“ಕೆರೆಗಳ ಕಾಯಕಲ್ಪ’ ಕನಸಿಗೆ ಮರುಜೀವ
ಸುದ್ದಿ ಸುತ್ತಾಟ
Team Udayavani, Jun 24, 2019, 3:10 AM IST
ಚಿತ್ರ: ಫಕ್ರುದ್ದೀನ್ ಎಚ್.
ನಗರದ ಕೆರೆಗಳ ಸಂರಕ್ಷಣೆಗಾಗಿ 1996ರಲ್ಲಿ ಹೈಕೋರ್ಟ್ ಒಂದು ಆದೇಶ ಹೊರಡಿಸಿತ್ತು. ಇದಾಗಿ ಎರಡು ದಶಕಗಳು ಕಳೆದಿವೆ. ಈ ಮಧ್ಯೆ ಹಲವು ಸಮಿತಿಗಳು ಬಂದುಹೋಗಿವೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕೂಡ ಆಗಾಗ ಸರ್ಕಾರಕ್ಕೆ ಚಾಟಿ ಬೀಸಿದೆ. ಆದರೆ, ಫಲಿತಾಂಶ ಮಾತ್ರ ಶೂನ್ಯ. ಈಗ ಹೈಕೋರ್ಟ್ ಮತ್ತೊಮ್ಮೆ ನಗರದ ಕೆರೆಗಳನ್ನು ಹುಡುಕಿ, ಅವುಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗೆ (ನೀರಿ) ವಹಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಈಗಲಾದರೂ ಕೆರೆಗಳಿಗೆ ಕಾಯಕಲ್ಪ ದೊರೆಯಬಹುದು ಎಂಬ ಮತ್ತೊಂದು ನಿರೀಕ್ಷೆ ಪರಿಸರ ಪ್ರೇಮಿಗಳು ಮತ್ತು ಜನರಲ್ಲಿ ಕುಡಿ ಒಡೆದಿದೆ. ಈ ನಿಟ್ಟಿನಲ್ಲಿ ಕೆರೆಗಳ ಸ್ಥಿತಿಗತಿಯ ಒಂದು ನೋಟ ಈ ಬಾರಿಯ “ಸುದ್ದಿ ಸುತ್ತಾಟ’ದಲ್ಲಿ….
ಕೆರೆಗಳ ಸಂರಕ್ಷಣೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ಸತತ ವೈಫಲ್ಯವು ಅನಿವಾರ್ಯವಾಗಿ ಖುದ್ದು ನ್ಯಾಯಾಂಗ ಮಧ್ಯಪ್ರವೇಶಿಸುವಂತೆ ಮಾಡಿದೆ. ಅದರ ಪರಿಣಾಮವೇ ಕೆರೆಗಳ ಹೊಣೆ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ಮೇಲೆ ಬಿದ್ದಿದೆ.
ಎರಡು ದಶಕಗಳ ಹಿಂದೆ ಇದೇ ಹೈಕೋರ್ಟ್ ಕೆರೆ ಅಂಗಳವನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು ಎಂದು ಆದೇಶ ನೀಡಿತ್ತು. ಅದನ್ನು ಈಶ್ವರ್ ಪ್ರಸಾದ್ ಜಡ್ಜ್ಮೆಂಟ್ ಎಂದೇ ಕರೆಯಲಾಗುತ್ತದೆ. ಆದರೆ, ಇದುವರೆಗೆ ಸರ್ಕಾರ ಬರೀ ಕಾಲಹರಣ ಮಾಡಿದೆ. ಈ ಮಧ್ಯೆ ವರ್ಷದಿಂದ ವರ್ಷಕ್ಕೆ ಕೆರೆಗಳೂ ಕಳೆದುಹೋಗುತ್ತಿವೆ. ಬೆನ್ನಲ್ಲೇ ಕೊಳವೆಬಾವಿಗಳು ಬರಿದಾಗುತ್ತಿವೆ. ಕಾವೇರಿ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಹಾಗಾಗಿ, ಕಳೆದುಹೋದ ಕೆರೆಗಳನ್ನು ಹುಡುಕಿಕೊಡುವ ಜವಾಬ್ದಾರಿಯನ್ನು ಈ ಬಾರಿ ಹೈಕೋರ್ಟ್ “ನೀರಿ’ಗೆ ವಹಿಸಿದೆ.
ಉದ್ದೇಶಿತ ಈ ಸಂಸ್ಥೆಯು ಕೇವಲ ಕೆರೆಗಳನ್ನು ಪತ್ತೆಹಚ್ಚುವ ಕೆಲಸ ಮಾಡುವುದಿಲ್ಲ; ಅವುಗಳನ್ನು ವೈಜ್ಞಾನಿಕ ಸ್ಪರ್ಶದೊಂದಿಗೆ ಪುನಃಶ್ಚೇತನಗೊಳಿಸಿ ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಲಿದೆ. ಇದರಿಂದ ಕೆರೆಗಳಿಗೆ ಮತ್ತೆ ಜೀವಕಳೆ ಬರುವ ವಿಶ್ವಾಸ ಇದೆ. ಅಷ್ಟೇ ಅಲ್ಲ, ಅಂತರ್ಜಲ ವೃದ್ಧಿಗೂ ಇದು ನೆರವಾಗಲಿದೆ. ಹಾಗಿದ್ದರೆ, ಇದುವರೆಗೆ ಸರ್ಕಾರದ ಅಂಗಸಂಸ್ಥೆಗಳು ಮಾಡಿದ್ದೇನು ಎಂಬ ಪ್ರಶ್ನೆ ಬೆನ್ನಲ್ಲೇ ಕೇಳಿಬರುತ್ತದೆ. ಇದಕ್ಕೆ “ಬರೀ ಕೆರೆಗಳ ಸೌಂದರೀಕರಣಕ್ಕೆ ಒತ್ತುಕೊಡಲಾಯಿತು’ ಎಂದು ಪರಿಸರ ತಜ್ಞರು ಆಕ್ರೋಶ ವ್ಯಕ್ತಪಡಿಸುತ್ತಾರೆ.
“ಕೇವಲ ಮೂರು ರೀತಿಯಲ್ಲಿ ಕೆರೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಒಂದು ಬೇಲಿ ಹಾಕುವುದು, ಮತ್ತೊಂದು ಜಾಗಿಂಗ್ ಪಾತ್ ನಿರ್ಮಾಣ ಹಾಗೂ ಇನ್ನೊಂದು ಪಕ್ಷಿಗಳು ಬಂದು ಕುಳಿತುಕೊಳ್ಳಲು ನಡುಗಡ್ಡೆ ನಿರ್ಮಿಸುವಂತಹ “ಕಾಸ್ಮೆಟಿಕ್ ಟಚ್’ ಕೊಡುವಲ್ಲಿಯೇ ನಮ್ಮವರಿಗೆ ಆಸಕ್ತಿ. ಆದರೆ, ವಾಸ್ತವವಾಗಿ ಆಗಬೇಕಾಗಿದ್ದು ಕೊಳಚೆ ನೀರು ಕೆರೆಗೆ ಸೇರದಂತೆ ನೋಡಿಕೊಳ್ಳುವುದು ಹಾಗೂ ನಿಯಮಿತವಾಗಿ ಹೂಳು ತೆಗೆಯುವುದು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಸಂಬಂಧಿಸಿದ ಕಾರ್ಯಪಡೆ ಅಧ್ಯಕ್ಷರಾಗಿದ್ದ ವಿ. ಬಾಲಸುಬ್ರಮಣಿಯನ್ ತಿಳಿಸುತ್ತಾರೆ.
ಸರ್ಕಾರವು ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಿದ್ದರೆ “ನೀರಿ’ಗೆ ವಹಿಸುವ ಅವಶ್ಯಕತೆ ಇರುತ್ತಿರಲಿಲ್ಲ. ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಮತ್ತೊಂದೆಡೆ ಪ್ರಚಾರಕ್ಕಾಗಿ ಸಮಿತಿಗಳನ್ನು ರಚಿಸಲಾಗುತ್ತಿದೆ. ಕೆರೆಗಳ ವಿಚಾರದಲ್ಲಿ ಸರ್ಕಾರ ವಹಿಸಿರುವ ಈ ಧೋರಣೆ ಸೇರಿದಂತೆ ವಾಸ್ತವ ಸ್ಥಿತಿಯನ್ನು ಮನಗಂಡು ಹೈಕೋರ್ಟ್ ಈ ಆದೇಶ ನೀಡಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಹೇಳಿದರು.
ಗುರಿ ಒಂದೇ; ಸಮಿತಿಗಳು ಹಲವು!: ಕಳೆದ ಮೂರು ದಶಕಗಳಲ್ಲಿ ಸರ್ಕಾರ ಹಲವು ಸಮಿತಿಗಳನ್ನು ರಚಿಸಿದೆ. ಅವೆಲ್ಲವುಗಳ ಉದ್ದೇಶ ಮಾತ್ರ ಒಂದೇ ಆಗಿತ್ತು. ಈಗ ಹೈಕೋರ್ಟ್ ಹೊಸ ಆದೇಶದ ಬೆನ್ನಲ್ಲೇ ಈ ಸಮಿತಿಗಳು ನೀಡಿದ ವರದಿಗಳ ಕತೆ ಏನು ಎಂಬ ಪ್ರಶ್ನೆಯೂ ಎದ್ದಿದೆ. ಕೆರೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ 1986ರಿಂದ ಈವರೆಗೆ ವಿವಿಧ ಹಂತಗಳಲ್ಲಿ ಹಲವು ಸಮಿತಿಗಳು ರಚನೆ ಆಗಿವೆ.
ವಿಚಿತ್ರವೆಂದರೆ ಅವು ಕಾಲ ಕಳೆದಂತೆ ಆಡಳಿತದ ವೈಫಲ್ಯಗಳನ್ನು ತಳ್ಳಿಹಾಕಲು ರಚಿಸಿದ ಸಮಿತಿಗಳಾಗಿ ಮಾರ್ಪಟ್ಟವು. ಏಕೆಂದರೆ, ಶಿಫಾರಸುಗಳಲ್ಲಿ ಇದುವರೆಗೆ ಒಂದೇ ಒಂದು ಅನುಷ್ಠಾನ ಆಗಿಲ್ಲ. ಒಟ್ಟಾರೆ ಐದು ಸಮಿತಿಗಳ ಪೈಕಿ ಒಂದು ಸಮಿತಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ರಚನೆಗೊಂಡಿತ್ತು. ಮತ್ತೊಂದು ಅವರು ಪ್ರತಿಪಕ್ಷದ ನಾಯಕರಾದಾಗ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
“ಒತ್ತುವರಿ ಮಾಡಿದವರು ರಿಯಲ್ ಎಸ್ಟೇಟ್ ವ್ಯಾಪರದಲ್ಲಿ ನಿರತರಾದವರು. ಇನ್ನು ಅವರೊಂದಿಗೆ ಸಂಪರ್ಕ ಹೊಂದಿದವರು ರಾಜಕಾರಣಿಗಳು ಹಾಗಾಗಿಯೇ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಾರೆ. ನಾನು ನೀಡಿದ ವರದಿಯನ್ನಂತೂ ಪ್ರಕಟ ಕೂಡ ಮಾಡಲಿಲ್ಲ’ ಎಂದು ವಿ. ಬಾಲಸುಬ್ರಮಣಿಯನ್ ಬೇಸರ ವ್ಯಕ್ತಪಡಿಸಿದರು. ವರ್ಷಗಟ್ಟಲೆ ಹತ್ತಾರು ಸದಸ್ಯರು ಕೂಡಿಕೊಂಡು ಸಮೀಕ್ಷೆ ನಡೆಸಿ, ಸಲ್ಲಿಸಿದ ಈ ವರದಿಗಳನ್ನು ಸರ್ಕಾರ ಪರಿಗಣಿಸಬೇಕು ಎಂಬ ಆಶಯ ಪರಿಸರ ಪ್ರೇಮಿಗಳದ್ದಾಗಿದೆ.
ಯಾವಾಗ ಯಾವ ಸಮಿತಿ?
ಲಕ್ಷ್ಮಣ್ ರಾವ್ ಸಮಿತಿ: ಬೆಂಗಳೂರಿನ ಕೆರೆಗಳ ರಕ್ಷಣೆಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ವರದಿ ಸಲ್ಲಿಸಿತ್ತು. ವರದಿ ಪ್ರಕಾರ 1961ರಲ್ಲಿ ನಗರ ವ್ಯಾಪ್ತಿಯಲ್ಲಿ 261 ಕೆರೆಗಳಿದ್ದವು. 1984ರ ಸಿಡಿಪಿ ಬೆಂಗಳೂರು ವ್ಯಾಪ್ತಿ 1,279 ಚದರ ಮೀಟರ್ ಆಗಿದ್ದು, 389 ಕೆರೆ/ ಕಟ್ಟೆಗಳು ಇದ್ದವು. ಅದರಲ್ಲಿ 81 ಜೀವಂತ ಕೆರೆಗಳು, 46 ಅನುಪಯುಕ್ತ ಕೆರೆಗಳು ಮತ್ತು 90 ಕೆರೆಗಳು ಅರಣ್ಯ ಇಲಾಖೆಗೆ ವರ್ಗಾವಣೆ ಆಗಿದ್ದು, ಉಳಿದ ಕೆರೆಗಳು ಅರಣ್ಯ ಇಲಾಖೆ ಹಾಗೂ ಇತರೆ ಇಲಾಖೆಗಳ ಜಂಟಿ ಮಾಲಿಕತ್ವಕ್ಕೆ ವರ್ಗಾವಣೆ ಆಗಿದೆ ಎಂದು ಗುರುತಿಸಲಾಗಿತ್ತು.
ಎ.ಟಿ. ರಾಮಸ್ವಾಮಿ ಸಮಿತಿ: ನಗರದ ಭೂಒತ್ತುವರಿ ಕುರಿತ ಎ.ಟಿ. ರಾಮಸ್ವಾಮಿ ನೇತೃತ್ವದಲ್ಲಿ ವಿಧಾನ ಮಂಡಲ ಜಂಟಿ ಸದನ ಸಮಿತಿ ರಚಿಸಲಾಗಿತ್ತು. 2007-08ರಲ್ಲಿ ಇದು ವರದಿ ಸಲ್ಲಿಸಿತ್ತು. ಇದಕ್ಕಾಗಿ 17 ಜನ ಸದಸ್ಯರು 17 ತಿಂಗಳು ಕಾರ್ಯನಿರ್ವಹಿಸಿದ್ದರು. ವರದಿ ಪ್ರಕಾರ 20 ಸಾವಿರ ಎಕರೆಗೂ ಅಧಿಕ ಸರ್ಕಾರಿ ಭೂಮಿ ಒತ್ತುವರಿ ಆಗಿದೆ. ಇದರಲ್ಲಿ ಸಾವಿರಾರು ಎಕರೆಗಳಷ್ಟು ನಗರದ ಕೆರೆಗಳ ಜಾಗವೂ ಸೇರಿದೆ ಎಂದು ಉಲ್ಲೇಖೀಸಲಾಗಿತ್ತು. ವರದಿಗಾಗಿ ಸರಿಸುಮಾರು ಒಂದು ಕೋಟಿ ರೂ. ಖರ್ಚಾಗಿತ್ತು ಎನ್ನಲಾಗಿದೆ.
ವಿ. ಬಾಲಸುಬ್ರಮಣಿಯನ್ ಸಮಿತಿ: ಸರ್ಕಾರಿ ಭೂಮಿ ಒತ್ತುವರಿ ತೆರವಿಗಾಗಿ ನಿವೃತ್ತ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಯಿತು. ಇದರಲ್ಲಿ 14 ಜನ ಸದಸ್ಯರಿದ್ದರು. ವರದಿಯಂತೆ ರಾಜ್ಯದಲ್ಲಿ 11.40 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದ್ದು, ಈ ಪೈಕಿ ನಗರ ಜಿಲ್ಲೆ ವ್ಯಾಪ್ತಿಯಲ್ಲಿ 30 ಸಾವಿರ ಎಕರೆ ಇದೆ. ಅದರಲ್ಲಿ ಎರಡೂವರೆ ಸಾವಿರ ಎಕರೆ ಕೆರೆ ಒತ್ತುವರಿ ಆಗಿದೆ ಎಂದು ಉಲ್ಲೇಖೀಸಲಾಗಿದೆ. ಸಮಿತಿಯು ಇದಕ್ಕಾಗಿ ಎರಡು ವರ್ಷ ಕೆಲಸ ಮಾಡಿದೆ. 2011ರ ಜೂನ್‌ನಲ್ಲಿ ವರದಿ ಸಲ್ಲಿಸಿತ್ತು.
ಎನ್.ಕೆ. ಪಾಟೀಲ್ ಸಮಿತಿ: ನಗರದ ಕೆರೆಗಳಿಗಾಗಿಯೇ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ನೇತೃತ್ವದಲ್ಲಿ ರಚಿಸಲಾಗಿದ್ದ ಈ ಸಮಿತಿಯು ಸುಮಾರು 509 ಕೆರೆಗಳಿವೆ ಎಂಬುದನ್ನು ಗುರುತಿಸಿತ್ತು. ಅವುಗಳ ರಕ್ಷಣೆಗಾಗಿ ಪ್ರತಿ ಕೆರೆಗೊಂದು ಸಂರಕ್ಷಣಾ ಸಮಿತಿ, ಜಿಲ್ಲಾ ಮಟ್ಟದಲ್ಲಿ ಕೆರೆ ಸಂರಕ್ಷಣಾ ಸಮಿತಿ ಹಾಗೂ ಸೆಂಟ್ರಲ್ ಅಪೆಕ್ಸ್ ಸಮಿತಿ ರಚನೆಗೆ ಶಿಫಾರಸು ಮಾಡಿತ್ತು.
ಸೌಂದರೀಕರಣಕ್ಕೆ ಒತ್ತುಕೊಟ್ಟಿರುವುದರಿಂದಲೂ ಕೆರೆಗಳು ಹಾಳಾಗುತ್ತಿವೆ ಎಂಬುದನ್ನು ಉಲ್ಲೇಖೀಸಲಾಗಿತ್ತು. 2011ರಲ್ಲಿ ಇದು ವರದಿ ಸಲ್ಲಿಸಿತ್ತು. ಇದಕ್ಕಾಗಿ ತೆಗೆದುಕೊಂಡ ಸಮಯ 6-7 ತಿಂಗಳು. 11 ಜನ ಸದಸ್ಯರು ಸಮಿತಿಯಲ್ಲಿ ಕೆಲಸ ಮಾಡಿದ್ದರು. ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ 9 ಇಲಾಖೆಗಳ 9 ಕಾರ್ಯದರ್ಶಿಗಳು ಇದರಲ್ಲಿದ್ದರು. ಇದಾದ ನಂತರ ಎರಡನೇ ಬಾರಿಗೆ ನೀರಿನ ಖಾಸಗೀಕರಣ ಮಾಡಬಾರದು ಎಂದೂ ವರದಿ ನೀಡಿತ್ತು.
ಕೋಳಿವಾಡ ಸಮಿತಿ: ನಗರದ ಸುತ್ತಮುತ್ತ ಕೆರೆಗಳ ಒತ್ತುವರಿ ಬಗ್ಗೆ ಸತ್ಯಶೋಧನೆಗೆ ಕೆರೆಗಳ ಒತ್ತುವರಿ ಬಗ್ಗೆ ಸಮಗ್ರ ತನಿಖೆ ಮಾಡಿ, ಸೂಕ್ತ ಶಿಫಾರಸಿನೊಂದಿಗೆ ವರದಿ ಸಲ್ಲಿಸಲು ಕೆ.ಬಿ. ಕೋಳಿವಾಡ ಅಧ್ಯಕ್ಷತೆಯಲ್ಲಿ 2014ರಲ್ಲಿ ಸದನ ಸಮಿತಿ ರಚಿಸಲಾಯಿತು. ವರದಿ ಪ್ರಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ 1,547 ಕೆರೆಗಳಿದ್ದು, ಅವುಗಳ ವಿಸ್ತೀರ್ಣ 57,932 ಎಕರೆ. ಅದರಲ್ಲಿ 10,785 ಎಕರೆ ಒತ್ತುವರಿಯಾಗಿದ್ದು, 7,530 ಎಕರೆ ಖಾಸಗಿ ಸಂಸ್ಥೆಗಳೇ ಆಕ್ರಮಿಸಿಕೊಂಡಿವೆ. ಇದರ ಅಂದಾಜು ಮೊತ್ತ 15 ಲಕ್ಷ ಕೋಟಿ ದಾಟಲಿದೆ. ಮೂರೂವರೆ ವರ್ಷ ಈ ಸಮಿತಿ ಕೆಲಸ ಮಾಡಿದೆ. ಸಚಿವಾಲಯದ ಅಧಿಕಾರಿಗಳು, ತಜ್ಞರು ಸೇರಿದಂತೆ 23 ಜನ ಕೆಲಸ ಮಾಡಿದ್ದಾರೆ.
ಎಂಪ್ರಿಯಿಂದಲೂ ಅಧ್ಯಯನ: ಇದೆಲ್ಲದರ ನಡುವೆ 2015ರಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಎಂಬ ಸ್ವಾಯತ್ತ ಸಂಸ್ಥೆ ಕೂಡ ನಗರದ ಕೆರೆಗಳ ಬಗ್ಗೆ ಅಧ್ಯಯನ ನಡೆಸಿ, ವರದಿ ತಯಾರಿಸಿತ್ತು. ಅದರಲ್ಲಿಯೂ 500ಕ್ಕೂ ಹೆಚ್ಚು ಕೆರೆಗಳನ್ನು ಗುರುತಿಸಲಾಗಿತ್ತು.
70 ಮೀ. ಬಫರ್‌ಝೋನ್; ಎನ್‌ಜಿಟಿ: ಈ ಮಧ್ಯೆ 2012ರ ಏಪ್ರಿಲ್‌ನಲ್ಲಿ ಕೆರೆಯ ಸುತ್ತಲಿನ 30 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳನ್ನು ಕೂಡಲೇ ನೆಲಸಮ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಅಲ್ಲದೆ, ಕೆರೆ ಸಂರಕ್ಷಣೆಗೆ ಅಧಿಕಾರಿಗಳ ಸಮಿತಿ ರಚಿಸುವಂತೆ ಸೂಚಿಸಿತ್ತು. ರಾಜ್ಯದೆಲ್ಲೆಡೆ ಕೆರೆಗಳ ಸ್ಥಿತಿಗತಿ ಸಮೀಕ್ಷೆ ಮಾಡಬೇಕು.
ಕೆರೆಗಳ ರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಿದ್ಧಪಡಿಸಬೇಕು. ಕಾಲಕಾಲಕ್ಕೆ ಹೂಳೆತ್ತಬೇಕು. ವೈಜ್ಞಾನಿಕ ವಿಧಾನದಲ್ಲಿ ಕಳೆ, ಹೂಳು ತೆಗೆಯಬೇಕು. ರಾಜ ಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕು ಎನ್ನುವುದು ಸೇರಿದಂತೆ ಹಲವು ನಿರ್ದೇಶನಗಳನ್ನು ನೀಡಿತ್ತು. ನಂತರ ರಾಷ್ಟ್ರೀಯ ಹಸಿರು ಪೀಠ ಕೂಡ ಕೆರೆ ಅಂಚಿನ 70 ಮೀ. ಜಾಗವನ್ನು ಬಫರ್‌ಝೋನ್ ಎಂದು ಘೋಷಿಸಬೇಕು ಎಂದು ಹೇಳಿತ್ತು.
ನ್ಯಾಯಾಂಗ ನಿಂದನೆ ಕೇಸು ಹಾಕ್ಬೇಕು: ಕೋರ್ಟ್ ಹಲವು ಬಾರಿ ಆದೇಶ ನೀಡಿದರೂ ಅದನ್ನು ಜಾರಿಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ. ಹಾಗಾಗಿ, ನ್ಯಾಯಾಂಗ ನಿಂದನೆ ಕೇಸು ದಾಖಲಿಸುವಂತಾಗಬೇಕು ಎಂದು ಸುಬ್ರಮಣಿಯನ್ ಅಭಿಪ್ರಾಯಪಡುತ್ತಾರೆ. ಇದುವರೆಗೆ ಯಾರೊಬ್ಬರೂ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿಲ್ಲ. ಈಗ ಇದಕ್ಕೆ ಸಕಾಲ. ಆದೇಶ ಪಾಲಿಸದಿದ್ದರೆ, ನ್ಯಾಯಾಂಗ ನಿಂದನೆ ಆರೋಪದಡಿ ಜೈಲು ಶಿಕ್ಷೆ ವಿಧಿಸುವಂತಾಗಬೇಕು ಎಂದು ಅವರು ಹೇಳಿದರು.
ಸರೋವರ ಸಂರಕ್ಷಣೆ, ಅಭಿವೃದ್ಧಿ ಪ್ರಾಧಿಕಾರ: ಈ ಹಿಂದೆ ಸರೋವರ ಅಭಿವೃದ್ಧಿ ಪ್ರಾಧಿಕಾರ ಇತ್ತು. 2016ರಲ್ಲಿ ಈ ಪ್ರಾಧಿಕಾರ ರದ್ದುಗೊಂಡಿತು. ಬದಲಿಗೆ “ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ’ ಅಸ್ತಿತ್ವಕ್ಕೆ ಬಂದಿತು. ರಾಜ್ಯದ ಎಲ್ಲ ಮುನಿಸಿಪಾಲಿಟಿ, ಕಾರ್ಪೊರೇಷನ್ ಜತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಲಕಾಲಕ್ಕೆ ಗುರುತಿಸುವ ಕೆರೆಗಳ ಅಭಿವೃದ್ಧಿ ಇದರ ಹೊಣೆ.
ಕೆರೆಗಳ ಸಮಗ್ರ ಅಭಿವೃದ್ಧಿ ಬದಲಿಗೆ ಬರೀ ಸೌಂದರ್ಯಕ್ಕೆ ಒತ್ತು ಕೊಡಲಾಗುತ್ತಿದೆ. ಸಾರಕ್ಕಿ ಕೆರೆ ಇದಕ್ಕೆ ಉತ್ತಮ ಉದಾಹರಣೆ. ಈ ಮಧ್ಯೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್)ಯೊಂದು ಸೇರಿಕೊಂಡಿದೆ. ಇದೆಲ್ಲದರ ನಡುವೆ ನಿಜವಾದ ಕಳಕಳಿ ಮರೆಯಾಗುತ್ತಿದೆ.
-ಲಿಯೊ ಎಫ್. ಸಾಲ್ಡಾನ, ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಸಂಯೋಜಕ
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.