ಕೋಳಿ ಫಯಾಜ್ ಮಗನ ಕಾಲಿಗೆ ಗುಂಡು
Team Udayavani, Jun 24, 2019, 3:04 AM IST
ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಅಮೀರ್‌ಖಾನ್ ಅಲಿಯಾಸ್ ಪಪ್ಪು (34) ಕಾಲಿಗೆ ಗುಂಡು ಹೊಡೆದು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ರೌಡಿಶೀಟರ್ ಕೋಳಿ ಫಯಾಜ್ ಮಗನಾಗಿರುವ ಅಮೀರ್ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಿದೆ. ಎರಡು ಕೊಲೆ ಸೇರಿದಂತೆ 22 ಕ್ರಿಮಿನಲ್ ಕೇಸ್‌ಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ಕೃತ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಅಮೀರ್, ಈ ಮೊದಲು ಜೈಲು ಸೇರಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗಡೆ ತಿರುಗಾಡಿಕೊಂಡಿದ್ದ. ಆದರೆ, ಪ್ರಕರಣದ ವಿಚಾರಣೆಗಳಿಗೆ ಗೈರು ಹಾಜರಾಗುತ್ತಿದ್ದರಿಂದ ಆತನ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿತ್ತು.
ಇತ್ತೀಚೆಗೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಲಿಗೆ ಸೇರಿದಂತೆ ಮತ್ತಿತರ ಅಪರಾಧ ಕೃತ್ಯಗಳಲ್ಲಿ ಸಕ್ರಿಯಗೊಂಡಿದ್ದ. ಭಾನುವಾರ ಮಧ್ಯಾಹ್ನ 2.15ರ ಸುಮಾರಿಗೆ ಕೊತ್ತನೂರಿನ ದೊಡ್ಡಗುಬ್ಬಿ ಬಳಿ ಅಮೀರ್ ಇರುವ ಬಗ್ಗೆ ಲಭ್ಯವಾದ ಮಾಹಿತಿ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತ್ ನೇತೃತ್ವದ ತಂಡ ಆತನನ್ನು ಬಂಧಿಸಲು ತೆರಳಿತ್ತು.
ಆದರೆ ಪೊಲೀಸರನ್ನು ನೋಡಿದ ಕೂಡಲೇ ಬೈಕ್‌ನಲ್ಲಿ ಅಮೀರ್ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗಾಗಿ ಪೊಲೀಸ್ ಪೇದೆ ಉಮೇಶ್ ಹಿಡಿಯಲು ಹೋದಾಗ ಚಾಕುವಿನಿಂದ ಅವರ ಕೈಗೆ ಇರಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಈ ವೇಳೆ ಸ್ಥಳದಲ್ಲಿದ್ದ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್, ಶರಣಾಗುವಂತೆ ಸೂಚಿಸಿ ತಮ್ಮ ಸರ್ವೀಸ್ ರಿವಾಲ್ವರ್‌ನಿಂದ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ, ಅಮೀರ್ ಪುನಃ ಹಲ್ಲೆಗೆ ಮುಂದಾಗಿದ್ದ. ಹೀಗಾಗಿ ಆತ್ಮರಕ್ಷಣೆ ಉದ್ದೇಶದಿಂದ ಆರೋಪಿಯ ಎಡಗಾಲಿಗೆ ಇನ್ಸ್‌ಪೆಕ್ಟರ್ ಗುಂಡು ಹೊಡೆದಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಗುಂಡೇಟು ತಿಂದು ಕುಸಿದುಬಿದ್ದ ಅಮೀರ್‌ನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾಗಿರುವ ಪೇದೆ ಉಮೇಶ್‌ಗೂ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿ ಅಮೀರ್ ಚಿಕಿತ್ಸೆ ಪೂರ್ಣಗೊಂಡ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.