ಛಾವಣಿಯಿಂದ ಬೀಳುವ ಮಳೆ ನೀರು ಬಾವಿಗೆ!
ಬೇಸಗೆಯ ನೀರಿನ ತಾಪತ್ರಯ ನೀಗಿಸಲು ಮಳೆಗಾಲದಲ್ಲೇ ಉಪಾಯ
Team Udayavani, Jun 25, 2019, 5:00 AM IST
ಸುಬ್ರಹ್ಮಣ್ಯ: ಭೂಮಿಯಲ್ಲಿ ನೀರಿಂಗಿಸಿ, ಅಂತರ್ಜಲ ಹೆಚ್ಚಿಸಬೇಕು ಎನ್ನುವ ಕೂಗು ತೀವ್ರವಾಗುತ್ತಿರುವ ಹೊತ್ತಲ್ಲೆ ಇಲ್ಲಿನ ವಸತಿ ಗೃಹವೊಂದರ ಮಾಲಕರು ತನ್ನ ವ್ಯಾಪ್ತಿಯ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಕಾರ್ಯಗತಗೊಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ಭಾಗದಲ್ಲೂ ಮಳೆಯ ಕೊರತೆ ತೀವ್ರವಾಗಿ ಕಾಡುತ್ತಿದೆ. ಭವಿಷ್ಯದ ನೀರಿನ ಆತಂಕ ದೂರ ಮಾಡಲು ಯೋಜನೆ ಗಳು ಜಾರಿಯಾಗಬೇಕು ಎಂದರಿತ ಗಣೇಶ್ ಪ್ರಸಾದ್ ತಮ್ಮ “ಅನುಗ್ರಹ’ ವಸತಿಗೃಹದಲ್ಲಿ ಪ್ರಾಯೋಗಿಕವಾಗಿ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.
ನಗರದ ಮುಖ್ಯ ಪೇಟೆಯ ಬಳಿಯಿಂದ ದೇವರಗದ್ದೆಗೆ ಕಡೆಗೆ ತೆರಳುವಲ್ಲಿ ಸುಮಾರು 50 ಕೊಠಡಿಗಳ ಅನುಗ್ರಹ ವಸತಿಗೃಹವಿದೆ. ಮಳೆಗಾಲದಲ್ಲಿ ಛಾವಣಿಯಿಂದ ಬಿದ್ದ ನೀರನ್ನು ಬಾವಿಗೆ ಇಂಗಿಸಿಕೊಳ್ಳಲಾಗುತ್ತಿದೆ. ವಸತಿಗೃಹದಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಜಾರಿಗೆ ತಂದಿದ್ದಾರೆ.
ಸುಸಜ್ಜಿತ ಛೇಂಬರ್
ಸಾಮಾನ್ಯವಾಗಿ ಕಟ್ಟಡಗಳ ಸುತ್ತಮುತ್ತ ಪೇವರ್ಸ್, ಹಾಸುಕಲ್ಲುಗಳು ಅಥವಾ ಕಾಂಕ್ರೀಟ್ ಅಳವಡಿಸುವುದರಿಂದ ಕಟ್ಟಡ ಗಳಿಂದ ಇಳಿದ ನೀರು ಭೂಮಿಗೆ ಬಿದ್ದು ಹರಿದು ಹೋಗುತ್ತದೆ. ಇಲ್ಲಿ ಆ ನೀರನ್ನು ಕೊಳವೆ ಮೂಲಕ ಇಳಿಸಲಾಗುತ್ತಿದೆ. ಅದಕ್ಕೆ ಅಲ್ಲಲ್ಲಿ ಸುಸಜ್ಜಿತ ಛೇಂಬರ್‌ಗಳನ್ನು ನಿರ್ಮಿಸಲಾಗಿದೆ. ಅವುಗಳ ಮೂಲಕ ಮಳೆ ನೀರು ಒಂದು ಕಡೆಗೆ ಬರುತ್ತದೆ. ಈ ನೀರಿನಿಂದ ಕಸ-ಕಡ್ಡಿಗಳನ್ನು ಬೇರ್ಪಡಿ ಸಲು ಜಾಳಿ ಇರುವ ಚೇಂಬರ್ ಅನ್ನು ಕಟ್ಟಡದ ಎದುರಿನ ಒಂದು ಭಾಗದಲ್ಲಿ ಮಾಡಲಾಗಿದೆ.
ವಿಸ್ತರಣೆಗೆ ಚಿಂತನೆ
ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ಮಳೆ ನೀರು ಕೊಯ್ಲು ಯೋಜನೆಯನ್ನು ವಸತಿಗೃಹದ ಮಾಲಕರು ಅನುಷ್ಠಾನ ಗೊಳಿಸಿದ್ದಾರೆ. ಮುಂದೆ ಇವರ ಮಾಲಕತ್ವದಲ್ಲಿ ಇರುವ ಶಿಕ್ಷಣ ಸಂಸ್ಥೆ ಹಾಗೂ ಬೇರೆ ಕಟ್ಟಡಗಳಲ್ಲೂ ಮಳೆ ಕೊಯ್ಲು ಪದ್ಧತಿಯನ್ನು ವಿಸ್ತರಿಸಿ ನೀರಿನ ಕೊರತೆ ನೀಗಿಸುವ ಪ್ರಯತ್ನ ಮಾಡುವ ಸಂಕಲ್ಪ ತೊಟ್ಟಿದ್ದಾರೆ.
ಎಲ್ಲರೂ ಅಳವಡಿಸಿಕೊಳ್ಳಲಿ
ನಗರದಲ್ಲಿ ದೇವಸ್ಥಾನ, ಮಠ ಹಾಗೂ ಎರಡೂ ಸಂಸ್ಥೆಗಳಿಗೆ ಸೇರಿದ ವಸತಿಗೃಹ ಮತ್ತು ವಾಣಿಜ್ಯ ಸಂಕೀರ್ಣಗಳು ಸಾಕಷ್ಟಿವೆ. ಖಾಸಗಿ ವಸತಿಗೃಹಗಳು, ಹೊಟೇಲ್ ಇತ್ಯಾದಿಗಳ ಸಂಖ್ಯೆಯೂ ಜಾಸ್ತಿ ಇದೆ. ಇವೆಲ್ಲ ಕಟ್ಟಡಗಳಲ್ಲಿ ಮಳೆ ಕೊಯ್ಲು ಪದ್ಧತಿ ಜಾರಿಗೊಳಿಸಿದಲ್ಲಿ ಕುಕ್ಕೆ ನಗರದಲ್ಲಿ ಬೇಸಗೆಯಲ್ಲಿ ನೀರಿನ ಕೊರತೆ ಬಾಧಿಸದು ಎನ್ನುತ್ತಾರೆ ಗಣೇಶ್ ಪ್ರಸಾದ್.
ಯೋಜನೆಯ ಆವಶ್ಯಕತೆ ಇದೆ
ಕ್ಷೇತ್ರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವ ಭಕ್ತ ರು, ಯಾತ್ರಾರ್ಥಿಗಳಿಗೆ ಬೇಸಗೆಯಲ್ಲಿ ನೀರು ಒದಗಿಸುವುದು ದೊಡ್ಡ ಸವಾಲು. ಅಭಿವೃದ್ಧಿ ಹೆಸರಿನಲ್ಲಿ ಈ ಭಾಗದಲ್ಲಿ ಕಾಡು ನಾಶವಾಗಿ ಕಟ್ಟಡಗಳು ತಲೆ ಎತ್ತಿ ನಿಲ್ಲುತ್ತಿವೆ. ನಗರ ಕಾಂಕ್ರೀಟ್‌ಮಯ ಆಗುತ್ತಿದೆ. ಹೀಗಾಗಿ ನಗರದಲ್ಲಿ ನೀರಿಂಗಿಸುವ ಯೋಜನೆಗಳ ಜಾರಿಯ ಅಗತ್ಯವಿದೆ ಎನ್ನುವುದು ಗಣೇಶ್ ಅವರ ಅಭಿಪ್ರಾಯ.
ಫಲ ತಂದಿದೆ, ವಿಸ್ತರಿಸುವೆ
ಮಳೆಗಾಲದಲ್ಲಿ ನೀರಿನ ಮಹತ್ವ ಗೊತ್ತಾಗುವುದಿಲ್ಲ. ಬೇಸಗೆಯಲ್ಲಿ ಅನುಭವಕ್ಕೆ ಬರುತ್ತದೆ. ಹೀಗಾಗಿ ಮಳೆ ಕೊಯ್ಲು ಪದ್ಧತಿಯನ್ನು ವಸತಿಗೃಹದಲ್ಲಿ ಅಳವಡಿಸಿಕೊಂಡು ನೀರನ್ನು ಬಾವಿ ಒಡಲು ಸೇರಿಸಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತನ್ನ ಮಾಲಕತ್ವದ ಎಲ್ಲ ಕಟ್ಟಡಗಳಿಗೂ ಇದನ್ನು ಆನ್ವಯಿಸುತ್ತೇನೆ. ಎಲ್ಲರೂ ಈ ರೀತಿ ನೀರಿನ ಮಹತ್ವ ಆರಿತುಕೊಂಡು ಯೋಜನೆ ಜಾರಿಗೊಳಿಸಿಕೊಂಡಲ್ಲಿ ನೀರಿನ ತಾಪತ್ರಯ ನಿವಾರಿಸಬಹುದು.
– ಗಣೇಶ್ ಪ್ರಸಾದ್ , ವಸತಿಗೃಹದ ಮಾಲಕ
ಬಾವಿಗೆ ಸೇರುತ್ತದೆ ನೀರು
ಕಟ್ಟಡದ ನೀರನ್ನು ವಸತಿಗೃಹದ ಮುಂಭಾಗದಲ್ಲಿ ಇರುವ ಬಾವಿಗೆ ಬಿಡಲಾಗುತ್ತಿದೆ. ಮಳೆ ಬಂದ ಸಂದರ್ಭ ಯಥೇತ್ಛವಾಗಿ ನೀರು ಭೂಮಿಯ ತಳ ಸೇರುತ್ತದೆ. ಸರಾಗವಾಗಿ ಮಳೆ ಬಂದಾಗ ಹೆಚ್ಚು ಪ್ರಮಾಣದ ನೀರು ಬಾವಿಯನ್ನು ತುಂಬಿಕೊಳ್ಳುತ್ತದೆ. ಮಳೆ ಇಲ್ಲದೇ ಇದ್ದಾಗ ಈ ನೀರು ಭೂಮಿಯೊಳಗೆ ಇಂಗಲು ಅನುಕೂಲವಾಗುತ್ತದೆ.
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.