಮಾಣಪತ್ರ ಅವಶ್ಯವಿದೆ. ಸಕಾಲಕ್ಕೆ ಪ್ರಮಾಣಪತ್ರ ದೊರೆಯದಿದ್ದರೆ ಶಾಲಾ ದಾಖಲಾತಿಯೊಂದಿಗೆ ಜಾತಿ ದೃಢೀಕರಿಸಿ ಪ್ರಮಾಣಪತ್ರ ನೀಡಲು ತಹಶೀಲ್ದಾರ್ ಹಾಗೂ ಸಮಾಜ ಕಲ್ಯಾಣಾಧಿಕಾರಿಗಳು ಕ್ರಮವಹಿಸುವಂತೆ ಸೂಚನೆ ನೀಡಿದರು.
ದೌರ್ಜನ್ಯ ಪ್ರಕರಣಗಳ ದಾಖಲು ವಿಲೇವಾರಿ ಹಾಗೂ ನ್ಯಾಯಾಲಯದ ವಿಚಾರಣೆಯಲ್ಲಿರುವ ಪ್ರಕರಣಗಳ ವಿವರ, ಪರಿಹಾರ ಮೊತ್ತ ಪಾವತಿ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚೈತ್ರಾ, ಸರ್ಕಾರಿ ಅಭಿಯೋಜಕ ಸಿದ್ಧಾರೂಢ ಎಂ.ಗೆಜ್ಜಿಹಳ್ಳಿ ಸಭೆಗೆ ವಿವರಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಗಂಗಾ ಕಲ್ಯಾಣ ಯೋಜನೆಯಡಿ ಬಾಕಿ ಉಳಿದಿರುವ ವಿದ್ಯುತ್ ಸಂಪರ್ಕ ವಿವರ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಕುರಿತಂತೆ ಪ್ರತ್ಯೇಕ ಸಭೆ ಕರೆಯುವಂತೆ ಸೂಚಿಸಿದರು.
ಕೃಷಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಕೃಷಿಹೊಂಡ ಹಾಗೂ ವಿವಿಧ ಯೋಜನೆಗಳು ರೈತರ ಪರವಾಗಿ ಗುತ್ತಿಗೆದಾರರೇ ಅರ್ಜಿ ಹಾಕಿ ಕಾಮಗಾರಿ ನಿರ್ವಹಿಸುತ್ತಿರುವ ಕುರಿತಂತೆ ದೂರುಗಳು ಬಂದಿವೆ. ಈ ಕುರಿತಂತೆ ಜಿಲ್ಲಾ ಮಟ್ಟದ ಕೃಷಿ ಅಧಿಕಾರಿಗಳು ಪರಿಶೀಲಿಸುವಂತೆ ಶಾಸಕ ಸಿ.ಎಂ.ಉದಾಸಿ ಸೂಚನೆ ನೀಡಿದರು.
ರೇಷ್ಮೆ ಕೃಷಿಯಲ್ಲಿ ಹೆಚ್ಚು ರೈತರು ತೊಡಗಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಸುಧಾರಿತ ತಳಿಗಳನ್ನು ಪರಿಚಯಿಸುವಂತೆ ಸೂಚಿಸಿದ ಅವರು, ಹಾನಗಲ್ಲ ತಾಲೂಕಿನ ಬಿದರಿಕೊಪ್ಪ ಇತರ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗಳು ಕಳೆದ 50 ವರ್ಷದಿಂದ ಭೂಮಿ ಸಾಗುವಳಿ ಮಾಡುತ್ತಿದ್ದರೂ ಮಾಲೀಕತ್ವ ಸಿಕ್ಕಿಲ್ಲ. ಈ ಕುರಿತಂತೆ ಸಭೆ ನಡೆಸಿ ಭೂ ದಾಖಲೆಗಳಲ್ಲಿ ಸಾಗುವಳಿದಾರರ ಹಕ್ಕು ದಾಖಲಿಸುವ ಕುರಿತಂತೆ ಕ್ರಮವಹಿಸಲು ತಿಳಿಸಿದರು.
ಸವಣೂರು ಪುರಸಭೆ ದಿನಗೂಲಿ ನೌಕರರು, ಹೊಸರಿತ್ತಿ ಹಾಗೂ ಅಗಡಿ ಗ್ರಾಮ ಪಂಚಾಯತಿಗಳಲ್ಲಿ ಸಫಾಯಿ ಕರ್ಮಚಾರಿಗಳ ವೇತನ ಬಾಕಿ ಕುರಿತಂತೆ ಸದಸ್ಯರು ಸಭೆಯ ಗಮನ ಸೆಳೆದರು. ಈ ಕುರಿತಂತೆ ತ್ವರಿತವಾಗಿ ವೇತನ ಪಾವತಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕೃಷ ಭಾಜಪೇಯಿ ಸೂಚನೆ ನೀಡಿದರು ಸವಣೂರ ತಾಲೂಕಿನ ಈಚಲ ಯಲ್ಲಾಪುರ ಹಾಗೂ ನೆಗಳೂರ ಗ್ರಾಮದ ಪರಿಶಿಷ್ಟ ವರ್ಗದ ಸ್ಮಶಾನ ಅಭಿವೃದ್ಧಿ ಕುರಿತಂತೆ ನರೇಗಾ ಯೋಜನೆಯಡಿ ತಕ್ಷಣ ಕಾಮಗಾರಿ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿರೇಕೆರೂರ ತಾಲೂಕಿನ ಮಾದಿಗತನ ವಂಶ ಪರಂಪಾರಿಕ ಮಾಲ್ಕಿ ಜಮೀನನ್ನು ಪಾಟೀಲಕಿ ಇನಾಂ ಜಮೀನ್ ಆಗಿ ವರ್ಗಾಯಿಸಿದ್ದಾರೆ. ಮೂಲ ಸಾಗುವಳಿದಾರರಿಗೆ ಈ ಜಮೀನನ್ನು ವರ್ಗಾಯಿಸಬೇಕು ಎಂದು ಜಾಗೃತಿ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಸಭೆಯಲ್ಲಿ ಮನವಿ ಮಾಡಿಕೊಂಡರು. ಈ ಕುರಿತಂತೆ ಪರಿಶೀಲನೆ ನಡೆಸಿ ತ್ವರಿತವಾಗಿ ಇತ್ಯರ್ಥಪಡಿಸಲು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.
ಉದ್ಯಮಶೀಲತಾ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಯೋಜನೆ ಮಂಜೂರಾಗಿ ಸಬ್ಸಿಡಿ ಹಣ ಬ್ಯಾಂಕಿಗೆ ಜಮೆ ಆದರೂ ಕೆಲ ಬ್ಯಾಂಕ್‌ಗಳು ಸಾಲ ನೀಡಲು ನಿರಾಕರಿಸುತ್ತಿರುವ ಕುರಿತಂತೆ ಸದಸ್ಯರು ಸಭೆಯ ಗಮನಸೆಳೆದರು. ಈ ಕುರಿತಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.
ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ ಪರಿಶಿಷ್ಟರ ಕಾಲೋನಿಗೆ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ಬ್ಯಾಡಗಿ ತಾಲೂಕಿನ ಪರಿಶಿಷ್ಟರ ಕಾಲೋನಿಯಲ್ಲಿ ಗ್ರಂಥಾಲಯ ಸ್ಥಾಪನೆಗೆ ತಕ್ಷಣಕ್ರಮವಹಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 24.10ರ ಎಸ್‌ಸಿ, ಎಸ್‌ಟಿ ಅನುದಾನದ ಕಾಮಗಾರಿಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸುವಂತೆ ಸದಸ್ಯರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಈ ಕುರಿತಂತೆ ಕ್ರಮವಹಿಸುವಂತೆ ನಗರಾಭಿವೃದ್ಧಿ ಇಲಾಖಾ ಯೋಜನಾಧಿಕಾರಿ ಹಾಗೂ ಜಿಪಂ ಸಹಾಯಕ ಕಾರ್ಯದರ್ಶಿಗೆ ಸೂಚನೆ ನೀಡಿದರು.
ಸಭೆಯಲ್ಲಿ ದೌರ್ಜನ್ಯ ನಿಯಂತ್ರಣ ಹಾಗೂ ಜಾಗೃತಿಯ ಸಮಿತಿಯ ಸದಸ್ಯರಾದ ಎನ್.ಕೆ. ಮರೋಳ, ಮಾಲತೇಶ ಯಲ್ಲಾಪುರ, ಚಿನ್ನಪ್ಪದೇವಸೂರ, ಪರಮೇಶ ಬಿ.ಗೊಡ್ಡೆಮ್ಮಿ, ಗೀತಾ ರಾಜಣ್ಣ ಅಂಕಸಖಾನಿ, ವಿದ್ಯಾ ಶೆಟ್ಟಿ, ಚಂದ್ರಪ್ಪ ಹರಿಜನ, ಹುಚ್ಚಪ್ಪ ನಾಗಪ್ಪ, ಅಪರ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.