ವೈರ್‌ಲೆಸ್ ಜಮಾನಾ
ವೈರ್‌ಲೆಸ್ ಇಯರ್‌ಫೋನ್‌ಗಳ ಹೊಸ ಗಾನಬಜಾನಾ
Team Udayavani, Jun 24, 2019, 5:00 AM IST
ಮೊಬೈಲ್‌ಗಳ 3.5 ಎಂ.ಎಂ. ಕಿಂಡಿಗೆ ಸಿಕ್ಕಿಸುವ ವೈರ್‌ಗಳುಳ್ಳ ಇಯರ್‌ಫೋನ್‌ಗಳ ಜಮಾನ ಮರೆಯಾಗುವ ದಿನಗಳು ದೂರವಿಲ್ಲ. ಈಗೇನಿದ್ದರೂ ಬ್ಲೂಟೂತ್ ವೈರ್‌ಲೆಸ್ ಇಯರ್‌ಫೋನ್‌ಗಳ ಕಾಲ. ಸಂಗೀತ ಆಲಿಸಲು, ಕರೆ ಸ್ವೀಕರಿಸಿ ಮಾತನಾಡಲು, ಆಡಿಯೋ ಬುಕ್‌ಗಳನ್ನು ಆಲಿಸಲು ವೈರ್‌ಲೆಸ್ ಇಯರ್‌ಫೋನ್‌ಗಳು
ತಂತ್ರಜ್ಞಾನ ಬೆಳವಣಿಗೆಯಾದಂತೆಲ್ಲ ಬಳಕೆದಾರರು ಸಹ ಅದಕ್ಕೆ ಹೊಂದಿಕೊಳ್ಳುತ್ತಾ ಹೋಗುತ್ತಾರೆ. ಒಂದೆರಡು ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್ ಬಳಸಲು ಸಹ ಅನೇಕರು ಹಿಂಜರಿಯುತ್ತಿದ್ದರು. ಕೀಪ್ಯಾಡ್ ಫೋನ್‌ಗೆ ಅಭ್ಯಾಸವಾಗಿ ಹೋದವರು, ತಮಗೆ ಸ್ಮಾರ್ಟ್‌ಫೋನ್ ಬಳಸಲು ಬರುತ್ತದಾ? ಅದರಲ್ಲಿ ಏನೇನೋ ಇರ್ತದೆ, ಅದನ್ನು ಆಪರೇಟ್ ಮಾಡಲು ನನಗೆ ಬರಲ್ಲ, ಹಾಗಾಗಿ ಸ್ಮಾರ್ಟ್‌ಫೋನ್ ತಗೊಂಡಿಲ್ಲ ಎನ್ನುತ್ತಿದ್ದರು. ಒಮ್ಮೆ ನೀರಿಗೆ ಇಳಿದ ಮೇಲೆ ಚಳಿ ಬಿಟ್ಟು ಹೋಗುತ್ತದೆ ಎಂಬ ಹಾಗೆ, ಒಮ್ಮೆ ಸ್ಮಾರ್ಟ್‌ಫೋನ್ ಕೊಂಡು, ಒಂದು ವಾರ ಬಳಸಿದ ನಂತರ ಅಭ್ಯಾಸವಾಗಿ ಬಿಡುತ್ತದೆ. ಹಾಗಾಗಿ ಅನೇಕರು ಇಂದು ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದಾರೆ. ಈ ಸ್ಮಾರ್ಟ್‌ಫೋನೆಲ್ಲ ನಮಗಲ್ಲ ಕಣ್ರೀ ಅಂತಿದ್ದ ಹಿರಿಯರು ಈಗ ಫೇಸ್‌ಬುಕ್‌ನಲ್ಲಿ ಬಹಳ ಬ್ಯುಸಿಯಾಗಿದ್ದಾರೆ!
ಹಿಂದೆ ಫೋನ್‌ಗಳಿಗೆ ಆಡಿಯೋ ಜಾಕ್ ಹಾಗೂ ವೈರ್‌ಗಳಿರುವ ಇಯರ್‌ಫೋನ್‌ಗಳನ್ನು ಬಳಸುತ್ತಿದ್ದೆವು. 3.5 ಎಂ.ಎಂ. ಆಡಿಯೋ ಜಾಕ್ ಎಂದೇ ಕರೆಯಲ್ಪಡುವ ಈ ಇಯರ್‌ಫೋನ್‌ಗಳ ಬಳಕೆ ಈಗಲೂ ಇದೆ. ಆದರೆ ಈ ವೈರ್ ಇಯರ್‌ಫೋನ್‌ಗಳು ನಿಧಾನವಾಗಿ ತೆರೆ ಮರೆಗೆ ಸರಿಯುವ ಎಲ್ಲ ಲಕ್ಷಣಗಳು ಈಗಾಗಲೇ ಕಾಣತೊಡಗಿವೆ.
ಮೊದಲನೆಯದಾಗಿ ಮೊಬೈಲ್ ತಯಾರಿಕಾ ಕಂಪೆನಿಗಳು, ತಮ್ಮ ಅತ್ಯುನ್ನತ ದರ್ಜೆಯ ಮೊಬೈಲ್ ಫೋನ್‌ಗಳಲ್ಲಿ 3.5 ಎಂ.ಎಂ. ಆಡಿಯೋ ಜಾಕ್ ಕಿಂಡಿಯನ್ನೇ ತೆಗೆದು ಹಾಕುತ್ತಿವೆ. ಎರಡನೆಯದಾಗಿ ಬಳಕೆದಾರರು ಸಹ, ಮೊಬೈಲ್ ಜೊತೆ ಸಿಕ್ಕಿಸಿಕೊಂಡೇ ಇರಬೇಕಾದ ವೈರ್‌ಗಳಿಂದ ಸ್ವಾತಂತ್ರ್ಯ ಇರುವುದಿಲ್ಲ, ತಲೆ, ಕತ್ತು ಸರಿಯಾಗಿ ಆಡಿಸಲಾಗುವುದಿಲ್ಲ. ಆ ವೈರ್‌ನ ಬಂಧನಕ್ಕೆ ಸಿಲುಕಿಕೊಂಡೇ ಇರಬೇಕು. ಇದರ ಬದಲು ವೈರ್‌ಲೆಸ್ ಇಯರ್‌ಫೋನ್ ಇದ್ದರೆ ಒಳ್ಳೆಯದು ಎಂಬ ತೀರ್ಮಾನಕ್ಕೆ ಬರುತ್ತಿದ್ದಾರೆ. ಹೀಗಾಗಿ ವೈರ್ ಸಹಿತ ಇಯರ್‌ಫೋನ್‌ಗಳು ಮೂಲೆಗೆ ಸರಿಯಲಿವೆ.
ಒಂದೆರಡು ವಾರದ ಹಿಂದೆ , ಮೊಬೈಲು, ಎಲೆಕ್ಟ್ರಾನಿಕ್ಸ್ ಬಗ್ಗೆ ಅಷ್ಟೇನೂ ಆಸಕ್ತಿಯಿಲ್ಲದ ಇಬ್ಬರು ಮೂವರು ಗೆಳೆಯರು, ತಮಗೆ ಒಂದು ವೈರ್‌ಲೆಸ್ ಇಯರ್‌ಫೋನ್ ಸಜೆಸ್ಟ್ ಮಾಡಿ ಎಂದರು. ಅದೇಕೆ ವೈರ್‌ಲೆಸ್ ಇಯರ್‌ಫೋನ್? ಎಂದು ಪ್ರಶ್ನಿಸಿದೆ. ಒಬ್ಬರು ಸಿಸ್ಟಂ ಮುಂದೆ ಕುಳಿತು ಸುದ್ದಿ ಟೈಪಿಸುವ ಪತ್ರಕರ್ತರು. ನಾನು ಟೈಪ್ ಮಾಡುತ್ತಾ ಕುಳಿತಿರುವಾಗ ಪದೇ ಪದೇ ಕರೆಗಳು ಬರುತ್ತವೆ. ಪ್ರತಿ ಬಾರಿ ಫೋನನ್ನು ಕಿವಿಯ ಬಳಿ ಇಟ್ಟು, ಮಾತನಾಡುತ್ತಾ ಇರಲಾಗುವುದಿಲ್ಲ. ವೈರ್‌ಲೆಸ್ ಇಯರ್‌ಫೋನ್ ಆದರೆ ಕರೆ ಸ್ವೀಕರಿಸಿ ಮಾತಾಡಬಹುದು ಎಂದರು.
ಇನ್ನೋರ್ವ ಬರಹಗಾರ್ತಿ, ಮೊಬೈಲ್ ಫೋನನ್ನು ಮನೆಯ ಒಂದು ಕಡೆ ಇಟ್ಟು, ಕಿವಿಯಲ್ಲಿ ಆಡಿಯೋ ಬುಕ್‌ಗಳನ್ನು ಕೇಳಲು, ಪಾತ್ರೆ ತೊಳೆಯುತ್ತಲೇ ಮಾತನಾಡಲು ಯಾವುದಾದರೂ ಸಾಧನ ಏನಾದರೂ ಇದೆಯೇ ಎಂದು ಕೇಳಿದರು. ಬ್ಲೂಟೂಥ್ ವೈರ್‌ಲೆಸ್ ಇಯರ್‌ಫೋನ್‌ಗಳ ಬಗ್ಗೆ ಹೇಳಿದೆ. ಅಮೆಜಾನ್‌ನಲ್ಲಿ ತರಿಸಿಕೊಂಡರು. ಮನೆಯ ನಡುವೆ ಫೋನ್ ಇಟ್ಟು, ವೈರಿಲ್ಲದ ಈ ಇಯರ್ ಫೋನ್ ಹಾಕಿಕೊಂಡು ಎಲ್ಲ ಕೆಲಸ ಮಾಡುತ್ತಲೇ, ಆಡಿಯೋ ಬುಕ್‌ಗಳನ್ನು ಆಲಿಸಲು, ಸಂಗೀತ ಕೇಳಲು, ಮಾತನಾಡಲು ಬಹಳ ಅನುಕೂಲವಾಗ್ತಿದೆ ಎಂದರು.
ವೈರ್ ಲೆಸ್ ಇಯರ್‌ಫೋನ್‌ಗಳಲ್ಲಿ ಈಗ ಎರಡು ಮೂರು ಬಗೆಗಳಿವೆ. ಒಂದೇ ಕಿವಿಗೆ ಹಾಕಿಕೊಳ್ಳುವ ಪೆನ್ನಿನ ಕ್ಯಾಪ್‌ನಂತೆ ಉದ್ದಕ್ಕಿರುವ ಬ್ಲೂಟೂತ್ ಹ್ಯಾಂಡ್ಸ್‌ಫ್ರೀ ಹೆಡ್‌ಸೆಟ್‌ಗಳು. ಇವು ಫೋನಿನಲ್ಲಿ ಕರೆ ಸ್ವೀಕರಿಸಲು, ಮಾತನಾಡಲು ಸರಿ. ಆದರೆ ಹಾಡು ಕೇಳಲು ಸೂಕ್ತವಲ್ಲ. ಯಾಕೆಂದರೆ ಇವನ್ನು ಒಂದೇ ಕಿವಿಗೆ ಹಾಕಿಕೊಳ್ಳಬೇಕು. ಕೆಲವೊಂದು ಮಾಡೆಲ್‌ಗಳನ್ನು ಕಿವಿಯಲ್ಲಿ ಸಿಕ್ಕಿಸಿಕೊಂಡರೆ ಕಿವಿ ನೋವು ಬರುವ ಸಾಧ್ಯತೆಗಳಿವೆ. ಆದರೆ ಶಿಯೋಮಿಯ ಒಂದು ಬ್ಲೂಟೂತ್ ಹ್ಯಾಂಡ್ಸ್‌ಫ್ರೀ ಹೆಡ್‌ಸೆಟ್ ಮಾತ್ರ ಬಹಳ ಚೆನ್ನಾಗಿದೆ. ಕೇವಲ 900 ರೂ. ದರದ ಪೆನ್ನಿನ ಕ್ಯಾಪ್‌ನಂತಹ ಬ್ಲೂಟೂತ್ ಹೆಡ್‌ಸೆಟ್ ಹಗುರವಾಗಿ ಉತ್ತಮವಾಗಿದೆ. ಆದರೆ ಈಗ ಸಿಗುತ್ತಿಲ್ಲ. ಯಥಾ ಪ್ರಕಾರ ನೋ ಸ್ಟಾಕ್. ಪ್ಲಾನ್‌ಟ್ರಾನಿಕ್ಸ್ ಎಂಬ ಕಂಪೆನಿಯೂ ಇಂಥ ಬ್ಲೂಟೂತ್ ಹೆಡೆಸೆಟ್‌ಗಳಿಗೆ ಪ್ರಸಿದ್ಧಿಯಾಗಿದೆ. ಆದರೆ ಉತ್ತಮವಾದುದು ಕೊಳ್ಳಬೇಕೆಂದರೆ, ದರ 2500 ರೂ.ಗಳಿಗಿಂತ ಮೇಲಿದೆ.
ಇನ್ನು ಎರಡನೇ ಮಾದರಿ ಎಂದರೆ ಆಡಿಯೋ ಜಾಕ್ ಇಲ್ಲದೇ ಎರಡೂ ಕಿವಿಗೆ ಹಾಕಿಕೊಂಡು ಮಾತಾಡಬಹುದಾದ, ಹಾಡು ಕೇಳಬಹುದಾದ ವೈರ್‌ಲೆಸ್ ಬ್ಲೂಟೂತ್ ಇಯರ್‌ಫೋನ್‌ಗಳು. ಪ್ರಸ್ತುತ ಇವೇ ಹೆಚ್ಚು ಸದ್ದು ಮಾಡುತ್ತಿರುವವು. ಎಡಗಿವಿ ಮತ್ತು ಬಲಗಿವಿಯೊಳಗೆ ಹಾಕಿಕೊಳ್ಳುವ ಪುಟ್ಟ ಸ್ಪೀಕರ್‌ಗಳನ್ನು ಸಂಪರ್ಕಿಸಲು ಒಂದು ಸಣ್ಣ ವೈರ್ ಇರುತ್ತದೆ. ಆದರೆ ಇದನ್ನು ಮೊಬೈಲ್ ಫೋನ್‌ನೊಳಗೆ ಜಾಕ್ ಹಾಕಿ ಸಿಕ್ಕಿಸಬೇಕಾದ ಅಗತ್ಯವಿಲ್ಲ. ಮೊಬೈಲ್‌ನ ಬ್ಲೂಟೂಥ್ ಮೂಲಕ ಕಾರ್ಯ ನಿರ್ವಹಿಸುತ್ತದೆ. 10-12 ಮೀಟರ್ ಅಂತರದಲ್ಲಿ ಫೋನಿದ್ದರೂ ಕೇಳುತ್ತವೆ. ಗೋಡೆಗಳು ಅಡ್ಡ ಇರಬಾರದಷ್ಟೇ. ಇವುಗಳಲ್ಲಿ ಕರೆ ಸ್ವೀಕರಿಸಿ ಮಾತನಾಡುವುದಾದರೆ ಒಂದು ಬದಿಯ ಸ್ಪೀಕರ್ ಮಾತ್ರ ಕಿವಿಯೊಳಗೆ ಸಿಕ್ಕಿಸಿಕೊಳ್ಳಬಹುದು. ಇನ್ನೊಂದನ್ನು ಹೆಗಲಮೇಲೆ ಹಾಕಿಕೊಳ್ಳಬಹುದು. ಹೀಗೆ ಹೆಗಲಮೇಲೆ ಬಿಟ್ಟುಕೊಂಡಾಗ ಬಿದ್ದು ಹೋಗದಂತೆ ಎರಡೂ ಸ್ಪೀಕರ್‌ಗಳು ಅಂಟಿಕೊಳ್ಳುವಂತೆ ಆಯಸ್ಕಾಂತವನ್ನೂ ನೀಡಲಾಗಿರುತ್ತದೆ. (ಕೆಲವು ಮಾಡೆಲ್‌ಗಳಲ್ಲಿ ಆಯಸ್ಕಾಂತ ಇರುವುದಿಲ್ಲ.) ಇವು ಬ್ಲೂಟೂತ್ ಮೂಲಕ ಫೋನಿಗೆ ಸಂಪರ್ಕ ಕಲ್ಪಿಸುವುದರಿಂದ ಬ್ಯಾಟರಿ ಮೂಲಕ ಕೆಲಸ ಮಾಡುತ್ತವೆ. ಈ ಇಯರ್‌ಫೋನ್‌ಗಳಲ್ಲೇ ಸಣ್ಣ ಬ್ಯಾಟರಿ ಇರುತ್ತದೆ. ಎರಡು ಮೂರು ದಿನಗಳಿಗೊಮ್ಮೆ ಬ್ಯಾಟರಿ ಖಾಲಿಯಾದಾಗ ಮೊಬೈಲ್ ಚಾರ್ಜರ್‌ಗಳ ಮೂಲಕ ಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ.
ಉತ್ತಮವಾದ ಬ್ಲೂಟೂತ್ ಇಯರ್‌ಫೋನ್ ಕೊಂಡರೆ ನಿಮ್ಮ ಮೊಬೈಲ್‌ನಿಂದ ಉತ್ತಮ ಸಂಗೀತ ಆಲಿಸಬಹುದು. ಈಗ ಬ್ಲೂಟೂತ್ ಇಯರ್‌ಫೋನ್‌ಗಳ ಜಮಾನವಾಗಿರುವುದರಿಂದ ಬಹಳಷ್ಟು ಕಂಪೆನಿಗಳು ಇದರಲ್ಲಿ ಉತ್ತಮ ತಂತ್ರಜ್ಞಾನಗಳನ್ನು ಅಳವಡಿಸಿವೆ. ಹೀಗಾಗಿ ನಿಮ್ಮ ಹಳೆಯ ವೈರ್ ಇರುವ ಇಯರ್‌ಫೋನ್‌ಗಳಿಗಿಂತಲೂ ವೈರ್‌ಲೆಸ್ ಇಯರ್‌ಫೋನ್‌ಗಳಲ್ಲಿ ಹಾಡುಗಳು ಚೆನ್ನಾಗಿ ಕೇಳಿಬರುತ್ತವೆ. ಒಂದು ಎಚ್ಚರಿಕೆ, ಎರಡೂ ಕಿವಿಗೆ ಈ ಇಯರ್‌ಫೋನ್‌ಗಳನ್ನು ಹಾಕಿಕೊಂಡು ಹಾಡು ಕೇಳುತ್ತಿದ್ದರೆ, ಹೊರಗಿನ ಶಬ್ದಗಳು ಕೇಳಿಸುವುದಿಲ್ಲ. ಹಾಗಾಗಿ ಹೊರಗೆ ನಡೆದು ಹೋಗುವಾಗ, ಬೈಕ್ ಓಡಿಸುವಾಗ ಇವನ್ನು ಬಳಸದಿರುವುದು ಕ್ಷೇಮಕರ.
ಈ ವೈರ್‌ಲೆಸ್ ಇಯರ್‌ಫೋನ್‌ಗಳಲ್ಲಿ ಸುಮಾರಾಗಿ ಚೆನ್ನಾಗಿರುವ ಮಾಡೆಲ್‌ಗಳು 1500 ರೂ. ಗಳಿಂದ ದೊರಕುತ್ತವೆ. ಬೋಟ್ ರಾಕರ್j 225, ಮಿ ನ್ಪೋರ್ಟ್ಸ್ ಬ್ಲೂಟೂತ್ ವೈರ್‌ಲೆಸ್ ಇಯರ್‌ಫೋನ್, ಟ್ಯಾಗ್ ಇಂಪಲ್ಸ್, ಕ್ರಿಯೇಟಿವ್ ಔಟ್‌ಲಿಯರ್ ಒನ್, ಸೌಂಡ್ ಪೀಟ್ಸ್ ಹೀಗೆ ಹಲವಾರು ಮಾಡೆಲ್‌ಗಳಿವೆ.
ಟ್ರೂ ವೈರ್‌ಲೆಸ್ ಇಯರ್‌ಫೋನ್‌ಗಳು: ತಂತ್ರಜ್ಞಾನ ಇನ್ನೂ ಮುಂದಕ್ಕೆ ಹೋಗಿದ್ದು, ಈಗ ಸಂಪೂರ್ಣ ವೈರ್‌ಲೆಸ್ ಆದ ಇಯರ್‌ಫೋನ್‌ಗಳು ಕಾಲಿಟ್ಟಿವೆ. ವೈರ್‌ಲೆಸ್ ಇಯರ್‌ಫೋನ್‌ಗಳಲ್ಲಿ ಎಡ-ಬಲ ಕಿವಿಗಳ ಸ್ಪೀಕರ್‌ಗಳನ್ನು ಸಂಪರ್ಕಿಸುವ ವೈರ್‌ಗಳಿರುತ್ತವೆ. ಆದರೆ ಇತ್ತೀಚಿಗೆ ಬಂದಿರುವ ಟ್ರೂ ವೈರ್‌ಲೆಸ್ ಇಯರ್‌ಫೋನ್‌ಗಳಲ್ಲಿ ಎಡ-ಬಲಗಿವಿ ಸ್ಪೀಕರ್‌ಗಳನ್ನು ಪ್ರತ್ಯೇಕವಾಗಿಯೇ ಕಿವಿಗೆ ಹಾಕಿಕೊಳ್ಳಬಹುದು. ಎರಡರ ಮಧ್ಯ ವೈರ್ ಇರುವುದಿಲ್ಲ. ಇವುಗಳಲ್ಲೂ ಸಹ ಉತ್ತಮವಾಗಿ ಸಂಗೀತ ಆಲಿಸಬಹುದು. ಆದರೆ ಉತ್ತಮ ಮಾಡೆಲ್‌ಗಳಿಗೆ ಈಗ ದರ ಬಹಳ ಜಾಸ್ತಿಯಿದೆ. ಕನಿಷ್ಟ 5 ಸಾವಿರದಿಂದ ದರ ಆರಂಭವಾಗುತ್ತದೆ. ಭಾರತದಲ್ಲಿ ಈ ಮಾದರಿ ಇಯರ್‌ಫೋನ್‌ಗಳು ಅಷ್ಟಾಗಿ ಇನ್ನೂ ಜನಪ್ರಿಯವಾಗಿಲ್ಲ. ಒಟ್ಟಾರೆ ಇವು ಭವಿಷ್ಯದ ಇಯರ್‌ಫೋನ್‌ಗಳೆಂಬುದಂತೂ ನಿಜ.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.