ಸುಟ್ಟಿದ್ದ ತಂಬಾಕು ಬೆಳೆ “ಹಾಲು ಸಕ್ಕರೆ’ ಆಯ್ತು!
Team Udayavani, Jun 24, 2019, 3:00 AM IST
ಹುಣಸೂರು: ಹಾಲುಗೆನ್ನೆಯ ಕಂದಮ್ಮಗಳಿಂದ ಹಿಡಿದು ವಯೋವೃದ್ಧರಿಗೂ ಹಾಲು ಪೌಷ್ಟಿಕಾಂಶಯುಕ್ತವಾಗಿದ್ದು, ಕಾಫಿ, ಚಹಾ ಸೇರಿದಂತೆ ವಿವಿಧ ಖಾದ್ಯಗಳಿಗೆ ಹಾಲು ಅತ್ಯಗತ್ಯವಾಗಿದೆ. ಆದರೆ, ಇದೀಗ ಹಾಲು ಹಾಗೂ ಸಕ್ಕರೆ ನೀರಿನ ಮಿಶ್ರಣವು ತಂಬಾಕು ಬೆಳೆಗಾರರ ಸಂಜೀವಿನಿಯಾಗಿದೆ. ಸುಟ್ಟು ಹೋಗುತ್ತಿದ್ದ ತಂಬಾಕಿಗೆ ಹಾಲು-ಸಕ್ಕರೆ ಮಿಶ್ರಣದ ಜೀವಾಮೃತ ಸಿಂಪಡಿಸಿದ್ದಕ್ಕೆ ತಂಬಾಕು ಬೆಳೆಗೆ ಇದೀಗ ಜೀವ ಕಳೆ ಬಂದಿದೆ.
ಐಟಿಸಿ ಟ್ಯಾಬಾಕೋ ಕಂಪನಿಯ ಕೃಷಿ ತಜ್ಞರು ತಮ್ಮ ಪ್ರಯೋಗಗಳ ಮೂಲಕ ಮತ್ತೆ ತಂಬಾಕು ಬೆಳೆಯಲ್ಲಿ ಜೀವ ಕಳೆ ತುಂಬುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಚಿಂತೆಯಲ್ಲಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.
ತಾಲೂಕಿನ ಗಾವಡಗೆರೆ ಹೋಬಳಿ ಶೀರೇನಹಳ್ಳಿಯ ತಂಬಾಕು ಬೆಳೆಗಾರ ಕುಮಾರ್ ಅವರ ಮಕ್ಕಳು ಅರಿಯದೇ ಜೂ.12 ರಂದು ಕ್ರಿಮಿನಾಶಕದ ಬದಲು ಕಳೆನಾಶಕ ಸಿಂಪಡಿಸಿದ್ದರಿಂದ 4 ಎಕರೆ ತಂಬಾಕು ಬೆಳೆಯು ಸಂಪೂರ್ಣ ಸುಟ್ಟು ಹೋಗುವ ಪರಿಸ್ಥಿತಿಗೆ ತಲುಪಿತ್ತು. ಬೆಳೆಗಾರನಂತೂ ಲಕ್ಷಾಂತರ ರೂ. ನಷ್ಟವಾಯಿತೆಂಬ ಚಿಂತೆಯಿಂದ ಕಂಗಾಲಾಗಿದ್ದರು.
“ಉದಯವಾಣಿ’ ಫಲಶೃತಿ: ಕಳೆನಾಶಕ ಸಿಂಪಡಿಸಿದ್ದರಿಂದ ತಂಬಾಕು ಬೆಳೆ ಸುಟ್ಟಿರುವ ಕುರಿತು ಉದಯವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ಪತ್ರಿಕೆಯ ಮೂಲಕ ವಿಷಯ ತಿಳಿದ ಐಟಿಸಿ ಕಂಪನಿಯ ಮಾರುಕಟ್ಟೆ ವ್ಯವಸ್ಥಾಪಕ ಪೂರ್ಣೇಶ್, ಸಹಾಯಕ ವ್ಯವಸ್ಥಾಪಕಿ ಸುಮಾ, ಕ್ಷೇತ್ರ ವಿಸ್ತಾರಣಾಧಿಕಾರಿ ಡಿ.ಪಿ. ಮಂಜು, ಸಹಾಯಕ ಅಧಿಕಾರಿ ಸೂರಣ್ಣ ರೈತನ ಜಮೀನಿಗೆ ಭೇಟಿ ನೀಡಿ ಕಂಪನಿಯ ಹಿರಿಯ ಅಧಿಕಾರಿ ರವೀಶ್ ಮತ್ತಿತರರ ತಜ್ಞರ ಮಾರ್ಗದರ್ಶನದಲ್ಲಿ ಕೈಗೊಂಡ ಕ್ರಮಗಳಿಂದಾಗಿ ಬೆಳೆ ಯಥಾಸ್ಥಿತಿಗೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಕ್ಕರೆ, ಹಾಲಿನ ಔಷಧೋಪಚಾರ: ಸುಟ್ಟು ಹೋಗಿದ್ದ ತಂಬಾಕು ಬೆಳೆಗೆ 10 ಲೀಟರ್ ನೀರಿಗೆ 200 ಗ್ರಾಂ ಸಕ್ಕರೆ ಹಾಗೂ 20 ಎಂಎಲ್ ಹಸುವಿನ ಹಾಲು ಮಿಶ್ರಣದಿಂದ ಜೀವಾಮೃತ ತಯಾರಿಸಿ ವಾರಕಾಲ ಗಿಡಗಳಿಗೆ ಸಿಂಪಡಿಸಿ, ಹೊಲಕ್ಕೆ ತುಂತುರು ಹನಿ ನೀರು ಹಾಯಿಸಿ ಗಿಡಗಳನ್ನು ಉಪಚರಿಸಲು ಕೃಷಿ ತಜ್ಞರು ಸಲಹೆ ನೀಡಿದ್ದರು.
ಹತ್ತಾರು ಬಾರಿ ತಜ್ಞರೇ ಜಮೀನಿಗೆ ತೆರಳಿ ಮಾರ್ಗದರ್ಶನ ನೀಡಿದ್ದಂತೆ ಕ್ರಮಬದ್ಧ ಸಿಂಪಡಣೆಯಿಂದ ವಾರದಲ್ಲೇ ತಂಬಾಕು ಎಲೆಗಳು ಮತ್ತೆ ಹಸಿರು ತುಂಬಿಕೊಂಡು ಗರಿಗೆದರಿದವು. ನೋಡು ನೋಡುತ್ತಿದ್ದಂತೆ ಮತ್ತೆ ತಂಬಾಕು ಗಿಡಗಳು ಮೊದಲನೆ ಸ್ಥಿತಿಗೆ ಬಂದಿದ್ದು, ರೈತ ಕುಮಾರ್ ಕುಟುಂಬದವರ ಮೊಗದಲ್ಲಿ ಸಂತಸ ತಂದಿದೆ. ಈ ವಿಸ್ಮಯವನ್ನು ತಂಬಾಕು ಬೆಳೆಗಾರರು ಕುಮಾರ್ ಅವರ ಜಮೀನಿಗೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ.
ತಂಬಾಕು ಬೆಳೆಗೆ ರೈತರೇ ಮಾಡಿಕೊಂಡಿದ್ದ ಅನಾಹುತ ಕುರಿತು ಪತ್ರಿಕಾವರದಿಯನ್ನು ಗಮನಿಸಿ ಐಟಿಸಿ ಕಂಪನಿಯ ಹಿರಿಯ ಅಧಿಕಾರಿ ರವೀಶ್ ಮಾರ್ಗದರ್ಶನದಲ್ಲಿ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿತ್ತು. ಸಕ್ಕರೆ-ಹಾಲಿನ ದ್ರಾವಣ ಸಿಂಪಡಿಸಿ ಬೆಳೆ ಉಳಿಸುವ ಪ್ರಥಮ ಪ್ರಯತ್ನ ಫಲ ನೀಡಿದ್ದು, ಇದೀಗ ತಂಬಾಕು ಬೆಳೆ ಮೊದಲಿನ ಸ್ಥಿತಿಗೆ ಮರಳಿದೆ.
-ಸುಮಾ, ಕೃಷಿ ತಜ್ಞೆ, ಐಟಿಸಿ ಕಂಪನಿ
ಕುಟುಂಬದ ಆಧಾರವಾಗಿದ್ದ ತಂಬಾಕು ಬೆಳೆ ನಮ್ಮ ತಪ್ಪಿನಿಂದಾಗಿ ಹಾನಿಗೊಳಗಾಗಿದ್ದಕ್ಕೆ ಆತಂಕಗೊಂಡಿದ್ದೆವು. ಪತ್ರಿಕೆ ಮೂಲಕ ವಿಷಯ ತಿಳಿದು ಐಟಿಸಿ ಕಂಪನಿಯ ಕೃಷಿ ತಜ್ಞರಾದ ಪೂರ್ಣೇಶ್, ಸುಮಾ ಅವರ ಮಾರ್ಗದರ್ಶನದಂತೆ ಸಕ್ಕರೆ ಹಾಲು ಮಿಶ್ರಿತ ದ್ರಾವಣ ಸಿಂಪಡಿಸಿದ್ದರಿಂದ ಶೇ.70 ರಿಂದ 80 ರಷ್ಟು ಬೆಳೆ ಯಥಾಸ್ಥಿತಿಗೆ ಬಂದಿದೆ. ಸಕಾಲದಲ್ಲಿ ನೆರವಾದ ಐಟಿಸಿ ಕಂಪನಿ ಅಧಿಕಾರಿಗಳ ವೃಂದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
-ಕುಮಾರ್, ಸೀರೇನಹಳ್ಳಿ ತಂಬಾಕು ಬೆಳೆಗಾರ
* ಸಂಪತ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.