ಕಂಡು ಕೇಳರಿಯದ ಬಿತ್ತನೆ ತಳಿಗಳ ಮಾರಾಟ
Team Udayavani, Jun 29, 2019, 3:00 AM IST
ಮೈಸೂರು: ರತ್ನಚೂಡಿ ಸಣ್ಣ ಭತ್ತ, ಮಂಡಕ್ಕಿ ಭತ್ತ, ಕೆಂಪು ನೀಳ ಅಕ್ಕಿಯ ಬಾರ್ಜಿ ಜೂಲಿ, ಮಣಿಪುರದ ಕಪ್ಪು ಅಕ್ಕಿ, ಮುಳಗಾಯಿ ಬದನೆ, ಹಿತ್ತಲು ಬದನೆ, ಚೋಳು ಬದನೆ, ಈರನಗೆರೆ ಬದನೆ, ಗೋಮುಖ ಬದನೆ.. ಕಿಡ್ನಿ ಅವರೆ, ಕತ್ತೀ ಅವರೆ, ತಿಂಗಳವರೆ, ಮತ್ತಿ ಅವರೆ.. ಹೀಗೆ ಶುಕ್ರವಾರ ಆರಂಭವಾಗಿ ಮೂರು ದಿನಗಳ ಕಾಲ ನಡೆಯುವ ಮುಂಗಾರು ಬೀಜಮೇಳದಲ್ಲಿ ಇಂದಿನ ಪೀಳಿಗೆ ಕಂಡು ಕೇಳರಿಯದ ತಳಿಗಳ ಬಿತ್ತನೆ ಬೀಜಗಳು ಅಚ್ಚರಿ ಮೂಡಿಸುತ್ತಿವೆ.
ನಂಜರಾಜ ಬಹದ್ದೂರ್ ಛತ್ರದಲ್ಲಿ ಆರಂಭವಾಗಿರುವ ಮುಂಗಾರು ಬೀಜಮೇಳದಲ್ಲಿ ಅಂಗಳಕ್ಕೊಂದು ಚೆಂದದ ಕೈತೋಟ ಮಾಡುವ ಮಾಹಿತಿ ಸಿಗಲಿದೆ. ಹಲಸು ಕಸಿ ಕಟ್ಟುವ ಕೌಶಲ್ಯದ ಪ್ರಾಯೋಗಿಕ ತರಬೇತಿಯೂ ದೊರೆಯಲಿದೆ. ರಾಜ್ಯದ 30ಕ್ಕೂ ಹೆಚ್ಚಿನ ಬೀಜ ಸಂರಕ್ಷಕರ ಗುಂಪುಗಳು ಈ ಮೇಳದಲ್ಲಿ ಪಾಲ್ಗೊಂಡು ತಮ್ಮ ಅಪರೂಪದ ಬೀಜ, ತಳಿಗಳನ್ನು ಪ್ರದರ್ಶಿಸುವ ಜತೆಗೆ ಮಾರಾಟಕ್ಕಿಟ್ಟಿದ್ದಾರೆ.
ಭತ್ತ ಉಳಿಸಿ ಆಂದೋಲನದ ಬೀಜ ಸಂರಕ್ಷಕರು 600ಕ್ಕೂ ಹೆಚ್ಚಿನ ತಳಿಗಳ ದೇಸಿ ಭತ್ತಗಳನ್ನು ಪ್ರದರ್ಶಿಸಿದ್ದು, ಶಿವಮೊಗ್ಗದ ಸಾವಯವ ಕೃಷಿ ಸಂಶೋಧನಾ ಕೇಂದ್ರ 130 ಬಗೆಯ ಭತ್ತದ ತಳಿಗಳ ಪ್ರದರ್ಶನ ಮಾಡಿದೆ. ಒಡಿಶಾದ ಕೆಂಪು ನೀಳ ಅಕ್ಕಿಯ ಬಾರ್ಜಿ ಜೂಲಿ, ಮಣಿಪುರದ ಕಪ್ಪು ಅಕ್ಕಿ, ಭತ್ತದ ಗದ್ದೆ ಬೆಂಕಿ ಹಚ್ಚಿದಂತೆ ಕಾಣುವ ಡಂಬರಸಾಳಿ ಭತ್ತಗಳು ಗಮನ ಸೆಳೆಯುತ್ತಿವೆ.
ನಿಂಬೆಕಾಯಿ ಗಾತ್ರದ ಬೇಬಿಸೋರೆಯಿಂದಿಡಿದು ಆಳು ಹೊರುವಷ್ಟು ಗಾತ್ರದ ಕಿನ್ಯಾ ಸೋರೆ ಗಮನಸೆಳೆದರೆ, ಸೋರೆಯಿಂದ ಮಾಡಿದ ತೂಗುದೀಪ, ಹುಂಡಿ, ಹಕ್ಕಿಮನೆ ಮೊದಲಾದ ಕಲಾಕೃತಿಗಳು ನೋಡುಗರನ್ನು ಸೆಳೆಯುತ್ತಿದೆ. ಕೇರಳದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಾಜಿ ಗೆಡ್ಡೆ ಗೆಣಸುಗಳ ಲೋಕವನ್ನೇ ತೆರೆದಿಟ್ಟಿದ್ದು, ಪುತ್ತೂರಿನ ಅನಿಲ್ ಜಾಕ್ ಹಲವು ಬಗೆಯ ಹಲಸಿನ ತಳಿಗಳನ್ನು ಮಾರಾಟಕ್ಕಿಟ್ಟಿದ್ದಾರೆ.
ಎಚ್‌ಎಂಟಿ, ರಾಯಚೂರು ಸಣ್ಣ, ರಾಣಿ, ಚಂಪಾಕಲಿ, ಆದ್ರಿಭತ್ತ, ಕೆಂಪುದೊಡ್ಡಿ, ಮಂಜುಕೈಮೆ, ಬಿಳಿದಡಿಬುಡ್ಡ, ಗಿಣಿಸಾಳೆ, ಬಂಗಾರ ಸಣ್ಣ, ಏಲಟಗ್ಯಗಿಡ್ಡ, ಸುಗಂಧಿ, ದಪ್ಪವಾಳ್ಯ, ಜಯನಾಂದೆಡ್, ತೊಮಲ್ಲಿ, ಕೆಂಪುಸಾಳಿ, ಕಟಾರು, ಕುಮುದ, ನಾಗಭತ್ತ, ಮುಳ್ಳುಭತ್ತ, ಆನಂದೂರು ಸಣ್ಣ, ದಪ್ಪಭತ್ತ, ಪದ್ಮರೇಖಾ, ಸೇಲಂಸಣ್ಣ, ರಾಜಭೋಗ, ಇಂಟಾನ್, ರತ್ನ ಸಾಗರ, ಕರಿಕಾಳುಮುಟ್ಟಿಗ, ರತ್ನ ಸಾಗರ ಸೇರಿದಂತೆ 150ಕ್ಕೂ ಹೆಚ್ಚಿನ ದೇಸಿ ಭತ್ತದ ತಳಿಗಳನ್ನು ಶಿವಮೊಗ್ಗದ ಸಾವಯವ ಕೃಷಿ ಸಂಶೋಧನಾ ಕೆಂದ್ರದ ವತಿಯಿಂದ ಪ್ರದರ್ಶನಕ್ಕಿಡಲಾಗಿದೆ.
ಕೊಕ್ಕೆ ಕಾಯಿ, ಮತ್ತಿಕಾಯಿ, ಕಾಚಿಂಬುಳಿ, ಸೀಗೆಕಾಯಿ, ತುರಿಕೆ ಮೆಣಸು, ಮೆಣಸು ಬೀಜ, ಹಳ್ಳೆ ಕಾಯಿ, ಪಾಲಕ ಬೀಜ, ರಾಮ್‌ಫಲ ಬೀಜ, ಉದ್ದ ಸೊರೆಗಳನ್ನು ಪ್ರದರ್ಶನದಲ್ಲಿಡಲಾಗಿದೆ. ಗುಂಡೇನಹಳ್ಳಿಯ ಶ್ರೀಸಿದ್ಧಾರೂಡ ಸಾವಯವ ಕೃಷಿಕರ ಬಳಗದವರು ಗಂದಸಾಲೆ, ಜೀರಿಗೆಸಣ್ಣ, ರಕ್ತಸಾಲಿ, ಬಾನುಮತಿ,ಆಲೂರು ಸಣ್ಣ ತಳಿ ಪ್ರದರ್ಶಿಸಿದ್ದರೆ, ಶರಣ ಮುದ್ದಣ್ಣ ಸಾವಯವ ಕೃಷಿಕ ಬಳಗದವರು ಗೋಪಿಕ, ಚಿನ್ನಪನ್ನಿ, ದೊಡ್ಡಭತ್ತ, ಮದುಸಾಲಿಯ, ಸಿದ್ದಸಣ್ಣ, ಸಲಾಂಸಣ್ಣ, ರತ್ನಚೂಡಿ, ಅಂದನೂರು ಸಣ್ಣ ಭತ್ತದ ತಳಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.