ದೇಶದ 21 ನಗರಗಳಲ್ಲಿ ಬತ್ತಲಿದೆ ನೀರು
ನಮ್ಮ ನೀರಿನ ಮೇಲೆ ಬಹುರಾಷ್ಟ್ರೀಯ ಕಂಪನಿಗಳು ಹಿಡಿತ ಸಾಧಿಸಲಿವೆ
Team Udayavani, Jun 26, 2019, 5:22 AM IST
ಸಾಂದರ್ಭಿಕ ಚಿತ್ರ
••ನೀರಿನ ಅಭಾವದಂಥ ಗಂಭೀರ ಸಮಸ್ಯೆಯ ಬಗ್ಗೆ ನಮ್ಮ ದೇಶದಲ್ಲೇಕೆ ಗಹನ ಚಿಂತನೆಗಳು ನಡೆಯುತ್ತಿಲ್ಲ?
ಇಂದು ದೇಶದ ಯಾವುದೇ ರಾಜಕೀಯ ಪಕ್ಷದ ಪ್ರಣಾಳಿಕೆ ತೆರೆದು ನೋಡಿ. ಯಾರೂ ನೀರಿನ ಬಗ್ಗೆ ಮಾತನಾಡುವುದಿಲ್ಲ. ಮಾತನಾಡುವವರೂ ಕೂಡ ತಮ್ಮ ಭರವಸೆಗಳಿಗೆ ಪೂರಕ ಅಂಶಗಳನ್ನು ಒದಗಿಸುವುದಿಲ್ಲ. ಒಂದು ಪಕ್ಷವಂತೂ ತಾನು ಮನೆಮನೆಗೂ ನಲ್ಲಿ ನೀರು ಸಿಗುವಂತೆ ಮಾಡುತ್ತೇನೆ ಎಂದು ಹೇಳಿತ್ತು. ಆದರೆ ಇದೆಲ್ಲ ಸಾಧ್ಯವೇನು? ನೀರೇ ಇಲ್ಲ, ಹೀಗಿರುವಾಗ ಪೂರೈಕೆಯ ಭರವಸೆ ಹೇಗೆ ಕೊಡುತ್ತೀರಿ?
••ಭಾರತದಲ್ಲಿ ಜಲ ಸಮಸ್ಯೆ ಎಷ್ಟು ಗಂಭೀರವಾಗಿದೆ?
ಶೀಘ್ರದಲ್ಲೇ, ಭಾರತದ 21 ನಗರಗಳಲ್ಲಿ ನಲ್ಲಿ ನೀರು ಸಂಪೂರ್ಣವಾಗಿ ಬತ್ತಿಹೋಗಲಿದೆ. ಈಗಲೇ ಸರ್ಕಾರಗಳು ಗಂಭೀರ ಕ್ರಮ ಕೈಗೊಳ್ಳದಿದ್ದರೆ, ಈ 21 ನಗರಗಳ ಸ್ಥಿತಿ ಕೇಪ್‌ಟೌನ್‌ನ ದುರ್ದೆಸೆಯನ್ನು ನೆನಪಿಸಲಿದೆ. ಅದರಲ್ಲೂ ದೆಹಲಿ, ಗುರುಗ್ರಾಮ, ಮೇರs್ ಮತ್ತು ಫರೀದಾಬಾದ್ ನಗರಗಳಲ್ಲಂತೂ ಹನಿ ನೀರೂ ಸಿಗುವುದಿಲ್ಲ.
••ದೇಶದ ಹಳ್ಳಿಗಳ ಸ್ಥಿತಿ ಹೇಗಿದೆ?
ಭಾರತದ ಭವಿಷ್ಯ ಬಹಳ ಅಪಾಯಕಾರಿ ದಿಕ್ಕಿನತ್ತ ಹೊರಳಿದೆ. ಹಳ್ಳಿಯ ಜನ ನಗರಗಳಿಗೆ ಹೋಗುತ್ತಿದ್ದಾರೆ. ಇದರಿಂದ ನಗರಗಳ ಭವಿಷ್ಯ ಅಂಧಕಾರಮಯವಾಗಲಿದೆ. ಈ ವಿಷಯವೆಲ್ಲ ಯಾವುದೇ ಪಕ್ಷದ ಪ್ರಣಾಳಿಕೆಯಲ್ಲೂ ಕಾಣಿಸುವುದೇ ಇಲ್ಲ ಎನ್ನುವುದು ದುರಂತ.
••ಮಳೆಯ ಅಭಾವವಿದ್ದಾಗ ಸರ್ಕಾರಗಳಾದರೂ ಏನು ಮಾಡಿಯಾವು?
ಭಾರತದಲ್ಲಿ ಮಳೆಯ ಅಭಾವ ಪ್ರಾಕೃತಿಕ ಸಮಸ್ಯೆಯಲ್ಲ, ಮಾನವ ನಿರ್ಮಿತ ಸಮಸ್ಯೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ನಮ್ಮಲ್ಲಿ ಬೆಟ್ಟಗುಡ್ಡಗಳನ್ನು, ಕಾಡುಗಳನ್ನು ಕಡಿದು ಹಾಕಲಾಗುತ್ತಿದೆ. ಹಸಿರೆನ್ನುವುದು ಉಳಿದೇ ಇಲ್ಲ. ಈ ಕ್ಷೇತ್ರಗಳಲ್ಲಿ ಮೋಡವೇನೋ ಕಾಣಿಸಿಕೊಳ್ಳುತ್ತವೆ, ಆದರೆ ವಾತಾವರಣದಲ್ಲಿ ಒತ್ತಡ ಇಲ್ಲದ ಕಾರಣ ಮಳೆ ಆಗುವುದಿಲ್ಲ. ಮನುಷ್ಯ ಪ್ರಕೃತಿಯನ್ನು ತಡವಿದಾಗಲೆಲ್ಲ, ಪ್ರಕೃತಿ ಮನುಷ್ಯನಿಗೆ ತಕ್ಕ ಪಾಠ ಕಲಿಸುತ್ತದೆ.
••ಒಂದೆಡೆ ವಿಪರೀತ ನೆರೆ ಮತ್ತೂಂದೆಡೆ ಬರ, ಇಂಥ ಸ್ಥಿತಿಯನ್ನು ಭಾರತ ಹೇಗೆ ಎದುರಿಸಬೇಕು?
ನಾವು ಮಳೆ ನೀರಿನ ಹರಿವಿನ ಮೇಲೆ ನಿಯಂತ್ರಣ ಸಾಧಿಸದಿರುವುದೇ ಸಮಸ್ಯೆಗೆ ಮುಖ್ಯ ಕಾರಣ. ನೀರು ವೇಗವಾಗಿ ಹರಿದಾಗ ಮಣ್ಣಿನ ಕೊರೆತ ಹೆಚ್ಚಾಗುತ್ತದೆ. ಕೊರೆತ ಹೆಚ್ಚಾದಂತೆಲ್ಲ ಆ ಜಾಗದಲ್ಲಿ ಕ್ಷಾಮ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಮರಾಠಾವಾಡವನ್ನೇ ನೋಡಿ. ಅಲ್ಲಿನ ಮಣ್ಣೆಲ್ಲ ನದಿ ಸೇರುತ್ತಿದೆ. ಇದರಿಂದ ನದಿಗಳು ತುಂಬಿಕೊಂಡು ನೆರೆ ಎದುರಾಗಿಬಿಡುತ್ತಿದೆ.
ಭಾರತದಲ್ಲಿ ಪ್ರವಾಹ ಮತ್ತು ಕ್ಷಾಮವನ್ನು ತಡೆಯಲು ಬಯಸುತ್ತೇವೆ ಎಂದಾದರೆ, ಮಳೆ ನೀರಿನ ಹರಿವಿನ ಮೇಲೆ ನಿಯಂತ್ರಣ ಸಾಧಿಸಲೇಬೇಕು. ಪ್ರವಾಹ ತಗ್ಗಿಸಲು ನೀರಿನ ಹರಿವಿನ ವೇಗವನ್ನು ತಗ್ಗಿಸಬೇಕು. ಓಡುವ ನೀರು ನಡೆಯುವಂತಾಗಬೇಕು, ಅದು ನಡೆಯಲು ಆರಂಭಿಸಿದ ನಂತರ ಅದಕ್ಕೆ ತೆವಳುವಷ್ಟು ವೇಗ ತರಬೇಕು, ಅದು ತೆವಳಲಾರಂಭಿಸಿದ ಮೇಲೆ, ಅದನ್ನು ಭೂಮಿಯ ಒಡಲಿಗೆ ಸೇರಿಸಬಹುದು.
••ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕಾರ್ಯಕಾಲದಲ್ಲಿ ಈ ಸಮಸ್ಯೆಯ ಪರಿಹಾರಕ್ಕಾಗಿ ನದಿ ನೀರು ಜೋಡಣೆಯ ಚರ್ಚೆ ಬಹಳ ಆಗಿತ್ತು. ಇದರಿಂದ ಸಮಸ್ಯೆಗಳು ಬಗೆಹರಿಯುವುದೇ?
ಸಂವಿಧಾನದ ಪ್ರಕಾರ, ನೀರಿನ ಮೇಲಿನ ಅಧಿಕಾರ ಮೂರು ಹಂತದಲ್ಲಿ ವಿಂಗಡಣೆಯಾಗಿದೆ. ಮೊದಲನೆಯ ಅಧಿಕಾರವೆಂದರೆ, ನದಿಗಳ ಹರಿವು. ಇದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಎರಡನೆಯದು ಮಳೆಯ ನೀರು. ಇದರ ಅಧಿಕಾರವಿರುವುದು ರಾಜ್ಯ ಸರ್ಕಾರಗಳ ಬಳಿ. ಮೂರನೆಯದು, ಪಂಚಾಯಿತಿ ಮತ್ತು ನಗರಪಾಲಿಕೆಗಳ ಹಿಡಿತದಲ್ಲಿದೆ. ಇವು ತಮ್ಮ-ತಮ್ಮ ಕ್ಷೇತ್ರಗಳಲ್ಲಿನ ಮಳೆ ನೀರಿನ ಮೇಲೆ ಅಧಿಕಾರ ಹೊಂದಿರುತ್ತವೆ. ಈ ಮೂರೂ ಸ್ತರಗಳು ಯಾವಾಗಲೂ ಪರಸ್ಪರ ಭಿನ್ನವಾಗೇ ಇರುತ್ತವೆ. ಇಂದು ದೇಶದ ಯಾವೊಬ್ಬ ಮುಖ್ಯಮಂತ್ರಿ ಕೂಡ ತಮ್ಮ ಬಳಿ ಹೆಚ್ಚು ನೀರಿದೆ ಎಂದು ಹೇಳುವುದೇ ಇಲ್ಲ. ಪರಿಸ್ಥಿತಿ ಹೀಗಿರುವಾಗ, ನದಿಗಳನ್ನು ಜೋಡಿಸಲಾಗುತ್ತದೆ ಮತ್ತು ಎಲ್ಲರಿಗೂ ನೀರು ಒದಗಿಸಲಾಗುತ್ತದೆ ಎಂದು ಅದ್ಹೇಗೆ ತಾನೆ ಸರ್ಕಾರಗಳು ಹೇಳಬಲ್ಲವು?
••ನಾವು ನೂರು ವರ್ಷದ ಹಿಂದಕ್ಕೆ ಹೋಲಿಸಿದರೆ ಇಂದು ಆರುಪಟ್ಟು ಹೆಚ್ಚು ನೀರು ಬಳಸುತ್ತೇವೆ ಎನ್ನಲಾಗುತ್ತದೆ. ಇದು ನಿಜವೇ?
ನಮ್ಮ ಜೀವನಶೈಲಿ ಬದಲಾಗಿದೆ. ಹಿಂದೆಲ್ಲ ವ್ಯಕ್ತಿಯೊಬ್ಬ ಶೌಚಕ್ಕೆ ಹೋದರೆ, ಅವನೆಂದೂ 15 ಲೀಟರ್ ನೀರು ಹಾಳು ಮಾಡುತ್ತಿರಲಿಲ್ಲ. ಇಂದು ಒಮ್ಮೆ ನಾವು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಿದರೆ, 6 ಲೀಟರ್ ನೀರು ಹಾಳಾಗುತ್ತದೆ. ನೀರಿನ ಬಳಕೆಯಲ್ಲಿ ಆಗೆಲ್ಲ ಬಹಳ ಶಿಸ್ತು ಇತ್ತು. ಈಗ ಅಶಿಸ್ತೇ ಹೆಚ್ಚು. ಒಂದು ಕಾಲದಲ್ಲಿ ನೀರಿನ ಬಳಕೆಯಲ್ಲಿ ಭಾರತ ವಿಶ್ವಗುರುವಾಗಿತ್ತು. ನೀರಿಗೆ ನಮ್ಮಲ್ಲಿ ಮೊದಲಿನಿಂದಲೂ ವಿಶೇಷ ಸ್ಥಾನವಿದೆ.
ನಮ್ಮಲ್ಲಿ ಅತಿಥಿಗಳು ಮನೆಗೆ ಬಂದರೆ ಮೊದಲು ನೀರು ಕೊಡುತ್ತೇವೆಯೇ ಹೊರತು, ಐರೋಪ್ಯ ರಾಷ್ಟ್ರಗಳಲ್ಲಿನಂತೆ ಮದ್ಯವನ್ನಲ್ಲ. ನೀರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿತ್ತು. ನಾವು ಅದಕ್ಕೆ ದೇವರ ಸ್ಥಾನವನ್ನು ಕೊಟ್ಟವರು. ದುರ್ಭಾಗ್ಯವೆಂದರೆ, ಯಾವತ್ತು ನಾವು ನಮ್ಮ ಈ ದೇವರನ್ನು ಇಟ್ಟಿಗೆ-ಕಲ್ಲುಗಳ ಮನೆಗಳಲ್ಲಿ ಬೀಗ ಹಾಕಿ ಇಡಲಾರಂಭಿಸಿದೆವೋ ಅಂದಿನಿಂದಲೇ ನೀರಿನ ದುರುಪಯೋಗ ಆರಂಭವಾಯಿತು. ಈ ದುರುಪಯೋಗ ಬಹಳ ಅಪಾಯಕಾರಿಯಾದದ್ದು.
••2030ರ ವೇಳೆಗೆ ದೇಶದಲ್ಲಿ ನೀರಿನ ಸಮಸ್ಯೆ ಚರಮಸೀಮೆ ತಲುಪಲಿದೆ ಎನ್ನಲಾಗುತ್ತದೆ. ಇದು ನಿಜವೇ? ಹಾಗಿದ್ದರೆ, ನಾಲ್ಕು ಜನರಿರುವ ನಗರದ ಒಂದು ಕುಟುಂಬವು ಯಾವ ಪ್ರಮಾಣದಲ್ಲಿ ನೀರನ್ನು ಬಳಸಿದರೆ ಒಳ್ಳೆಯದು?
ಸಮಯದ ಜತೆಗೆ ನೀರಿನ ಸಮಸ್ಯೆಯೂ ಅಧಿಕವಾಗಲಿದೆ. ಅಂದಾಜಿಸಿ ಹೇಳುವುದಾದರೆ, ಒಬ್ಬ ವ್ಯಕ್ತಿಗೆ 40 ಲೀಟರ್‌ನಷ್ಟು ನೀರು ಸಾಕು. ಆದರೆ, ನಾವು ಬೃಹತ್ ಸಂಖ್ಯೆಯಲ್ಲಿ ಇಂಗ್ಲಿಷ್ ಟಾಯ್ಲೆಟ್‌ಗಳನ್ನು ನಿರ್ಮಿಸುತ್ತಾ ಹೋದರೆ, ಒಬ್ಬ ವ್ಯಕ್ತಿಯ ಸರಾಸರಿ ಬಳಕೆ 40 ಲೀಟರ್ ದಾಟಿ ಎಷ್ಟೋ ಮುಂದೆ ಹೋಗುತ್ತದೆ.
ನೋಡಿ, ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ಎದುರಾದರೆ ಮಾತ್ರ ನೀರನ್ನು ಉಳಿಸಲು ಸಾಧ್ಯವಿದೆ. ದುರದೃಷ್ಟವೆಂದರೆ, ಇಂದು ನಮ್ಮ ಸಮಾಜ ಸರ್ಕಾರದಿಂದ ನೀರನ್ನು ಬೇಡುವ ಭರದಲ್ಲಿ, ತಾನಾಗಿಯೇ ನೀರಿನ ವ್ಯವಸ್ಥೆ ಮಾಡಿಕೊಳ್ಳುವುದನ್ನು ಮರೆತುಬಿಟ್ಟಿದೆ. ಹಿಂದಿನ ಕಾಲದಲ್ಲಿ ಯಾವ ರಾಜನೂ ಪ್ರಜೆಗಳಿಗೆ ನೀರು ಕೊಡುತ್ತಿರಲಿಲ್ಲ. ರಾಜ, ಶಿಕ್ಷಿತ ಜನರು ಮತ್ತು ಸಾಮಾನ್ಯ ಜನರು ಸೇರಿ, ತಮ್ಮ ಸಮಾಜಕ್ಕೆ ಸಾಕಾಗುವಷ್ಟು ನೀರಿನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು.
••ನೀರಿನ ಮಿತ ಬಳಕೆಯನ್ನು ‘ಸಮಾಜವಾದಿ ವಿಚಾರಧಾರೆ’ ಎನ್ನಬಹುದು. ಆದರೆ, ಅದರ ಬಳಕೆಯು ‘ಬಂಡವಾಳಶಾಹಿ’ ವಾಸ್ತವವಲ್ಲವೇ?
ಭಾರತದಲ್ಲಿ ಮೊದಲೆಲ್ಲ ಟ್ರಸ್ಟಿ ಸಿಸ್ಟಂ ಇರುತ್ತಿತ್ತು. ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರದೊಂದಿಗೆ ಬಂಡವಾಳ ಶಾಹಿತ್ವವನ್ನೂ ನಮ್ಮ ದೇಶಕ್ಕೆ ತಂದಿತು. ಇಂದು ನಾಗಪುರದಲ್ಲೇ ನೋಡಿ. ಇಡೀ ನಗರಕ್ಕೆ ಇಂದು ವೆಯೋಲಿಯೋ ಇಂಡಿಯಾ ಹೆಸರಿನ ಫ್ರೆಂಚ್ ಕಂಪನಿಯೊಂದು ನೀರು ಸರಬರಾಜು ಮಾಡುತ್ತಿದೆ. ಇದೊಂದು ಖಾಸಗಿ ಕಂಪನಿ. ನಾನು ಈ ವಿಚಾರವಾಗಿ ನಾಗಪುರದ ಸ್ಥಳೀಯ ನಾಯಕರನ್ನು ಮಾತನಾಡಿಸಿದಾಗ ಅವರು, ವಯೋಲಿಯೋ ಇಂಡಿಯಾ ನೀರು ಸರಬರಾಜಿನ ಮೇಲೆ ಹಿಡಿತ ಹೊಂದಿಲ್ಲ, ಬದಲಾಗಿ ಅದು ಕೇವಲ ನೀರಿಗೆ ಸಂಬಂಧಿಸಿದ ಇತರೆ ಸೇವೆಗಳನ್ನಷ್ಟೇ ಬಳಕೆದಾರರಿಗೆ ಪೂರೈಸುತ್ತದೆ ಎಂದು ಹೇಳಿದರು. ರಾಜಕಾರಣಿಗಳು ಹೀಗೆ ನಾಲಿಗೆ ಹೊರಳಿಸುವುದು ಒಳ್ಳೆಯ ಸಂಕೇತವಲ್ಲ.
ಈ ಕಂಪನಿಯೀಗ ಭಾರತದ 18 ನಗರಗಳಲ್ಲಿ ನೀರು ಸರಬರಾಜು ಮಾಡಲು ಬಯಸುತ್ತಿದೆ. ಶೀಘ್ರದಲ್ಲೇ ದೇಶದ ನೀರಿನ ಮೇಲಿನ ಹಿಡಿತ ಈ ಖಾಸಗಿ ಕಂಪನಿಯವರ ಕೈಗೆ ದಕ್ಕಲಿದೆ. ನಾನು ನೀರಿನ ಈ ಖಾಸಗೀಕರಣದ ವಿರುದ್ಧ ಹೋರಾಡಲು ಬಯಸುತ್ತೇನೆ.
••ಆದರೆ, ಮಳೆ ಆರಂಭವಾಗಿದ್ದೇ ಜನರು ಬರವನ್ನು ಮರೆತುಬಿಡುತ್ತಾರಲ್ಲ..
ನಾನು ಮರೆಯುವುದಿಲ್ಲ, ಮರೆಯುವುದು ಕೇವಲ ರಾಜಕಾರಣಿಗಳಷ್ಟೇ. ಭವಿಷ್ಯದಲ್ಲಿ ರಾಜಕೀಯದಾಟ ನೀರಿನ ಮೇಲೆಯೇ ನಡೆಯಲಿದೆ. ನೀವು ನೋಡುತ್ತಾ ಇರಿ, ಈ ವಿಚಾರದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಬೃಹತ್ ಪಾತ್ರ ವಹಿಸಲಿವೆ!
ರಾಜೇಂದ್ರ ಸಿಂಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.